ಅಸ್ಸಾಂನ ದಿಮಾ ಹಸಾವೊ ಜಿಲ್ಲೆಯಲ್ಲಿರುವ ಕಲ್ಲಿದ್ದಲು ಗಣಿಯಲ್ಲಿ ಪ್ರವಾಹ ಉಂಟಾಗಿ ಗಣಿಯಲ್ಲಿ ಸಿಲುಕಿರುವ ಒಟ್ಟು ಒಂಬತ್ತು ಕಾರ್ಮಿಕರ ಪೈಕಿ ಓರ್ವ ಕಾರ್ಮಿಕರ ಮೃತದೇಹ ಪತ್ತೆಯಾಗಿದೆ. ಇನ್ನು ಈಗಾಗಲೇ ಮೂವರ ಮೃತದೇಹವನ್ನು ರಕ್ಷಣಾ ತಂಡ ನೋಡಿರುವುದಾಗಿ, ಆದರೆ ಮೇಲೆತ್ತಲು ಸಾಧ್ಯವಾಗದಿರುವುದಾಗಿ ವರದಿಯಾಗಿದೆ.
ಈ ದುರ್ಘಟನೆ ನಡೆದು ಮೂರು ದಿನವಾದ ಬಳಿಕ ಬುಧವಾರ ಮೃತದೇಹವನ್ನು ಮೇಲಕ್ಕೆತ್ತಲಾಗಿದೆ. ನೌಕಾಪಡೆ, ಸೇನೆ, ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಸಿಬ್ಬಂದಿಯ ತಂಡ ಗಣಿಗಾರರನ್ನು ರಕ್ಷಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಒಟ್ಟು ಎಂಟು ಮಂದಿ ಬದುಕುಳಿಯುವ ಸಾಧ್ಯತೆ ಕಡಿಮೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಅಸ್ಸಾಂ ಗಣಿ ಪ್ರವಾಹದಲ್ಲಿ ಸಿಲುಕಿದ 9 ಕಾರ್ಮಿಕರು; ಮೂವರ ಸಾವು ಶಂಕೆ
ಮುಂಜಾನೆಯೇ ಈಜು ತಜ್ಞರು ಮೃತದೇಹವನ್ನು ಗಣಿಯಲ್ಲಿ ಪತ್ತೆ ಹಚ್ಚಿದ್ದು, ಅದರ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅದಾದ ಬಳಿಕ 21 ಪ್ಯಾರಾ ಡೈವರ್‌ಗಳು ತಳದಿಂದ ದೇಹವನ್ನು ಹೊರತೆಗೆದಿದ್ದಾರೆ ಎನ್ನಲಾಗಿದೆ.
ಇನ್ನು ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, “ದುಃಖಿತ ಕುಟುಂಬಕ್ಕೆ ನಮ್ಮ ಸಂತಾಪ ಮತ್ತು ಪ್ರಾರ್ಥನೆ ಸಲ್ಲಿಸುತ್ತೇವೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಸೇನೆ ಮತ್ತು ಎನ್‌ಡಿಆರ್‌ಎಫ್‌ನ ಡೈವರ್‌ಗಳು ಈಗಾಗಲೇ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ” ಎಂದು ಹೇಳಿದ್ದಾರೆ.
#WATCH | UPDATE | Dima Hasao, Assam: One body recovered from the coal mine at 3 Kilo, Umrangso area where 9 people were trapped on January 6. Search and rescue operation is still underway. pic.twitter.com/q4KvJQjQvJ
— ANI (@ANI) January 8, 2025
ರಕ್ಷಣಾ ತಂಡಗಳು ರಾತ್ರಿಯಿಡೀ ಕಾರ್ಮಿಕರ ರಕ್ಷಣೆ ಕಾರ್ಯಾಚರಣೆ ನಡೆಸಿದ್ದು, ಕಾರ್ಯಾಚರಣೆ ಮುಂದುವರೆದಿದೆ. ಮೂರು ಮೃತದೇಹಗಳನ್ನು ರಕ್ಷಣಾ ತಂಡಗಳು ಗುರುತಿಸಿವೆ. ಆದರೆ ಇನ್ನೂ ಗಣಿಯಿಂದ ಹೊರತರಲು ಸಾಧ್ಯವಾಗಿಲ್ಲ ಎಂದು ಸ್ಥಳೀಯ ಆಡಳಿತ ಹೇಳಿಕೆಯಲ್ಲಿ ತಿಳಿಸಿದೆ.
ಗಣಿಯಲ್ಲಿ ಕಾರ್ಮಿಕರಿಗೆ ಯಾವುದೇ ರಕ್ಷಣೆ ಇಲ್ಲದೆ ಸಾವನ್ನಪ್ಪಿರುವ ಘಟನೆಗಳು ನಡೆಯುತ್ತಲೇ ಇವೆ. ಅದರಲ್ಲೂ ಅದೆಷ್ಟೋ ಅಕ್ರಮ ಗಣಿಯಲ್ಲಿ ಸಿಲುಕಿ ಜೀವ ಕಳೆದುಕೊಂಡಿರುವ ಕಾರ್ಮಿಕರ ಲೆಕ್ಕವೇ ಇಲ್ಲದಂತಾಗಿದೆ.
