ಹುಬ್ಬಳ್ಳಿಯಲ್ಲಿ ಪೌರಕಾರ್ಮಿಕರ ವಿವಿಧ ಬೇಡಿಕೆ ಆಗ್ರಹಿಸಿ ಶುರುವಾದ ಅನಿರ್ದಿಷ್ಟ ಅಹೋರಾತ್ರಿ ಹೋರಾಟ ಮುಂದುವರಿದು 27ನೇ ದಿನಕ್ಕೆ ಕಾಲಿಟ್ಟಿದೆ. ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಾಡುತ್ತಿರುವ ಪ್ರತಿಭಟನೆಗೆ ಜೆಡಿಎಸ್ ಪಕ್ಷ ಹಾಗೂ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿ ಪೌರಕಾರ್ಮಿಕರ ಪರವಾಗಿ ಧ್ವನಿಯೆತ್ತಿದ್ದಾರೆ.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಗುರುರಾಜ ಹುಣಸಿಮರದ ಮಾತನಾಡಿ, ಅಹಿಂದರ ಪರವಾದ ಸರ್ಕಾರ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯನವರ ಸರ್ಕಾರಕ್ಕೆ ಪೌರಕಾರ್ಮಿಕರ ಕೂಗು ಏಕೆ ಕೇಳಿಸುತ್ತಿಲ್ಲ? ಇವರದ್ದು ಬರೀಯ ಮಾತಿನ ಬಡವರಪರ ಸರ್ಕಾರವೇ? ಎಂದು ಪ್ರಶ್ನಿಸುತ್ತ, ಈ ಕೂಡಲೇ ಪೌರಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿದರು.
ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ ಮಾತನಾಡಿ, ಬಿಸಿಲು ಮತ್ತು ಚಳಿಯನ್ನು ಲೆಕ್ಕಿಸದೆ ತಮ್ಮ ಹಕ್ಕಿಗಾಗಿ ಅನುರ್ಧಿಷ್ಟಾವಧಿ ದರಣಿ ಕುಳಿತಿರುವ ಪೌರಕಾರ್ಮಿಕರ ಮತಗಳಿಂದಲೇ ಗೆದ್ದು ಬಂದು ಅವರ ಹಿತವನ್ನು ಕಾಯುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲರಾಗಿದೆ. ಬದುಕಿದ್ದಾಗ ತಿರುಗಿಯೂ ನೋಡದೆ ಸತ್ತನಂತರ ಪ್ರಚಾರಕ್ಕಾಗಿ ಪರಿಹಾರ ಧನ ನೀಡುವುದು ಎಷ್ಟು ಸರಿ? ಜಿಲ್ಲಾ ಉಸ್ತುವಾರಿ ಸಚಿವರು ಒಂದು ದಿನವಾದರೂ ಬಂದು ಪೌರಕಾರ್ಮಿಕರ ನೋವನ್ನು ಕೇಳಿದ್ದಾರೆಯೆ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಡಾ. ವಿಜಯ ಗುಂಟ್ರಾಳ ಮಾತನಾಡಿ, ನುಡಿದಂತೆ ನಡೆಯುವ ಸರ್ಕಾರ ಎಂದು ಹೇಳುತ್ತಾ 8 ವರ್ಷದ ತಮ್ಮದೇ ಆದೇಶವನ್ನು ಅನುಷ್ಠಾನಗೊಳಿಸುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ. ಕಳೆದ 27ದಿನಗಳಿಂದ ಹೋರಾಟ ನಡೆಸಿದರೂ ಪೌರಕಾರ್ಮಿಕರಿಗೆ ಸ್ಪಂದಿಸದಿರುವುದು ಖಂಡನೀಯ. ಕೂಡಲೇ ಬೇಡಿಕೆಗಳನ್ನು ಈಡೇರಿಸಬೇಕು ತಪ್ಪಿದಲ್ಲಿ ಉಗ್ರಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು. ಉಪವಾಸ ಸತ್ಯಾಗ್ರಹ ಹೋರಾಟದಲ್ಲಿ ಭಾಗವಹಿಸಿದ ಪೌರಕಾರ್ಮಿಕ ಮಹಿಳೆಯರು ಅನಾರೋಗ್ಯಕ್ಕೆ ಈಡಾಗಿದ್ದು ಸದ್ಯ ಚಿಟಗುಪ್ಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದರು.
