‘ಹಿಂದುತ್ವ ಮೊದಲು – ಜಾತಿ ನಂತರ’: ಏನಿದು ಬಿಜೆಪಿಯ ‘ಹೈಂದವ ಸಂಖಾರವಂ’?

Date:

Advertisements

ಇತ್ತೀಚೆಗೆ, ಆಂಧ್ರಪ್ರದೇಶದ ವಿಜಯವಾಡದಲ್ಲಿ ವಿಶ್ವ ಹಿಂದು ಪರಿಷತ್‌ (ವಿಎಚ್‌ಪಿ) ‘ಹೈಂದವ ಸಂಖಾರವಂ’ ಕಾರ್ಯಕ್ರಮ ಆಯೋಜಿಸಿತ್ತು. ಆಂಧ್ರದಲ್ಲಿ ನೆಲೆಯಿಲ್ಲದ ಬಿಜೆಪಿಗೆ ನೆಲೆ ಹುಡುಕುವುದು ಈ ಕಾರ್ಯಕ್ರಮದ ಆದ್ಯತೆಯಾಗಿತ್ತು. ಕಾರ್ಯಕ್ರಮದಲ್ಲಿ ಹಲವಾರು ಧಾರ್ಮಿಕ ಮುಖಂಡರು ‘ಹಿಂದು ಸಮುದಾಯವು ಸಾಮೂಹಿಕ ಧ್ವನಿ’ಯಾಗಬೇಕು ಎಂದು ಪ್ರತಿಪಾದಿಸಿದರು. ಹಿಂದು ದೇವಾಲಯಗಳ ಸ್ವಾಯತ್ತತೆಯನ್ನು ಹೆಚ್ಚಿಸುವ ಬಗ್ಗೆ ಚರ್ಚಿಸಿದರು. ‘ಹಿಂದುತ್ವ ಮೊದಲು ಜಾತಿ ನಂತರ’ ಎಂಬ ಕೋಮುವಾದಿ ಘೋಷಣೆಯನ್ನು ಮತ್ತೆ ಒತ್ತಿ ಹೇಳಿದರು.

‘ಧಾರ್ಮಿಕ ವ್ಯವಹಾರಗಳ ಮೇಲೆ ಮತ್ತೆ ಹಿಡಿತ ಸಾಧಿಸುವುದೇ ತಮ್ಮ ಉದ್ದೇಶವಾಗಿದೆ ಅದಕ್ಕಾಗಿಯೇ ಈ ಕಾರ್ಯಕ್ರಮಗಳು’ ಎಂದು ವಿಎಚ್‌ಪಿ ಅಂತಾರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷ ಅಲೋಕ್ ಕುಮಾರ್ ಹೇಳಿದರೆ, ‘ದೇವಾಲಯಗಳು ಹಿಂದುಗಳ ಜೀವಾಳ. ನಂಬಿಕೆಯಿಲ್ಲದವರು ಮತ್ತು ನಾಸ್ತಿಕರು ದೇವಾಲಯ ಆಡಳಿತದಲ್ಲಿ ಪಾತ್ರಗಳನ್ನು ಹೊಂದಿರಬಾರದು’ ಎಂದು ವಿಎಚ್‌ಪಿ ರಾಷ್ಟ್ರೀಯ ಉಪಾಧ್ಯಕ್ಷ ಗೋಕರಾಜು ಗಂಗರಾಜು ಹೇಳಿದ್ದಾರೆ.

ಹಿಂದು ದೇವಾಲಯ ನಿರ್ವಹಣೆಯನ್ನು ರಾಜ್ಯ ಸರ್ಕಾರದಿಂದ ಕಿತ್ತು, ಹಿಂದು ಸಮುದಾಯದ ಮುಖಂಡರು ನಿರ್ವಹಿಸುವ ಸ್ವಾಯತ್ತ ಟ್ರಸ್ಟ್‌ಗಳಿಗೆ ವರ್ಗಾಯಿಸಬೇಕು ಎಂಬುದು ಕಾರ್ಯಕ್ರಮದ ಪ್ರಮುಖ ಬೇಡಿಕೆಯೂ ಆಗಿತ್ತು.

