ಟಿಬಿ (ಕ್ಷಯ) ಮುಕ್ತ ಭಾರತವನ್ನು ಮಾಡುವ ಕನಸಿನೊಂದಿಗೆ ಟಿಬಿ ಸೋಂಕಿನ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಸಂಶಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ, ಆಶಾ ಕಾರ್ಯಕರ್ತೆಯರು, ನರ್ಸ್ ಮತ್ತು ಸಿಸ್ಟರ್ಸ್ ಸಹಯೋಗದಲ್ಲಿ ಜನೆವರಿ 4 ರಂದು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಾನವ ಸರಪಳಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಈ ಕುರಿತು ವೈದ್ಯೆ ಡಾ. ಸುಧಾ ಕೋಟೆಗೌಡರ ಮಾತನಾಡಿ, ಟಿಬಿ ಮುಕ್ತ ಗ್ರಾಮ ಮಾಡುವ ಸಲುವಾಗಿ ಗ್ರಾಮದಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದೇವೆ. ಆಸ್ಪತ್ರೆಯ ಸಿಬ್ಬಂದಿಗಳು ಮನೆ ಮನೆಗೆ ಭೆಟ್ಟಿ ನೀಡಿ ಕ್ಷಯರೋಗಿಗಳನ್ನು ಗುರುತಿಸಿ ಅವರಿಗೆ ಚಿಕಿತ್ಸೆ ಕೊಡುವ ಕೆಲಸವಾಗುತ್ತಿದೆ. ಟಿಬಿ ಎಂಬುದು ಶ್ವಾಸಕೋಶದ ಮೂಲಕ ಬರುವ ರೋಗವಾಗಿದೆ. ಒಂದು ವಾರದ ಮೇಲೆ ಜ್ವರವಿದ್ದರೆ, ವಿಪರೀತ ಕೆಮ್ಮು ಕಫವಿದ್ದರೆ, ಹಸಿವಾಗದಿರುವುದು, ತೂಕ ಕಡಿಮೆ ಆಗುವುದು ಈ ಎಲ್ಲ ಲಕ್ಷಣಗಳಿಂದ ಟಿಬಿ’ಯನ್ನು ಗುರುತಿಸಬಹುದು. ಈ ರೀತಿಯ ಲಕ್ಷಣಗಳು ಕಂಡುಬಂದಲಗಲಿ ತಕ್ಷಣವೆ ರೋಗಿಗಳು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಅಥವಾ ವೈದ್ಯರನ್ನು ಭೆಟ್ಟಿಯಾಗಬೇಕು. ಮತ್ತು ಜನರು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಪೌಷ್ಟಿಕ ಆಹಾರವನ್ನು ಸೇವಿಸಬೇಕು, ದುಶ್ಟಗಳಿಂದ ದೂರವಾಗಬೇಕು ಎಂದು ತಿಳಿಸಿದರು.

ಈ ಕುರಿತು ಗ್ರಾಮ ಪಂಚಾಯತಿ ಅಧ್ಯಕ್ಷ ರಾಜು ಪುಟ್ಟಣ್ಣನವರ ಮಾತನಾಡಿ, ಈಗಾಗಲೇ ಗ್ರಾಮದ ಆರೋಗ್ಯದ ಕೇಂದ್ರ, ಆಶಾ ಕಾರ್ಯಕರ್ತೆಯರು, ಶಾಲಾ ಮಕ್ಕಳ ಸಹಯೋಗದಲ್ಲಿ ಕ್ಷಯ ನಿರ್ಮೂಲನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. 2025ಕ್ಕೆ ಟಿಬಿ ಮುಕ್ತ ಜಿಲ್ಲೆ, ಟಿಬಿ (ಕ್ಷಯ) ಸೋಲಿಸಿ ದೇಶ ಗೆಲ್ಲಿಸಿ ಇತ್ಯಾದಿ ಘೋಷಣೆಗಳ ಕಾರ್ಯಕ್ರಮ ಯಶಸ್ವಿಯಾಗಿದೆ. ಈ ಮೂಲಕ ಸರ್ಕಾರದ ಆದೇಶಗಳನ್ನು ಪಾಲಿಸುತ್ತ ಎಲ್ಲರೂ ರೋಗಗಳನ್ನು ತಡೆಗಟ್ಟಲು ಕೈಜೋಡಿಸಬೇಕಿದೆ ಎಂದರು.
ಡಾ. ಸುರೇಶ್ ಕಳಸಣ್ಣವರ ಮಾತನಾಡಿ, ಇತ್ತೀಚಿನ ಯುವಕರು ಬಹುತೇಕವಾಗಿ ಗುಟ್ಕಾ ಇತ್ಯಾದಿ ದುರಾಭ್ಯಾಸಕ್ಕೆ ಬಲಿಯಾಗಿದ್ದಾರೆ. ಅಂತಹ ದುಶ್ಚಟಗಳನ್ನು ಬಿಟ್ಟರೆ ಕ್ಷಯದಂತಹ ರೋಗವನ್ನು ಶೀಘ್ರ ಗುಣಪಡಿಸಬಹುದು. ಈಗಾಗಲೇ ಇಂತಹ ರೋಗಗಳನ್ನು ತಡೆಗಟ್ಟಲು ಆಶಾ ಕಾರ್ಯಕರ್ತೆಯರು, ಸಿಸ್ಟರ್ಸ್ ಸಹಿತ ಮನೆ ಮನೆಗೆ ತೆರಳಿ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ ಎಂದರು.
ಈ ವರದಿ ಓದಿದ್ದೀರಾ? ಬೆಳಗಾವಿ | ಎತ್ತಿನ ಗಾಡಿಯ ಚಕ್ರದಲ್ಲಿ ಸಿಲುಕಿ ಮಹಿಳೆ ಸಾವು
ಟಿಬಿ (ಕ್ಷಯ) ರೋಗ ತಡೆಗಟ್ಟುವಿಕೆಯ ಮಾನವ ಸರಪಳಿ ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಿಗಳು, ವೈದ್ಯಕೀಯ ಸಿಬ್ಬಂದಿ, ಗ್ರಾಮಸ್ಥರು, ಆಶಾ ಕಾರ್ಯಕರ್ತೆಯರು, ಶ್ರೀ ಫಕೀರೇಶ್ವರ ಶಾಲಾ ಮಕ್ಕಳು, ಶಿಕ್ಷಕರು, ಪಂಚಾಯತಿ ಸಿಬ್ಬಂದಿ ಭಾಗವಹಿಸಿದ್ದರು.