'ಸಂವಿಧಾನದಲ್ಲಿ ಮನುಸ್ಮೃತಿಯನ್ನು ಸೇರಿಸಿಲ್ಲ', 'ಅಂಬೇಡ್ಕರ್ ಮತ್ತು ದಲಿತ ಸಮುದಾಯಕ್ಕೆ ಸಹಕರಿಸುವುದೆಂದರೆ ಹಾವಿಗೆ ಹಾಲೆರೆದಂತೆ' ಎಂದಿದ್ದ ಆರ್‌ಎಸ್‌ಎಸ್ ಕೂಟವನ್ನು ಸ್ವಾಮೀಜಿ ಬೆಂಬಲಿಸುತ್ತಿರುವ ಸಂಬಂಧ ತೀವ್ರ ಆಕ್ಷೇಪ ವ್ಯಕ್ತಪಡಿಸಲಾಗಿದೆ
ಚಿತ್ರದುರ್ಗದ ಮಾದಾರ ಚೆನ್ನಯ್ಯ ಗುರುಪೀಠದ ಡಾ.ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿಯವರು ಬಿಜೆಪಿ, ಆರ್‌ಎಸ್‌ಎಸ್ ಹೇಳಿದಂತೆ ಕೇಳುತ್ತಾ, ಸಮುದಾಯಕ್ಕೆ ಅಪಚಾರ ಎಸಗಿದ್ದಾರೆ. ಅವರು ತಕ್ಷಣವೇ ಪೀಠವನ್ನು ತೊರೆಯಲಿ ಎಂದು ಮಾದಿಗ ಸಮುದಾಯದ ಹೋರಾಟಗಾರರು, ಬರಹಗಾರರು ಆಗ್ರಹಿಸಿದ್ದಾರೆ.
“ಸ್ವಾಮೀಜಿಯವರು ಪೀಠವನ್ನು ತೊರೆದು ಬಿಜೆಪಿ ಮತ್ತು ಆರ್‌ಎಸ್‌ಎಸ್ ಸೇರಿಕೊಳ್ಳಲಿ. ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಚಿಂತನೆಗಳಿಗೆ ವಿರುದ್ಧವಿರುವ ಸಂಘಪರಿವಾರದ ಜೊತೆ ಮಾದಿಗ ಸಮುದಾಯ ಇದೆ ಎಂಬಂತೆ ಬಿಂಬಿಸುತ್ತಿರುವುದನ್ನು ನಾವು ಸಹಿಸುವುದಿಲ್ಲ” ಎಂಬ ಎಚ್ಚರಿಕೆಯನ್ನು ಬಹಿರಂಗ ಪತ್ರದಲ್ಲಿ ನೀಡಲಾಗಿದೆ.
ಚಿಂತಕರು ಮತ್ತು ಹೋರಾಟಗಾರರಾದ ಪ್ರೊ.ಸಿ.ಕೆ.ಮಹೇಶ್, ಡಾ.ವಡ್ಡಗೆರೆ ನಾಗರಾಜಯ್ಯ, ಬಿ.ಆರ್.ಭಾಸ್ಕರ್ ಪ್ರಸಾದ್, ವಕೀಲರಾದ ಪ್ರೊ.ಹರಿರಾಮ್, ಹನುಮೇಶ್ ಗುಂಡೂರು, ಬರಹಗಾರರಾದ ರವಿಕುಮಾರ್ ಟೆಲೆಕ್ಸ್, ಯತಿರಾಜ್ ಅವರು ನೀಡಿರುವ ಪತ್ರದಲ್ಲಿ ಸ್ವಾಮೀಜಿಯವರ ನಡೆಯನ್ನು ಖಂಡಿಸಲಾಗಿದೆ ಮತ್ತು ಅವರ ನಿಲುವುಗಳ ಬಗ್ಗೆ ಕಳವಳ ವ್ಯಕ್ತಪಡಿಸಲಾಗಿದೆ.
ಪತ್ರದಲ್ಲೇನಿದೆ?
