ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಒಡಕು | ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಕಾಶಪ್ಪನವರ್

Date:

  • ಹೋರಾಟಕ್ಕೆ ಮೊದಲ ಜಯ ಎಂದ ಜಯ ಮೃತ್ಯುಂಜಯ ಸ್ವಾಮೀಜಿ
  • ಸ್ವಾಮೀಜಿ ಮಾತು ಅಲ್ಲಗಳೆದು ಅಧ್ಯಕ್ಷ ಸ್ಥಾನ ತೊರೆದ ಕಾಶಪ್ಪನವರ್

ಮೀಸಲಾತಿ ವಿಚಾರದಲ್ಲಿ ಪಂಚಮಸಾಲಿ ಹೋರಾಟಕ್ಕೆ ಮೊದಲ ಜಯ ಸಿಕ್ಕಿದೆ ಎಂದು ಪಂಚಮಸಾಲಿ ಪೀಠಾಧ್ಯಕ್ಷ ಬಸವಜಯ ಮೃತ್ಯುಂಜಯ ಸ್ವಾಮೀಜಿ ಒಂದು ಕಡೆ ಹೇಳಿದರೆ, ಅದನ್ನು ಅಲ್ಲಗಳೆದು ಪಂಚಮಸಾಲಿ ಹೋರಾಟ ಸಮಿತಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ವಿಜಯಾನಂದ ಕಾಶಪ್ಪನವರ್ ರಾಜೀನಾಮೆ ನೀಡಿದ್ದಾರೆ.

ಪರಿಷ್ಕೃತ ಮೀಸಲಾತಿ ನೀತಿ ಮೂಲಕ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಡಿ ಪ್ರವರ್ಗದಡಿ ಶೇ.7ರಷ್ಟು ಮೀಸಲಾತಿ ನೀಡಲು ಶುಕ್ರವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಈ ವಿಚಾರವಾಗಿ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕೋರಿ ಸತತ ಹೋರಾಟ ಮಾಡುತ್ತ ಬಂದ ಪಂಚಮಸಾಲಿ ಪೀಠಾಧ್ಯಕ್ಷ ಬಸವಜಯ ಮೃತ್ಯುಂಜಯ ಸ್ವಾಮೀಜಿ ಶನಿವಾರ ಫ್ರೀಡಂ ಪಾರ್ಕ್‌ನಲ್ಲಿ ತುರ್ತು ಸುದ್ದಿಗೋಷ್ಠಿ ಕರೆದು, “ಎರಡು ವರ್ಷದ ಎಂಟು ತಿಂಗಳಿನ ಹೋರಾಟಕ್ಕೆ ವಿರಾಮ ನೀಡುತ್ತಿದ್ದೇವೆ. ಮೊದಲ ಹೆಜ್ಜೆಯಲ್ಲಿ ಜಯ ಸಾಧಿಸಿದ್ದೇವೆ, ಅದಕ್ಕಾಗಿ ಸರ್ಕಾರಕ್ಕೆ ಧನ್ಯವಾದ ತಿಳಿಸುವೆ” ಎಂದರು.

ಮೃತ್ಯುಂಜಯ ಸ್ವಾಮೀಜಿ ಪಕ್ಕವೇ ಕುಳಿತಿದ್ದ ವಿಜಯಾನಂದ ಕಾಶಪ್ಪನವರ್ ಕೂಡಲೇ ಸ್ವಾಮೀಜಿ ಕೈಯಿಂದ ಮೈಕ್‌ ಕಿತ್ತುಕೊಂಡು, ಸ್ವಾಮೀಜಿ ಮತ್ತು ಸರ್ಕಾರದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿ, “ನಾನು ಯಾವುದೇ ಕಾರಣಕ್ಕೂ ಸರ್ಕಾರದ ನಿರ್ಧಾರ ಒಪ್ಪಿಕೊಳ್ಳುವುದಿಲ್ಲ. ಪಂಚಮಸಾಲಿ ಹೋರಾಟ ಸಮಿತಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ” ಎಂದು ಸ್ಥಳದಲ್ಲೇ ಘೋಷಿಸಿದರು.

ಹೋರಾಟ ಸ್ಥಗಿತಗೊಳ್ಳುತ್ತಿದ್ದಂತೆ ಹೋರಾಟಗಾರರ ನಡುವೆ ಮಾತಿನ ಚಕಮಕಿ ನಡೆದು, ಪರ-ವಿರೋಧ ಮಾತುಗಳು ಕೇಳಿಬಂದವು. ಒಂದಿಷ್ಟು ಸಮಯ ಸ್ಥಳದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಗಿದ್ದು, ಮಾತಿನ ಚಕಮಕಿ ಕೈ-ಕೈ ಮೀಲಾಯಿಸುವ ಹಂತಕ್ಕೂ ತಲುಪಿತ್ತು. ಈ ನಡುವೆ ವಿಜಯಾನಂದ ಮತ್ತು ಬಸನಗೌಡ ಪಾಟೀಲ ಯತ್ನಾಳ್ ನಡುವೆ ವಾಕ್ಸಮರ ನಡೆಯಿತು.

ಸ್ವಾಮೀಜಿ ಮತ್ತು ಸರ್ಕಾರದ ನಿರ್ಧಾರಕ್ಕೆ ವಿಜಯಾನಂದ ಕಾಶಪ್ಪನವರ್ ತೀವ್ರ ವಿರೋಧ ವ್ಯಕ್ತಪಡಿಸಿ, “ನಾವು ಕೇಳಿರುವುದು ಶೇ.15 ಮೀಸಲಾತಿ. ಆದರೆ, ಸರ್ಕಾರ ಶೇ.7 ನೀಡಿದೆ. ಇದು ಚುನಾವಣಾ ತಂತ್ರ ಆಗಿದೆ” ಎಂದು ಹರಿಹಾಯ್ದರು.

