ದಾವಣಗೆರೆಯ ಹಳೆ ಕುಂದುವಾಡದಿಂದ ಬನ್ನಿಕೋಡಿಗೆ ಸಂಪರ್ಕ ಕಲ್ಪಿಸುವಂತೆ ಸೇತುವೆ ನಿರ್ಮಾಣ ಕಾಮಗಾರಿ ಅವೈಜ್ಞಾನಿಕವಾಗಿರುವುದನ್ನು ವಿರೋಧಿಸಿ ರಸ್ತೆ ತಡೆ ಪ್ರತಿಭಟನೆ ನಡೆಸಿದ 40ಕ್ಕೂ ಅಧಿಕ ಗ್ರಾಮಸ್ಥರನ್ನು ಪೊಲೀಸರು ಬಂಧಿಸಿದ್ದಾರೆ.
ನೇರವಾಗಿ ಸಂಪರ್ಕ ಕಲ್ಪಿಸುವ ವೈಜ್ಞಾನಿಕ ಸೇತುವೆ ನಿರ್ಮಿಸುವಂತೆ ಆಗ್ರಹಿಸಿ ಹಳೆ ಕುಂದುವಾಡ ಗ್ರಾಮಸ್ಥರು ಹೆದ್ದಾರಿ ಬಂದ್ ಮಾಡುವ ಮೂಲಕ ಬೆಳಿಗ್ಗೆ 9ರಿಂದಲೇ ಕಾಮಗಾರಿ ನಿಲ್ಲಿಸುವಂತೆ ರಸ್ತೆ ತಡೆದು ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಅಧಿಕಾರಿಗಳು ಮತ್ತು ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದು ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಪೊಲೀಸರು ಗ್ರಾಮಸ್ಥರನ್ನು ವಶಕ್ಕೆ ಪಡೆದರು.
ಗ್ರಾಮದ ಮುಖಂಡ ಮಂಜುನಾಥ್ ಕುಂದವಾಡ ಮಾತನಾಡಿ, “ಬನ್ನಿಕೋಡು ರಸ್ತೆಗೆ ಸಂಪರ್ಕ ಕಲ್ಪಿಸುವ ಸೇತುವೆ ನಿರ್ಮಾಣಕ್ಕೆ ಹಲವು ವರ್ಷಗಳಿಂದ ಮನವಿ ಸಲ್ಲಿಸಿದ್ದು, ಅವೈಜ್ಞಾನಿಕವಾಗಿ ದೂರದಲ್ಲಿ ತಿರುವಿನಿಂದ ಕೂಡಿದ ಸೇತುವೆ ನಿರ್ಮಾಣ ಮಾಡುತ್ತಿದ್ದಾರೆ. ಅವೈಜ್ಞಾನಿಕ ಮತ್ತು ಕಳಪೆ ಕಾಮಗಾರಿಯಂತೆ ತೋರುತ್ತದೆ. ಈ ಹಿನ್ನಲೆಯಲ್ಲಿ ಸಂಬಂಧಪಟ್ಟ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳು ಇದರ ಬಗ್ಗೆ ಗಮನಹರಿಸಿ ಜನರ ಅನುಕೂಲದ ದೃಷ್ಟಿಯಿಂದ ನೇರವಾಗಿ ರಸ್ತೆಯನ್ನು ನಿರ್ಮಾಣ ಮಾಡಬೇಕು” ಎಂದು ಒತ್ತಾಯಿಸಿದರು.
“ಈ ರಸ್ತೆ ಮುಂದೆ ಸಾಗಿ ಹರಿಹರ ಶಿವಮೊಗ್ಗ ಹೆದ್ದಾರಿಗೆ ಕೂಡಿಕೊಳ್ಳಲಿದ್ದು, ನೂರಾರು ವಾಹನಗಳು ಇಲ್ಲಿ ಸಂಚರಿಸುತ್ತವೆ. ತಿರುವಿನಿಂದ ಕೂಡಿದ ಅವೈಜ್ಞಾನಿಕ ಸೇತುವೆಯಿಂದ ಇಲ್ಲಿ ಅಪಘಾತಗಳು ಸಂಭವಿಸಿದರೆ ಜೀವಹಾನಿಯಾಗುವ ಸಂಭವವಿದ್ದು, ಇದರ ನೇರ ಪರಿಣಾಮ ಕುಂದುವಾಡ ಗ್ರಾಮಸ್ಥರು ಅನುಭವಿಸುವಂತಾಗುತ್ತದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ?: ಹೂಳಲು ಸ್ಮಶಾನವಿಲ್ಲದೆ ತಿ. ನರಸೀಪುರದಿಂದ ದಾವಣಗೆರೆಗೆ ಮೃತದೇಹ ಕೊಂಡೊಯ್ದ ಅಲೆಮಾರಿ ಕೊರಚ ಸಮುದಾಯ
ಮಾಜಿ ಮೇಯರ್ ಗುರುನಾಥ್, ಮಂಜುನಾಥ್ ಕುಂದುವಾಡ, ಗೌಡ್ರು ಮಂಜುನಾಥ್, ದಯಾನಂದ್, ಮಂಜುನಾಥ್ ಎಚ್ ಜಿ, ಮಧು, ಅಣ್ಣಪ್ಪ, ಮಾರುತಿ, ಜಿ ಎಚ್ ಗಣೇಶ, ಮಿಟ್ಲಕಟ್ಟೇ ಚಂದ್ರಪ್ಪ, ರಾಜು ಎನ್ ಟಿ, ಶ್ರೀನಿವಾಸ್ ಎಚ್ ಎಸ್, ಮಹಂತೇಶ್, ಚಂದ್ರಪ್ಪ ಸೇರಿದಂತೆ 40ಕ್ಕೂ ಅಧಿಕ ಮಂದಿ ಗ್ರಾಮಸ್ಥರು ಪ್ರತಿಭಟನೆಯಲ್ಲಿ ನಿರತರಾಗಿದ್ದರು.
