ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಉದ್ದೇಶದಿಂದ ಕರ್ನಾಟಕ ವಿದ್ಯುತ್ ನಿಗಮ (ಕೆಪಿಸಿಎಲ್) ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಹಯೋಗದಲ್ಲಿ ನಿರ್ಮಿಸಲಾಗಿರುವ ಸ್ಥಾವರದಲ್ಲಿ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ ಓರ್ವ ಕಾರ್ಮಿಕ ಸಾವನ್ನಪ್ಪಿದ್ದು, ನಾಲ್ವರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆ ಬಗ್ಗೆ ತನಿಖೆ ನಡೆಸಲು ಸರ್ಕಾರ ಆದೇಶಿಸಿದೆ.
ರಾಮನಗರ ಜಿಲ್ಲೆಯ ಬಿಡದಿಯಲ್ಲಿರುವ ವಿದ್ಯುತ್ ಉತ್ಪಾದನಾ ಘಟಕದಲ್ಲಿ ಘಟನೆ ಸಂಭವಿಸಿದೆ. ಮೃತ ಕಾರ್ಮಿಕನನ್ನು ಉಮೇಶ್ ಎಂದು ಗುರುತಿಸಲಾಗಿದೆ. ಅಮಲೇಶ್ (31), ಸಂತುನ್ (31), ತರುಣ್ (29) ಹಾಗೂ ಲಖನ್ (28) ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇಂಧನ ಉತ್ಪಾದಿಸುವ ಯಂತ್ರವು ಕೆಟ್ಟುಹೋಗಿತ್ತು. ಆ ಯಂತ್ರವನ್ನು ಕಾರ್ಮಿಕರು ಸರಿಪಡಿಸುತ್ತಿದ್ದರು. ಈ ವೇಳೆ ಬಾಯ್ಲರ್ ಸ್ಫೋಟಗೊಂಡಿದೆ. ದುರ್ಘಟನೆಗೆ ಸಂಬಂಧಿಸಿದಂತೆ ಸ್ಥಾವರದ ನಿರ್ವಾಹಕನ ವಿರುದ್ಧ ನಿರ್ಲಕ್ಷ್ಯ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ.
ವಿದ್ಯುತ್ ಉತ್ಪಾದನೆಗಾಗಿ ಬಿಬಿಎಂಪಿಯು ತ್ಯಾಜ್ಯವನ್ನು ವರ್ಗೀಕರಿಸಿ, ಉತ್ತಮ ಗುಣಮಟ್ಟದ ತ್ಯಾಜ್ಯವನ್ನು ಪೂರೈಕೆ ಮಾಡಬೇಕು. ಆದರೆ, ತ್ಯಾಜ್ಯದಲ್ಲಿ ಪಿನ್‌ಗಳು ಮತ್ತು ಲೋಹದ ತುಂಡುಗಳು ಸೇರಿದ್ದು, ಅವುಗಳ ಯಂತ್ರದಲ್ಲಿ ಸಿಕ್ಕಿಕೊಳ್ಳುತ್ತಿವೆ. ಪರಿಣಾಮ, ಯಂತ್ರವು ಕಾರ್ಯಾಚರಣೆಯಲ್ಲಿ ನಿಲ್ಲಿಸಿತ್ತು. ಅದನ್ನು ಸರಿಪಡಿಸಲು ಯಾವುದೇ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲು ಕಾರ್ಮಿಕರನ್ನು ಕಳಿಸಿದ್ದರಿಂದ ಘಟನೆ ಸಂಭವಿಸಿದೆ ಎಂದು ಆರೋಪಿಸಲಾಗಿದೆ.
ಘಟನೆ ಕುರಿತು ತಾಂತ್ರಿಕ ತನಿಖೆ ನಡೆಸುವಂತೆ ಇಂಧನ ಸಚಿವ ಕೆ.ಜೆ ಜಾರ್ಜ್ ಆದೇಸಿದಿದೆ. ತನಿಖೆ ಪೂರ್ಣಗೊಂಡ ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ಬಿಬಿಎಂಪಿ ಮತ್ತು ಕೆಪಿಸಿಎಲ್ ಒಪ್ಪಂದದ ಅಡಿಯಲ್ಲಿ ವರ್ಗೀಕರಿಸಿದ ಉತ್ತಮ ಗುಣಮಟ್ಟದ ಒಣ ತ್ಯಾಜ್ಯವನ್ನು ಬಳಸಿಕೊಂಡು ವಿದ್ಯುತ್ ಉತ್ಪಾದನೆಯನ್ನು ಮಾಡಲಾಗುತ್ತಿದೆ. ದಿನನಿತ್ಯ 600 ಮೆಟ್ರಿಕ್ ಟನ್ ತ್ಯಾಜ್ಯ ಬಳಸಿ 11.5 ಮೆಗಾವಾಟ್ ವಿದ್ಯುತ್ ಉತ್ಪಾದಿಸುವ ಗುರಿಯನ್ನು ಕೆಪಿಸಿಎಲ್ ಹೊಂದಿದೆ. ಸ್ಥಾವರವನ್ನು ಐಎಸ್‌ಜಿಇಸಿ ಕಂಪನಿಯು ಸ್ಥಾಪಿಸಿ ನಿರ್ವಹಿಸುತ್ತಿದೆ. ಇನ್ನೂ ಕೂಡ ಸ್ಥವರವು ಕೆಪಿಸಿಎಲ್‌ಗೆ ಹಸ್ತಾಂತರವಾಗಿಲ್ಲ ಎಂದು ವರದಿಯಾಗಿದೆ.