ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅವಮಾನ ಮಾಡಿರುವುದನ್ನು ಖಂಡಿಸಿ ಸ್ವಾಭಿಮಾನಿ ಡಾ.ಬಿ.ಆರ್. ಅಂಬೇಡ್ಕರ್ ವಾದಿಗಳ ಸಮಿತಿ ಗುರುವಾರ ಕರೆ ನೀಡಿರುವ ಬೀದರ್ ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬಂದ್ ಹಿನ್ನೆಲೆಯಲ್ಲಿ ಬೀದರ್ ತಾಲ್ಲೂಕು ವ್ಯಾಪ್ತಿಯ ಶಾಲಾ, ಕಾಲೇಜುಗಳಿಗೆ ರಜೆ ನೀಡಲಾಗಿದೆ.ನಗರ ಸಾರಿಗೆ ಬಸ್ ಸಂಚಾರ ಸಂಪೂರ್ಣ ಸ್ಥಗಿತವಾಗಿದೆ.

ಅಂಗಡಿ, ಮಳಿಗೆಗಳು, ಮಾಲ್‌ಗಳು ಬಾಗಿಲು ತೆರೆದಿಲ್ಲ. ಸಂಪೂರ್ಣ ಸ್ತಬ್ಧವಾಗಿದೆ.ಜನರು ಅಗತ್ಯ ಕೆಲಸಕ್ಕಾಗಿ ಕಾರು, ಬೈಕ್, ಆಟೋ ಮೊರೆ ಹೋದರೂ, ಜನ ಸಂಚಾರ ವಿರಳವಾಗಿದ್ದು, ಬಸ್ ನಿಲ್ದಾಣ ಸೇರಿದಂತೆ ಪ್ರಮುಖ ವೃತ್ತ, ರಸ್ತೆಗಳು ಬಿಕೋ ಎನ್ನುತ್ತಿವೆ.ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ.

ಡಾ.ಅಂಬೇಡ್ಕರ್ ವೃತ್ತ, ನೌಬಾದ್ ಚೌಳಿ ಕಮಾನ್ ಬಳಿ ವಿವಿಧ ಸಂಘಟನೆಗಳ ಮುಖಂಡರು ಬೈಕ್ ರ್ಯಾಲಿ ನಡೆಸಿ ಅಮಿತ್ ಶಾ ವಜಾಕ್ಕೆ ಆಗ್ರಹಿಸಿದರು. ಅಮಿತ್ ಶಾ ಅವರ ಅಣುಕು ಶವಯಾತ್ರೆ ಮೆರವಣಿಗೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಕೇಂದ್ರ ಬಸ್ ನಿಲ್ದಾಣ, ಡಾ.ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತ, ಗುಂಪಾ ಕಡೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.ಪ್ರತಿಭಟನಾ ಜಾಥಾ ಸಾಗುವ ಮಾರ್ಗಗಳಲ್ಲಿ ಬ್ಯಾರಿಕೇಡ್ ಹಾಕಿ ಸಂಚಾರವನ್ನು ನಿರ್ಬಂಧಿಸಲಾಗಿದೆ. ಬೀದರ್ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ವ್ಯಾಪಾರ, ವಹಿವಾಟು ಸಂಪೂರ್ಣ ಸ್ಥಗಿತವಾಗಿದೆ.

ಔಷಧ ಅಂಗಡಿ, ಪೆಟ್ರೊಲ್ ಬಂಕ್, ದಿನಪತ್ರಿಕೆ, ಹೂವು, ಹಾಲಿನ ವ್ಯಾಪಾರಕ್ಕೆ ಬೆಳಿಗ್ಗೆ ಯಾವುದೇ ತೊಂದರೆ ಆಗದಂತೆ ಬಂದ್ ನಿಂದ ವಿನಾಯ್ತಿ ನೀಡಲಾಗಿತ್ತು.ದೂರದ ಊರುಗಳಿಂದ ಬಸ್, ರೈಲು ಮೂಲಕ ನಗರಕ್ಕೆ ಬಂದವರಿಗೆ ಒಂದು ಕಡೆಯಿಂದ ಇನ್ನೊಂದು ಕಡೆಗೆ ತೆರಳಲು ಸಾರಿಗೆ ವ್ಯವಸ್ಥೆ ಇಲ್ಲದೇ ಜನರು ಪರದಾಡುತ್ತಿರುವ ದೃಶ್ಯಗಳು ಕಂಡುಬಂದಿತು.