- ಹೋರಾಟಕ್ಕೆ ಮೊದಲ ಜಯ ಎಂದ ಜಯ ಮೃತ್ಯುಂಜಯ ಸ್ವಾಮೀಜಿ
- ಸ್ವಾಮೀಜಿ ಮಾತು ಅಲ್ಲಗಳೆದು ಅಧ್ಯಕ್ಷ ಸ್ಥಾನ ತೊರೆದ ಕಾಶಪ್ಪನವರ್
ಮೀಸಲಾತಿ ವಿಚಾರದಲ್ಲಿ ಪಂಚಮಸಾಲಿ ಹೋರಾಟಕ್ಕೆ ಮೊದಲ ಜಯ ಸಿಕ್ಕಿದೆ ಎಂದು ಪಂಚಮಸಾಲಿ ಪೀಠಾಧ್ಯಕ್ಷ ಬಸವಜಯ ಮೃತ್ಯುಂಜಯ ಸ್ವಾಮೀಜಿ ಒಂದು ಕಡೆ ಹೇಳಿದರೆ, ಅದನ್ನು ಅಲ್ಲಗಳೆದು ಪಂಚಮಸಾಲಿ ಹೋರಾಟ ಸಮಿತಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ವಿಜಯಾನಂದ ಕಾಶಪ್ಪನವರ್ ರಾಜೀನಾಮೆ ನೀಡಿದ್ದಾರೆ.
ಪರಿಷ್ಕೃತ ಮೀಸಲಾತಿ ನೀತಿ ಮೂಲಕ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಡಿ ಪ್ರವರ್ಗದಡಿ ಶೇ.7ರಷ್ಟು ಮೀಸಲಾತಿ ನೀಡಲು ಶುಕ್ರವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಈ ವಿಚಾರವಾಗಿ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕೋರಿ ಸತತ ಹೋರಾಟ ಮಾಡುತ್ತ ಬಂದ ಪಂಚಮಸಾಲಿ ಪೀಠಾಧ್ಯಕ್ಷ ಬಸವಜಯ ಮೃತ್ಯುಂಜಯ ಸ್ವಾಮೀಜಿ ಶನಿವಾರ ಫ್ರೀಡಂ ಪಾರ್ಕ್‌ನಲ್ಲಿ ತುರ್ತು ಸುದ್ದಿಗೋಷ್ಠಿ ಕರೆದು, “ಎರಡು ವರ್ಷದ ಎಂಟು ತಿಂಗಳಿನ ಹೋರಾಟಕ್ಕೆ ವಿರಾಮ ನೀಡುತ್ತಿದ್ದೇವೆ. ಮೊದಲ ಹೆಜ್ಜೆಯಲ್ಲಿ ಜಯ ಸಾಧಿಸಿದ್ದೇವೆ, ಅದಕ್ಕಾಗಿ ಸರ್ಕಾರಕ್ಕೆ ಧನ್ಯವಾದ ತಿಳಿಸುವೆ” ಎಂದರು.
ಮೃತ್ಯುಂಜಯ ಸ್ವಾಮೀಜಿ ಪಕ್ಕವೇ ಕುಳಿತಿದ್ದ ವಿಜಯಾನಂದ ಕಾಶಪ್ಪನವರ್ ಕೂಡಲೇ ಸ್ವಾಮೀಜಿ ಕೈಯಿಂದ ಮೈಕ್ ಕಿತ್ತುಕೊಂಡು, ಸ್ವಾಮೀಜಿ ಮತ್ತು ಸರ್ಕಾರದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿ, “ನಾನು ಯಾವುದೇ ಕಾರಣಕ್ಕೂ ಸರ್ಕಾರದ ನಿರ್ಧಾರ ಒಪ್ಪಿಕೊಳ್ಳುವುದಿಲ್ಲ. ಪಂಚಮಸಾಲಿ ಹೋರಾಟ ಸಮಿತಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ” ಎಂದು ಸ್ಥಳದಲ್ಲೇ ಘೋಷಿಸಿದರು.
ಹೋರಾಟ ಸ್ಥಗಿತಗೊಳ್ಳುತ್ತಿದ್ದಂತೆ ಹೋರಾಟಗಾರರ ನಡುವೆ ಮಾತಿನ ಚಕಮಕಿ ನಡೆದು, ಪರ-ವಿರೋಧ ಮಾತುಗಳು ಕೇಳಿಬಂದವು. ಒಂದಿಷ್ಟು ಸಮಯ ಸ್ಥಳದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಗಿದ್ದು, ಮಾತಿನ ಚಕಮಕಿ ಕೈ-ಕೈ ಮೀಲಾಯಿಸುವ ಹಂತಕ್ಕೂ ತಲುಪಿತ್ತು. ಈ ನಡುವೆ ವಿಜಯಾನಂದ ಮತ್ತು ಬಸನಗೌಡ ಪಾಟೀಲ ಯತ್ನಾಳ್ ನಡುವೆ ವಾಕ್ಸಮರ ನಡೆಯಿತು.