Advertisements

ಈ ಕಾರ್ಯಕ್ರಮದಲ್ಲಿ ಮಾತನಾಡಿದ ಭಾಷಣಕಾರರು ಹಿಂದು ದೇವಾಲಯಗಳು ಪೂಜಾ ಸ್ಥಳಗಳಿಗಿಂತ ಹೆಚ್ಚಿನವು. ಸಾಂಸ್ಕೃತಿಕ, ಆಧ್ಯಾತ್ಮಿಕ ಮತ್ತು ಸಮುದಾಯ ಕೇಂದ್ರಗಳಾಗಿ ಅವುಗಳ ಪಾತ್ರವನ್ನು ಗುರುತಿಸಬೇಕು. ಹಿಂದು ದೇವಾಲಯಗಳ ಮೇಲೆ ರಾಜ್ಯ ಸರ್ಕಾರದ ನಿಯಂತ್ರಣವನ್ನು ಕೊನೆಗಾಣಿಸಬೇಕು ಎಂದು ಅಬ್ಬರದ ಭಾಷಣಗಳನ್ನು ಮಾಡಿದರು.

ಆ ಕಾರ್ಯಕ್ರಮದಲ್ಲಿ ಎತ್ತಲಾದ ಮತ್ತೊಂದು ಪ್ರಮುಖ ವಿಷಯವೆಂದರೆ, ದೇವಾಲಯ ಆಡಳಿತದಲ್ಲಿ ಹಿಂದುಯೇತರರ ನೇಮಕದ ವಿಚಾರ. ದೇವಾಲಯ ಆಡಳಿತದಲ್ಲಿ ಹಿಂದುಯೇತರರ ನೇಮಕವು ಹಿಂದು ಸಂಪ್ರದಾಯಗಳು ಮತ್ತು ಭಕ್ತರ ಭಾವನೆಗಳನ್ನು ಹಾಳು ಮಾಡುತ್ತದೆ ಎಂದು ಅಲ್ಲಿದ್ದವರು ವಾದಿಸಿದ್ದಾರೆ.

ದೇವಾಲಯಕ್ಕೆ ಸಂಬಂಧಿಸಿದ ಎಲ್ಲ ಹುದ್ದೆಗಳಿಗೆ ಹಿಂದುಗಳನ್ನು ಮಾತ್ರವೇ ನೇಮಿಸಬೇಕು. ದೇವಾಲಯಗಳ ಬಳಿ ಅಂಗಡಿ ತೆರೆಯಲು ಹಿಂದು ಮಾಲೀಕರಿಗೆ ಮಾತ್ರವೇ ಅವಕಾಶ ನೀಡಬೇಕು. ದೇವಾಲಯದ ಭೂಮಿ ಒತ್ತುವರಿ ಆಗಿರುವುದನ್ನು ತೆರವುಗೊಳಿಸಬೇಕು ಎಂದು ಹಿಂದುತ್ವವಾದಿ ಧಾರ್ಮಿಕ ಮುಖಂಡರು ಒತ್ತಾಯಿಸಿದ್ದಾರೆ. ತಮ್ಮ ಬೇಡಿಕೆಗಳು ಸಂವಿಧಾನದ 12, 25 ಮತ್ತು 26ನೇ ವಿಧಿಗಳಿಗೆ ಅನುಗುಣವಾಗಿವೆ ಎಂದು ಪ್ರತಿಪಾದಿಸಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಆಂಧ್ರಪ್ರದೇಶದ ಮಾಜಿ ಮುಖ್ಯ ಕಾರ್ಯದರ್ಶಿ ಎಲ್.ವಿ ಸುಬ್ರಹ್ಮಣ್ಯಂ, 1987ರ ದತ್ತಿ ಕಾಯ್ದೆಯು ಹಿಂದು ದೇವಾಲಯಗಳಿಗೆ ಹಾನಿಕಾರಕವಾಗಿದೆ ಎಂದು ಆರೋಪಿಸಿದರು. ”ಈ ಕಾಯ್ದೆಯು ಅರ್ಚಕರನ್ನು ಸರ್ಕಾರಿ ನೌಕರರು ಎಂದು ಮರು ವ್ಯಾಖ್ಯಾನಿಸಿದೆ. ವರ್ಗಾವಣೆ ಮತ್ತು ನಿವೃತ್ತಿಗೆ ಒಳಪಟ್ಟಿರುತ್ತದೆ. ಇದು ಪುರೋಹಿತರಿಗೆ ಜೀವಮಾನದ ಪಾತ್ರವನ್ನು ಕಡ್ಡಾಯಗೊಳಿಸುವ ಸಾಂಪ್ರದಾಯಿಕ ಮಾರ್ಗಸೂಚಿಗಳನ್ನ ಉಲ್ಲಂಘಿಸುತ್ತದೆ” ಎಂದು ಅವರು ವಾದಿಸಿದರು.

ಅಂದಹಾಗೆ, ಈ ಕಾರ್ಯಕ್ರಮವನ್ನು ಜಾತಿ ಜನಗಣತಿಯನ್ನು ವಿರೋಧಿಸುವ ಉದ್ದೇಶದಿಂದಲೂ ಆಯೋಜಿಸಲಾಗಿತ್ತು ಎಂದು ವಿಎಚ್‌ಪಿಯ ಮುಖಂಡರೊಬ್ಬರು ಹೇಳಿರುವುದಾಗಿ ‘ದಿ ವೈರ್’ ವರದಿ ಮಾಡಿದೆ.

ಜಾತಿಗಿಂತ ಧರ್ಮದ ಆಧಾರದ ಮೇಲೆ ಹಿಂದುಗಳಲ್ಲಿ ಏಕತೆಯನ್ನು ಬೆಳೆಸುವ ಗುರಿಯಿಂದಲೇ ವಿಎಚ್‌ಪಿ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು. ‘ಹಿಂದುತ್ವ ಮೊದಲು, ಜಾತಿ ನಂತರ’ ಎಂಬುದು ವಿಎಚ್‌ಪಿಯ ಪ್ರತಿಪಾದನೆ ಎಂದು ಅವರು ಹೇಳಿದ್ದಾಗಿ ವರದಿಯಾಗಿದೆ.

ಈ ವರದಿ ಓದಿದ್ದೀರಾ?: ಮಣಿಪುರ ಹೊತ್ತಿ ಉರಿದಿದ್ದಕ್ಕೆ ಪ್ರಧಾನಿ ಮೋದಿ ಏಕೆ ಕ್ಷಮೆ ಕೇಳಬೇಕು?

ಆಂಧ್ರಪ್ರದೇಶದಲ್ಲಿ ಐತಿಹಾಸಿಕವಾಗಿ ಚುನಾವಣಾ ರಾಜಕಾರಣದಲ್ಲಿ ಬಿಜೆಪಿ ನೆಲೆಯನ್ನೇ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಈ ಕಾರ್ಯಕ್ರಮವು ರಾಜಕೀಯ ಪರಿಣಾಮ ಬೀರುವ ಮೂಲಕ ಬಿಜೆಪಿ ತನ್ನ ನೆಲೆಯನ್ನು ವಿಸ್ತರಿಸಿಕೊಳ್ಳಲು, ಆಂಧ್ರ ಜನರಲ್ಲಿ ಹಿಂದು ರಾಷ್ಟ್ರೀಯ ಭಾವನೆಯನ್ನು ಬಿತ್ತಲು ನೆರವಾಗುತ್ತದೆ ಎಂದು ವಿಎಚ್‌ಪಿ ಮುಖಂಡರು ಹೇಳಿಕೊಂಡಿದ್ದಾರೆ.

ಆದಾಗ್ಯೂ, ಈ ಕಾರ್ಯಕ್ರಮದಿಂದ ಬಿಜೆಪಿಗೆ ಹೆಚ್ಚಿನ ಲಾಭವಾಗುವುದಿಲ್ಲ ಎಂಬ ಅಭಿಪ್ರಾಯಗಳಿವೆ. ಏಕೆಂದರೆ, ಆಂಧ್ರದಲ್ಲಿ ಬಿಜೆಪಿಯ ಪ್ರಮುಖ ಮಿತ್ರ ಪಕ್ಷವಾದ ತೆಲುಗು ದೇಶಂ ಪಕ್ಷ (ಟಿಡಿಪಿ) ಅಲ್ಪಸಂಖ್ಯಾತರು ಮತ್ತು ಆರ್ಥಿಕವಾಗಿ ದುರ್ಬಲ ವರ್ಗಗಳ ಬೆಂಬಲವನ್ನೇ ಹೆಚ್ಚಾಗಿ ಆಶ್ರಯಿಸಿದೆ ಮತ್ತು ಅವಲಂಬಿಸಿದೆ. ಟಿಡಿಪಿ ಹೆಚ್ಚು ತುಳಿತಕ್ಕೊಳಗಾದ ಸಮುದಾಯಗಳ ಜನರನ್ನು ಒಳಗೊಂಡಿದೆ. ಹೀಗಾಗಿ, ಟಿಡಿಪಿ ತನ್ನ ಮತದಾರರ ನೆಲೆಯನ್ನು ದುರ್ಬಲಗೊಳಿಸಿಕೊಳ್ಳಲು ಬಯಸುವುದಿಲ್ಲ. ಅಲ್ಲಿನ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಅಲ್ಪಸಂಖ್ಯಾತ ವಿರೋಧಿ ಧೋರಣೆಗಳನ್ನಾಗಲೀ, ಜಾತಿ ಗಣತಿ ವಿರೋಧಿ ನಿಲುವನ್ನಾಗಲೀ ತೆಗೆದುಕೊಳ್ಳುವುದಿಲ್ಲ. ಅದಕ್ಕೂ ಮಿಗಿಲಾಗಿ, ವಿಎಚ್‌ಪಿ ಆಯೋಜಿಸಿದ್ದ ಕಾರ್ಯಕ್ರಮದ ಬೇಡಿಕೆ-ಒತ್ತಾಯಗಳನ್ನು ಅನುಮೋದಿಸುವುದಿಲ್ಲ.

ಜೊತೆಗೆ, ಆಂಧ್ರ ಜನರು ಅದರಲ್ಲೂ ತಳ ಸಮುದಾಯಗಳ ಜನರು ಬಿಜೆಪಿ, ಆರ್‌ಎಸ್‌ಎಸ್‌, ವಿಎಚ್‌ಪಿಯ ಹಿಂದುತ್ವ ಸಿದ್ಧಾಂತಕ್ಕೆ ಪ್ರಸ್ತುತ ಸನ್ನಿವೇಶದಲ್ಲಿ ಮಾರುಹೋಗುವ ಸಾಧ್ಯತೆಗಳಂತೂ ಇಲ್ಲ. ಆಂಧ್ರದಲ್ಲಿಯೂ ಜಾತಿ ದೌರ್ಜನ್ಯಗಳು ಎಗ್ಗಿಲ್ಲದೆ ನಡೆಯುತ್ತಿವೆ. ಅಂತರ್ಜಾತಿ ವಿವಾಹವಾದ ಕಾರಣಕ್ಕೆ ಮಗಳನ್ನೇ ಕೊಂದ ಘಟನೆಗಳು, ಬೈಕ್ ಮುಟ್ಟಿದ್ದಕ್ಕೆ ದಲಿತ ಯುವಕನ ಮೇಲೆ ನಡೆದ ಮಾರಣಾಂತಿಕ ಹಲ್ಲೆಗಳಂತಹ ಜಾತಿ ದೌರ್ಜನ್ಯಗಳು ಇದೇ ಹಿಂದು ಧರ್ಮದ ಪ್ರಬಲ ಜಾತಿಗಳಿಂದಲೇ ನಡೆದಿವೆ. ಪ್ರಬಲ ಜಾತಿಗಳು ಎಸಗುವ ದೌರ್ಜನ್ಯಗಳನ್ನು ಬದಿಗೊತ್ತಿ, ಹಿಂದುತ್ವಕ್ಕಾಗಿ ಬೀದಿಗಿಳಿಯುವ, ಬಿಜೆಪಿ-ಆರ್‌ಎಸ್‌ಎಸ್‌ನ ಕಾಲಾಳುಗಳಾಗಿ ಕೆಲಸ ಮಾಡಲು ತಳ ಸಮುದಾಯಗಳು ಮುಂದೆಬರುವುದಿಲ್ಲ. ಇದು, ಬಿಜೆಪಿಗೂ ಅರಿವಿದೆ. ಆದರೂ, ತನ್ನ ಪ್ರಯತ್ನವನ್ನು ಮುಂದುವರೆಸಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉತ್ತರಾಖಂಡ | ಕಪಾಳ ಮೋಕ್ಷ ಮಾಡಿದ ಶಿಕ್ಷಕನಿಗೆ ಗುಂಡು ಹಾರಿಸಿದ ವಿದ್ಯಾರ್ಥಿ

ತರಗತಿಯಲ್ಲಿ ಕಪಾಳ ಮೋಕ್ಷ ಮಾಡಿದ ಕಾರಣಕ್ಕೆ ಕುಪಿತಗೊಂಡ ವಿದ್ಯಾರ್ಥಿಯೊಬ್ಬ ತನ್ನ ಶಿಕ್ಷಕನ...

ಅಯೋಧ್ಯೆ | ಆಸ್ಪತ್ರೆಗೆ ದಾಖಲಿಸಲು ನಿರಾಕರಣೆ, ತಂದೆಯ ತೋಳಿನಲ್ಲಿ ಮೃತಪಟ್ಟ ಬಾಲಕ

ತೀವ್ರವಾಗಿ ಅಸ್ಪಸ್ಥಗೊಂಡಿದ್ದ ತನ್ನ 12 ವರ್ಷದ ಪುತ್ರನನ್ನು ಸರ್ಕಾರಿ ಆಸ್ಪತ್ರೆಗೆ ಕರೆ...

ನಟಿಗೆ ಕಿರುಕುಳ ಆರೋಪ: ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷನ ಹುದ್ದೆ ತೊರೆದ ರಾಹುಲ್ ಮಾಂಕೂಟತ್ತಿಲ್

ಕೇರಳದ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿರುವ ಅಶ್ಲೀಲ ಸಂದೇಶ ಹಾಗೂ ದುರ್ವರ್ತನೆ...

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

Download Eedina App Android / iOS

X