ನಮ್ಮ ಸಚಿವರು | ಸಕ್ಕರೆ ನಾಡಿನ ಸಮಸ್ಯೆಗಳಿಗೆ ಕುರುಡಾದ ಚಲುವರಾಯಸ್ವಾಮಿ

Date:

Advertisements
ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ರಾಜಕೀಯ ಆರಂಭಿಸಿ, ಜೆಡಿಎಸ್‌ನಿಂದ ಎಂಎಲ್‌ಎ, ಎಂಪಿಯಾಗಿ, ಎರಡು ಬಾರಿ ಸಚಿವರಾಗಿ, ಬಳಿಕ ಕಾಂಗ್ರೆಸ್‌ ಸೇರಿ ಮೂರನೇ ಬಾರಿಗೆ ಮಂತ್ರಿಯಾಗಿದ್ದಾರೆ ಒಕ್ಕಲಿಗ ನಾಯಕ ಚಲುವರಾಯಸ್ವಾಮಿ

ಮಂಡ್ಯ ಜಿಲ್ಲೆಯ ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕರಲ್ಲಿ ಸಚಿವ ಚಲುವರಾಯಸ್ವಾಮಿ ಕೂಡ ಒಬ್ಬರು. ಇದುವರೆಗೂ ನಾಲ್ಕು ಬಾರಿ ಶಾಸಕರಾಗಿ, ಒಮ್ಮೆ ಸಂಸದರಾಗಿರುವ ಚಲುವರಾಯಸ್ವಾಮಿ ಇದೀಗ ಮೂರನೇ ಬಾರಿಗೆ ಸಚಿವರಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ ಅವರು ಕೃಷಿ ಖಾತೆಯ ಮಂತ್ರಿಯಾಗಿದ್ದಾರೆ.

ಚಲುವರಾಯಸ್ವಾಮಿ ಹಿಂದೆ ಜೆಡಿಎಸ್‌ನ ನಿಷ್ಠಾವಂತ ಮುಖಂಡರಾಗಿದ್ದರು. 2013ರ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಜೆಡಿಎಸ್‌ ಮುಖಂಡ ಎಚ್‌.ಡಿ ಕುಮಾರಸ್ವಾಮಿ ಅವರೊಂದಿಗೆ ಭಿನ್ನಾಭಿಪ್ರಾಯ ಬೆಳೆಸಿಕೊಂಡಿದ್ದರು. ಆಗಲೇ ಕಾಂಗ್ರೆಸ್‌ನತ್ತ ಒಲವು ತೋರಿದ್ದ ಅವರು 2016ರಲ್ಲಿ ನಡೆದಿದ್ದ ರಾಜ್ಯಸಭಾ ಚುನಾವಣಾ ವೇಳೆ ಅಡ್ಡಮತದಾನ ಮಾಡಿ, ತಾವು ಜೆಡಿಎಸ್‌ ವಿರುದ್ಧ ಬಂಡಾಯವೆದ್ದಿರುವುದನ್ನು ಬಹಿರಂಗಪಡಿಸಿದ್ದರು. 2018ರಲ್ಲಿ ಕಾಂಗ್ರೆಸ್‌ ಸೇರಿದ್ದ ಅವರು, ಈಗ ಕಾಂಗ್ರೆಸ್‌ ಸರ್ಕಾರದಲ್ಲಿ ಮಂತ್ರಿಯಾಗಿದ್ದಾರೆ.

ಮಂಡ್ಯ ಜಿಲ್ಲೆಯ ನಾಗಮಂಗಲ ಕ್ಷೇತ್ರದ ಶಾಸಕರಾಗಿರುವ ಚಲುವರಾಯಸ್ವಾಮಿ ಅವರ ರಾಜಕೀಯ ಜೀವನ ಆರಂಭವಾಗಿದ್ದು 1992ರಲ್ಲಿ. 1992ರ ಸೆಪ್ಟೆಂಬರ್ 9ರಂದು ಹವ್ಯಾಸಿ ಪತ್ರಕರ್ತ, ವಕೀಲ ಗಂಗಾಧರಮೂರ್ತಿ ಅವರ ಕೊಲೆ ನಡೆದಿತ್ತು. ಆ ಕೊಲೆಯಲ್ಲಿ ಶಿವರಾಮೇಗೌಡರ ಕೈವಾಡವಿದೆ ಎಂದು ನಾಗಮಂಗಲದಲ್ಲಿ ಬೃಹತ್ ಹೋರಾಟ ನಡೆದಿತ್ತು. ಆ ವೇಳೆ, ಜೆಡಿಎಸ್‌ ವರಷ್ಠ ಎಚ್‌.ಡಿ ದೇವೇಗೌಡರೊಂದಿಗೆ ಪ್ರತಿಭಟನೆಯಲ್ಲಿ ಚಲುವರಾಯಸ್ವಾಮಿ ಭಾಗಿಯಾಗಿದ್ದರು. ಅಂದಿನಿಂದ ಚಲುವರಾಯಸ್ವಾಮಿ ಜೆಡಿಎಸ್‌ನೊಂದಿಗೆ ಅಧಿಕೃತವಾಗಿ ಗುರುತಿಸಿಕೊಂಡು ರಾಜಕೀಯ ಆರಂಭಿಸಿದರು.

Advertisements

ಅದಕ್ಕೂ ಮುನ್ನ, ಚಲುವರಾಯಸ್ವಾಮಿ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದರು. ಗಂಗಾಧರಮೂರ್ತಿ ಅವರ ಕೊಲೆ ಪ್ರಕರಣ ಅವರನ್ನು ರಾಜಕೀಯ ಪ್ರವೇಶಿಸುವಂತೆ ಮಾಡಿತು. 1994ರಲ್ಲಿ ಅವರು ಚೀಣ್ಯ ಕ್ಷೇತ್ರದಿಂದ ಆಯ್ಕೆಯಾಗಿ ಮಂಡ್ಯ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದರು. 1996ರಲ್ಲಿ ಜಿಲ್ಲಾ ಪಂಚಾಯಿತಿಯ ಉಪಾಧ್ಯಕ್ಷರೂ ಆಗಿದ್ದರು. ಆ ವೇಳೆ, ನಾಗಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ಓಡಾಟ ನಡೆಸುವ ಮೂಲಕ ಜನರ ವಿಶ್ವಾಸ ಗಳಿಸಿದ್ದ ಚಲುವರಾಯಸ್ವಾಮಿ, 1999ರಲ್ಲಿ ಮೊದಲ ಬಾರಿಗೆ ಎಂಎಲ್‌ಎ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದರು.

2004ರಲ್ಲಿ ಎರಡನೇ ಬಾರಿಗೆ ಚಲುವರಾಯಸ್ವಾಮಿ ಗೆಲುವು ಕಂಡರು. 2004ರಲ್ಲಿ ರಚನೆಯಾದ ಧರಂಸಿಂಗ್‌ ನೇತೃತ್ವದ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರದಲ್ಲಿ ಆರೋಗ್ಯ ಖಾತೆಯನ್ನು ಪಡೆದು, ಮೊದಲ ಬಾರಿಗೆ ಮಂತ್ರಿಯಾಗಿದ್ದರು.

ಬಳಿಕ, ಬದಲಾದ ರಾಜಕೀಯ ಸನ್ನಿವೇಶದಲ್ಲಿ, 2006ರಲ್ಲಿ ಕಾಂಗ್ರೆಸ್‌ ಸಖ್ಯ ತೊರೆದ ಜೆಡಿಎಸ್‌ ನಾಯಕ ಕುಮಾರಸ್ವಾಮಿ, ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಮುಖ್ಯಮಂತ್ರಿಯಾದರು. ಅವರ ಸಂಪುಟದಲ್ಲಿಯೂ ಚಲುವರಾಯಸ್ವಾಮಿ ಸಾರಿಗೆ ಸಚಿವರಾಗಿದ್ದರು.

ಆದರೆ, 2008ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುರೇಶ್ ಗೌಡ ವಿರುದ್ಧ ಸ್ಪರ್ಧಿಸಿ ಸೋಲು ಕಂಡರು. ಕೆಲವೇ ತಿಂಗಳ ಬಳಿಕ, 2009ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದರು. ಮೊದಲ ಬಾರಿಗೆ ಸಂಸತ್ ಪ್ರವೇಶಿದರು. 2013ರ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ನಾಗಮಂಗಲ ಕ್ಷೇತ್ರದಿಂದ ಸ್ಪರ್ಧಿಸಿ ಸುರೇಶ್‌ ಗೌಡ ವಿರುದ್ಧ ಗೆದ್ದರು. ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಅವರ ರಾಜೀನಾಮೆಯಿಂದ ತೆರವಾದ ಸಂಸದ ಸ್ಥಾನಕ್ಕೆ ಉಪಚುನಾವಣೆ ನಡೆದು, ನಟಿ ರಮ್ಯಾ ಸಂಸದೆಯಾಗಿ ಆಯ್ಕೆಯಾಗಿದ್ದರು.

