ತನ್ನ ಪಿಜಿ ಕೋಣೆಯಲ್ಲಿ ಸೀಲಿಂಗ್ ಫ್ಯಾನ್ಗೆ ನೇಣು ಬಿಗಿದುಕೊಂಡು 20 ವರ್ಷದ ಜೆಇಇ ಆಕಾಂಕ್ಷಿ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಜಸ್ಥಾನದ ಕೋಟಾ ಜಿಲ್ಲೆಯಲ್ಲಿ ನಡೆದಿದೆ. ಕಳೆದ 24 ಗಂಟೆಗಳಲ್ಲಿ ಎರಡನೇ ಪ್ರಕರಣ ಇದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜೆಇಇ ಆಕಾಂಕ್ಷಿಯನ್ನು ಮಧ್ಯಪ್ರದೇಶದ ಗುಣ ನಿವಾಸಿ ಅಭಿಷೇಕ್ ಎಂದು ಗುರುತಿಸಲಾಗಿದೆ. ಕಳೆದ ವರ್ಷ ಮೇ ತಿಂಗಳಿನಿಂದ ಕೋಟಾದ ಕೋಚಿಂಗ್ ಸಂಸ್ಥೆಯಲ್ಲಿ ಜೆಇಇಗೆ ತಯಾರಿ ನಡೆಸುತ್ತಿದ್ದರು. ವಿಜ್ಞಾನ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಡಕಾನಿಯಾ ಪ್ರದೇಶದ ಪಿಜಿ ಕೋಣೆಯಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ.
ಇದನ್ನು ಓದಿದ್ದೀರಾ? ಕೋಟಾ: ನೀಟ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ 16 ವರ್ಷದ ವಿದ್ಯಾರ್ಥಿನಿ ಆತ್ಮಹತ್ಯೆ; ಈ ವರ್ಷದಲ್ಲಿ 25ನೇ ಘಟನೆ
ಕೋಚಿಂಗ್ ಕೇಂದ್ರ, ಕೋಚಿಂಗ್ ರಾಜಧಾನಿ ಎಂದೇ ಕರೆಯಲಾಗುವ ಕೋಟಾದಲ್ಲಿ 24 ಗಂಟೆಗಳಲ್ಲಿ ಕೋಚಿಂಗ್ ವಿದ್ಯಾರ್ಥಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಎರಡನೇ ಪ್ರಕರಣ ಇದಾಗಿದೆ. ಹರಿಯಾಣದ ಮತ್ತೊಬ್ಬ ಜೆಇಇ ಆಕಾಂಕ್ಷಿ ನೀರಜ್ (19) ಮಂಗಳವಾರ ಸಂಜೆ ತಡರಾತ್ರಿ ತಮ್ಮ ಹಾಸ್ಟೆಲ್ ಕೋಣೆಯಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಬುಧವಾರ ರಾತ್ರಿ ವೇಳೆಗೆ ಅಭಿಷೇಕ್ ಎಂಬ ಜೆಇಇ ಆಕಾಂಕ್ಷಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ವಿಜ್ಞಾನ ನಗರ ಪೊಲೀಸ್ ಠಾಣೆಯ ಎಸ್ಎಚ್ಒ ಮುಖೇಶ್ ಮೀನಾ, “ಮತ್ತೋರ್ವ ಜೆಇಇ ಆಕಾಂಕ್ಷಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯುವಕನ ಮೃತದೇಹವನ್ನು ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು, ಕುಟುಂಬಸ್ಥರು ಆಗಮಿಸಿದ ನಂತರ ಮರಣೋತ್ತರ ಪರೀಕ್ಷೆ ನಡೆಸಲಾಗುವುದು” ಎಂದು ತಿಳಿಸಿದರು.
ಇನ್ನು ಪಿಜಿ ಕೊಠಡಿಯಲ್ಲಿ ಯಾವುದೇ ಡೆತ್ನೋಟ್ ಕಂಡುಬಂದಿಲ್ಲ. ಯುವಕ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನು ಎಂಬುದು ತಿಳಿದುಬಂದಿಲ್ಲ ಎಂದು ಎಸ್ಎಚ್ಒ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ರಾಜಸ್ಥಾನ| ಕೋಟಾದಲ್ಲಿ ಐಐಟಿ-ಜೆಇಇ ಆಕಾಂಕ್ಷಿ ಆತ್ಮಹತ್ಯೆಗೆ ಶರಣು; ಈ ವರ್ಷದ 11ನೇ ಪ್ರಕರಣ
ಕೋಟಾವನ್ನು ಕೋಚಿಂಗ್ಗಳ ರಾಜಧಾನಿ ಎಂದೇ ಕರೆಯಲಾಗುತ್ತದೆ. ಕೋಚಿಂಗ್ ಸೆಂಟರ್ನಲ್ಲಿ ಮಾನಸಿಕ ಖಿನ್ನತೆ, ಒತ್ತಡಕ್ಕೆ ಒಳಗಾಗಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುವ ಹಲವು ಘಟನೆಗಳು ಕೋಟಾದಲ್ಲಿ ನಡೆದಿದೆ.
2023ಕ್ಕೆ ಹೋಲಿಸಿದರೆ ಕೋಟಾದಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆಯ ಪ್ರಮಾಣವು 2024ರಲ್ಲಿ ಶೇಕಡ 50ರಷ್ಟು ಕಡಿಮೆಯಾಗಿದೆ ಎಂದು ಕೋಟಾ ಜಿಲ್ಲಾಡಳಿತ ಹೇಳಿದೆ. ಕೋಟಾದಲ್ಲಿ 2023ರಲ್ಲಿ 26 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರೆ 2024ರಲ್ಲಿ 17 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ನೆನಪಿಡಿ: ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ… ಆತ್ಮಹತ್ಯೆಗಳ ಕುರಿತು ಚರ್ಚಿಸುವುದು ಕೂಡ ಕೆಲವರಿಗೆ ಪ್ರಚೋದನೆ ನೀಡಬಹುದು. ಸಮಸ್ಯೆಗಳ ಬಗ್ಗೆ ಆಪ್ತರೊಂದಿಗೆ ಹಂಚಿಕೊಳ್ಳುವುದರಿಂದ, ಸಮಾಲೋಚನೆ ನಡೆಸುವುದರಿಂದ ಆತ್ಮಸ್ಥೈರ್ಯ ಹೆಚ್ಚುತ್ತದೆ. ಆತ್ಮಹತ್ಯೆಗಳನ್ನು ತಡೆಯಬಹುದು. ತುರ್ತು ಪರಿಸ್ಥಿತಿಯಿದ್ದರೆ ಕರೆ ಮೂಲಕ ವೈದ್ಯರನ್ನು ಸಂಪರ್ಕಿಸಿ. ಬೆಂಗಳೂರು ಸಹಾಯವಾಣಿ 080-25497777, ನಿಮಾನ್ಸ್ ಸಹಾಯವಾಣಿ 080-46110007, ಆರೋಗ್ಯ ಸಹಾಯವಾಣಿ 104.
