ಭಾರತೀಯ ಮೂಲ ಕಲೆಗಳು ಅಳಿವಿನಂಚಿಗೆ ಸರಿಯುತ್ತಿರುವ ಇಂದಿನ ಡಿಜಿಟಲ್ ಯುಗದಲ್ಲಿ ಜನಪದ ಕಲೆಗಳ ಪೋಷಣೆ ನಿಜಕ್ಕೂ ಶ್ಲಾಘನೀಯ ಎಂದು ಹೈಕೋರ್ಟ್ ವಕೀಲ ಪಾವಗಡ ಶ್ರೀರಾಮ್ ಹೇಳಿದರು.
ಚಿಕ್ಕಬಳ್ಳಾಪುರ ನಗರದ ಅಂಬೇಡ್ಕರ್ ಭವನದಲ್ಲಿ ಯಶ್ವಂತ್ ಅಕಾಡೆಮಿ ಆಫ್ ಕಲ್ಚರಲ್ ಫಿಲಂ ಸೈನ್ಸ್ ಅಂಡ್ ರೀಸರ್ಚ್ ಇನ್ಸ್ಟಿಟ್ಯೂಟ್ ಗುರುವಾರ ಆಯೋಜಿಸಿದ್ದ ಸಾಂಸ್ಕೃತಿಕ ಸುಗ್ಗಿ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಿಎಂ ರವಿಕುಮಾರ್ ಮಾತನಾಡಿ, ಇಲಾಖೆ ವತಿಯಿಂದ ಜನಪದ ಕಲೆ ಮತ್ತು ಜನಪದ ಕಲಾವಿದರಿಗೆ ಸಿಗುವಂತ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಕಲಾವಿದರು ಮತ್ತು ಕಲೆಯನ್ನು ಪೋಷಿಸುವ ಸಂಸ್ಥೆಗಳು ಇಲಾಖೆಯ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಜಿಪಂ ಮಾಜಿ ಸದಸ್ಯ ಕೆ.ಸಿ ರಾಜಿಕಾಂತ್ ಮಾತನಾಡಿ, ಚಿಕ್ಕಬಳ್ಳಾಪುರ ಕಲೆಗಳ ತವರೂರು ಮತ್ತು ಕಲಾವಿದರ ಬೀಡಾಗಿದೆ. ಇಂತಹ ಕಲಾವಿದರಿಗೆ ಸೂಕ್ತ ವೇದಿಕೆಗಳನ್ನ ಕೊಡುವ ರೀತಿಯಲ್ಲಿ ಈ ಸಂಸ್ಥೆಯು ಕೆಲಸ ಮಾಡುತ್ತಿದ್ದು, ಕಲಾವಿದರು ಈ ಸಂಸ್ಥೆಗೆ ಆಭಾರಿಯಾಗಿರಬೇಕು ಎಂದು ಹೇಳಿದರು.
ಇಂದಿನ ಕಾಲದಲ್ಲಿ ಜನಪದಕ್ಕೆ ಯಾವುದೇ ಮಾನ್ಯತೆ ಮತ್ತು ಪ್ರೋತ್ಸಾಹ ಸಿಗದೇ ಅನೇಕ ಬಡ ಜನಪದ ಕಲಾವಿದರು ಕಲೆಯನ್ನು ಮರೆತು ತಮ್ಮ ಜೀವನೋಪಾಯಕ್ಕಾಗಿ ಇತರೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಇದು ಕಲೆಗೆ ಆಗುತ್ತಿರುವ ಅವಮಾನ. ಇಂತಹ ಸ್ಥಿತಿಯಲ್ಲಿ ಯಶ್ವಂತ್ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಜನಪದ ನೃತ್ಯ, ಕಂಸಾಳೆ, ಯಕ್ಷಗಾನ, ಜನಪದ ಗಾಯನ, ಪಟಕುಣಿತ ಮುಂತಾದ ನೃತ್ಯ ಪ್ರಕಾರಗಳು ಪ್ರದರ್ಶನಗೊಂಡವು.
ಕಾರ್ಯಕ್ರಮದಲ್ಲಿ ಎಸ್.ಎಸ್.ಡಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಜಿ.ಸಿ ವೆಂಕಟರಮಣಪ್ಪ, ಮಂಚನಬಲೆ ಗ್ರಾಮ ಪಂಚಾಯತಿ ಅಧ್ಯಕ್ಷ ಮಧು ವಿ, ಸಮಾಜ ಸೇವಕರಾದ ಮಂಡಿಕಲ್ ಕುಪೇಂದ್ರ, ಎಂಬೋಸ್ದ್ ಸಿಇಓ ರೂಹಿದ್, ಮಾನವ ಹಕ್ಕುಗಳ ಜಿಲ್ಲಾಧ್ಯಕ್ಷರಾದ ಟಿ ಆರ್ ಕೃಷ್ಣಪ್ಪ, ಕನ್ನಡ ಪರ ಹೋರಾಟಗಾರ ಮತ್ತು ರಾಜ್ಯ ಮುಖಂಡರಾದ ತಿಪ್ಪೇನಹಳ್ಳಿ ಪಿ ನಾರಾಯಣಸ್ವಾಮಿ, ನಮ್ಮ ಕರ್ನಾಟಕ ಅಹಿಂದ ಜನಪದ ವೇದಿಕೆಯ ಅಧ್ಯಕ್ಷರಾದ ಕೃಷ್ಣಚಾರಿ, ಹಿರಿಯ ಸಾಹಿತಿಗಳು ಮತ್ತು ಸಮಾಜದ ಹೋರಾಟಗಾರರಾದ ಪ್ರೆಸ್ ಸುಬ್ರಾಯಪ್ಪ, ಕರ್ನಾಟಕ ರಕ್ಷಣಾ ಸಮಿತಿಯ ಪ್ರಧಾನ ಕಾರ್ಯದರ್ಶಿಗಳು ನಾರಾಯಣಸ್ವಾಮಿ ಎನ್.ಎಂ, ಯುವ ಮುಖಂಡರು ಡಾಕ್ಟರ್ ಬಿ ವಿ ಆನಂದ್ (ಅನು),ವಕೀಲರಾಗಿರುವ ಎಸ್ ಡಿ ನರಸಿಂಹಮೂರ್ತಿ ಮತ್ತು ಹಲವಾರು ಕಲಾವಿದರು ಹಾಗೂ ಕನ್ನಡ ಅಭಿಮಾನಿಗಳು ಹಾಜರಿದ್ದರು.