ಶಂಭು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ 55 ವರ್ಷದ ರೈತ ಗುರುವಾರ ವಿಷಕಾರಿ ವಸ್ತು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಮೃತ ರೈತರನ್ನು ತರಣ್ ಜಿಲ್ಲೆಯ ಪಹುವಿಂಡ್‌ನ ರೇಷಮ್ ಸಿಂಗ್ ಎಂದು ಗುರುತಿಸಲಾಗಿದೆ. ಎಂಎಸ್‌ಪಿಗೆ ಕಾನೂನು ಖಾತರಿ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪಂಜಾಬ್ ಮತ್ತು ಹರಿಯಾಣ ನಡುವಿನ ಶಂಭು ಗಡಿಯಲ್ಲಿ ರೈತರು ಒಂದು ವರ್ಷದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.
ಇದನ್ನು ಓದಿದ್ದೀರಾ? ಎಂಎಸ್‌ಪಿ | 43ನೇ ದಿನಕ್ಕೆ ಕಾಲಿಟ್ಟ ದಲೈವಾಲ್ ಉಪವಾಸ; ರೈತರ ಬಲಿಗೆ ಕಾಯುತ್ತಿದೆಯೇ ಕೇಂದ್ರ?
ಈ ಪ್ರತಿಭಟನಾ ಸ್ಥಳದಲ್ಲಿ ರೈತ ರೇಷಮ್ ಸಿಂಗ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ವರದಿಯಾಗಿದೆ. ಮೂರು ವಾರದಲ್ಲಿ ಎರಡನೇ ಬಾರಿಗೆ ರೈತರ ಪ್ರತಿಭಟನೆಯಲ್ಲಿ ಆತ್ಮಹತ್ಯೆ ಪ್ರಯತ್ನ ನಡೆದಿದೆ. ಡಿಸೆಂಬರ್ 18ರಂದು ಶಂಭು ಗಡಿಯಲ್ಲಿ ಮತ್ತೊಬ್ಬ ರೈತ ರಂಜೋಧ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇನ್ನು ಆತ್ಮಹತ್ಯೆಗೆ ಯತ್ನಿಸಿದ ರೇಷಮ್ ಸಿಂಗ್ ಅವರನ್ನು ಪಟಿಯಾಲಾದ ರಾಜೀಂದ್ರ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ಅಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ರೈತರು ತಿಳಿಸಿದ್ದಾರೆ.
ಇನ್ನು ನವೆಂಬರ್ 26ರಿಂದ ಖಾನೌರಿ ಗಡಿಯಲ್ಲಿ ಆಮರಣಾಂತ ಉಪವಾಸ ನಡೆಸುತ್ತಿರುವ ರೈತ ನಾಯಕ ಜಗಜಿತ್ ಸಿಂಗ್ ದಲ್ಲೆವಾಲ್ (70) ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟಿದೆ. ಇದರಿಂದಾಗಿ ದುಃಖಿತರಾಗಿ ರೈತ ರಂಜೋಧ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಇದನ್ನು ಓದಿದ್ದೀರಾ? ಕೊಪ್ಪಳ | ಭತ್ತ ನಾಟಿಯಲ್ಲಿ ಕೊಳೆರೋಗ; ರೈತರು ಕಂಗಾಲು
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ರೈತ ನಾಯಕ ತೇಜ್‌ವೀರ್ ಸಿಂಗ್, “ದೀರ್ಘಕಾಲದಿಂದ ಪ್ರತಿಭಟನೆ ನಡೆಸುತ್ತಿದ್ದರೂ ಕೂಡಾ ನಮ್ಮ ಸಮಸ್ಯೆಗಳನ್ನು ಪರಿಹರಿಸದ ಕೇಂದ್ರ ಸರ್ಕಾರದ ವಿರುದ್ಧ ರೇಷಮ್ ಸಿಂಗ್ ಅಸಮಾಧಾನಗೊಂಡಿದ್ದರು” ಎಂದು ಹೇಳಿದ್ದಾರೆ.
ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ನೇತೃತ್ವದಲ್ಲಿ ರೈತರು ಫೆಬ್ರವರಿ 13ರಿಂದ ಪಂಜಾಬ್ ಮತ್ತು ಹರಿಯಾಣ ನಡುವಿನ ಶಂಭು ಮತ್ತು ಖಾನೌರಿ ಗಡಿಯಲ್ಲಿ ಮೊಕ್ಕಾಂ ಹೂಡಿದ್ದಾರೆ. ಹಲವು ಬಾರಿ ದೆಹಲಿಗೆ ಮಾರ್ಚ್ ನಡೆಸಲು ರೈತರು ಮುಂದಾಗಿದ್ದು ಅವರನ್ನು ಪೊಲೀಸರು ತಡೆದಿದ್ದಾರೆ.
ನೆನಪಿಡಿ: ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ… ಆತ್ಮಹತ್ಯೆಗಳ ಕುರಿತು ಚರ್ಚಿಸುವುದು ಕೂಡ ಕೆಲವರಿಗೆ ಪ್ರಚೋದನೆ ನೀಡಬಹುದು. ಸಮಸ್ಯೆಗಳ ಬಗ್ಗೆ ಆಪ್ತರೊಂದಿಗೆ ಹಂಚಿಕೊಳ್ಳುವುದರಿಂದ, ಸಮಾಲೋಚನೆ ನಡೆಸುವುದರಿಂದ ಆತ್ಮಸ್ಥೈರ್ಯ ಹೆಚ್ಚುತ್ತದೆ. ಆತ್ಮಹತ್ಯೆಗಳನ್ನು ತಡೆಯಬಹುದು. ತುರ್ತು ಪರಿಸ್ಥಿತಿಯಿದ್ದರೆ ಕರೆ ಮೂಲಕ ವೈದ್ಯರನ್ನು ಸಂಪರ್ಕಿಸಿ. ಬೆಂಗಳೂರು ಸಹಾಯವಾಣಿ 080-25497777, ನಿಮಾನ್ಸ್ ಸಹಾಯವಾಣಿ 080-46110007, ಆರೋಗ್ಯ ಸಹಾಯವಾಣಿ 104.
