- ಗಾಂಧಿ ಭಾರತ ಕಾರ್ಯಕ್ರಮ | 100 ಕಾಂಗ್ರೆಸ್ ಕಚೇರಿ ನಿರ್ಮಾಣ: ಡಿ ಕೆ ಶಿವಕುಮಾರ್
- ಜ.13ರಂದು ಸಿಎಲ್‌ಪಿ ಸಭೆ ಸಿಎಂ ಜೊತೆ ಚರ್ಚೆ ಮಾಡಿ ಕರೆದಿದ್ದೇವೆ: ಸ್ಪಷ್ಟನೆ
ಶತ್ರುಗಳ ನಾಶಕ್ಕೆ ಪೂಜೆ ಮಾಡಿಸುವುದು ಕುಮಾರಸ್ವಾಮಿ ಅವರ ಅನುಭವ. ಅವರು ಕದ್ದು ಮುಚ್ಚಿ ಹೋಮ ಮಾಡುತ್ತಾರೆ. ನಾನು ಬಹಿರಂಗವಾಗಿ ಮಾಡುತ್ತೇನೆ. ದಿನ ಬೆಳಗಾದರೆ ನಾನು ದೇವರಿಗೆ ಪೂಜೆ ಮಾಡುತ್ತೇನೆ ಡಿಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದರು.
ತಮ್ಮ ಸರ್ಕಾರಿ ಗೃಹ ಕಚೇರಿ ಕೃಷ್ಣಾದಲ್ಲಿ ಶನಿವಾರ ರಾತ್ರಿ ನಡೆದ ಕಾಂಗ್ರೆಸ್ ಹಿರಿಯ ನಾಯಕರ ಸಭೆ ಬಳಿಕ ಮಾಧ್ಯಮ ಪ್ರತಿನಿಧಿಗಳು ‘ಶತ್ರುಗಳ ನಾಶಕ್ಕೆ ಪೂಜೆ ಮಾಡಿಸಿದ್ದಾರೆ’ ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ ಮೇಲಿನ ರೀತಿ ಉತ್ತರಿಸಿದರು.
“ಪ್ರತಿ ಇಲಾಖೆಯಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ ಎಂಬ ಕುಮಾರಸ್ವಾಮಿ ಆರೋಪ ನಮಗೆ ಗೊತ್ತಿಲ್ಲ. ಅವರು ತಮ್ಮ ಅನುಭವದ ಮೇಲೆ ಮಾತನಾಡುತ್ತಿರಬೇಕು” ಎಂದರು.
100 ಕಾಂಗ್ರೆಸ್ ಕಚೇರಿ ನಿರ್ಮಾಣ
ಗಾಂಧಿ ಭಾರತ ಕಾರ್ಯಕ್ರಮ ಅಂಗವಾಗಿ ಜ.21ರಂದು ನಡೆಯಲಿರುವ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶ ಹಾಗೂ 100 ಕಾಂಗ್ರೆಸ್ ಕಚೇರಿ ನಿರ್ಮಾಣದ ಬಗ್ಗೆ ಹಿರಿಯ ನಾಯಕರ ಸಭೆಯಲ್ಲಿ ಚರ್ಚಿಸಲಾಯಿತು. ಈಗಾಗಲೇ 72 ಕಡೆ ಕಾಂಗ್ರೆಸ್ ಕಚೇರಿ ನಿರ್ಮಾಣಕ್ಕೆ ಅರ್ಜಿ ಬಂದಿವೆ. ಉಳಿದ ಕಡೆಗಳು ಸೇರಿ 100 ಕಚೇರಿ ನಿರ್ಮಾಣ ಮಾಡಲಾಗುವುದು. ಸಚಿವರು ಪಕ್ಷದ ಹಿರಿಯ ನಾಯಕರಿಗೆ ಇದರ ಜವಾಬ್ದಾರಿ ನೀಡಲಾಗಿದೆ. ಶಾಸಕರಿಗೂ ಬೇರೆ ಬೇರೆ ಜವಾಬ್ದಾರಿ ನೀಡಲಾಗಿದೆ” ಎಂದು ಹೇಳಿದರು.
ಸರ್ಕಾರದ ಬಗ್ಗೆ ಭವಿಷ್ಯ ನುಡಿಯವುದು ಬೇಡ
ಇದೇ ಅವಧಿಯಲ್ಲಿ ನೀವು ಸಿಎಂ ಆಗುತ್ತೀರಿ ಎಂಬ ವಿನಯ್ ಗುರೂಜಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ನಮ್ಮ ಸರ್ಕಾರ ಸುಭದ್ರವಾಗಿದ್ದು, ಯಾವುದೇ ಸ್ವಾಮೀಜಿಗಳು ನಮ್ಮ ಸರ್ಕಾರದ ಬಗ್ಗೆ ಭವಿಷ್ಯ ನುಡಿಯುವುದು ಬೇಡ ಎಂದು ಮನವಿ ಮಾಡುತ್ತೇನೆ. ಸಿದ್ದರಾಮಯ್ಯ ಅವರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ” ಎಂದು ತಿಳಿಸಿದರು.
ಪವರ್ ಶೇರಿಂಗ್ ಬಗ್ಗೆ ಚರ್ಚೆ ಆಗುತ್ತಿರುವಾಗ ಈ ಹೇಳಿಕೆ ಬಂದಿದೆ ಎಂದು ಕೇಳಿದಾಗ, “ಯಾವ ಪವರ್ ಇಲ್ಲ, ಶೇರು ಇಲ್ಲ. ಐದು ವರ್ಷ ಕಾಂಗ್ರೆಸ್ ಸರ್ಕಾರ ಇರುತ್ತದೆ” ಎಂದರು.
ಸಂಪುಟ ಸಭೆಯಲ್ಲಿ ಜಾತಿ ಗಣತಿ ಚರ್ಚೆ
ಜಾತಿ ಗಣತಿ ವಿರೋಧಿಸಿ ಒಕ್ಕಲಿಗ ಹಾಗೂ ಲಿಂಗಾಯತ ನಾಯಕರ ಸಭೆ ನಡೆಯುವುದೇ ಎಂದು ಕೇಳಿದಾಗ, “ನನಗೆ ಗೊತ್ತಿರುವ ಮಾಹಿತಿ ಪ್ರಕಾರ ಈ ಬಗ್ಗೆ ಯಾವುದೇ ಸಭೆ ಇಲ್ಲ. ಅದರ ಅಗತ್ಯವಿಲ್ಲ. ಮುಖ್ಯಮಂತ್ರಿಗಳು ಈ ವಿಚಾರವನ್ನು ಸಚಿವ ಸಂಪುಟದಲ್ಲಿ ಪ್ರಸ್ತಾಪಿಸುವುದಾಗಿ ಹೇಳಿದ್ದು, ಅಲ್ಲಿ ನಾವು ಚರ್ಚೆ ಮಾಡುತ್ತೇವೆ” ಎಂದು ತಿಳಿಸಿದರು.
ನಾನು, ಸಿಎಂ ಚರ್ಚಿಸಿ ಸಿಎಲ್‌ಪಿ ಸಭೆ
ಜ.13ರಂದು ಕರೆಯಲಾಗುವ ಸಿಎಲ್‌ಪಿ ಸಭೆ ಬಗ್ಗೆ ಕೇಳಿದಾಗ, “ನಾನು ಹಾಗೂ ಸಿಎಂ ಚರ್ಚೆ ಮಾಡಿಯೇ ಕರೆದಿದ್ದೇವೆ. ಅಂದು ಇಡೀ ದಿನ ಪಕ್ಷಕ್ಕೆ ಮುಡಿಪಾಗಿಡಬೇಕು ಎಂದು ಹೇಳಿ, ಅಂದಿನ ಕಾರ್ಯಕ್ರಮ ರದ್ದು ಮಾಡಿದ್ದೇವೆ. ಬೆಳಗ್ಗೆ 11 ಗಂಟೆಗೆಭಾರತ ಜೋಡೋ ಭವನದಲ್ಲಿ ಬ್ಲಾಕ್, ಜಿಲ್ಲಾ ಅಧ್ಯಕ್ಷರ ಸಭೆ ಕರೆಯಲಾಗಿದೆ. ಸಂಜೆ 4 ಗಂಟೆಗೆ ಪದಾಧಿಕಾರಿಗಳ ಸಭೆ ಕರೆದಿದ್ದೇವೆ. ಸಂಜೆ 6 ಗಂಟೆಗೆ ಶಾಸಕರು, ಸಚಿವರ ಸಭೆ ಮಾಡಿ ಜವಾಬ್ದಾರಿ ನೀಡಲಾಗುವುದು. 14ರಂದು ನಾನು ಹಾಗೂ ಸಿಎಂ ದೆಹಲಿಗೆ ತೆರಳಲಿದ್ದು, 15ರಂದು ದೆಹಲಿಯಲ್ಲಿ ಕಾಂಗ್ರೆಸ್ ನೂತನ ಕಚೇರಿ ಉದ್ಘಾಟನೆ ಮಾಡಲಾಗುವುದು” ಎಂದರು.
ದೊಡ್ಡವರ ಬಗ್ಗೆ ಮಾತನಾಡುವುದು ಬೇಡ
ನಮ್ಮ ಸಭೆ ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂಬ ರಾಜಣ್ಣ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ನನಗೆ ಈ ಬಗ್ಗೆ ಗೊತ್ತಿಲ್ಲ. ನಾವು ಯಾರನ್ನೂ ತಡೆದಿಲ್ಲ. ಅದರ ಅವಶ್ಯಕತೆ ನಮಗಿಲ್ಲ. ದೊಡ್ಡವರ ಬಗ್ಗೆ ಮಾತನಾಡುವುದು ಬೇಡ” ಎಂದು ತಿಳಿಸಿದರು.