ವಿವಾಹವಾಗುವುದಾಗಿ ನಂಬಿಸಿ ಮಹಿಳೆಯ ಮೇಲೆ ಅತ್ಯಾಚಾರ ಮಾಡಿದ ಆರೋಪದಲ್ಲಿ ಉತ್ತರ ಪ್ರದೇಶದ ಕಾನ್ಪುರದಲ್ಲಿ ಬಜರಂಗದಳದ ನಾಯಕರೊಬ್ಬರನ್ನು ಬಂಧಿಸಲಾಗಿದೆ ಎಂದು ಮಂಗಳವಾರ ಪೊಲೀಸರು ತಿಳಿಸಿದ್ದಾರೆ. ಬಂಧಿತ ಸಂಘಪರಿವಾರದ ನಾಯಕನನ್ನು ದಿಲೀಪ್ ಸಿಂಗ್ ಬಜರಂಗಿ ಎಂದು ಗುರುತಿಸಲಾಗಿದೆ.
ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ ಹೆಚ್ಚುವರಿ ಡಿಸಿಪಿ ಮಹೇಶ್ ಕುಮಾರ್, “ತನ್ನ ಮೇಲೆ ಸುಳ್ಳು ಆರೋಪ ಮಾಡಲಾಗಿದೆ ಎಂದು ಹೇಳಿ ಗೋವಿಂದ ನಗರ ಪೊಲೀಸ್ ಠಾಣೆಯ ಹೊರಗೆ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಬಜರಂಗಿಯನ್ನು ಬಂಧಿಸಲಾಗಿದೆ” ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಉತ್ತರ ಪ್ರದೇಶ | ಐವರ ಕೊಲೆ ಪ್ರಕರಣ: ನೆರೆಹೊರೆಯವರ ಕಿರುಕುಳ ಕಾರಣಕ್ಕೆ ತನ್ನ ಸೋದರಿಯರನ್ನೇ ಕೊಂದನೆ?
2024ರ ನವೆಂಬರ್ 5ರಂದು ಮಹಿಳೆ ಬಜರಂಗಿ ವಿರುದ್ಧ ಕಲೆಕ್ಟರ್‌ಗಂಜ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. “ವಿವಾಹವಾಗುವುದಾಗಿ ಮನವೊಲಿಸಿ ನನ್ನೊಂದಿಗೆ ಲೈಂಗಿಕ ಸಂಪರ್ಕ ನಡೆಸಿದ್ದಾನೆ. ನನ್ನ ಕೆಟ್ಟ ಚಿತ್ರ, ವಿಡಿಯೋಗಳನ್ನು ತೆಗೆದು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ” ಎಂದು ಮಹಿಳೆ ದೂರು ನೀಡಿದ್ದಾರೆ.
ಈ ದೂರಿನ ಆಧಾರದಲ್ಲಿ ಪೊಲೀಸರು ತನಿಖೆ ನಡೆಸಲು ಆರಂಭಿಸಿದ ಬಳಿಕ ಬಜರಂಗದಳದ ಕಾನ್ಪುರದ ಮಾಜಿ ಸಂಚಾಲಕ ಆಗಿದ್ದ ಬಜರಂಗಿ ಮಾತ್ರ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ.
ಸೋಮವಾರ ಬಜರಂಗಿ ಮತ್ತು ಆತನ ಬೆಂಬಲಿಗರು ಗೋವಿಂದ್ ನಗರ ಪೊಲೀಸ್ ಠಾಣೆ ಹೊರಗೆ ಸೇರಿ ಪ್ರತಿಭಟಿಸಿದ್ದಾರೆ. ಬಜರಂಗಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಈ ಬೆನ್ನಲ್ಲೇ ಪೊಲೀಸರು ಬಜರಂಗಿಯನ್ನು ಬಂಧಿಸಿದ್ದಾರೆ. ಈಗಾಗಲೇ ಮಹಿಳೆ ಮೇಲೆ ಅತ್ಯಾಚಾರ ನಡೆಸಿದ ಆರೋಪದಲ್ಲಿ ಪ್ರಕರಣ ಹೊಂದಿರುವ ಬಜರಂಗಿ ಮೇಲೆ ಇನ್ನೆರಡು ಪ್ರಕರಣಗಳು ಪೊಲೀಸರು ದಾಖಲಿಸಿದ್ದಾರೆ. ಪೊಲೀಸರ ಕರ್ತವ್ಯಕ್ಕೆ ಧಕ್ಕೆ ತಂದ ಆರೋಪ ಮತ್ತು ಆತ್ಮಹತ್ಯೆ ಯತ್ನದ ದೂರು ದಾಖಲಿಸಿಕೊಂಡಿದ್ದಾರೆ.