ಈ ವರದಿ ಓದಿದ್ದೀರಾ? ಧಾರವಾಡ | ಟಿಬಿ (ಕ್ಷಯ) ಮುಕ್ತ ಗ್ರಾಮ ಮಾಡಲು ಸಂಶಿ ಗ್ರಾಮದಲ್ಲಿ ಮಾನವ ಸರಪಳಿ ಕಾರ್ಯಕ್ರಮ
ಪ್ರತಿಭಟನೆಯಲ್ಲಿ ಧಾರವಾಡ ಜಿಲ್ಲಾಧ್ಯಕ್ಷ ಗುರುರಾಜ ಹುನಸಿಮರದ, ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, ಗ್ರಾಮೀಣಾಧ್ಯಕ್ಷ ಬಿ. ಬಿ.ಗಂಗಾಧರಮಠ, ಸಿದ್ದು ಮಹಾಂತ ಒಡೆಯರ್, ಈಶ್ವರ ತೆಗ್ಗಿ, ಜೈಭೀಮ್ ಹಿತರಕ್ಷಣಾ ಸಮಿತಿ, ಕರ್ನಾಟಕ ಟಿಪ್ಪು ಸುಲ್ತಾನ್ ಅಲ್ಪಸಂಖ್ಯಾತರ ಸಂಘಟನೆ, ಜೈಭೀಮ್ ಹಿತರಕ್ಷಣಾ ಸಮಿತಿ ಸಂಘದ ಅಧ್ಯಕ್ಷ ಅಣ್ಣಪ್ಪ ಸಿದ್ದಾಪುರ, ಜೈಭೀಮ್ ಯುವ ಶಕ್ತಿ ಸೇನೆ ಅಧ್ಯಕ್ಷ ಹರೀಶ ಗುಂಟ್ರಾಳ, ಟಿಪ್ಪು ಸುಲ್ತಾನ್ ಅಲ್ಪಸಂಖ್ಯಾತರ ಸಂಘಟನೆ ಅಧ್ಯಕ್ಷ ಮೌಲಾಲಿ ಮುಲ್ಲಾ, ಸುನೀಲ್ ಕುರಡೇಕರ್, ಸತೀಶ ಮಿಶ್ರಿಕೋಟಿ, ಹಜರ್ ಮುಲ್ಲಾ, ಶಾನೂ ಖಾನ್, ಶಂಕರ ಕಟ್ಟಿಮನಿ ಬಸಪ್ಪ ಮಾದರ, ಗಂಗಾಧರ ಪೆರೂರ್, ಹನುಮಂತ ಯರಗುಂಟಿ, ಕನ್ನಡಪರ ಸಂಘಟನೆಗಳು ಹಾಗೂ ಆಟೋ ಚಾಲಕರ ಸಂಘದ ಶೇಖರಯ್ಯ ಮಠಪತಿ, ಕರ್ನಾಟಕ ಸಂಗ್ರಾಮ ಸೇನೆಯ ಸಂಜೀವ ಡುಮ್ಮಕನಾಳ, ಕರ್ನಾಟಕ ರಕ್ಷಣಾ ವೇದಿಕೆಯ ಮಂಜುನಾಥ್ ಲೂತಿಮಠ, ಪ್ರವೀಣ್ ಗಾಯಕವಾಡ, ಚಿದಾನಂದ್ ಸವದತ್ತಿ, ಪುಂಡಲೀಕ ಬಡಿಗೇರ ಬೆಂಬಲಿಸಿದರು.