ಲೋಕಸಭಾ ಚುನಾವಣೆಯಲ್ಲಿ 400 ಸೀಟ್ ಗೆದ್ದರೆ ಸಂವಿಧಾನ ಬದಲಿಸುವ ಮುಕ್ತ ಅಜೆಂಡಾ ಹೊಂದಿದ್ದ ಬಿಜೆಪಿ, ಸಂಘಪರಿವಾರವನ್ನು ಈ ದೇಶದ ಸಮಸ್ತ ದಲಿತ ಸಮುದಾಯ ಬಲವಾಗಿ ವಿರೋಧಿಸಿದ ಕಾರಣ, ಬಿಜೆಪಿ ಬಹುಮತ ಕಳೆದುಕೊಂಡಿತು. ಆನಂತರ ಗಾಬರಿಗೊಂಡಿರುವ ಸಂಘಪರಿವಾರವು ಹಿಂಬಾಗಿನಿಂದ ಬಂದು ದಲಿತ ಸಮುದಾಯವನ್ನು ಒಡೆದು ಆಳುವ ಕಾರ್ಯಸೂಚಿಯನ್ನು ಜಾರಿಗೆ ತರಲು ಮುಂದಾಗಿದೆ. ಅದರ ಭಾಗವಾಗಿ ‘ಸಿಟಿಜನ್ ಫಾರ್ ಸೋಷಿಯಲ್ ಜಸ್ಟಿಸ್’ ಎಂಬ ವೇದಿಕೆ ರೂಪಿಸಿಕೊಂಡು ‘ಸಂವಿಧಾನ ಸನ್ಮಾನ’ ಎಂಬ ಹೆಸರಿನ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ.
ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಸಂವಿಧಾನದ ಕುರಿತು ಅರ್ಧಸತ್ಯಗಳನ್ನು, ಹಸಿಹಸಿ ಸುಳ್ಳುಗಳ ಕಥೆ ಕಟ್ಟಿ ಅಪಪ್ರಚಾರ ಮಾಡುವ ಕಾರ್ಯಕ್ರಮಗಳನ್ನು ಆರ್‌ಎಸ್‌ಎಸ್ ರೂಪಿಸುತ್ತಿದೆ. ಇದಕ್ಕೆ ಮಾದಿಗ ಸಮುದಾಯದ ಮಾದಾರ ಚೆನ್ನಯ್ಯ ಸ್ವಾಮೀಜಿಯವರನ್ನು ಮುಂದೆ ಬಿಟ್ಟು, ಮಾದಿಗ ಸಮುದಾಯ ಇಂತಹ ಪಿತೂರಿ ಕೃತ್ಯಗಳ ಭಾಗವಾಗಿದೆ ಎಂಬಂತೆ ಚಿತ್ರಿಸಲಾಗುತ್ತಿದೆ.
ಮೊದನಿಂದಲೂ ಬುದ್ಧ, ಬಸವ ಮಾರ್ಗಕ್ಕೆ, ಬಾಬಾ ಸಾಹೇಬರ ಚಿಂತನೆಗಳಿಗೆ ವಿರುದ್ಧವಾಗಿಯೂ, ಸಂಘಪರಿವಾರದ ಬಾಲಂಗೋಚಿಯಾಗಿಯೂ ನಡೆದುಕೊಂಡಿರುವ ಸ್ವಾಮೀಜಿ, ಸಮುದಾಯದ ಪ್ರತಿನಿಧಿಯೂ ಅಲ್ಲ, ಸಮುದಾಯದ ನೋವು- ನಲಿವು, ಒಲವು- ನಿಲುವುಗಳೂ ಅವರಿಗೆ ತಿಳಿದಿಲ್ಲ. ಮಾದಾರ ಚೆನ್ನಯ್ಯನವರ ಪೀಠದಲ್ಲಿ ಕೂತ ಮಾತ್ರಕ್ಕೆ ಅವರು ಸಮುದಾಯದ ಸಾಕ್ಷಿಪ್ರಜ್ಞೆಯಾಗುವುದಿಲ್ಲ. ಬಿಜೆಪಿ, ಸಂಘಪರಿವಾರ ಹೇಳಿದಂತೆ ಕುಣಿಯುತ್ತಿರುವ ಸ್ವಾಮೀಜಿಯವರು ಕಾವಿ ಕಳಚಿ, ಬಿಜೆಪಿಯನ್ನೋ, ಆರ್‌ಎಸ್‌ಎಸ್ ಸಂಸ್ಥೆಯನ್ನೋ ಸೇರಿಕೊಂಡು ಅವರು ಕೊಟ್ಟ ಜವಾಬ್ದಾರಿಗಳನ್ನು ನಿಭಾಯಿಸಿದರೆ ನಮ್ಮದೇನೂ ತಕರಾರು ಇಲ್ಲ. ಸ್ವಾಮೀಜಿಯವರು ಮೊದಲಿನಿಂದಲೂ ಆರ್‌ಎಸ್‌ಎಸ್ ಮತ್ತು ಬಿಜೆಪಿ ಪಕ್ಷವನ್ನು ಕಟ್ಟುವಲ್ಲಿ ಮುಂಚೂಣಿಯಲ್ಲಿರುವ ಕಾರಣ, ಅವರು ಪೀಠ ತೊರೆದು ತಾವು ಬಿಜೆಪಿಯ ಬಾಲಂಗೋಚಿ ಎಂಬುದನ್ನು ಸಾಬೀತು ಮಾಡಬೇಕು. ಆರ್‌ಎಸ್‌ಎಸ್‌ನ ಸರಸಂಘಚಾಲಕ ಹುದ್ದೆಯನ್ನೋ, ಬಿಜೆಪಿಯ ರಾಜ್ಯಾಧ್ಯಕ್ಷ ಸ್ಥಾನವನ್ನೋ ಕೊಟ್ಟರೆ ನಿಭಾಯಿಸಲು ಸ್ವಾಮೀಜಿ ಯೋಗ್ಯವಾಗಿದ್ದಾರೆ. ಒಟ್ಟಾರೆ ಸ್ವಾಮೀಜಿಯವರು ಪೀಠ ತೊರೆಯುವವರೆಗೂ ಸಮುದಾಯ ಹೋರಾಟ ನಡೆಸಬೇಕಾಗುತ್ತದೆ.
