ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ವರುಣಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೊರಳವಾಡಿ ಹೊಸೂರು ಗ್ರಾಮದಲ್ಲಿ ಭೂ ಮಾಲೀಕ, ನ್ಯಾಯಾಲಯದ ಆದೇಶವಿದೆ ಎನ್ನುವ ಕಾರಣಕ್ಕೆ ಹಂದಿಜೋಗಿ ಕುಟುಂಬಗಳನ್ನು ಹೊರ ಹಾಕಿ ತಂತಿ ಬೇಲಿ ಹಾಕಿಕೊಂಡಿದ್ದನು. ಬಳಿಕ ರಸ್ತೆ ಬದಿಯಲ್ಲಿ ಹಂದಿಜೋಗಿ ಕುಟುಂಬ ವಾಸ ಮಾಡುತ್ತಿರುವುದರ ಕುರಿತು ಈ ದಿನ.ಕಾಮ್ ವಿಸ್ತೃತವಾಗಿ ವರದಿ ಮಾಡಿತ್ತು.
ಸಂತೋಷ್ ಗುಡ್ಡಿಯಂಗಡಿ ಮೂಲತಃ ಕುಂದಾಪುರ ಮೂಲದವರು. ಇದೆ ಗ್ರಾಮದ ವ್ಯಾಪ್ತಿಯ ಶಾಲೆಯೊಂದರಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದು, ಶಾಲೆಗೆ ಹೋಗುವ ಮಾರ್ಗ ಮಧ್ಯೆ ಹಂದಿ ಜೋಗಿ ಕುಟುಂಬ ರಸ್ತೆಯಲ್ಲಿ ಇರುವುದು, ಅಡುಗೆ ಮಾಡುವುದು,
ಮಲಗುವುದನ್ನು ಗಮನಿಸಿ ಕಳೆದೊಂದು ವಾರದ ಹಿಂದೆ ಸಾಮಾಜಿಕ ಜಾಲತಾಣ ಫೇಸ್ಬುಕ್ ಹಾಗೂ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೆ ಮಾಡಿಕೊಂಡು ನೆರವು ಕೋರಿದ್ದರು.

ಇದಕ್ಕೆ ಪೂರಕವಾಗಿ ಈ ದಿನ.ಕಾಮ್ ಸ್ಥಳಕ್ಕೆ ತೆರಳಿ ವರದಿ ಮಾಡಿ, ಸಂಘಟನೆಗಳ ಮುಖಂಡರ ಗಮನ ಸೆಳೆದು ನಡೆದಿರುವ ಘಟನಾವಳಿ ಕುರಿತಾಗಿ ಅಧಿಕಾರಿಗಳ ಜತೆಗೆ ಚರ್ಚಿಸಲಾಗಿತ್ತು. ಆದೇ ದಿನ ರಾತ್ರಿ 11ರ ವೇಳೆಗೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ʼಮಹಾದೇವಪುರದಲ್ಲಿ ಸರ್ಕಾರಿ ಕಟ್ಟಡವಿದ್ದು ಅಲ್ಲಿ ವಾಸ ಮಾಡಲು ವ್ಯವಸ್ಥೆ ಮಾಡಲಾಗಿದೆ. ನೀವು ಅಲ್ಲಿಗೆ ಹೋಗಿʼ ಎಂದು ಮನವಿ ಮಾಡಿದ್ದರು. ಆದರೆ ಆ ಕುಟುಂಬ ಅಲ್ಲಗೆ ತೆರಳಲು ನಿರಾಕರಿಸಿದೆ. ಇಲ್ಲಿಯೇ ಹುಟ್ಟಿ ಬೆಳೆದು, ಇಲ್ಲೇ ಜೀವನ ಕಟ್ಟಿಕೊಂಡು ಇನ್ನೆಲ್ಲೋ ಹೋಗಲು ಮನಸು ಒಗ್ಗಿಲ್ಲ, ಅವಿನಾಭಾವ ಸಂಬಂಧ ಈ ಸ್ಥಳದಲ್ಲೇ ಇದ್ದು, ಒಂದು ರೀತಿ ಗ್ರಾಮದ ಜೊತೆ
ಹೊಂದಿಕೊಂಡಿರುವ ಕುಟುಂಬಕ್ಕೆ ಇನ್ನೆಲ್ಲೋ ಹೋಗಲು ಅದುವೇ ಗ್ರಾಮದಿಂದ ಹೊರ ಹಾಕಿಸಿಕೊಂಡು, ದೌರ್ಜನ್ಯದಿಂದ ಹೊರ ಹೋಗಲು ಮನಸ್ಸಿಲ್ಲದೆ ನಿರಾಕರಣೆ ಮಾಡಿದ್ದಾರೆ.

ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಸ್ಥಳಕ್ಕೆ ಭೇಟಿ ಕೊಟ್ಟು ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ನದಿಯ ಪಾತ್ರದ ಸ್ಥಳದಲ್ಲಿ ಜಾಗ ಗೊತ್ತು ಮಾಡಿರುವ ಕುರಿತಾಗಿ ಅಲ್ಲಿ ವ್ಯವಸ್ಥೆ ಕಲ್ಪಿಸುವ ವಿಚಾರವಾಗಿ ಮಾತಾಡಿದ್ದಾರೆ. ಸಾಕಷ್ಟು ಬಾರಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಈ ಕುಟುಂಬಗಳನ್ನು ಸ್ಥಳಾಂತರ ಮಾಡಲು ಸಾಕಷ್ಟು ಪ್ರಯತ್ನ ಮಾಡಿದ್ದಾರೆ. ಆದರೆ ಹೋರಾಟ ಮಾಡಲು ಸಿದ್ಧವೇ ವಿನಃ ಇನ್ನೆಲ್ಲೋ ಹೋಗಲು ಈ ಕುಟುಂಬಗಳು ಸಿದ್ಧವಿಲ್ಲ.
ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್ ಮಹೇಶ್ ಸ್ಥಳಕ್ಕೆ ಭೇಟಿ ನೀಡಿದಾಗ ಸದರಿ ಗ್ರಾಮದ ಪಿಡಿಒ ಅಶೋಕ್ ಸ್ಥಳಕ್ಕೆ ಬಂದು ಏನು ಗೊತ್ತಿಲ್ಲದ ಹಾಗೆ ನಟನೆ ಮಾಡಿ, ವಿಷಯವೇ ಗೊತ್ತಿಲ್ಲ ಎನ್ನುವಂತೆ ಸಬೂಬು ನೀಡಿದಾಗ ಮಾಜಿ ಸಚಿವ ಎನ್ ಮಹೇಶ್ ಗರಂ ಆಗಿದ್ದಾರೆ. ಸದರಿ ಊರಿನಲ್ಲಿ ಕಾನೂನು ಪ್ರಕ್ರಿಯೆ ಏನೇ ಇರಲಿ ವಾಸವಿದ್ದ ಕುಟುಂಬಗಳೆರಡನ್ನು ಹೊರ ಹಾಕುವಾಗ ಎಲ್ಲಿ ಹೋಗಿದ್ರಿ? ನಿಮಗೆ ಮನುಷ್ಯತ್ವ ಇದಿಯೇ? ನಿಮ್ಮ ಮೇಲೆ ಕಾನೂನು ಕ್ರಮಕ್ಕೆ ಮುಂದಾಗುವ ಸಮಯ ಹತ್ತಿರವಿದೆ ಎಂದಿದ್ದಾರೆ. ಇಷ್ಟೆಲ್ಲ ಆದರೂ ಬಡ ಕುಟುಂಬದ ಮೇಲೆ ಪಿಡಿಒ ಅಶೋಕ್‌ಗೆ ಸ್ವಲ್ಪವೂ ಕಾಳಜಿ ಇಲ್ಲ.

ಅದೇ ಸಮಯದಲ್ಲಿ ಸ್ಥಳಕ್ಕೆ ಬಂದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೂ ತರಾಟೆ ತೆಗೆದುಕೊಂಡ ಎನ್ ಮಹೇಶ್, “ಹಂದಿಜೋಗಿ ಕುಟುಂಬಗಳನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆಯುತ್ತಿದೆ. ತಾಲೂಕಿನಲ್ಲಿ ಇಂತಹ ದೌರ್ಜನ್ಯ ನಡೆಯುವಾಗ ನಿಮ್ಮ ಗಮನಕ್ಕೆ ಬರಲಿಲ್ಲವೇ. ಇದೇ ಜಾಗದಲ್ಲಿ ಮನೆ ಕಟ್ಟಿಕೊಡುವ ವ್ಯವಸ್ಥೆ ಆಗಬೇಕು” ಎಂದಿದ್ದಾರೆ.
ನಂಜನಗೂಡು ತಹಶೀಲ್ದಾರ್ ಶಿವಕುಮಾರ್ ಕಾಸನೂರು ಹಾಗೂ ಕಂದಾಯ ನಿರೀಕ್ಷಕರು ಭೇಟಿ ಕೊಟ್ಟು, “ಇಲ್ಲಿ ಯಾವುದೇ ಜಾಗವಿಲ್ಲ, ಕಾಲುದಾರಿ ಕರಾಬು ಜಾಗವಿಲ್ಲ, ಈಗ ನ್ಯಾಯಾಲಯದ ಆದೇಶವಾಗಿದೆ. ನೀವು ಬೇರೆ ಕಡೆ ಹೋಗಬೇಕು” ಎನ್ನುವ ಮಾತುಗಳನ್ನೇ ಆಡಿದ್ದಾರೆ. ಹಂದಿಜೋಗಿ ಕುಟುಂಬ ಬೀದಿಪಾಲು ಆಗಿರುವ ಬಗ್ಗೆ, ಅವರಿಗೆ ಅಗತ್ಯ ನೆರವಿನ ಬಗ್ಗೆ ಮಾತನಾಡದೆ, ನೊಂದಿರುವ ಜನಕ್ಕೆ ಸಾಂತ್ವನ ಹೇಳಿ ಮುಂದಾಗಬೇಕಿರುವ ಕ್ರಮದ ಬಗ್ಗೆ, ನೆರವಿನ ಬಗ್ಗೆ ಹೇಳದೆ ತಾತ್ಸಾರ ಧೋರಣೆ ತೋರಿದ್ದಾರೆ.

ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರು ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಬೀಮರಾವ್ ಒಡ್ಡರ್ ಸ್ಥಳಕ್ಕೆ ಬಂದು ನಿರಾಶ್ರಿತರಿಗೆ ಆಹಾರ ಪದಾರ್ಥ, ದಿನಸಿ ವಿತರಣೆ ಮಾಡಿ ಮಹಾದೇವಪುರದಲ್ಲಿ ವ್ಯವಸ್ಥೆ ಕಲ್ಪಿಸಿದ್ದು, ಅಲ್ಲಿಗೆ ಸದ್ಯದ ಮಟ್ಟಿಗೆ ತೆರಳುವಂತೆ ಕೋರಿದರು.
ಈ ದಿನ.ಕಾಮ್ ವರದಿಗಾರ ಮಾತನಾಡಿ, “ಜನರನ್ನು ಒಕ್ಕಲೆಬ್ಬಿಸುವ ಹುನ್ನಾರದಿಂದ ಇಷ್ಟೆಲ್ಲ ನಡೆಯುತ್ತಿರುವಾಗ ಏಕಪಕ್ಷೀಯವಾಗಿ ಬಾಳಿ ಬದುಕಿದ ಕುಟುಂಬಗಳನ್ನು ಇನ್ನೆಲ್ಲಿಗೋ ಕಳುಹಿಸುವುದು ಸೂಕ್ತವಲ್ಲ. ಇಲ್ಲಿ ಅನ್ಯಾಯವಾಗಿದೆ. ಬಡ ಕುಟುಂಬಗಳಿಗೆ ತಕ್ಷಣ ಗುಡಿಸಲು ಹಾಕಲು ಅಗತ್ಯವಿರುವ ವ್ಯವಸ್ಥೆ ಕಲ್ಪಿಸಿ, ಗುಡಿಸಲು ನಿರ್ಮಾಣಕ್ಕೆ ಬೇಕಿರುವ ಪ್ಲಾಸ್ಟಿಕ್ ಹೊದಿಕೆ ಇತ್ಯಾದಿ ಸಾಮಾಗ್ರಿಗಳನ್ನು ಕೊಡಿಸಬೇಕು” ಎಂದು ಕೇಳಿದಾಗ ಅಧಿಕಾರಿಗಳು ಕೂಡಲೇ ಪ್ಲಾಸ್ಟಿಕ್ ಹೊದಿಕೆ ಕೊಡಿಸುವ ಭರವಸೆ ನೀಡಿದರು.
