ನಾಯಕ ಸಮುದಾಯದ ಕುಟುಂಬವೊಂದಕ್ಕೆ ಮನೆ ಬಾಡಿಗೆಗೆ ನೀಡಿದ್ದನ್ನು ಮುಂದಿಟ್ಟುಕೊಂಡು ಸವರ್ಣೀಯರೇ ಸವರ್ಣೀಯರಿಗೆ ಸಾಮಾಜಿಕ ಬಹಿಷ್ಕಾರ ಹಾಕಿರುವ ಘಟನೆ ಚಾಮರಾಜ ನಗರ ಜಿಲ್ಲೆಯ ಯಳಂದೂರು ತಾಲೂಕಿನ ಆಗರ ಗ್ರಾಮದಲ್ಲಿ ನಡೆದಿದೆ.
ವೀರಶೈವ ಲಿಂಗಾಯತ ಸಮುದಾಯದ ವೀರಣ್ಣ, ಗೌರಮ್ಮ ಹಾಗೂ ಮಗ ವಿ ಸುರೇಶ್, ನಾಯಕ ಜನಾಂಗದ ಕುಟುಂಬವೊಂದಕ್ಕೆ ಮನೆ ಬಾಡಿಗೆ ನೀಡಿದ್ದರಿಂದ ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾದವರು.

ಗ್ರಾಮದ ಲಿಂಗಾಯತ ಬಡಾವಣೆಯ ಮಠದ ಬೀದಿಯಲ್ಲಿರುವ ಮನೆಯನ್ನು ಹತ್ತು ತಿಂಗಳ ಹಿಂದೆ ನಾಯಕ ಸಮುದಾಯದ ಕುಟುಂಬಕ್ಕೆ ಮನೆ ಬಾಡಿಗೆ ನೀಡಲಾಗಿತ್ತು. ಇದೇ ಕಾರಣಕ್ಕೆ ಲಿಂಗಾಯತ ಸಮುದಾಯದ ಸಭೆ, ಸಮಾರಂಭ, ಮದುವೆ, ದೇವಾಲಯಕ್ಕೆ ಬರದಂತೆ ಸಮುದಾಯದವರು ತಡೆಯೊಡ್ಡುತ್ತಿದ್ದು ಇದನ್ನ ಪ್ರಶ್ನಿಸಿದರೆ ಬಹಿಷ್ಕಾರ ಹಾಕಿರುವುದಾಗಿ ಹೇಳಿ ದೂರವಿಟ್ಟಿದ್ದಾರೆ ಎಂದು ವೀರಣ್ಣ ಕುಟುಂಬ ಆರೋಪಿಸಿದೆ.
ಸದ್ಯ ವೀರಣ್ಣ ಅವರ ಮಗ ಸುರೇಶ್, ಮಾಂಬಳ್ಳಿ ಪೊಲೀಸ್ ಠಾಣೆಗೆ ನಿರಂತರವಾಗಿ ಮೂರು ಬಾರಿ ದೂರು ನೀಡಿದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೂಡ ಕೇಳಿಬಂದಿದೆ.
ಘಟನೆ ತಿಳಿದ ಬಳಿಕ ವಾಲ್ಮೀಕಿ ಸಮಾಜ ಸೇವಾ ಸಮಿತಿ ಹಾಗೂ ದಲಿತ ಸಂಘರ್ಷ ಸಮಿತಿ ಮುಖಂಡರುಗಳು ಮಾಂಬಳ್ಳಿ ಠಾಣೆಗೆ ತೆರಳಿ, ಠಾಣಾಧಿಕಾರಿಗಳ ಜೊತೆ ಮಾತನಾಡಿ, ಸೂಕ್ತ ಕ್ರಮ ವಹಿಸುವಂತೆ ದೂರು ನೀಡಿದ್ದಾರೆ.
ಪೊಲೀಸ್ ಅಧಿಕಾರಿಗಳು ಸಹ ಸೂಕ್ತ ಕ್ರಮ ವಹಿಸುವುದಾಗಿ ತಿಳಿಸಿ ಬಹಿಷ್ಕಾರಕ್ಕೆ ಒಳಗಾಗಿರುವ ಕುಟುಂಬಕ್ಕೆ ಕಾನೂನಿನ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.
