ಬಹುಮುಖ ಪ್ರತಿಭೆಯ, ವರ್ಣರಂಜಿತ ಸಂಪಾದಕ ಪ್ರೀತೀಶ್ ನಂದಿ

Date:

Advertisements
ಖುಷ್‌ವಂತ್ ಸಿಂಗ್ ಸಂಪಾದಕ ಹುದ್ದೆಯಿಂದ ಕೆಳಗಿಳಿದ ನಂತರ 'ಇಲ್ಲಸ್ಟ್ರೇಟೆಡ್ ವೀಕ್ಲಿ'ಗೆ ಸಂಪಾದಕರಾದ ಪ್ರೀತೀಶ್ ನಂದಿ, ಬಹುಮುಖ ಪ್ರತಿಭೆಯ, ವರ್ಣರಂಜಿತ ವ್ಯಕ್ತಿ. ಭಾರತೀಯ ಪತ್ರಿಕೋದ್ಯಮವನ್ನು ಮುನ್ನೆಡಿಸಿದವರಲ್ಲಿ ಪ್ರಮುಖರು...  

ಎಂಬತ್ತರ ದಶಕದಲ್ಲಿ ‘ದಿ ಇಲ್ಲಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯಾ’ ಎಂಬ ವಿಚಿತ್ರ ಸೈಜಿನ, ವಿಶಿಷ್ಟ ಶೈಲಿಯ ಇಂಗ್ಲಿಷ್ ವಾರಪತ್ರಿಕೆ ನೋಡಿದ್ದವರು, ಓದಿದ್ದವರು ಮರೆಯಲಾರದ ಹೆಸರು- ಪ್ರೀತೀಶ್ ನಂದಿ. ಅಂತಹ ಪತ್ರಿಕೆಗೆ ಪ್ರೀತೀಶ್ ನಂದಿ 1983ರಿಂದ 1991ರವರೆಗೆ ಸಂಪಾದಕರಾಗಿದ್ದರು.

ಪ್ರೀತೀಶ್ ನಂದಿ, ಮೊದಲಿಗೆ ಜಾಹೀರಾತು ಕ್ಷೇತ್ರದಲ್ಲಿದ್ದವರು. ಆ ನಂತರ ಪತ್ರಿಕೋದ್ಯಮಕ್ಕೆ ಕಾಲಿಟ್ಟರು. ಆ ಕಾರಣದಿಂದಲೋ ಏನೋ, ವಿನ್ಯಾಸದಲ್ಲಿ ಅಪಾರವಾದ ಜ್ಞಾನವಿತ್ತು. ಆ ಜ್ಞಾನ ಪತ್ರಿಕೆಗಾಗಿ ವಿನಿಯೋಗವಾಗಿತ್ತು. ಪತ್ರಿಕೆಯ ಮುಖಪುಟ ವಿನ್ಯಾಸ ಮತ್ತು ಒಳಪುಟ ವಿನ್ಯಾಸದಲ್ಲಿ ಬಳಸುತ್ತಿದ್ದ ಕಾಗದ, ಫಾಂಟ್ ಸೈಜ್, ಕಪ್ಪು-ಬಿಳುಪಿನ ಚಿತ್ರಗಳು ಕಣ್ಣಿಗೆ ಮುದ ನೀಡುವಂತಿತ್ತು. ಹೊಸತನದಿಂದ ಕೂಡಿತ್ತು. ಆಯ್ಕೆ ಮಾಡಿಕೊಳ್ಳುತ್ತಿದ್ದ ವಸ್ತು, ವ್ಯಕ್ತಿ ಮತ್ತು ವಿಷಯಗಳು ಕೂಡ ವಿಭಿನ್ನವಾಗಿರುತ್ತಿದ್ದವು.

ಖುಷ್‌ವಂತ್ ಸಿಂಗ್ ಸಂಪಾದಕ ಹುದ್ದೆಯಿಂದ ಕೆಳಗಿಳಿದ ನಂತರ ‘ಇಲ್ಲಸ್ಟ್ರೇಟೆಡ್ ವೀಕ್ಲಿ’ಗೆ ಸಂಪಾದಕರಾದ ಪ್ರೀತೀಶ್ ನಂದಿ, ಹೊಸ ಸವಾಲಿಗೆ ಒಡ್ಡಿಕೊಂಡರು. ಹೊಸ ಆಲೋಚನೆಗಳುಳ್ಳ ವಿವಿಧ ಕ್ಷೇತ್ರಗಳ ಪ್ರತಿಭಾನ್ವಿತರನ್ನು ಕರೆತಂದರು. ಪತ್ರಿಕೆಯನ್ನು ಹೊಸತನದಿಂದ ಕಟ್ಟಿಕೊಟ್ಟರು. ಆ ಕಾಲದ ಅತ್ಯಂತ ಪ್ರಭಾವಶಾಲಿ ನಿಯತಕಾಲಿಕೆಗಳಲ್ಲಿ ಒಂದಾಗಿಸಿದರು.