ಬಳಿಕ ಭೂ ಮಾಲೀಕ ಜಾಗ ಒತ್ತುವರಿ ಮಾಡಿದ್ದು, ಈ ಹಿಂದೆ ಭೂ ಮಾಲಿಕನ ತಂದೆ ಹಂದಿಜೋಗಿ ಕುಟುಂಬದಿಂದ ₹50,000 ಹಣ ಪಡೆದು ಈ ಜಾಗ ಕೊಡುವುದಾಗಿ ಹೇಳಿ ಈವರೆಗೆ ಇಲ್ಲಿ ಇರಲು ಅವಕಾಶ ಮಾಡಿದ್ದರು. ಈ ಎಲ್ಲ ದಾಖಲೆಗಳು ಇದೇ ವಿಳಾಸದಲ್ಲಿರುವ ವಿಚಾರ ಗಮನಕ್ಕೆ ತರಲಾಗಿ ಕೂಡಲೆ ಭೂ ಮಾಲಿಕನ ಇಡೀ ಭೂಮಿ ಸರ್ವೇ ಮಾಡಿಸಿ ಕರಾಬು ಜಾಗವನ್ನು ಬಿಡಿಸಿಕೊಡುವಂತೆ ಕೋರಲಾಗಿತ್ತು. ಇದಕ್ಕೆ ಪೂರಕವಾಗಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಭೀಮರಾವ್ ಒಡ್ಡರ್ ಅವರು
ಇವತ್ತೇ ತಹಶೀಲ್ದಾರ್ ಅವರಿಗೆ ವರದಿ ಬರೆದು ಸರ್ವೇ ನಡೆಸಲು ಕೋರುವುದಾಗಿ, ಅದರ ಪ್ರತಿಯನ್ನು ಕಳಿಸಿಕೊಡುವುದಾಗಿ ಹೇಳಿದ್ದರು.

ಕಳೆದ ದಿನ ಸ್ಥಳಕ್ಕೆ ಸರ್ವೇ ಮಾಡುವವರು ಬಂದಿದ್ದು ಇಡೀ ಜಾಗವನ್ನು ಅಳೆಯುವ ಬದಲು ಇನ್ನಿಲ್ಲದ ಮಾತಿನಲ್ಲಿ ಕಾಲ ಕಳೆದಿದ್ದಾರೆ. ವಿಡಿಯೋ ಮಾಡಲು ಮುಂದಾದರೆ ಗದರಿಸಿದ್ದಾರೆ. ಇವರ ಜತೆಗೆ ಯಾವೊಬ್ಬ ಅಧಿಕಾರಿಯೂಬಂದಿಲ್ಲ, ತಹಶೀಲ್ದಾರ್ ಅವರೂ ಬಂದಿಲ್ಲ.
ಸರ್ವೇ ಮಾಡುವವರು ಅದು ನ್ಯಾಯಾಲಯದಲ್ಲಿ ಆದೇಶವಾಗಿದೆ ಅದನ್ನು ಅಳೆಯಲು ಬರುವುದಿಲ್ಲ, ಹಾಗೆ ಹೀಗೆ ಎನ್ನುವ ಉಪದೇಶ ಮಾಡುವಾಗ ಸ್ಥಳಕ್ಕೆ ಬಿಎಸ್‌ಪಿ ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ ಬಂದಿದ್ದು, “ಸ್ವಲ್ಪವಾದರು ಮಾನವೀಯತೆ ಇರಲಿ ಬಂದಿರುವ ಕೆಲಸ ಮಾಡಬೇಕು. ನೀವೇ ನಿರ್ಧಾರ ಮಾಡುವುದಲ್ಲ. ನ್ಯಾಯಾಲಯ ಆದೇಶ ಕೊಟ್ಟಿದೆ. ಭೂಮಿ ಸರ್ವೇ ಮಾಡಬೇಡ ಒತ್ತುವರಿ ಬಿಡಿಸಬೇಡ ಅಂತ ಹೇಳಿಲ್ಲ. ಮೊದಲು ಸರ್ವೇ ಮಾಡಿ” ಎಂದು ಹೇಳಿದಾಗ ಇಡೀ ಭೂಮಿ ಅಳತೆ ಮಾಡದೆ ಕೇವಲ ಹಂದಿ ಜೋಗಿ ಕುಟುಂಬ ವಾಸವಿದ್ದ ಜಾಗ ಮಾತ್ರ ಸುಮ್ಮನೆ ಓಡಾಡಿ ಯಾವುದೇ ಚೈನ್ ಹಿಡಿಯದೇ ಅಳತೆ ಮಾಡದೆ, ಸ್ಥಳದಲ್ಲಿ ನಿಲ್ಲಲು ಸಮಾಧಾನವಿರದಂತೆ
ತೆರಳಿದ್ದಾರೆ.

ಕೃಷ್ಣಮೂರ್ತಿಯವರು ಕುಟುಂಬಕ್ಕೆ ಸಾಂತ್ವನ ಹೇಳಿ ನಿಮ್ಮ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದು, ಅಧಿಕಾರಿಗಳ ಜತೆಗೆ ಮಾತನಾಡುವ ಭರವಸೆ ನೀಡಿ ಅಲ್ಲಿಂದ ತೆರಳಿದ್ದಾರೆ.