ದಲಿತ ಸಂಘರ್ಷ ಸಮಿತಿಯ ಚಾಮರಾಜ ನಗರ ಜಿಲ್ಲಾ ಸಂಚಾಲಕರಾದ ಯಲಿಯೂರು ರಾಜಣ್ಣ ಈ ದಿನ ಡಾಟ್ ಕಾಮ್ ಜೊತೆ ಮಾತನಾಡಿ, “ಮಾಂಬಳ್ಳಿ ಪೊಲೀಸ್ ಠಾಣೆಗೆ ಮುಖಂಡರುಗಳೊಂದಿಗೆ ತೆರಳಿ ದೂರು ನೀಡಿದ್ದೇವೆ. ಬಹಿಷ್ಕಾರಕ್ಕೆ ಒಳಗಾಗಿದ್ದ ಕುಟುಂಬದವರು ನೀಡಿದ್ದ ದೂರಿನ ಕ್ರಮ ಕೈಗೊಳ್ಳದೇ ಇರುವುದನ್ನು ಪ್ರಶ್ನಿಸಿ, ಮತ್ತೆ ಹೀಗಾಗದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದ್ದು, ತುರ್ತಾಗಿ ಅಗತ್ಯ ಕ್ರಮ ಕೈಗೊಂಡು ಬಹಿಷ್ಕಾರಕ್ಕೆ ಒಳಗಾದ ಕುಟುಂಬಕ್ಕೆ ನ್ಯಾಯ ಕೊಡಿಸಬೇಕು ಎಂದು ಮನವಿ ಮಾಡಿದ್ದೇವೆ” ಎಂದು ಹೇಳಿದರು.
“ಜಾತಿ ವ್ಯವಸ್ಥೆ ಅತಿರೇಕಕ್ಕೆ ಹೋಗಿದ್ದು, ಸಮಾಜದ ಸ್ವಾಸ್ಥ್ಯ ಹದಗೆಡಿಸುತ್ತಿದೆ. ಸಹಬಾಳ್ವೆಗೆ ಮಾರಕವಾಗಿದೆ. ಇಂತಹ ಕಾಲಘಟ್ಟದಲ್ಲಿ ಕೂಡ ಜಾತೀಯತೆ ಎಲ್ಲೆ ಮೀರಿದೆ ಅಂದರೆ ಇದು ಉತ್ತಮವಾದ ಬೆಳವಣಿಗೆ ಅಲ್ಲ. ಹಾಗಾಗಿ, ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದರು.
ವಾಲ್ಮೀಕಿ ಸಮಾಜ ಸೇವಾ ಸಮಿತಿಯ ಮುಖಂಡರಾದ ಕಲ್ಲಂಬಳ್ಳಿ ಸೋಮನಾಯಕ ಮಾತನಾಡಿ, “ನಾಯಕ ಜನಾಂಗದ ಕುಟುಂಬಕ್ಕೆ ಮನೆ ಬಾಡಿಗೆ ಕೊಟ್ಟರು ಅನ್ನುವ ಕಾರಣಕ್ಕೆ ಸವರ್ಣೀಯರು ಸವರ್ಣೀಯ ಜನಾಂಗದವರನ್ನು ಬಹಿಷ್ಕಾರ ಹಾಕಿದ್ದು ಸರಿಯಲ್ಲ. ಇದನ್ನ ಸರಿಪಡಿಸಬೇಕಿದ್ದ ಪೊಲೀಸ್ ಇಲಾಖೆ ಯಾವುದೇ ಕ್ರಮ ಕೈಗೊಳ್ಳದಿರುವುದು ಖಂಡನೀಯ” ಎಂದರು.
ಇದನ್ನು ಓದಿದ್ದೀರಾ? ಮುಸ್ಲಿಂ ಹೆಸರು ಬಳಸಿಕೊಂಡು ಕುಂಭಮೇಳ ಸ್ಫೋಟಿಸುವುದಾಗಿ ಹೇಳಿದ್ದ ಯುವಕನ ಬಂಧನ
“ಲಿಂಗಾಯತ ಕುಟುಂಬ ನಾಯಕ ಜನಾಂಗದ ಕುಟುಂಬಕ್ಕೆ ಬಾಡಿಗೆ ಮನೆ ನೀಡುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದರು. ಈ ಸಮಾಜಮುಖಿ ನಡೆಯನ್ನು ಶ್ಲಾಘಿಸಿ, ಜಾತಿ ಪದ್ಧತಿ ತೊಡೆದು ಹಾಕಲು ಮುಂದಾಗಬೇಕಿತ್ತು. ಆದರೆ, ಇದನ್ನೇ ನೆಪ ಮಾಡಿಕೊಂಡು ಇಡೀ ಕುಟುಂಬವನ್ನು ಕಳೆದ ಹತ್ತು ತಿಂಗಳಿನಿಂದ ಯಾವುದೇ ಧಾರ್ಮಿಕ ಕಾರ್ಯಕ್ರಮ, ಸಭೆ, ದೇವಾಲಯ ಯಾವುದಕ್ಕೂ ಬಾರದಂತೆ ತಡೆದಿರುವುದು ಸರಿಯಲ್ಲ. ಇದರ ವಿರುದ್ಧ ಪೊಲೀಸ್ ಅಧಿಕಾರಿಗಳು ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.
ಸಮಾಜದಲ್ಲಿ ಎಲ್ಲರೂ ಸಮಾನವಾಗಿ ಬದುಕಲು ಅವಕಾಶ ಮಾಡಿಕೊಡಬೇಕು. ಹಾಗೆಯೇ ಜಿಲ್ಲೆಯಲ್ಲಿ ಜಾತಿವಾದಿಗಳು ಹೆಚ್ಚಿದ್ದು, ಇಂತಹ ಘಟನೆಗಳು ಮತ್ತೆ ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದರು.