Advertisements

‘ಇಲ್ಲಸ್ಟ್ರೇಟೆಡ್ ವೀಕ್ಲಿ’ಯಲ್ಲಿ ಆ ಕಾಲಕ್ಕೇ ಸುಪ್ರಸಿದ್ಧ ವ್ಯಂಗ್ಯಚಿತ್ರಕಾರರಾದ ಆರ್.ಕೆ. ಲಕ್ಷ್ಮಣ್ ಮತ್ತು ಮಾರಿಯೋ ಮಿರಾಂಡ ಚಿತ್ರ ರಚಿಸುತ್ತಿದ್ದರು. ಗೌತಮ್ ರಾಜ್ಯಾಧ್ಯಕ್ಷರಂತಹ ಹೆಸರಾಂತ ಫೋಟೋಗ್ರಾಫರ್‍‌ಗಳ ಗ್ಲ್ಯಾಮರ್ ಲೋಕದ ತಾರೆಯರ ಚಿತ್ರಗಳು ಚಿತ್ತ ಕೆಡಿಸುತ್ತಿದ್ದವು. ಖ್ಯಾತ ಪತ್ರಕರ್ತರಾದ ಖುಷವಂತ್ ಸಿಂಗ್, ಎಂ.ವಿ.ಕಾಮತ್‌ರಂತಹ ಹಿರಿಯರ ಅಂಕಣಗಳು ಪ್ರಕಟವಾಗುತ್ತಿದ್ದವು. ಅಂತಹ ಪತ್ರಿಕೆಯನ್ನು ಹಿಡಿದುಕೊಂಡು ಓಡಾಡುವುದು ಮತ್ತು ಓದುವುದು, ಆ ಕಾಲದಲ್ಲಿ ಹೆಮ್ಮೆಯ ವಿಷಯವಾಗಿತ್ತು. ಅದರಲ್ಲೂ ಪತ್ರಿಕೋದ್ಯಮದತ್ತ ಒಲವುಳ್ಳ ಎಳೆಯ ಪತ್ರಕರ್ತರ ಮಾತಿನ ಮಧ್ಯೆ ‘ವೀಕ್ಲಿ ಮತ್ತು ನಂದಿ’ ಬಂದುಹೋಗುತ್ತಿದ್ದುದು ಸಾಮಾನ್ಯವಾಗಿತ್ತು.

ಇದನ್ನು ಓದಿದ್ದೀರಾ?: ‘ಕರ್ನಾಟಕ-50’ ಸಂಚಿಕೆ | ‘ಮುಸ್ಲಿಮರೊಂದಿಗೆ ಮುಖಾಮುಖಿ’- ಮುಜಾಫರ್ ಅಸ್ಸಾದಿ ಅವರ ಕೊನೆಯ ಬರಹ