“ಬೇರೆ ಸಮುದಾಯದಿಂದ ಕಿತ್ತುಕೊಂಡು ನಮಗೆ ಮೀಸಲಾತಿ ಕೊಡುವುದು ಬೇಕಾಗಿಲ್ಲ. ನಮಗೆ ಕೇವಲ ಶೇ.2 ಮಾತ್ರ ಮೀಸಲಾತಿ ಸಿಕ್ಕಂತಾಗಿದೆ. ಮುಸ್ಲಿಮರ ಮೀಸಲಾತಿಯನ್ನು ಕಸಿದು ನಮಗೆ ಕೊಟ್ಟಿದ್ದಾರೆ. ಆ ಮೂಲಕ ಮುಸ್ಲಿಮರು ಮತ್ತು ನಮ್ಮ ನಡುವೆ ಜಗಳ ತಂದಿಡುವ ಕೆಲಸವನ್ನು ಬಿಜೆಪಿ ಮಾಡಿದೆ” ಎಂದು ಆರೋಪಿಸಿದರು.

ಸ್ವಾಮೀಜಿ ಹೇಳಿದ್ದೇನು?

ಕಣ್ಣೀರುಡುತ್ತಲೇ ಮಾತನಾಡಿದ ಮೃತ್ಯುಂಜಯ ಸ್ವಾಮೀಜಿ, “ದೇವರು ನಮಗೆ ಶೇ.2 ಮೀಸಲಾತಿ ಕರುಣಿಸಿದ್ದಾರೆ. ಹೊಟ್ಟೆ ತುಂಬಾ ಊಟ ಸಿಕ್ಕಿಲ್ಲ. ಆದರೆ ಹಸಿದ ಹೊಟ್ಟೆಗೆ ಪ್ರಸಾದ ಸಿಕ್ಕಂತಾಗಿದೆ. ನೀತಿ ಸಂಹಿತೆ ಜಾರಿಯಾಗುವುದರಿಂದ ಪ್ರತಿಭಟನೆ ಮುಂದುವರಿಸಲು ಆಗುತ್ತಿಲ್ಲ. ಮುಂದೆ ಯಾವ ಸರ್ಕಾರ ಆಡಳಿತಕ್ಕೆ ಬರುತ್ತದೆಯೋ ಗೊತ್ತಿಲ್ಲ. ದೊಡ್ಡ ದೊಡ್ಡ ಮಠದವರು ನನಗೆ ಬೆಂಬಲ ಕೊಟ್ಟಿಲ್ಲ. ನಮ್ಮ ಹೋರಾಟದ ಪರಿಣಾಮ ಇಡೀ ಲಿಂಗಾಯತ ಸಮುದಾಯಕ್ಕೆ ಈಗ ಅನುಕೂಲವಾಗಿದೆ. ಚುನಾವಣೆ ಮುಗಿದ ನಂತರ ಹೋರಾಟ ಮುಂದುವರೆಸೋಣ. ಮೀಸಲಾತಿ ಜಾರಿ ಪ್ರತಿ ಕೈಗೆ ಸಿಕ್ಕರೆ ಮುಖ್ಯಮಂತ್ರಿ ಬೊಮ್ಮಾಯಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಖುದ್ದು ಭೇಟಿಯಾಗಿ ಸನ್ಮಾನಿಸುವೆ” ಎಂದರು.

+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಾಮಾಜಿಕ ಕಾರ್ಯಕರ್ತರ ಹೆಸರಲ್ಲಿ ಬೆದರಿಕೆ ಹಾಕಿದವರ ಬಂಧಿಸುವಂತೆ ಒತ್ತಾಯ

ಕನ್ನಡ ಪರ ಸಂಘಟನೆಗಳು, ಸಾಮಾಜಿಕ ಕಾರ್ಯಕರ್ತರೆಂದು ಹೇಳಿಕೊಂಡು ನಮ್ಮ ಶಾಲೆಯ ವಿರುದ್ಧ...

ಚಿತ್ರದುರ್ಗ | ಜಿಲ್ಲಾಸ್ಪತ್ರೆಯಲ್ಲಿ ಮಂಗಗಳ ಕಾಟ, ರೋಗಿಗಳು ಹೈರಾಣು

ಸರ್ಕಾರಿ ಆಸ್ಪತ್ರೆಗಳಲ್ಲಿ ಸಾಮಾನ್ಯವಾಗಿ ವೈದ್ಯರು ಮತ್ತು ಸಿಬ್ಬಂದಿ ಕೊರತೆ, ಔಷಧಗಳ ಕೊರತೆ...

ಗದಗ | ಕಲಬುರಗಿಯಲ್ಲಿ ರಾಜ್ಯ ಮಟ್ಟದ ವಿದ್ಯಾರ್ಥಿನಿಯರ ಸಮಾವೇಶ

ಶಿಕ್ಷಣದ ಹಕ್ಕಿಗಾಗಿ, ಖಾಸಗೀಕರಣ ವಿರೋಧಿಸಿ ವಿದ್ಯಾರ್ಥಿನಿಯರಿಗೆ ಸಮಾನ ಗುಣಮಟ್ಟದ ಶಿಕ್ಷಣ ಹಾಗೂ...

ರಾಯಚೂರು | ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ದೇವದಾಸಿ ಮಹಿಳೆಯರ ಧರಣಿ

ದೇವದಾಸಿ ಮಹಿಳೆಯರಿಗೆ ಬಾಕಿಯಿರುವ ಪಿಂಚಣಿ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ...