ವಿಜಯಪುರ ಮಹಾನಗರ ಪಾಲಿಕೆಯ ಹಾಲಿ ಮೇಯರ್ ಹಾಗೂ ಉಪ ಮೇಯರ್ ಅಧಿಕಾರಾವಧಿ ಇದೇ ಜ. 9ಕ್ಕೆ ಮುಗಿಯಲಿದ್ದು, ಮುಂದಿನ ಅವಧಿಯ ಪಾಲಿಕೆ ಪವರ್ ಗಾಗಿ ಆಡಳಿತ ಪಕ್ಷ ಕಾಂಗ್ರೆಸ್ ಹಾಗೂ ಬಿಜೆಪಿ ಪಾಳಯದಲ್ಲಿ ಕಸರತ್ತು ಜೋರಾಗಿದೆ. ರಾಜಕೀಯ ಚಟುವಟಿಕೆ, ತಂತ್ರ-ಪ್ರತಿತಂತ್ರಗಳು ಚುರುಕುಗೊಂಡಿವೆ.
ಇದೀಗ 2ನೇ ಅವಧಿಯ ಮೀಸಲಾತಿ ಪ್ರಕಾರ ಮೇಯರ್ ಸ್ಥಾನವು ಹಿಂದುಳಿದ ವರ್ಗ 2ಎ ಹಾಗೂ ಉಪ ಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಒಲಿಯಲಿದೆ ಎನ್ನಲಾಗ್ತಿದೆ. ಈ ಮೀಸಲಾತಿ ಅನ್ವಯ ಅಧಿಕಾರ ಹಿಡಿಯಲು ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ತೀವ್ರ ಕಸರತ್ತು ನಡೆಸಿವೆ. ಎರಡೂ ಪಕ್ಷಗಳಲ್ಲಿ ತಲಾ 3ಕ್ಕೂ ಹೆಚ್ಚು ಪ್ರಬಲ ಆಕಾಂಕ್ಷಿಗಳು ರೇಸ್ ನಲ್ಲಿದ್ದಾರೆ.

ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ಸಂಸದ ರಮೇಶ ಜಿಗಜಿಣಗಿ ಅವರ ದೋಸ್ತಿ ಬಿಜೆಪಿ ಪಾಲಿಕೆ ಅನುಕೂಲವಾಗಲಿದೆ. ಅಲ್ಲದೆ ಯತ್ನಾಳರ ತಂತ್ರಗಾರಿಕೆ ಬಿಜೆಪಿಗೆ ವರವಾಗಲಿದೆ ಎಂಬುದು ರಾಜಕೀಯ ವಿಶ್ಲೇಷಕರ ಮಾತು.
ಇದನ್ನು ಓದಿದ್ದೀರಾ? ವಿಜಯಪುರ | ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ಪ್ರಾಂಶುಪಾಲನ ಬಂಧನ
ಮೇಯರ್ ಹಾಗೂ ಉಪ ಮೇಯರ್ ಚುನಾವಣೆ ದಿನಾಂಕವನ್ನು ಚುನಾವಣಾ ಅಧಿಕಾರಿ ಪ್ರಾದೇಶಿಕ ಆಯುಕ್ತರು ಇನ್ನಷ್ಟೇ ನಿಗದಿಗೊಳಿಸಬೇಕಿದೆ. ಎರಡೂ ಪಕ್ಷಗಳು ಚುನಾವಣೆ ದಿನಾಂಕ ಘೋಷಣೆ ಎದರು ನೋಡುತ್ತಾ ಅಧಿಕಾರಕ್ಕೆ ರಣತಂತ್ರ ರೂಪಿಸುತ್ತಿವೆ.
ಪಾಲಿಕೆಯ ಒಟ್ಟು 35 ಸ್ಥಾನಗಳಲ್ಲಿ ಬಿಜೆಪಿ 17, ಕಾಂಗ್ರೆಸ್ 10, ಎಐಎಂಐಎಂ 2, ಜೆಡಿಎಸ್ 1 ಬಿಜೆಪಿ 5 ಪಕ್ಷೇತರ ಸದಸ್ಯರಿದ್ದಾರೆ. ಬಿಜೆಪಿಗೆ ಅನೇಕ ಸದಸ್ಯರಲ್ಲದೆ ಶಾಸಕ ಯತ್ನಾಳ್ ಹಾಗೂ ಸಂಸದ ಜಿಗಜಿಣಗಿ ಮತಗಳ ಬಲವಿದ್ದರೆ, ಇತ್ತ ಕಾಂಗ್ರೆಸ್ ಬುಟ್ಟಿಯಲ್ಲಿ ಸಚಿವ ಎಂ. ಬಿ. ಪಾಟೀಲ, ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ ಹಾಗೂ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲರ ಮತಗಳಿವೆ. ಕಳೆದ ಬಾರಿ ಮೇಯರ್ ಹಾಗೂ ಉಪ ಮೇಯರ್ ಆಯ್ಕೆ ವೇಳೆ ಪರಿಷತ್ ಸದಸ್ಯರಾಗಿ ಮತ ಚಲಾಯಿಸುವ ಅಧಿಕಾರ ಹೊಂದಿದ್ದ ಕಾಂಗ್ರೆಸ್ ನ ಪ್ರಕಾಶ ರಾಠೋಡ್ ಅವರ ಅವಧಿ ಮುಗಿದಿದೆ ಎನ್ನಲಾಗಿದೆ. ರಾಜಕೀಯ ದೊಂಬರಾಟದಲ್ಲಿ ಅಧಿಕಾರದ ಗದ್ದುಗೆ ಯಾರ ಕೈ ಸೇರಲಿದೆ ಕಾದು ನೋಡಬೇಕು.

ರಮೇಶ ಎಸ್ ಹೊಸಮನಿ
ವಿಜಯಪುರ ಜಿಲ್ಲಾ ಸಂಯೋಜಕರು