ಮಿರ ಮಿರ ಮಿಂಚುವ ಬೋಳು ತಲೆ, ಫ್ರೆಂಚ್ ಗಡ್ಡ, ಕನ್ನಡಕ, ಸದಾ ಸೂಟ್ ಧರಿಸುತ್ತಿದ್ದ ಪ್ರೀತೀಶ್ ನಂದಿ, ಮುಂಬೈನ ಎಲೀಟ್ ಸರ್ಕಲ್‌ನಲ್ಲಿ ಸುಳಿದಾಡುವ ಸ್ಟೈಲಿಶ್ ವ್ಯಕ್ತಿ ಎನಿಸಿಕೊಂಡಿದ್ದರು. ಸಿನೆಮಾ ತಾರೆಯರು, ಶ್ರೀಮಂತ ಉದ್ಯಮಿಗಳು, ಹೆಸರಾಂತ ಚಿತ್ರ ಕಲಾವಿದರು, ಗಣ್ಯರು ಸೇರುವ ಹೈಪ್ರೊಫೈಲ್ ಪಾರ್ಟಿಗಳ ಪರ್ಮನೆಂಟ್ ಆಸಾಮಿಯಾಗಿದ್ದರು. ಆ ಕಾಲದ ಚೆಲುವೆ- ರಾಖಿ ಗುಲ್ಝಾರ್ ಮತ್ತು ರೇಖಾರೊಂದಿಗೆ ಪ್ರೀತೀಶ್ ಹೆಸರು ತಳುಕು ಹಾಕಿಕೊಂಡಿದ್ದು, ಕೆಲಕಾಲ ಗಾಸಿಪ್ ಕಾಲಂಗಳಿಗೆ ಸರಕಾಗಿದ್ದೂ ಉಂಟು. ಹಲವು ಸಲ ದೊಡ್ಡ ಮೊತ್ತದ ಮಾನನಷ್ಟ ಮೊಕದ್ದಮೆಗಳಿಗೆ ಕಾರಣವಾಗಿ, ಸುದ್ದಿಯಾಗಿದ್ದೂ ಇದೆ. 

80ರ ದಶಕದ ಭಾರತೀಯ ಪತ್ರಿಕೋದ್ಯಮದಲ್ಲಿ ರಾಮನಾಥ್ ಗೋಯಂಕಾ, ಖುಷ್‌ವಂತ್ ಸಿಂಗ್, ಅರುಣ್ ಶೌರಿ, ವಿನೋದ್ ಮೆಹ್ತಾ, ಎಂ.ಜೆ. ಅಕ್ಬರ್‍‌ರಂತಹ ದಿಗ್ಗಜರ ದರ್ಬಾರಿನಲ್ಲಿ ಪ್ರೀತೀಶ್ ನಂದಿಯವರದು ಒಂದು ಪಾತ್ರವಿದೆ. ಆ ಕಾಲದಲ್ಲಿಯೇ ಪೇಜ್ ತ್ರೀ ಸಂಸ್ಕೃತಿ ಹುಟ್ಟುಹಾಕಿ, ಪತ್ರಿಕೋದ್ಯಮವನ್ನು ಜಾಹೀರಾತಿನೊಂದಿಗೆ ನಾಜೂಕಾಗಿ ಬೆರೆಸಿದ ಪ್ರೀತೀಶ್ ನಂದಿ, ಆ ಮೂಲಕ ಭಾರತೀಯ ಪತ್ರಿಕೋದ್ಯಮಕ್ಕೆ ಭಿನ್ನ ನೋಟ ಕೊಟ್ಟ ಗ್ಲಾಮರಸ್ ಎಡಿಟರ್ ಎನಿಸಿಕೊಂಡವರು.

ಪ್ರೀತೀಶ್ ನಂದಿ ನಡೆಸಿಕೊಡುತ್ತಿದ್ದ ಸಂದರ್ಶನಗಳು ಆ ಕಾಲದಲ್ಲಿ ಜನಪ್ರಿಯತೆ ಗಳಿಸಿದ್ದವು. ಭಾರೀ ವಿವಾದ ಹುಟ್ಟುಹಾಕಿದ್ದವು. ಅವರು ಸಂದರ್ಶನಕ್ಕಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದ ವ್ಯಕ್ತಿಗಳು ಕೂಡ ಭಿನ್ನ ಕ್ಷೇತ್ರಗಳ ವಿವಾದಾತ್ಮಕ ವ್ಯಕ್ತಿಗಳೇ ಆಗಿರುತ್ತಿದ್ದರು. ಉದಾಹರಣೆಗೆ ಓಶೋ ರಜನೀಶ್, ಅಮಿತಾಭ್ ಬಚ್ಚನ್, ರೇಖಾ, ಪರ್ವಿನ್ ಬಾಬಿ, ಮಾಜಿ ಪ್ರಧಾನಿ ಚಂದ್ರಶೇಖರ್, ರಾಜೀವ್ ಗಾಂಧಿ, ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ, ದೇವೇಗೌಡ, ಒಡಿಶಾದ ಪಟ್ನಾಯಕ್… ಒಬ್ಬರಿಗಿಂತ ಒಬ್ಬರು, ಒಂದಕ್ಕಿಂತ ಒಂದು ಸಂದರ್ಶನ ಕಾದು ಓದುವಂತಿರುತ್ತಿದ್ದವು. ಅಂತಹ ಒಂದು ಸಂದರ್ಶನದಲ್ಲಿ ಜನಪ್ರಿಯ ನಟ, ಗಾಯಕ ಕಿಶೋರ್ ಕುಮಾರ್, ‘ನಾನು ನಾಲ್ಕು ಜನರನ್ನು ಮದುವೆಯಾಗಿದ್ದೆ’ ಎಂದಿದ್ದು ಭಾರೀ ವಿವಾದ ಹುಟ್ಟುಹಾಕಿತ್ತು.

ಕವಿ, ಚಿತ್ರ ಕಲಾವಿದ, ಪತ್ರಕರ್ತ, ಸಂಪಾದಕ, ನಿರೂಪಕ, ಪ್ರಾಣಿ ಹಕ್ಕುಗಳ ಕಾರ್ಯಕರ್ತ, ಸಂಸತ್ ಸದಸ್ಯ ಮತ್ತು ಕಳೆದ ದಶಕದ ಕೆಲವು ಪ್ರಸಿದ್ಧ ಚಲನಚಿತ್ರಗಳ ನಿರ್ಮಾಪಕ- ಜೀವನದುದ್ದಕ್ಕೂ ಯಾವ ಕ್ಷೇತ್ರಕ್ಕೆ ಕಾಲಿಟ್ಟರೂ, ತನ್ನತನ ಛಾಪಿಸದೆ ಬಿಡದ ಛಲಗಾರ- ಪ್ರೀತೀಶ್ ನಂದಿ.

WhatsApp Image 2025 01 10 at 2.53.53 PM 1

ಮೊನ್ನೆ, ತಮ್ಮ 73ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾದ ಪ್ರೀತೀಶ್ ನಂದಿ ಕುರಿತು ನಟ ಅನುಪಮ್ ಖೇರ್, ‘ನನಗೆ ಮುಂಬೈ ಬದುಕನ್ನು ಪರಿಚಯಿಸಿದ, ಕಷ್ಟಕಾಲದಲ್ಲಿ ಕೈ ಹಿಡಿದು ನಡೆಸಿದ ಮಾರ್ಗದರ್ಶಿ, ಅಪರೂಪದ ಧೈರ್ಯಸ್ಥ, ಬದುಕಿದ್ದಕ್ಕಿಂತ ಹಿರಿದಾದ ವ್ಯಕ್ತಿತ್ವ’ ಎಂದು ಬಣ್ಣಿಸಿದ್ದಾರೆ. ಖೇರ್ ಒಬ್ಬರೇ ಅಲ್ಲ, ನೀನಾ ಗುಪ್ತ, ಶಬನಾ ಆಜ್ಮಿ ಕೂಡ ದನಿಗೂಡಿಸಿದ್ದಾರೆ. 

‘ನಾನು ಧಾರ್ಮಿಕ ವ್ಯಕ್ತಿಯಲ್ಲ, ನನಗೆ ಯಾವುದೇ ನಂಬಿಕೆಯಿಲ್ಲ. ನಾನು ನಾಸ್ತಿಕ. ಅದುವೇ ನನಗೆ ಜಗತ್ತನ್ನು ಇತರ ಜನರಿಗಿಂತ ವಿಭಿನ್ನವಾಗಿ, ವಸ್ತುನಿಷ್ಠವಾಗಿ ನೋಡುವ ಸ್ವಾತಂತ್ರ್ಯವನ್ನು ನೀಡುತ್ತದೆ’ ಎಂದಿದ್ದ ಪ್ರೀತೀಶ್ ನಂದಿ, ಮೂಲತಃ ಕವಿ. ಇಲ್ಲಿಯವರೆಗೆ 40ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿರುವ ನಂದಿ, ಅನುವಾದದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದರು. ಭಾರತೀಯ ಇತರ ಭಾಷೆಗಳಾದ ಉರ್ದು, ಬಂಗಾಳಿ, ಪಂಜಾಬಿ ಭಾಷೆಯ ಉತ್ತಮ ಕವನಗಳನ್ನು ಇಂಗ್ಲಿಷ್‌ಗೆ ಅನುವಾದ ಮಾಡುತ್ತಿದ್ದರು. ಆ ಪದ್ಯಗಳನ್ನು ಪ್ರಕಟಿಸಲು ಪ್ರತ್ಯೇಕ ಸಾಹಿತ್ಯ ಪತ್ರಿಕೆಯನ್ನೂ ಹೊರತರುತ್ತಿದ್ದರು.

ನನಗೆ ಈಗಲೂ ನೆನಪಿದೆ, ಪಿ. ಲಂಕೇಶರ ಕೆಲವು ಪದ್ಯಗಳು ‘ಇಲ್ಲಸ್ಟೇಟೆಡ್ ವೀಕ್ಲಿ’ಯಲ್ಲಿ ಪ್ರಕಟವಾಗಿದ್ದು, ಆ ಸಂಚಿಕೆಯನ್ನು ಲಂಕೇಶರು ಜೋಪಾನವಾಗಿ ಇಟ್ಟುಕೊಂಡಿದ್ದರು. ಅದಕ್ಕೆ ಕಾರಣ ಪ್ರೀತೀಶ್ ನಂದಿಯವರ ಕವಿ ಮನಸ್ಸು. ಆ ಮೂಲಕ ಲಂಕೇಶರನ್ನು ಭಾರತೀಯ ಸಾಹಿತ್ಯವಲಯಕ್ಕೆ ಪರಿಚಯಿಸಿದ್ದರು. ಲಂಕೇಶರು ಕೂಡ ಆಗಾಗ ‘ಇಲ್ಲಸ್ಟೇಟೆಡ್ ವೀಕ್ಲಿ’ಗೆ ಬರೆಯುತ್ತಿದ್ದರು. ಅಂತಹ ಒಂದು ಲೇಖನವೆಂದರೆ, ‘ಲಂಕೇಶ್ ಪತ್ರಿಕೆ’ ಹೊರಗೆಳೆದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ ಬಾಟ್ಲಿಂಗ್ ಹಗರಣ ಕುರಿತದ್ದು. ಹೆಗಡೆ ಎಂದರೆ ರಾಷ್ಟ್ರಮಟ್ಟದಲ್ಲಿ ಸ್ಥಾಪಿತವಾಗಿದ್ದ ಡಿಫರೆಂಟ್, ಡಿಗ್ನಿಫೈಡ್, ಇಂಟಲೆಕ್ಚುಯಲ್ ಪೊಲಿಟೀಶಿಯನ್ ಎಂಬ ಇಮೇಜನ್ನು ಆ ಲೇಖನ ಹೊಡೆದುಹಾಕಿತ್ತು.

ಪ್ರೀತೀಶ್ ನಂದಿ ಅವರ ಸಹೋದರ ಆಶೀಶ್ ನಂದಿ ಪ್ರಖರ ಬುದ್ಧಿಜೀವಿ. ಅವರಿಗೆ ಕರ್ನಾಟಕದೊಂದಿಗೆ ನಿಕಟ ಸಂಪರ್ಕವಿತ್ತು. ಯು.ಆರ್. ಅನಂತಮೂರ್ತಿ ಮತ್ತು ಡಿ.ಆರ್. ನಾಗರಾಜ್‌ರ ಸ್ನೇಹಿತರಾಗಿದ್ದ ಆಶೀಶ್ ನಂದಿ, ಪ್ರತಿವರ್ಷ ಕೆ.ವಿ. ಸುಬ್ಬಣ್ಣನವರ ಹೆಗ್ಗೋಡಿನ ನೀನಾಸಂ ಶಿಬಿರಕ್ಕೆ ಬರುತ್ತಿದ್ದರು, ಉಪನ್ಯಾಸ ನೀಡುತ್ತಿದ್ದರು. ಕೆಲವು ಪುಸ್ತಕಗಳನ್ನೂ ಸಂಪಾದಿಸಿದ್ದಾರೆ.   

ಪ್ರೀತೀಶ್ ನಂದಿ ‘ಇಲ್ಲಸ್ಟ್ರೇಟೆಡ್ ವೀಕ್ಲಿ’ಯಲ್ಲಿ ಕೆಲಸ ಮಾಡುತ್ತಿದ್ದಾಗಲೇ, 90ರ ದಶಕದಲ್ಲಿಯೇ ‘ಪೀಪಲ್ಸ್ ಫಾರ್ ಅನಿಮಲ್ಸ್’ ಎಂಬ ಎನ್‌ಜಿಓ ಆರಂಭಿಸಿದ್ದರು. 1991ರಲ್ಲಿ ಮುದ್ರಣ ಮಾಧ್ಯಮದಿಂದ ದೃಶ್ಯ ಮಾಧ್ಯಮದತ್ತ ಹೊರಳಿದರು. ದೂರದರ್ಶನದಲ್ಲಿ ‘ದಿ ಪ್ರೀತೀಶ್ ನಂದಿ ಶೋ’ ಎಂಬ ಹೊಸ ಟಾಕ್ ಶೋ ಆರಂಭಿಸಿದರು. ಆ ಶೋನಲ್ಲಿ ಭಾರತದ ಬಹುಮುಖ್ಯ ವ್ಯಕ್ತಿಗಳನ್ನು ಸಂದರ್ಶಿಸಿ, ನಾಡಿಗೆ ಪರಿಚಯಿಸಿದರು. ಅಲ್ಲಿಂದ ಮುಂದಕ್ಕೆ 2000ದ ಸುಮಾರಿಗೆ ಚಿತ್ರರಂಗದತ್ತ ಚಿತ್ತ ಹರಿಸಿ, ಚಿತ್ರ ನಿರ್ಮಾಣ ಸಂಸ್ಥೆ ಹುಟ್ಟುಹಾಕಿದರು. 20ಕ್ಕೂ ಹೆಚ್ಚು ಸೂಕ್ಷ್ಮ ಮತ್ತು ಸಂವೇದನಾಶೀಲ ಚಿತ್ರಗಳನ್ನು ನಿರ್ಮಿಸಿದರು.

80 ಮತ್ತು 90ರ ದಶಕದಲ್ಲಿ ಪತ್ರಕರ್ತರಾಗಿ ಹೆಸರು ಮಾಡಿದ್ದ ಪ್ರೀತೀಶ್ ನಂದಿ, ಅದರ ಬಲದಿಂದ ಆ ಕಾಲದ ಮುಂಬೈನ ಪ್ರಭಾವಿ ವ್ಯಕ್ತಿಗಳಲ್ಲೊಬ್ಬರಾದ ಭಾಳ್ ಠಾಕ್ರೆಯವರ ಸ್ನೇಹ ಸಂಪಾದಿಸಿದ್ದರು. ಅವರ ಮನವೊಲಿಸಿ, 1998ರಲ್ಲಿ ಶಿವಸೇನಾದಿಂದ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದರು. ಆ ಸಂದರ್ಭದಲ್ಲಿ ಪ್ರೀತೀಶ್ ನಂದಿಯವರ ಅಭಿಮಾನಿಗಳು, ‘ಕವಿ ಕಳೆದುಹೋದ, ಪತ್ರಕರ್ತ ಮಾರಾಟವಾದ’ ಎಂದು ಟೀಕಿಸಿದ್ದೂ ಇದೆ.

ಪ್ರೀತೀಶ್ ನಂದಿ 16ನೇ ವಯಸ್ಸಿನಲ್ಲಿರುವಾಗಲೇ ‘ಗಾಡ್ಸ್ ಅಂಡ್ ಓಲಿವ್ಸ್’ ಎಂಬ ಕವನ ಸಂಕಲನ ಪ್ರಕಟಿಸಿದ್ದರು. 17ರ ಹರೆಯದಲ್ಲಿಯೇ ಮದುವೆಯಾಗಿ ವಿಚ್ಛೇದನ ಕೂಡ ಪಡೆದಿದ್ದರು. 26ನೇ ವಯಸ್ಸಿಗೇ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾಗಿದ್ದರು. 32ನೇ ವಯಸ್ಸಿಗೇ ಪ್ರತಿಷ್ಠಿತ ಟೈಮ್ಸ್ ಗ್ರೂಪ್ ನಿರ್ದೇಶಕರಾಗಿ, ಇಲ್ಲಸ್ಟ್ರೇಟೆಡ್ ವೀಕ್ಲಿಯ ಸಂಪಾದಕರಾಗಿದ್ದರು. 1996ರಲ್ಲಿ ಮೊಟ್ಟ ಮೊದಲ ಬಾರಿಗೆ ಮುಂಬೈನ ಸ್ಟಾರ್ ಹೋಟೆಲ್‌ನಲ್ಲಿ ಸೈಬರ್ ಕೆಫೆ ತೆರೆದಿದ್ದರು. ಜಾಹೀರಾತುಗಳು, ಟಿವಿ ಶೋಗಳು, ಧಾರಾವಾಹಿಗಳು, ಸಾಕ್ಷ್ಯಚಿತ್ರಗಳು, ಚಲನಚಿತ್ರಗಳನ್ನು ನಿರ್ಮಿಸಿದ್ದರು. ಸಾಲದೆಂದು ಸಂಸದರಾಗಿ ರಾಜ್ಯಸಭೆಯಲ್ಲೂ ಧ್ವನಿ ಎತ್ತಿದ್ದರು.

