ಹಗಲಿನ ವೇಳೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮತ್ತು ರಾತ್ರಿ ವೇಳೆ ಅಮೆರಿಕದ ಮಾಡೆಲ್ ಸೋಗಿನಲ್ಲಿ ನಟಿಸುತ್ತಿದ್ದ ಹಾಗೂ ವಂಚಿಸುತ್ತಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಆತ ಅಮೆರಿಕದ ಮಾಡೆಲ್ ಹೆಸರಿನಲ್ಲಿ ಡೇಟಿಂಗ್ ಆ್ಯಪ್ ಮೂಲಕ ಸುಮಾರು 700 ಯುವತಿಯರಿಗೆ ವಂಚಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಉತ್ತರ ಪ್ರದೇಶದ ನೋಯ್ಡಾದಲ್ಲಿರುವ ಖಾಸಗಿ ಕಂಪನಿಯೊಂದರಲ್ಲಿ ಟೆಕ್ನಿಕಲ್ ರಿಕ್ರೂಟರ್ ಆಗಿ ಕೆಲಸ ಮಾಡುತ್ತಿದ್ದ 23 ವರ್ಷದ ತುಷಾರ್ ಸಿಂಗ್ ಬಿಶ್ತಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಆತ ರಾತ್ರಿಯ ವೇಳೆ ಸೈಬರ್ ಕ್ರೈಮ್‌ನಲ್ಲಿ ತೊಡಗಿದ್ದ ಎಂದು ವರದಿಯಾಗಿದೆ.
ಆರೋಪಿ ತುಷಾರ್, ವರ್ಚುವಲ್ ಅಂತರಾಷ್ಟ್ರೀಯ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ಡೇಟಿಂಗ್ ಆ್ಯಪ್‌ಗಳಲ್ಲಿ ಪ್ರೊಫೈಲ್‌ಗಳನ್ನು ರಚಿಸಿದ್ದಾನೆ. ಬ್ರೆಜಿಲಿಯನ್ ಮಾಡೆಲ್‌ನ ಫೋಟೋಗಳು ಮತ್ತು ಸ್ಟೋರಿಗಳನ್ನು ಕದ್ದು ತಾನು ಅಮೆರಿಕದ ಮಾಡೆಲ್ ಎಂದು ಬಿಂಬಿಸಿಕೊಂಡಿದ್ದಾನೆ. 18-30 ವರ್ಷದ ಯುವತಿಯೊಂದಿಗೆ ಸ್ನೇಹ ಬಳಸಿ, ಅವರಿಗೆ ವಂಚಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಯುವತಿಯರ ಸ್ನೇಹವನ್ನು ಗಳಿಸಿದ ಬಳಿಕ, ಅವರ ಫೋನ್ ನಂಬರ್, ಖಾಸಗಿ ಫೋಟೋಗಳು ಮತ್ತು ವಿಡಿಯೋಗಳನ್ನು ಕಳಿಸುವಂತೆ ತುಷಾರ್ ಯುವತಿಯನ್ನು ಕೇಳುತ್ತಿದ್ದ. ಆತನ ಮಾತುಗಳಿಗೆ ಮರಳಾಗುತ್ತಿದ್ದ ಯುವತಿಯರು ತಮ್ಮ ಫೋಟೋಗಳು ಮತ್ತು ವಿಡಿಯೋಗಳನ್ನು ಕಳಿಸುತ್ತಿದ್ದರು. ಆರಂಭದಲ್ಲಿ ವೈಯಕ್ತಿಕ ಚಟಕ್ಕಾಗಿ ಫೋಟೋ-ವಿಡಿಯೋ ಕೇಳುತ್ತಿದ್ದ ತುಷಾರ್, ನಂತರದಲ್ಲಿ ಅವುಗಳನ್ನು ಸುಲಿಗೆ ಮಾಡಲು ಆರಂಭಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಯುವತಿಯರ ಖಾಸಗಿ ದೃಶ್ಯಗಳನ್ನು ಇಟ್ಟುಕೊಂಡು ಹಣಕ್ಕಾಗಿ ಬ್ಲಾಕ್‌ಮೇಲ್ ಮಾಡುತ್ತಿದ್ದ. ಸಂತ್ರಸ್ತೆಯರು ಹಣ ನೀಡಲು ನಿರಾಕರಿಸಿದರೆ, ಯುವತಿಯರ ಫೋಟೋ-ವಿಡಿಯೋಗಳನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡುವುದಾಗಿ ಅಥವಾ ಡಾರ್ಕ್ ವೆಬ್‌ನಲ್ಲಿ ಮಾರಾಟ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಈ ವರದಿ ಓದಿದ್ದೀರಾ?: 2024ರಲ್ಲಿ ರಾಜಕೀಯ ಪ್ರವೇಶ, ಸದ್ದು ಮಾಡಿದ ಪ್ರಬಲ ಮಹಿಳಾ ರಾಜಕಾರಣಿಗಳಿವರು
ಆರೋಪಿ ತುಷಾರ್ 700ಕ್ಕೂ ಹೆಚ್ಚು ಯುವತಿಯರಿಗೆ ವಂಚಿಸಿದ್ದಾನೆ. ಆತನ ವಂಚಿಸುತ್ತಿರುವುದನ್ನು ತಿಳಿದ ದೆಹಲಿ ವಿವಿಯ ವಿದ್ಯಾರ್ಥಿಯೊಬ್ಬರು 2024ರ ಡಿಸೆಂಬರ್ 13ರಂದು ದೆಹಲಿ ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಿದ್ದಾರೆ. ಬಳಿಕ, ಪ್ರಕರಣ ಬೆಳಕಿಗೆ ಬಂದಿದೆ.
ಪ್ರಕರಣ ದಾಖಲಿಸಿಕೊಂಡ ದೆಹಲಿ ಸೈಬರ್ ಕ್ರೈಮ್ ವಿಭಾಗವು ಪ್ರಕರಣದ ತನಿಖೆಗಾಗಿ ಎಸಿಪಿ ಅರವಿಂದ್ ಯಾದವ್ ಅವರ ನೇತೃತ್ವದಲ್ಲಿ ತಂಡವನ್ನು ರಚಿಸಿತ್ತು. ತನಿಖೆ ಆರಂಭಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯ ಮೊಬೈಲ್ ಫೋನ್, ಅಪರಾಧಕ್ಕಾಗಿ ಬಳಸಿದ ವರ್ಚುವಲ್ ಅಂತರರಾಷ್ಟ್ರೀಯ ಮೊಬೈಲ್ ಸಂಖ್ಯೆ ಮತ್ತು 13 ಕ್ರೆಡಿಟ್ ಕಾರ್ಡ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ, 60ಕ್ಕೂ ಹೆಚ್ಚು ಯುವತಿಯರೊಂದಿಗೆ ಆತನ ನಡೆಸಿರುವ ವಾಟ್ಸ್‌ಆ್ಯಪ್ ಚಾಟ್‌ಗಳ ದಾಖಲೆಗಳನ್ನು ಮರುಸಂಗ್ರಹ ಮಾಡಿದ್ದಾರೆ.