ವಾಸ್ತವವಾಗಿ ನೋಡಬೇಕಾದ ಅಂಶವೆಂದರೆ ಸದರಿ ಜಾಗದಲ್ಲಿ ವಾಸವಿರುವ ಹಂದಿಜೋಗಿ ಕುಟುಂಬದ ವೆಂಕಟಯ್ಯ ಅವರಿಂದ ಭೂ ಮಾಲಿಕನ ತಂದೆ ಪುಟ್ಟ ನಂಜಪ್ಪ ಹಣ ಪಡೆದಿದ್ದಾರೆ. ಅವರಿಬ್ಬರಲ್ಲಿ ಅನ್ಯೋನ್ಯತೆ ಇದ್ದು, ಯಾವುದೇ ಲಿಖಿತ ದಾಖಲೆಗಳನ್ನು ಮಾಡಿಕೊಂಡಿಲ್ಲ. ಅವರಿಬ್ಬರೂ ಜೀವಂತವಿರುವತನಕ ಸಮಸ್ಯೆಯೂ ತಲೆದೋರಿಲ್ಲ.
ಈ ಸುದ್ದಿ ಓದಿದ್ದೀರಾ? ಮೈಸೂರು | ಹಂದಿಜೋಗಿ ಕುಟುಂಬ ಬೀದಿಪಾಲು: ಹೊರಳವಾಡಿ ಹೊಸೂರಿನಲ್ಲಿ ಅಮಾನವೀಯ ಘಟನೆ
ಭೂ ಮಾಲೀಕ ಶಿವಾನಂದ ತಂದೆ ನಿಧನರಾದ ಬಳಿಕ 2017ರ ಅಕ್ಟೋಬರ್ 11ರಲ್ಲಿ ಭೂದಾಖಲೆ ಇಟ್ಟು ನಂಜನಗೂಡು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲು ಮಾಡಿ, ಸದರಿ ಜಾಗ ಬಿಟ್ಟುಕೊಡುವ ಭರವಸೆಯನ್ನು ಪ್ರತಿವಾದಿಗಳ ಮನಸಲ್ಲಿ ಮೂಡಿಸಿ, ನಂಬಿಸಿ ಘನ ನ್ಯಾಯಾಲಯಕ್ಕೆ ಹಾಜರಾಗದಂತೆ ಮಾಡಿ ಕೇವಲ ಎರಡು ವರ್ಷ ಒಂದು ತಿಂಗಳ ಅಂತರದಲ್ಲಿ ಅಂದರೆ 2020 ಡಿಸೆಂಬರ್ 07ರಲ್ಲಿ ಆದೇಶ ತಂದಿದ್ದಾರೆ.
ಬರೋಬ್ಬರಿ ನಾಲ್ಕು ವರ್ಷಗಳ ಕಾಲ ಯಾವುದೇ ತಂಟೆ, ತಕರಾರಿಗೆ ಬಾರದೆ, ಇಷ್ಟು ದಿನಗಳು ಹಂದಿಜೋಗಿ ಕುಟುಂಬ ಇಲ್ಲಿಯೇ ವಾಸವಿದ್ದರು. ಘನ ನ್ಯಾಯಾಲಯದ ಆದೇಶ ಪರಿಪಾಲಿಸದೆ, ಹಕ್ಕು ಚಲಾಯಿಸದೆ ಸುಮ್ಮನಿದ್ದು, ಈಗ ಪೊಲೀಸರ ನೆರವು ಪಡೆದು ನಾಲ್ಕು ವರ್ಷಗಳ ನಂತರ ಕುಟುಂಬಗಳನ್ನು ಹೊರ ದಬ್ಬಿದ್ದಾರೆ. ಆದರೆ ಇದು ಹೊರ ಜಗತ್ತಿಗೆ ಗೊತ್ತಿಲ್ಲ. ನ್ಯಾಯಾಲಯ ನಾಲ್ಕು ವರ್ಷಗಳ ಹಿಂದೆ ಆದೇಶ ಮಾಡಿದ್ದು, ಪೊಲೀಸರು ನಾಲ್ಕು ವರ್ಷದ ಹಳೆಯ ಆದೇಶ ಪ್ರತಿ ಇಟ್ಟುಕೊಂಡು ಇಲ್ಲಿ ಬಡ ಕುಟುಂಬಗಳನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆಸಿರುವುದು ಸ್ಪಷ್ಟವಾಗಿದೆ. ಹಂದಿಜೋಗಿ ಕುಟುಂಬಕ್ಕೆ ಜಿಲ್ಲಾಡಳಿತ,
ತಾಲೂಕು ಆಡಳಿತ ನ್ಯಾಯ ಒದಗಿಸಬೇಕಿದೆ.
