ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ 60% ಕಮಿಷನ್ ಪಡೆಯುತ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ. ಅವರ ಆರೋಪವನ್ನು ಅಲ್ಲಗಳೆದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಎಚ್.ಡಿ ಕುಮಾರಸ್ವಾಮಿ ಅವರ ಆರೋಪ ಆಧಾರ ರಹಿತವಾಗಿದೆ. ಗಾಳಿಯಲ್ಲಿ ಗುಂಡು ಹಾರಿಸಿದಂತಿದೆ’ ಎಂದು ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ್ದ ಕುಮಾರಸ್ವಾಮಿ, “ವಿಧಾನಸೌಧದಲ್ಲಿ ಸಚಿವರೇ ಲಂಚ ಪಡೆಯುತ್ತಿದ್ದಾರೆ. ಎಲ್ಲ ಇಲಾಖೆಗಳಲ್ಲೂ ಭ್ರಷ್ಟಾಚಾರ ವ್ಯಾಪಕವಾಗಿದೆ. ಸಚಿವರಿಗೆ ಇಂತಿಷ್ಟು ಕಮಿಷನ್ ನಿಗದಿ ಮಾಡಲಾಗಿದೆ” ಎಂದು ಆರೋಪಿಸಿದ್ದರು.
ಕುಮಾರಸ್ವಾಮಿ ಅವರ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, “ವಿರೋಧ ಪಕ್ಷಗಳದ್ದು ಕೇವಲ ಆರೋಪ ಮಾಡುವುದಷ್ಟೇ ಕೆಲಸವಲ್ಲ. ಮಾಡುವ ಆರೋಪಗಳಿಗೆ ದಾಖಲೆಗಳಿರಬೇಕು. ಆರೋಪಗಳನ್ನು ಸಾಬೀತು ಮಾಡಬೇಕು. ಆದಾರವಿಲ್ಲದ ಆರೋಪ ಮಾಡಬಾರದು” ಎಂದು ಹೇಳಿದ್ದಾರೆ.
“ಸರ್ಕಾರಿ ಬಸ್ ಪ್ರಯಾಣ ದರ ಹೆಚ್ಚಿಸರುವುದು ಇದೇ ಮೊದಲೇನು ಅಲ್ಲ. ಎಲ್ಲ ಸರ್ಕಾರಗಳ ಅವಧಿಯಲ್ಲೂ ಬಸ್ ದರಗಳು ಏರಿಕೆಯಾಗಿವೆ. ನೌಕರರ ವೇತನ, ಡೀಸಲ್ ಬೆಲೆ ಏರಿಕೆ, ಬಸ್‌ಗಳ ಕೊಳ್ಳುವುದು ಹಾಗೂ ಹಣದುಬ್ಬರ ಎದುರಾಗಿದೆ. ಸಾರಿಗೆ ನಿಗಮಗಳು ತೊಂದರೆ ಎದುರಿಸುತ್ತಿವೆ. ಆ ಕಾರಣಕ್ಕಾಗಿ ನಿಗಮಗಳ ಬೇಡಿಕೆಯಂತೆ ಬೆಲೆ ಏರಿಕೆ ಮಾಡಲಾಗಿದೆ” ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.