ಹೀಗೆ ಯಾವುದೇ ಕ್ಷೇತವಾದರೂ ಸರಿ, ತಮ್ಮದೇ ಛಾಪು ಒತ್ತುತ್ತಿದ್ದ ಬಹುಮುಖ ಪ್ರತಿಭೆಯ, ವರ್ಣರಂಜಿತ ವ್ಯಕ್ತಿತ್ವದ ಪ್ರೀತೀಶ್ ನಂದಿ, ಭಾರತೀಯ ಪತ್ರಿಕೋದ್ಯಮವನ್ನು ಮುನ್ನೆಡಿಸಿದವರಲ್ಲಿ ಪ್ರಮುಖರು. ‘ಇಲ್ಲಸ್ಟ್ರೇಟೆಡ್ ವೀಕ್ಲಿ’ ಎಂದಾಕ್ಷಣ ನೆನಪಾಗುವ ಸ್ಟೈಲಿಶ್ ಸಂಪಾದಕರು.

Basavaraju Megalkeri
+ posts

ಲೇಖಕ, ಪತ್ರಕರ್ತ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೀರತ್ ಗಡಿಯಾರ ಗೋಪುರ ಹತ್ತಿ ವಿಡಿಯೋ ಮಾಡುವ ಸಾಹಸ ಮಾಡಿದ ‘ಸ್ಪೈಡರ್‌ಮ್ಯಾನ್’ ಬಂಧನ!

'ಸ್ಪೈಡರ್‌ಮ್ಯಾನ್' ವೇಷಭೂಷಣವನ್ನು ಧರಿಸಿ ಮೀರತ್‌ನ ಐತಿಹಾಸಿಕ ಗಡಿಯಾರ ಗೋಪುರವನ್ನು ಹತ್ತಿ ಅಪಾಯಕಾರಿ...

ಸರ್ಕಾರದಿಂದ ನಷ್ಟ ಸರಿದೂಗಿಸಲಾಗದು, ರೈತರೇ ಕಷ್ಟಕ್ಕೆ ಒಗ್ಗಿಕೊಳ್ಳಬೇಕು: ಬಿಜೆಪಿ ನಾಯಕನ ಹೇಳಿಕೆಗೆ ತೀವ್ರ ಆಕ್ರೋಶ

ಇತ್ತೀಚಿಗೆ ಆದ ಅತಿವೃಷ್ಟಿಯಿಂದ ರೈತರಿಗೆ ಆಗಿರುವ ನಷ್ಟಕ್ಕೆ ಸರ್ಕಾರ ಪರಿಹಾರ ನೀಡಲು...

ಏನಿದು ಅನಿಲ್ ಅಂಬಾನಿ ಬ್ಯಾಂಕ್ ವಂಚನೆ? ಕ್ರಮ ಕೈಗೊಳ್ಳುತ್ತಾರ ಮೋದಿ?

ತನ್ನನ್ನು ತಾನು ದಿವಾಳಿ ಎಂದು ಘೋಷಿಸಿಕೊಂಡಿರುವ ಭಾರತದ ಭಾರೀ ಶ್ರೀಮಂತ ಉದ್ಯಮಿ...

ತಾಳಿಕೋಟೆ | ಬೀಡಾಡಿ ದನಗಳಿಗೆ ರಸ್ತೆಗಳೇ ಆಶ್ರಯ ತಾಣಗಳು; ಪರ್ಯಾಯ ವ್ಯವಸ್ಥೆಗೆ ಸಾರ್ವಜನಿಕರ ಒತ್ತಾಯ

ವಿಜಯಪುರದ ತಾಳಿಕೋಟೆ ನಗರದ ರಸ್ತೆಗಳೇ ಬೀಡಾಡಿ ದನಗಳ ಆಶ್ರಯ ತಾಣಗಳಾಗಿವೆ. ರಾಜ್ಯ...

Download Eedina App Android / iOS

X