ಟ್ರಕ್ ಒಂದು ಕಾರಿಗೆ ಡಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಸಾವನ್ನಪ್ಪಿರುವ ಘಟನೆ ಭಾನುವಾರ ಮುಂಜಾನೆ ಒಡಿಶಾದ ಸಂಬಲ್‌ಪುರ್ ಜಿಲ್ಲೆಯಲ್ಲಿ ನಡೆದಿದೆ.
ಮೃತ ಬಿಜೆಪಿ ನಾಯಕರನ್ನು ದೇವೇಂದ್ರ ನಾಯಕ್ ಮತ್ತು ಮುರಳೀಧರ್ ಚುರಿಯಾ ಎಂದು ಗುರುತಿಸಲಾಗಿದೆ. ನಾಯಕ್ ಬಿಜೆಪಿಯ ಗೋಶಾಲಾ ಮಂಡಲ ಅಧ್ಯಕ್ಷರಾಗಿದ್ದರೆ, ಚುರಿಯಾ ಮಾಜಿ ಸರಪಂಚ್ ಆಗಿದ್ದರು. ಇವರಿಬ್ಬರೂ ಬಿಜೆಪಿಯ ಹಿರಿಯ ನಾಯಕಿ ನೌರಿ ನಾಯ್ಕ್‌ಗೆ ಆಪ್ತರಾಗಿದ್ದರು ಎಂದು ವರದಿಯಾಗಿದೆ.
ಕಾರಿನಲ್ಲಿ ಚಾಲಕ ಸೇರಿದಂತೆ ಆರು ಜನರಿದ್ದರು. ಅವರು ಭುವನೇಶ್ವರದಿಂದ ಕಾರ್ಡೋಲಾದಲ್ಲಿರುವ ತಮ್ಮ ನಿವಾಸಕ್ಕೆ ಹಿಂದಿರುಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಪ್ರಿಯಾಂಕಾ ಗಾಂಧಿ ಕೆನ್ನೆಯಂತೆ ನುಣುಪಾದ ರಸ್ತೆ ನಿರ್ಮಾಣ : ಬಿಜೆಪಿ ನಾಯಕನ ಹೇಳಿಕೆಗೆ ತೀವ್ರ ಖಂಡನೆ
ಎಲ್ಲಾ ಆರು ಜನರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆ ಪೈಕಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದರು. ಗಾಯಾಳುಗಳು ಅಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು.
ಈ ಅಪಘಾತದಲ್ಲಿ ಗಾಯಗೊಂಡ ಸುರೇಶ ಚಂದಾ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದು, “ವಾಹನವು ನಮ್ಮ ಕಾರಿಗೆ ಎರಡು ಬಾರಿ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಯಾರೋ ಉದ್ದೇಶಪೂರ್ವಕವಾಗಿ ನಮ್ಮ ವಾಹನವನ್ನು ಡಿಕ್ಕಿ ಹೊಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಶಂಕಿಸಿದ ಚಾಲಕ, ಕಾಂತಪಲ್ಲಿ ಚೌಕದ ಬಳಿ ಹೆದ್ದಾರಿಯಿಂದ ಗ್ರಾಮಾಂತರ ರಸ್ತೆಯ ಕಡೆಗೆ ಕಾರನ್ನು ತಿರುಗಿಸಿದರು. ಆದರೆ ಬಳಿಕವೂ ಕಾರು ಹಿಂಬಾಳಿಸಿದೆ. ಈ ವೇಳೆ ಕಾರು ಪಲ್ಟಿಯಾಗಿದೆ. ಹೆದ್ದಾರಿಯಲ್ಲಿ ತಮ್ಮ ಕಾರಿಗೆ ಡಂಪರ್ ಎರಡು ಬಾರಿ ಡಿಕ್ಕಿ ಹೊಡೆಯುವವರೆಗೂ ನನಗೆ ಪ್ರಜ್ಞೆಯಿತ್ತು. ಆದರೆ ಮೂರನೇ ಬಾರಿ ಡಿಕ್ಕಿ ಹೊಡೆದಾಗ ಪ್ರಜ್ಞೆ ತಪ್ಪಿತು” ಎಂದು ಹೇಳಿದರು.
ಇದನ್ನು ಓದಿದ್ದೀರಾ? ಒಡಿಶಾ | ಅಲೆಮಾರಿ ಕುಟುಂಬದ ಐವರ ಬರ್ಬರ ಹತ್ಯೆ; ಐವರ ಅಪಹರಣ
“ಯಾರೋ ಉದ್ದೇಶಪೂರ್ವಕವಾಗಿ ಅಪಘಾತ ಮಾಡಿದ್ದಾರೆ ಎಂದು ನನಗೆ ಖಾತ್ರಿಯಿದೆ. ತಪ್ಪಿ ಒಮ್ಮೆ ವಾಹನಕ್ಕೆ ಡಿಕ್ಕಿ ಹೊಡೆಯಬಹುದು. ಹಿಂದಿನಿಂದ ಮೂರು ಬಾರಿ ಯಾಕೆ ಡಿಕ್ಕಿ ಹೊಡೆಯುತ್ತಾರೆ” ಎಂದು ಗಾಯಗೊಂಡ ಬಿಜೆಪಿ ಕಾರ್ಯಕರ್ತ ಪ್ರಶ್ನಿಸಿದ್ದಾರೆ.
ಗಾಯಾಳುಗಳನ್ನು ಭೇಟಿ ಮಾಡಿದ ನಂತರ ಮಾತನಾಡಿದ ಮಾಜಿ ಶಾಸಕ ರೆಂಗಾಳಿ ನಾಯ್ಕ್, “ಇದು ಅಪಘಾತವಲ್ಲ, ಉದ್ದೇಶಪೂರ್ವಕವಾಗಿ ಕಾರಿಗೆ ಡಿಕ್ಕಿ ಹೊಡೆಯಲಾಗಿದೆ, ಇದು ಯೋಜಿತ ಕೃತ್ಯ” ಎಂದು ಆರೋಪಿಸಿದರು. “ಯಾರೋ ಉದ್ದೇಶಪೂರ್ವಕವಾಗಿ ವಾಹನವನ್ನು ಮೂರು ಬಾರಿ ಹೊಡೆದಿದ್ದಾರೆ” ಎಂದರು.
