ಫೆಬ್ರವರಿ 5 ರಂದು ಏಕೈಕ ಹಂತದಲ್ಲಿ ದೆಹಲಿಯ 70 ವಿಧಾನಸಭೆ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಫೆಬ್ರವರಿ 8ರಂದು ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ಕೇಂದ್ರ ಚುನಾವಣಾಧಿಕಾರಿ ರಾಜೀವ್ ಕುಮಾರ್ ಅವರು ಚುನಾವಣಾ ದಿನಾಂಕವನ್ನು ಘೋಷಿಸಿದರು.
ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ ಸತತ ಮೂರನೇ ಅವಧಿಗೆ ಅಧಿಕಾರವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಹಾಗೆಯೇ ಬಿಜೆಪಿ ರಾಷ್ಟ್ರ ರಾಜಧಾನಿಯಲ್ಲಿ ಅಧಿಕಾರವನ್ನು ಕಸಿದುಕೊಳ್ಳಲು ಕಣ್ಣಿಟ್ಟಿದೆ. ಅಚ್ಚರಿಯ ಗೆಲುವು ಸಾಧಿಸುವ ನಿರೀಕ್ಷೆಯಲ್ಲಿ ಕಾಂಗ್ರೆಸ್ ಕೂಡ ಪ್ರಬಲ ಹೋರಾಟಕ್ಕೆ ಸಿದ್ಧತೆ ನಡೆಸಿದೆ. 70 ಸದಸ್ಯ ಬಲದ ದೆಹಲಿ ವಿಧಾನಸಭೆಯ ಅವಧಿ ಫೆ.23ರಂದು ಅಂತ್ಯಗೊಳ್ಳಲಿದೆ.
ದೆಹಲಿಯಲ್ಲಿ 58 ಸಾಮಾನ್ಯ ಹಾಗೂ 12 ಎಸ್‌ಸಿ ವಿಧಾನಸಭೆ ಕ್ಷೇತ್ರಗಳಿವೆ. 1.55 ಕೋಟಿ ಮತದಾರರಿದ್ದು, 13.033 ಮತಗಟ್ಟೆಗಳಿವೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮಾದಾರ ಚೆನ್ನಯ್ಯ ಸ್ವಾಮೀಜಿ ಹೇಳಿಕೆ ಅಪಾಯಕಾರಿ
ಎಎಪಿ ಮೊದಲ ಬಾರಿಗೆ ಅತಂತ್ರ ವಿಧಾನಸಭೆಯಿಂದ ಕಾಂಗ್ರೆಸ್ ಬೆಂಬಲದಿಂದ ಡಿಸೆಂಬರ್ 2013 ರಲ್ಲಿ ಅಧಿಕಾರಕ್ಕೆ ಬಂತು. ಆದಾಗ್ಯೂ, ಕೇವಲ 49 ದಿನಗಳ ಅಧಿಕಾರದ ನಂತರ, ಕೇಜ್ರಿವಾಲ್ ಅವರು ಭ್ರಷ್ಟಾಚಾರ ವಿರೋಧಿ ಜನಲೋಕಪಾಲ್ ಮಸೂದೆಯನ್ನು ಅಂಗೀಕರಿಸಲು ಅಸಮರ್ಥತೆ ಉಲ್ಲೇಖಿಸಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. 2015 ಮತ್ತು 2020 ರ ಮುಂದಿನ ಎರಡು ಚುನಾವಣೆಗಳಲ್ಲಿ ಎಎಪಿ ಕ್ರಮವಾಗಿ 67 ಮತ್ತು 62 ಸ್ಥಾನಗಳೊಂದಿಗೆ ಜಯಗಳಿಸಿತು.
ಕೇಂದ್ರ ಚುನಾವಣಾಧಿಕಾರಿ ರಾಜೀವ್ ಕುಮಾರ್ ಅವರು 28 ರಾಜ್ಯ, 8 ಕೇಂದ್ರಾಡಳಿತ ಪ್ರದೇಶ, ರಾಷ್ಟ್ರಪತಿ, ಉಪ ರಾಷ್ಟ್ರಪತಿ ಚುನಾವಣೆ ನಡೆಸಿದ ಮೊದಲ ಚುನಾವಣಾಧಿಕಾರಿಯಾದ ಹೆಗ್ಗಳಿಕೆಗೆ ಪಾತ್ರರಾದರು. ಇದು ಅವರ ಕೊನೆಯ ಚುನಾವಣೆಯಾಗಿದ್ದು, ಮುಂದಿನ ವಿಧಾನಸಭೆ ಚುನಾವಣೆ ವೇಳೆಗೆ ನಿವೃತ್ತರಾಗಲಿದ್ದಾರೆ.
