ಕನ್ನಡದ ಖ್ಯಾತ ಚಿಂತಕರಾದ ಪ್ರೊ.ಮುಜಾಫರ್ ಅಸ್ಸಾದಿ ಅವರು ತಡರಾತ್ರಿ 12.45ರ ವೇಳೆಗೆ ನಿಧನರಾಗಿದ್ದಾರೆ. ಹೃದಯ ಸಂಬಂಧಿತ ಕಾಯಿಲೆಗಳಿಗೆ ತುತ್ತಾಗಿದ್ದ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆಗಾಗಿ ಬೆಂಗಳೂರಿಗೆ ಇತ್ತೀಚೆಗೆ ಬಂದಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ, ಬಹು ಅಂಗಾಂಗ ವೈಫಲ್ಯದ ಕಾರಣ ಕೊನೆಯುಸಿರೆಳೆದಿದ್ದಾರೆ.
ಮೈಸೂರಿನ ಸರಸ್ವತಿಪುರಂ ಫೈರ್ ಬ್ರಿಗೇಡ್ ಬಳಿ ಇರುವ ನ್ಯೂ ಮುಸ್ಲಿಂ ಹಾಸ್ಟೆಲ್‌ನಲ್ಲಿ ಸಾರ್ವಜನಿಕರ ಅಂತಿಮದರ್ಶನಕ್ಕೆ ಮೃತದೇಹವನ್ನು ಇರಿಸಲಾಗುವುದು ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.
ಉಡುಪಿ ಜಿಲ್ಲೆಯ ಶಿರ್ವ ಎಂಬ ಊರಿನಲ್ಲಿ ಮುಸ್ಲಿಮ್ ಕುಟುಂಬದಲ್ಲಿ ಜನಿಸಿದ ಅಸ್ಸಾದಿಯವರು ಮಂಗಳೂರು, ಗೋವಾ ಮತ್ತು ಮೈಸೂರು ವಿಶ್ವವಿದ್ಯಾನಿಲಯಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಸಮಾಜಮುಖಿ ಚಿಂತಕರಾಗಿದ್ದರು. ವಿಶಿಷ್ಟ ರಾಜಕೀಯ ಒಳನೋಟಗಳನ್ನು ನೀಡುತ್ತಿದ್ದ ಬರಹಗಾರರಾಗಿದ್ದರು.
ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಎ. ಪದವಿ, ಎಂ.ಫಿಲ್. ಪದವಿ, ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿ ಪಿಎಚ್.ಡಿ. ಪದವಿ, ಚಿಕಾಗೋ ವಿಶ್ವವಿದ್ಯಾನಿಲಯದಲ್ಲಿ ಪೋಸ್ಟ್-ಡಾಕ್ಟರೇಟ್ ಪದವಿ, ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದಿಂದ ಜೆಆರ್‌ಎಫ್ ಫೆಲೋಶಿಪ್, ರಾಕ್ ಫೆಲ್ಲರ್ ಫೆಲೋಶಿಪ್ ಮೊದಲಾದ ಪ್ರತಿಷ್ಠಿತ ಪದವಿ ಮತ್ತು ಪುರಸ್ಕಾರಗಳನ್ನು ಅವರು ಪಡೆದಿದ್ದರು.
ಪ್ರೊ.ಅಸ್ಸಾದಿ ರಾಜ್ಯಶಾಸ್ತ್ರ ಉಪನ್ಯಾಸಕ (1991-1994), ಪ್ರವಾಚಕ (1994-2002), ಪ್ರಾಧ್ಯಾಪಕ (2002-2023) ಮೊದಲಾದ ಹುದ್ದೆಗಳನ್ನು ಮಂಗಳೂರು ವಿಶ್ವವಿದ್ಯಾನಿಲಯ, ಗೋವಾ ವಿಶ್ವವಿದ್ಯಾಲಯ ಮತ್ತು ಮೈಸೂರು ವಿಶ್ವವಿದ್ಯಾನಿಲಯಗಳಲ್ಲಿ ಸಮರ್ಥವಾಗಿ ನಿರ್ವಹಿಸಿ ಸಹೋದ್ಯೋಗಿಗಳು ಮತ್ತು ವಿದ್ಯಾರ್ಥಿಗಳ ಪ್ರಶಂಸೆಗೆ ಪಾತ್ರರಾಗಿದ್ದರು. ಸಂಶೋಧಕ, ಚಿಂತಕ, ಬರಹಗಾರರಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದ್ದರು. ಅವರು ಇತಿಹಾಸ, ಸಮಾಜಶಾಸ್ತ್ರ, ಮಾನವಶಾಸ್ತ್ರ, ಅಭಿವೃದ್ಧಿಶಾಸ್ತ್ರ ಮೊದಲಾದ ಕ್ಷೇತ್ರಗಳ ಬಗ್ಗೆ ತಮ್ಮ ವಿನೂತನ ಚಿಂತನೆಗಳು ಮತ್ತು ವಿದ್ವತ್ಪೂರ್ಣ ಬರಹಗಳಿಂದ ಒಳನೋಟ ನೀಡುತ್ತಿದ್ದರು.
