ನಕಲಿ ದಾಖಲಿ ಸೃಷ್ಟಿಸಿ ವಿಲಾಸಿ ವಿಲ್ಲಾ ಹಾಗೂ ವಸತಿ ಸಮುಚ್ಚಯ ನಿರ್ಮಿಸಿಕೊಡುವುದಾಗಿ ‘ನಿರ್ಮಾಣ್ ಶೆಲ್ಟರ್’ ಏಜೆನ್ಸಿ ವಂಚಿಸಿದೆ ಎಂದು ಆರೋಪಿಸಲಾಗಿದೆ. ಏಜೆನ್ಸಿ ವಿರುದ್ಧ ಸಂತ್ರಸ್ತರು ಹೈಕೋರ್ಟ್ ಮೊರೆ ಹೋಗಿದ್ದು, ನಿವೇಶನಗಳ ನೋಂದಣಿ ಮತ್ತು ಮಾರಾಟ ಮಾಡದಂತೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಬೆಂಗಳೂರಿನ ಆನೇಕಲ್ ತಾಲೂಕಿನ ಕಲ್ಲುಬಾಳು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮುಕುಂದ್ ಕುಲಕರ್ಣಿ ಎಂಬುವರು ನಿವೇಶನ ಖರೀದಿಗೆ ಮುಂಗಡ ಹಣ ಪಾವತಿಸಿದ್ದರು. ನಿವೇಶವನ್ನು ತನ್ನ ಹೆಸರಿಗೆ ನೋಂದಣಿ ಮಾಡಿಕೊಳ್ಳಲು ಅರ್ಜಿದಾರರು ಖಾತಾ ಪಡೆಯಲು ಗ್ರಾಮ ಪಂಚಾಯತಿಗೆ ಅರ್ಜಿಯನ್ನೂ ಸಲ್ಲಿಸಿದ್ದರು. ಬಳಿಕ, ಪಂಚಾಯತಿ ಅಧಿಕಾರಿಗಳು ಆ ಜಾಗುವ ಸಿ.ಎ ನಿವೇಶನವಾಗಿದ್ದು, ಖಾತೆ ಮಾಡಿಕೊಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಆ ವೇಳೆಗೆ, ತಾವು ವಂಚನೆಗೆ ಒಳಗಾಗಿರುವುದು ಅರಿತುಕೊಂಡ ಮುಕುಂದ್ ಕುಲಕರ್ಣಿ ಅವರು ನ್ಯಾಯಾಲಯದ ಮೊರೆ ಹೋಗಿದ್ದರು.
ಪ್ರಕರಣವನ್ನು ವಿಚಾರಣೆ ನಡೆಸಿರುವ ಹೈಕೋರ್ಟ್ ನ್ಯಾಯಮೂರ್ತಿ ಚಂದನಗೌಡರ್ ಅವರಿದ್ದ ನ್ಯಾಯಪೀಠವು ನಿರ್ಮಾಣ್ ಶೆಲ್ಟರ್‌ನ ಶಶಿ ಎಸ್ ಪಾಟೀಲ್, ನೋಂದಣಿ ಇಲಾಖೆಯ ಅಧಿಕಾರಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದೆ. ಕಲ್ಲುಬಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಸರ್ವೆ ನಂಬರ್ 161 ಮತ್ತು 162ರಲ್ಲಿರುವ ನಿವೇಶನಗಳನ್ನು ಮಾರಾಟ, ನೋಂದಣಿ ಮಾಡದಂತೆ ಆದೇಶಿಸಿದೆ.