ಸ್ವಾಮೀಜಿ ಮತ್ತು ಸರ್ಕಾರದ ನಿರ್ಧಾರಕ್ಕೆ ವಿಜಯಾನಂದ ಕಾಶಪ್ಪನವರ್ ತೀವ್ರ ವಿರೋಧ ವ್ಯಕ್ತಪಡಿಸಿ, “ನಾವು ಕೇಳಿರುವುದು ಶೇ.15 ಮೀಸಲಾತಿ. ಆದರೆ, ಸರ್ಕಾರ ಶೇ.7 ನೀಡಿದೆ. ಇದು ಚುನಾವಣಾ ತಂತ್ರ ಆಗಿದೆ” ಎಂದು ಹರಿಹಾಯ್ದರು.
“ಬೇರೆ ಸಮುದಾಯದಿಂದ ಕಿತ್ತುಕೊಂಡು ನಮಗೆ ಮೀಸಲಾತಿ ಕೊಡುವುದು ಬೇಕಾಗಿಲ್ಲ. ನಮಗೆ ಕೇವಲ ಶೇ.2 ಮಾತ್ರ ಮೀಸಲಾತಿ ಸಿಕ್ಕಂತಾಗಿದೆ. ಮುಸ್ಲಿಮರ ಮೀಸಲಾತಿಯನ್ನು ಕಸಿದು ನಮಗೆ ಕೊಟ್ಟಿದ್ದಾರೆ. ಆ ಮೂಲಕ ಮುಸ್ಲಿಮರು ಮತ್ತು ನಮ್ಮ ನಡುವೆ ಜಗಳ ತಂದಿಡುವ ಕೆಲಸವನ್ನು ಬಿಜೆಪಿ ಮಾಡಿದೆ” ಎಂದು ಆರೋಪಿಸಿದರು.
ಸ್ವಾಮೀಜಿ ಹೇಳಿದ್ದೇನು?
ಕಣ್ಣೀರುಡುತ್ತಲೇ ಮಾತನಾಡಿದ ಮೃತ್ಯುಂಜಯ ಸ್ವಾಮೀಜಿ, “ದೇವರು ನಮಗೆ ಶೇ.2 ಮೀಸಲಾತಿ ಕರುಣಿಸಿದ್ದಾರೆ. ಹೊಟ್ಟೆ ತುಂಬಾ ಊಟ ಸಿಕ್ಕಿಲ್ಲ. ಆದರೆ ಹಸಿದ ಹೊಟ್ಟೆಗೆ ಪ್ರಸಾದ ಸಿಕ್ಕಂತಾಗಿದೆ. ನೀತಿ ಸಂಹಿತೆ ಜಾರಿಯಾಗುವುದರಿಂದ ಪ್ರತಿಭಟನೆ ಮುಂದುವರಿಸಲು ಆಗುತ್ತಿಲ್ಲ. ಮುಂದೆ ಯಾವ ಸರ್ಕಾರ ಆಡಳಿತಕ್ಕೆ ಬರುತ್ತದೆಯೋ ಗೊತ್ತಿಲ್ಲ. ದೊಡ್ಡ ದೊಡ್ಡ ಮಠದವರು ನನಗೆ ಬೆಂಬಲ ಕೊಟ್ಟಿಲ್ಲ. ನಮ್ಮ ಹೋರಾಟದ ಪರಿಣಾಮ ಇಡೀ ಲಿಂಗಾಯತ ಸಮುದಾಯಕ್ಕೆ ಈಗ ಅನುಕೂಲವಾಗಿದೆ. ಚುನಾವಣೆ ಮುಗಿದ ನಂತರ ಹೋರಾಟ ಮುಂದುವರೆಸೋಣ. ಮೀಸಲಾತಿ ಜಾರಿ ಪ್ರತಿ ಕೈಗೆ ಸಿಕ್ಕರೆ ಮುಖ್ಯಮಂತ್ರಿ ಬೊಮ್ಮಾಯಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಖುದ್ದು ಭೇಟಿಯಾಗಿ ಸನ್ಮಾನಿಸುವೆ” ಎಂದರು.

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.