ಪಂಜಾಬ್‌ನ ಬಟಿಂಡಾ ಜಿಲ್ಲೆಯ ಗ್ರಾಮ ಪಂಚಾಯತಿಯೊಂದು ಡಿಜೆ ಮತ್ತು ಮದ್ಯಪಾನವಿಲ್ಲದ ವಿವಾಹಕ್ಕೆ ಉತ್ತೇಜನ ನೀಡಲು ನಿರ್ಧರಿಸಿದೆ. ಇದಕ್ಕಾಗಿ ಮದ್ಯಪಾನ ಮುಕ್ತ ಮತ್ತು ಡಿಜೆ (ಸಂಗೀತ) ಇಲ್ಲದ ವಿವಾಹ ಸಮಾರಂಭವನ್ನು ನಡೆಸಿದರೆ ಕುಟುಂಬಕ್ಕೆ 21,000 ರೂಪಾಯಿಗಳ ನಗದು ಬಹುಮಾನವನ್ನು ನೀಡಲಾಗುವುದು ಎಂದು ಘೋಷಿಸಿದೆ.
ಮದುವೆ ಸಮಾರಂಭಗಳಲ್ಲಿ ದುಂದು ವೆಚ್ಚ ಮಾಡದಂತೆ ಗ್ರಾಮಸ್ಥರನ್ನು ಉತ್ತೇಜಿಸಲು ಮತ್ತು ಮದ್ಯದ ದುರುಪಯೋಗವನ್ನು ತಡೆಯಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಬಲ್ಲೊ ಗ್ರಾಮದ ಸರಪಂಚ್ ಅಮರ್ಜಿತ್ ಕೌರ್ ಮಂಗಳವಾರ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಬಳ್ಳಾರಿ | ಮದ್ಯಪಾನ ಮಾಡಿ ಆಸ್ಪತ್ರೆಗೆ ಬಂದಿದ್ದ ವೈದ್ಯಾಧಿಕಾರಿ ‘ಸಸ್ಪೆಂಡ್’
ಸಾಮಾನ್ಯವಾಗಿ ಹಳ್ಳಿಗಳಲ್ಲಿ ಡಿಜೆ, ಮದ್ಯ ಸೇವಿಸುವ ಕಾರ್ಯಕ್ರಮಗಳಲ್ಲಿ ಗಲಾಟೆಯಾಗುತ್ತದೆ. ಜೋರಾದ ಹಾಡಿನಿಂದ ಇತರರಿಗೆ ತೊಂದರೆಯಾಗುತ್ತದೆ. ವಿದ್ಯಾರ್ಥಿಗಳ ಅಧ್ಯಯನಕ್ಕೂ ಇದು ತೊಂದರೆ ಉಂಡು ಮಾಡುತ್ತದೆ ಎಂದು ಹೇಳಿದರು.
“ಮದುವೆ ಸಮಾರಂಭಗಳಲ್ಲಿ ವ್ಯರ್ಥ ಖರ್ಚು ಮಾಡದಂತೆ ಜನರನ್ನು ಪ್ರೋತ್ಸಾಹಿಸಲು ನಾವು ಬಯಸುತ್ತೇವೆ. ಆದ್ದರಿಂದ ಮದ್ಯ ಇಲ್ಲದ, ಡಿಜೆ ಇಲ್ಲದೆ ವಿವಾಹ ನಡೆಸಿದರೆ ಆ ಕುಟುಂಬಕ್ಕೆ ಪ್ರೋತ್ಸಾಹವಾಗಿ 21 ಸಾವಿರ ರೂಪಾಯಿ ನಾವು ನೀಡುತ್ತೇವೆ. ಪಂಚಾಯತ್‌ನಲ್ಲಿ ಈ ನಿರ್ಣಯ ಅಂಗೀಕಾರವಾಗಿದೆ” ಎಂದು ಗ್ರಾಮದ ಸರಪಂಚ್ ಹೇಳಿದರು.
ಬಲ್ಲೊ ಗ್ರಾಮವು ಸುಮಾರು 5,000 ಜನಸಂಖ್ಯೆಯನ್ನು ಹೊಂದಿದೆ. ಇನ್ನು ಗ್ರಾಮದಲ್ಲಿ ಜೈವಿಕ ಅನಿಲ ಘಟಕ ಸ್ಥಾಪಿಸಲೂ ಕೂಡಾ ಪಂಚಾಯಿತಿ ಮುಂದಾಗಿದೆ. ಸಾವಯವ ಕೃಷಿ ಆಯ್ಕೆ ಮಾಡುವ ರೈತರಿಗೆ ಉಚಿತ ಬೀಜಗಳನ್ನು ನೀಡಲಾಗುವುದು ಎಂದು ಪಂಚಾಯತ್ ತಿಳಿಸಿದೆ.
