ಕವಿ, ನಾಟಕಕಾರ, ನಿರ್ದೇಶಕ ರಘುನಂದನ ಅವರು ಕನ್ನಡದ ಮಹತ್ತ್ವದ ರಂಗನಿರ್ದೇಶಕರು. ಹತ್ತಿರಹತ್ತಿರ ನಲವತ್ತೈದು ವರ್ಷಗಳ ತಮ್ಮ ಸೃಜನಶೀಲ ಜೀವನದುದ್ದಕ್ಕೂ ರಂಗಭೂಮಿ ಮತ್ತು ಕಾವ್ಯಗಳು ಪರಸ್ಪರ ಅಭಿನ್ನವಾದವು ಎಂದೇ ಭಾವಿಸುತ್ತ ಸೃಷ್ಟಿಕಾರ್ಯದಲ್ಲಿ ತೊಡಗಿಕೊಂಡು ಬಂದವರು. ‘ನೀರೊಳಗೆ ವೀಣೆ ಮಿಡಿಯಿತು‘ ಎಂಬಂತೆ ಒಳ್ಳೆಯ ಕಾವ್ಯದ ಆಳದಲ್ಲೊಂದು ನಾಟಕೀಯತೆ ಇರುತ್ತದೆ ಮತ್ತು ಇರಬೇಕು, ನಾಟಕ, ರಂಗಪ್ರಯೋಗಗಳು ಕಾವ್ಯವೇ ಆಗಬೇಕು, ಇರಬೇಕು ಎಂಬ ವ್ರತ ಪಾಲಿಸಿಕೊಂಡು ಬಂದವರು. ಕಾವ್ಯವಲ್ಲದ್ದು ನಾಟಕವಲ್ಲ ಎಂದು ತಿಳಿದವರು. ಮೇಲಾಗಿ, ಕನ್ನಡದ ದೊಡ್ಡ ಕವಿಗಳ ಕಾವ್ಯವನ್ನೂ, ತಮ್ಮದೇ ಕವನಗಳನ್ನೂ ಮನಮುಟ್ಟುವಂತೆ ಓದಿ, ಕೇಳಿಸುವವರು.
ಕೆಲವು ತಿಂಗಳ ಹಿಂದೆ ಬಿಡುಗಡೆಯಾದ ಅವರ ನಾನು ಸತ್ತಮೇಲೆ ಕವನ ಸಂಕಲನ ಹಾಗೂ ಕಾವ್ಯಚಿಂತನೆ ಮತ್ತು ಲೋಕಮೀಮಾಂಸೆ ಇರುವ ಹೊತ್ತಿಗೆ ತುಯ್ತವೆಲ್ಲ ನವ್ಯದತ್ತ…, ಇವೆರಡೂ ಕನ್ನಡದಲ್ಲಿ ಈಚೆಗೆ ಹೊರಬಂದ ಮಹತ್ತ್ವದ ಪುಸ್ತಕಗಳು. ಅವುಗಳನ್ನು ಕುರಿತು ಈವತ್ತು ಸಂಜೆ ಸುಚಿತ್ರ ಸಿನೆಮಾ ಮತ್ತು ಸಾಂಸ್ಕೃತಿಕ ಅಕಾಡೆಮಿಯಲ್ಲಿ ಚರ್ಚೆ ಮತ್ತು ಸಂವಾದವಿದೆ. ಚರ್ಚೆ ಮತ್ತು ಸಂವಾದ ನಡೆಸುವವರು ಖ್ಯಾತ ವಿದ್ವಾಂಸ ಮತ್ತು ವಿಮರ್ಶಕ ಪ್ರೊ. ಬಸವರಾಜ ಕಲ್ಗುಡಿ ಹಾಗೂ ಸಾಹಿತ್ಯದ ಗಂಭೀರ ವಿಮರ್ಶಕರಾದ ಸುಭಾಷ್ ರಾಜಮಾನೆ ಅವರು. ಜೊತೆಗೆ ರಘುನಂದನ ಅವರು ತಮ್ಮ ಹಲವು ಕವನಗಳನ್ನು ಓದುತ್ತಾರೆ ಅನ್ನುವುದೊಂದು ವಿಶೇಷ.
ಪುಸ್ತಕಗಳನ್ನು ಕುರಿತು
ನಾನು ಸತ್ತಮೇಲೆ: ಕವನ, ಆಟದ ಹಾಡು, ಕಬ್ಬ ಕವನ ಸಂಕಲನದಲ್ಲಿ ಸಾವಿನ ಬೆಡಗನ್ನು ಧ್ಯಾನಿಸುವ ಆರು ಅಷ್ಟಷಟ್ಪದಿಗಳೂ ಸೇರಿದಂತೆ 28 ಸ್ವರಚಿತ ಕವಿತೆಗಳಿವೆ; ಕಾವ್ಯದ ಹುಟ್ಟು ಮತ್ತು ಗುರಿಗಳನ್ನು ಕುರಿತ ಧ್ಯಾನದೊಂದು ಟಿಪ್ಪಣಿಯಿದೆ; ಬೇರೆ ನುಡಿಗಳಿಂದ ಕನ್ನಡಕ್ಕೆ ತಂದ ಕವಿತೆಗಳಿವೆ; ಹಾಗೂ ಸ್ವತಂತ್ರವಾಗಿ ಬರೆದ ನಾಟಕಗಳಲ್ಲಿನವು, ಬೇರೆ ನುಡಿಗಳಲ್ಲಿರುವ ನಾಟಕಗಳನ್ನು ಕನ್ನಡಿಸುವಾಗ ಬರೆದವು, ಮತ್ತು ನಾಲ್ಕು ರಂಗಪ್ರಯೋಗಗಳಿಗೆ ಬರೆದ ಪ್ರಸ್ತಾವನೆಯ ದೃಶ್ಯಗಳು – ಹೀಗೆ ಒಟ್ಟು ಹನ್ನೆರಡು ನಾಟಕಗಳ ಹಾಡು, ಕಬ್ಬಗಳಿವೆ. ಕನ್ನಡದ ಹಲವು ಬಗೆಗಳನ್ನು, ಅದರ ಹಲವು ಸ್ತರದ ನಾದ, ನುಡಿಗಟ್ಟು, ಕಾಕುಗಳನ್ನು ಹಲವು ಬಗೆಯ ಛಂದಸ್ಸು, ಧಾಟಿ, ಲಯಗಳಲ್ಲಿ ಬಿಗಿ-ಹುಲುಸಾಗಿ ಹಿಡಿದಿರುವ ಪದ್ಯ, ಹಾಡುಗಳ ಹೊತ್ತಿಗೆ ಇದು. (ಪ್ರ: ಚಾರುಮತಿ ಪ್ರಕಾಶನ, ಚಾಮರಾಜಪೇಟೆ, ಬೆಂಗಳೂರು)
ಇದನ್ನು ಓದಿದ್ದೀರಾ?: ಹೊಸ ಓದು | ಕವಿ, ನಾಟಕಕಾರ ರಘುನಂದನ ಅವರ ಎರಡು ಪುಸ್ತಕಗಳ ಕಿರು ಪರಿಚಯ
ತುಯ್ತವೆಲ್ಲ ನವ್ಯದತ್ತ: ಅಂದತ್ತರ ಉಯ್ಯಾಲೆ… ಮತ್ತು ಅದರ ಸುತ್ತ ವರಕವಿ ಬೇಂದ್ರೆಯವರ ಉಯ್ಯಾಲೆ ಕವನ ