ಹಿಂದಿ ಭಾರತದ ರಾಷ್ಟ್ರ ಭಾಷೆಯಲ್ಲ, ಅದು ಅಧಿಕೃತ ಭಾಷೆ ಎಂದು ಹಿರಿಯ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ಅವರು ಹೇಳಿದ್ದು, ಹಿಂದಿ ಭಾಷಾ ಹೇರಿಕೆ ಟೀಕೆ ಮಧ್ಯೆ ಅಶ್ವಿನ್ ಅವರ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಚೆನ್ನೈನ ಖಾಸಗಿ ಕಾಲೇಜೊಂದರ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್, ಸಭಿಕರಲ್ಲಿ ನಿಮ್ಮಲ್ಲಿ ಎಷ್ಟು ಮಂದಿ ಇಂಗ್ಲಿಷ್ ಮಾತನಾಡುತ್ತಾರೆ ಮತ್ತು ಎಷ್ಟು ಮಂದಿ ತಮಿಳು ಮಾತನಾಡುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ಇದಲ್ಲದೆ ನಿಮ್ಮಲ್ಲಿ ಎಷ್ಟು ಮಂದಿ ಹಿಂದಿ ಮಾತನಾಡುತ್ತಾರೆ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಪ್ರತಿಕ್ರಿಯೆ ಕಡಿಮೆಯಾಗಿತ್ತು. ಅಶ್ವಿನ್ ಅವರು ಯಾವ ಭಾಷೆಯಲ್ಲಿ ತಾನು ಮಾತನಾಡಬೇಕು ಎಂಬ ಬಗ್ಗೆ ನಿರ್ಧರಿಸಲು ಈ ಪ್ರಶ್ನೆಯನ್ನು ಕೇಳಿದ್ದರು. ಆ ಬಳಿಕ ಅವರು ತಮಿಳಿನಲ್ಲಿ ತನ್ನ ಮಾತನ್ನು ಮುಂದುವರಿಸಿದ್ದರು. ʼಹಿಂದಿ ರಾಷ್ಟ್ರೀಯ ಭಾಷೆಯಲ್ಲ, ಅದು ಅಧಿಕೃತ ಭಾಷೆ’ ಇದನ್ನು ನಾನು ಹೇಳಬೇಕೆಂದು ಭಾವಿಸಿದೆ ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? Ind vs Aus test | ಮತ್ತಷ್ಟು ತಾರಕಕ್ಕೇರಿದ ಬೂಮ್ರಾ Vs ಕೊನ್‌ಸ್ಟಸ್ ಫೈಟ್!
ಇತ್ತೀಚೆಗೆ ಹಿಂದಿ ಹೇರಿಕೆಗೆ ಕೇಂದ್ರ ಸರಕಾರ ಪ್ರಯತ್ನಿಸುತ್ತಿದೆ ಎಂದು ತಮಿಳುನಾಡಿನಲ್ಲಿ ವಿರೋಧ ವ್ಯಕ್ತವಾಗಿತ್ತು. 1930 ಮತ್ತು 1940ರ ದಶಕಗಳಲ್ಲಿ, ಶಾಲೆಗಳು ಮತ್ತು ಸರ್ಕಾರಗಳಲ್ಲಿ ಹಿಂದಿಯನ್ನು ಕಡ್ಡಾಯ ಭಾಷೆಯಾಗಿ ಹೇರುವುದಕ್ಕೆ ತಮಿಳುನಾಡಿನಲ್ಲಿ ಗಮನಾರ್ಹ ವಿರೋಧವಿತ್ತು.
ತಮಿಳನ್ನು ಉತ್ತೇಜಿಸಲು ಮತ್ತು ತಮಿಳು ಭಾಷಿಕರ ಹಕ್ಕುಗಳನ್ನು ಪ್ರತಿಪಾದಿಸಲು ಪ್ರಯತ್ನಿಸಿದ ದ್ರಾವಿಡ ಚಳವಳಿಯು ಈ ವಿರೋಧದಲ್ಲಿ ಪ್ರಮುಖ ಪಾತ್ರವನ್ನು ವಹಿಸಿತ್ತು. ತಮಿಳು ಭಾಷಿಕರ ಸಾಂಸ್ಕೃತಿಕ ಅಸ್ಮಿತೆ ಮತ್ತು ಭಾಷಿಕ ಪರಂಪರೆಯನ್ನು ಹಾಳುಮಾಡಲು ಕೇಂದ್ರ ಸರ್ಕಾರದ ಪ್ರಯತ್ನವಾಗಿ ಹಿಂದಿಯನ್ನು ಹೇರಲಾಗುತ್ತಿದೆ ಎಂದು ಆರೋಪಿಸಲಾಗಿತ್ತು.
ಅಶ್ವಿನ್ ಇತ್ತೀಚಿಗಷ್ಟೆ ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಮಧ್ಯೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. 106 ಟೆಸ್ಟ್ ಪಂದ್ಯಗಳನ್ನು ಆಡಿರುವ ಅಶ್ವಿನ್ 537 ವಿಕೆಟ್‌ಗಳನ್ನು ಪಡೆದಿದ್ದಾರೆ. 116 ಏಕದಿನ ಪಂದ್ಯಗಳಲ್ಲಿ 156 ವಿಕೆಟ್‌ಗಳು, 65 ಟಿ20 ಪಂದ್ಯಗಳಿಂದ 72 ಆಟಗಾರರನ್ನು ಪೆವಿಲಿಯನ್‌ಗೆ ಕಳುಹಿಸಿದ್ದಾರೆ.