ಸುಮಾರು 500ಕ್ಕೂ ಹೆಚ್ಚು ಪ್ರಬಂಧಗಳನ್ನು ದೇಶ ವಿದೇಶಗಳಲ್ಲಿ ಮಂಡಿಸಿದ ಹೆಗ್ಗಳಿಗೆ ಪ್ರೊ.ಅಸ್ಸಾದಿ ಅವರಿಗೆ ಸಲ್ಲುತ್ತದೆ. ಕರ್ನಾಟಕದಲ್ಲಿ ಬಹುರೂಪಿ ಸ್ತ್ರೀವಾದ ಕಥನಗಳು ಮತ್ತು ಚಳವಳಿ, ಅಸ್ಮಿತೆ, ರಾಜಕಾರಣ ಮತ್ತು ಮೂಲಭೂತವಾದ ಸೇರಿದಂತೆ ಕನ್ನಡ ಮತ್ತು ಆಂಗ್ಲಭಾಷೆಗಳಲ್ಲಿ ಸುಮಾರು 14 ಮಹತ್ವದ ಕೃತಿಗಳನ್ನು ರಚಿಸಿದ್ದಾರೆ. ಅಲ್ಲದೆ ಇವರ 300ಕ್ಕೂ ಹೆಚ್ಚು ಸಂಶೋಧನಾ ಲೇಖನಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ.
ಇದನ್ನೂ ಓದಿರಿ: ಪೊಲೀಸ್ ಅಧಿಕಾರಿಗೆ ಅ**ನ್ ಎಂದು ಅಶ್ಲೀಲವಾಗಿ ನಿಂದಿಸಿದ ಆರ್ ಅಶೋಕ್
ಜಗತ್ತಿನ ಸುಮಾರು 15ಕ್ಕೂ ಹೆಚ್ಚು ಪ್ರತಿಷ್ಠಿತ ನಿಯತಕಾಲಿಕೆಗಳ ಸಂಪಾದಕೀಯ ಮಂಡಳಿಯಲ್ಲಿ ಸಲಹೆಗಾರರಾಗಿ ಕರ್ತವ್ಯ ನಿರ್ವಹಿಸಿದ್ದರು. ಇವರ ಬರಹಗಳು ಫ್ರೆಂಚ್, ಮರಾಠಿ, ತಮಿಳು ಮತ್ತು ಉರ್ದು ಭಾಷೆಗಳಿಗೂ ಭಾಷಾಂತರವಾಗಿವೆ. ಅಷ್ಟೇ ಅಲ್ಲದೆ ವಿವಿಧ ರಾಜ್ಯಗಳಲ್ಲಿ ಸಾರ್ವಜನಿಕ ಸೇವಾ ಆಯೋಗಗಳಲ್ಲಿ ಪರೀಕ್ಷಕರಾಗಿ ಮತ್ತು ಸಂದರ್ಶಕರಾಗಿ ಸೇವೆ ಸಲ್ಲಿಸಿದ ಹೆಗ್ಗಳಿಕೆ ಅಸ್ಸಾದಿಯವರದ್ದು.
ಇವರ ಮಾರ್ಗದರ್ಶನದಲ್ಲಿ ರುವಾಂಡಾ, ಅಫ್ಘಾನಿಸ್ತಾನ, ಇರಾನ್, ಯುಕೆ ಮೊದಲಾದೆಡೆ ಪಿಎಚ್.ಡಿ ಪದವಿ ಪಡೆದ ವಿದ್ಯಾರ್ಥಿಗಳಿದ್ದಾರೆ. ಬುಡಕಟ್ಟು ಸಮುದಾಯಗಳ ಸ್ಥಳಾಂತರ ಕುರಿತ ಹೈಕೋರ್ಟ್ ಸಮಿತಿ ಅಧ್ಯಕ್ಷರಾಗಿ, ವರದಿ ನೀಡಿದ್ದರು. ಕರ್ನಾಟಕ ಸಾಹಿತ್ಯ ಅಕಾಡೆಮಿಯ 2021ನೇ ಸಾಲಿನ ಪುಸ್ತಕ ಬಹುಮಾನ ಇವರಿಗೆ ಸಂದಿತ್ತು.