‘ಎಮರ್ಜೆನ್ಸಿ’ ಯಲ್ಲಿ ಇಂದಿರಾ ಗಾಂಧಿ ಪಾತ್ರವನ್ನು ನಿರ್ವಹಿಸುವುದಕ್ಕೂ ಮುನ್ನ ತಾನು ಅವರ ಬಗ್ಗೆ ದೀರ್ಘವಾದ ಸಂಶೋಧನೆಯನ್ನು ನಡೆಸಿರುವುದಾಗಿ ನಟಿ, ಸಂಸದೆ ಕಂಗನಾ ರಣಾವತ್ ಹೇಳಿಕೊಂಡಿದ್ದಾರೆ. “ಇಂದಿರಾ ಗಾಂಧಿ ಶಕ್ತಿಶಾಲಿ ಎಂದು ಭಾವಿಸಿದ್ದೆ, ಆದರೆ ಸಂಶೋಧನೆ ನಡೆಸಿದಾಗ ಅವರು ದುರ್ಬಲರು ಎಂದು ತಿಳಿದುಬಂದಿದೆ” ಎಂದಿದ್ದಾರೆ.
ಮಂಡಿ ಕ್ಷೇತ್ರದಲ್ಲಿ ಮೊದಲ ಬಾರಿಗೆ ಬಿಜೆಪಿ ಸಂಸದೆಯಾಗಿರುವ ಕಂಗನಾ ರಣಾವತ್ ತಮ್ಮ ಪ್ರಚೋದನಕಾರಿ, ಅವಹೇಳನಕಾರಿ ಹೇಳಿಕೆಗಳಿಗಾಗಿ ಜನಪ್ರಿಯರಾಗಿದ್ದಾರೆ. ಈಗ ಇಂದಿರಾ ಗಾಂಧಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಜೊತೆಗೆ ತನಗೆ ಅರ್ಹವಾದ ನಿರ್ದೇಶಕರು ಯಾರೂ ಇಲ್ಲ ಎಂದೂ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ‘ಎಮರ್ಜೆನ್ಸಿ’ ವೀಕ್ಷಿಸಲು ಕಂಗನಾ ಆಹ್ವಾನ: ಪ್ರಿಯಾಂಕಾ ಕೊಟ್ಟ ಉತ್ತರವೇನು?
“ಇಂದು ಚಲನಚಿತ್ರೋದ್ಯಮದಲ್ಲಿ ನಾನು ಕೆಲಸ ಮಾಡಲು ಬಯಸುವ ಒಬ್ಬ ನಿರ್ದೇಶಕನೂ ಇಲ್ಲ. ಯಾಕೆಂದರೆ ಅವರಲ್ಲಿ ನಾನು ಅವರಿಗೆ ಅರ್ಹ ನಟಿ ಎಂಬ ಭಾವನೆ ಮೂಡುವಂತಹ ಆ ರೀತಿಯ ಗುಣಮಟ್ಟವಿಲ್ಲ” ಎಂದು ಎಮರ್ಜೆನ್ಸಿ ಬಗ್ಗೆ ನಡೆದ ಸಂದರ್ಶನದಲ್ಲಿ ಕಂಗನಾ ರಣಾವತ್ ತಿಳಿಸಿದ್ದಾರೆ.
1975ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ವಿಧಿಸಿದ್ದ ತುರ್ತು ಪರಿಸ್ಥಿತಿಯ ಬಗ್ಗೆಗಿನ ಸಿನಿಮಾ ಎಮರ್ಜೆನ್ಸಿ ಆಗಿದೆ. ಈ ಸಿನಿಮಾದಲ್ಲಿ ನಟಿ ಕಂಗನಾ ರಣಾವತ್ ಇಂದಿರಾ ಗಾಂಧಿ ಪಾತ್ರವನ್ನು ನಿರ್ವಹಿಸಿದ್ದಾರೆ.
ಇಂದಿರಾ ಗಾಂಧಿ ಬಗ್ಗೆ ಪಿಟಿಐ ಸಂದರ್ಶನದಲ್ಲಿ ಮಾತನಾಡಿದ ಕಂಗನಾ ರಣಾವತ್, “ಇಂದಿರಾ ಗಾಂಧಿ ಸುತ್ತಲೂ ಅನೇಕ ಊರುಗೋಲುಗಳಿದ್ದವು. ಅವರು ಅನೇಕ ಜನರ ಮೇಲೆ ತುಂಬಾ ಅವಲಂಬಿತರಾಗಿದ್ದರು. ಅದರಲ್ಲಿ ಒಬ್ಬರು ಸಂಜಯ್ ಗಾಂಧಿ. ಈ ಸಿನಿಮಾಕ್ಕೂ ಮುನ್ನ ನನಗೆ ಇಂದಿರಾ ಅವರ ಬಗ್ಗೆ ಸಹಾನುಭೂಮಿ ಇರಲಿಲ್ಲ” ಎಂದು ತಿಳಿಸಿದರು.