ಇದನ್ನೂ ಓದಿರಿ: ಮಲ್ಲಿಕಾರ್ಜುನ ಖರ್ಗೆಯವರ ಕುಟುಂಬದ ಮೇಲೇಕೆ ಆರೆಸ್ಸೆಸ್‌ನಿಂದ ವ್ಯವಸ್ಥಿತ ದಾಳಿ?
ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲೂ ಇದೇ ಕೆಲಸವನ್ನು ಸ್ವಾಮೀಜಿ ಕೈಗೊಂಡಿದ್ದರು. ‘ಸಂವಿಧಾನದಲ್ಲಿ ಮನುಸ್ಮೃತಿಯನ್ನು ಸೇರಿಸಿಲ್ಲ’, ‘ಅಂಬೇಡ್ಕರ್ ಮತ್ತು ದಲಿತ ಸಮುದಾಯಕ್ಕೆ ಸಹಕರಿಸುವುದೆಂದರೆ ಹಾವಿಗೆ ಹಾಲೆರೆದಂತೆ’ ಎಂದಿದ್ದ ಆರ್‌ಎಸ್‌ಎಸ್ ಕೂಟವು ಈ ಹಿಂದೆ ‘ಮಾದಿಗ ಮುನ್ನಡೆ’ ಎಂಬ ಕಾರ್ಯಕ್ರಮ ನಡೆಸಿತ್ತು. ಆ ಮೂಲಕ ‘ಮನುವಾದ ಮುನ್ನಡೆ’ ಮಾಡುವ ಪಿತೂರಿ ನಡೆದಿತ್ತು. ಅದಕ್ಕೂ ಈ ಮಾದಾರ ಚೆನ್ನಯ್ಯ ಸ್ವಾಮೀಜಿಯವರನ್ನು ಮುಂದೆ ಬಿಡಲಾಗಿತ್ತು. ಸಮುದಾಯ ಎಚ್ಚೆತ್ತುಕೊಂಡು ಪ್ರಶ್ನೆ ಮಾಡಿದಾಗ ತಣ್ಣಗಾಗಿದ್ದರು. ಮಾದಿಗರನ್ನು ಒಂದು ಪಕ್ಷದ, ಮತೀಯವಾದಿ ಸಿದ್ಧಾಂತ ಹೊಂದಿರುವ ಸಂಘಪರಿವಾರದ ಅಡಿಯಾಳುಗಳನ್ನಾಗಿ ಮಾಡುವ ದುಷ್ಕೃತ್ಯಗಳಿಗೆ ಸ್ವಾಮೀಜಿ ಮುಂದಾಗಿದ್ದಾರೆ. ಸ್ವಾಮೀಜಿಯವರು ಪೀಠವನ್ನು ತೊರೆದು ತಾವು ಬಿಜೆಪಿ ಹೇಳಿದಂತೆ ಕುಣಿಯುವ ರಾಜಕಾರಣಿ ಎಂದು ಸಾಬೀತು ಮಾಡಲಿ. ಸಮುದಾಯವನ್ನು ದಿಕ್ಕು ತಪ್ಪಿಸುವ ಈ ಪ್ರವೃತ್ತಿ ಮುಂದುವರಿದರೆ ಸಮುದಾಯ ಸುಮ್ಮನಿರುವುದಿಲ್ಲ ಎಂಬ ಎಚ್ಚರಿಕೆಯನ್ನು ಈ ಮೂಲಕ ನೀಡುತ್ತಿದ್ದೇವೆ.