ಈ ಸುದ್ದಿ ಓದಿದ್ದೀರಾ?: ನಮ್ಮ ಸಚಿವರು | ಕೆ ಎಚ್ ಮುನಿಯಪ್ಪ: ದಲಿತ ರಾಜಕಾರಣದ ಅನಪೇಕ್ಷಿತ ಮಾದರಿಯೇ?

2013ರಲ್ಲಿ ಸಿದ್ದಾರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ರಚನೆ ಮಾಡಿತ್ತು. ಅಷ್ಟು ಹೊತ್ತಿಗೆ ಚಲುವರಾಯಸ್ವಾಮಿ ಸಿದ್ದರಾಮಯ್ಯ ಜೊತೆಗೆ ವಿಶ್ವಾಸ ಬೆಳೆಸಿಕೊಂಡಿದ್ದರು. ಜೊತೆಗೆ, ಎಚ್.ಡಿ ಕುಮಾರಸ್ವಾಮಿ ಅವರಿಂದ ಅಂತರ ಕಾಯ್ದುಕೊಳ್ಳಲು ಆರಂಭಿಸಿದ್ದರು. ಅದೇ ಅವಧಿಯಲ್ಲಿ 2016ರಲ್ಲಿ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗೆ ಅಡ್ಡಮತ ಮಾಡುವ ಮೂಲಕ ಕುಮಾರಸ್ವಾಮಿ ವಿರುದ್ಧ ಬಂಡಾಯವೆದ್ದಿರುವುದನ್ನು ಬಹಿರಂಗ ಪಡಿಸಿದ್ದರು. ಬಳಿಕ 2018ರ ಚುನಾವಣೆ ವೇಳೆಗೆ ಕಾಂಗ್ರೆಸ್‌ ಸೇರಿದರು.

ಇತ್ತ ಚಲುವರಾಯಸ್ವಾಮಿ ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರಿದರೆ, ಅತ್ತ ಕಾಂಗ್ರೆಸ್‌ನಲ್ಲಿದ್ದ ಸುರೇಶ್‌ ಗೌಡ ಜೆಡಿಎಸ್‌ಗೆ ಸೇರ್ಪಡೆಯಾಗಿದ್ದರು. ನಾಗಮಂಗಲದಲ್ಲಿ ಮತ್ತೆ ಈ ಇಬ್ಬರ ವಿರುದ್ಧವೇ ಸ್ಪರ್ಧೆ ಏರ್ಪಟ್ಟಿತ್ತು. ಇದೇ ವೇಳೆ, ಚಲುವರಾಯಸ್ವಾಮಿ ವಿರುದ್ಧ ಆರೋಪವೊಂದು ಕೇಳಿಬಂದಿತ್ತು. ತಮ್ಮ ಅಣ್ಣನ ಮಗನಿಗೆ ಕಾನೂನುಬಾಹಿರವಾಗಿ ಜಿಲ್ಲಾ ವೈದ್ಯಾಧಿಕಾರಿ ಹುದ್ದೆ ಕೊಡಿಸಿದ್ದಾರೆಂದು ಆರೋಪಿಸಲಾಗಿತ್ತು. ಆರೋಪ ಹೊತ್ತು ಚುನಾವಣೆಯಲ್ಲಿ ಸ್ಪರ್ಧಿಸಿದ ಅವರು ಸುರೇಶ್‌ ಗೌಡ ವಿರುದ್ಧ ಭಾರೀ ಅಂತರದಲ್ಲಿ ಹೀನಾಯ ಸೋಲು ಕಂಡಿದ್ದರು.

ಇದೀಗ, ಮತ್ತದೇ ಸುರೇಶ್‌ ಗೌಡ ವಿರುದ್ಧ ಗೆಲುವು ಸಾಧಿಸಿರುವ ಚಲುವರಾಯಸ್ವಾಮಿ ಮಂತ್ರಿಯಾಗಿದ್ದಾರೆ. ತಾವು ಗೆಲ್ಲುವುದರ ಜೊತೆಗೆ ಮಂಡ್ಯ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ, ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲ್ಲಲು ಚಲುವರಾಯಸ್ವಾಮಿ ಅವರ ಪ್ರಭಾವವೂ ಕೆಲಸ ಮಾಡಿದೆ.

ತಮ್ಮ ವಿರುದ್ಧ ಯಾವುದೇ ಪ್ರಕರಣಗಳಿಲ್ಲವೆಂದು ಅವರು ಹೇಳಿಕೊಂಡಿದ್ದಾರೆ. ಅದು ನಿಜವೇ ಇರಬಹುದೇನೋ. ಆದರೆ, ಶಾಸಕರಾಗಿ, ಸಚಿವರಾಗಿ, ಸಂಸದರಾಗಿ ಹಿಂದುಳಿದ ನಾಗಮಂಗಲ ಕ್ಷೇತ್ರದಲ್ಲಾಗಲಿ, ಮಂಡ್ಯ ಜಿಲ್ಲೆಯಲ್ಲಾಗಲಿ ಅವರು ಗಮನಾರ್ಹವಾದ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ. ನಾಗಮಂಗಲ ಮತ್ತು ಕೆ ಆರ್ ಪೇಟೆ ಮಂಡ್ಯದ ಅತ್ಯಂತ ಹಿಂದುಳಿದ ತಾಲ್ಲೂಕುಗಳಾಗಿವೆ. ಮಂಡ್ಯ ಇವತ್ತಿಗೂ ರೈತರ ಆತ್ಮಹತ್ಯೆಗಳಲ್ಲಿ ಮುಂಚೂಣಿಯಲ್ಲಿದೆ. ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಯ ಕೆಲಸಗಳಾಗಿಲ್ಲ. ಜೊತೆಗೆ ಮೈಷುಗರ್, ಪಿಎಸ್‌ಎಸ್‌ಕೆ ಸಕ್ಕರೆ ಕಾರ್ಖಾನೆಗಳು ಪದೇ ಪದೆ ಸಮಸ್ಯೆಗೆ ಗುರಿಯಾಗುತ್ತಲೇ ಇರುತ್ತವೆ. ಎರಡೂ ಕಾರ್ಖಾನೆಗಳು ರೈತರ ಬಾಕಿ ಉಳಿಸಿಕೊಂಡಿವೆ. ಇದ್ಯಾವುದರ ಬಗ್ಗೆಯೂ ಚಲುವರಾಯಸ್ವಾಮಿ ನಿರ್ಣಾಯಕ ಕ್ರಮ ಕೈಗೊಂಡಿಲ್ಲ ಎನ್ನುವ ಆರೋಪವಿದೆ. ಕೃಷಿ ಸಚಿವರಾಗಿರುವ ಚಲುವರಾಯಸ್ವಾಮಿ ಈ ಬಾರಿ ರೈತರ ಸಮಸ್ಯೆಗಳಿಗೆ ಒಂದಿಷ್ಟಾದರೂ ಪರಿಹಾರ ದೊರಕಿಸಿಕೊಡುವರೇನೋ ನೋಡಬೇಕು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ಆಗಸ್ಟ್ 25ಕ್ಕೆ ಲೋಕಾಯುಕ್ತ ಜನ ಸಂಪರ್ಕ ಸಭೆ

ಸಾರ್ವಜನಿಕ ಕುಂದು-ಕೊರತೆಗಳ ಅಹವಾಲು ಸ್ವೀಕರಿಸಲು ಆಗಸ್ಟ್ 25 ಸೋಮವಾರದಂದು  ಗದಗ ಶಿರಹಟ್ಟಿ...

ಬೀದರ್‌ | ಅತಿವೃಷ್ಟಿ : ತ್ವರಿತ ಬೆಳೆ ಹಾನಿ ಪರಿಹಾರಕ್ಕೆ ಕಿಸಾನ್‌ ಸಭಾ ಒತ್ತಾಯ

ಮೇ ತಿಂಗಳಿಂದ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಉದ್ದು, ಹೆಸರು, ತೊಗರಿ ಸೇರಿದಂತೆ ಹಲವು...

ಚಿಕ್ಕಬಳ್ಳಾಪುರ | ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಎಲ್ಲರೂ ಕೈಜೋಡಿಸಿ: ಹಿರಿಯ ನ್ಯಾ. ಶಿಲ್ಪಾ

ಜಾಗತೀಕರಣ ಯುಗದಲ್ಲಿ ನಮ್ಮ ಜಾಗೃತಿ ನಮಗೆ ಗುರುವಾಗಬೇಕು. ಪೋಷಕರು ಮಕ್ಕಳನ್ನು...

ತುಮಕೂರು | ಒಳ ಮೀಸಲಾತಿ : ಅಲೆಮಾರಿಗಳಿಗೆ ನ್ಯಾಯ ಸಮ್ಮತ ಪಾಲು ನೀಡಲು ಒತ್ತಾಯ

ಒಳ ಮೀಸಲಾತಿ ಕಲ್ಪಿಸುವಲ್ಲಿ ಸೂಕ್ಷ್ಮ, ಅತಿಸೂಕ್ಷ್ಮ ಅಲೆಮಾರಿಯ 59 ಸಮುದಾಯಗಳಿಗೆ ಆಗಿರುವ...

Download Eedina App Android / iOS

X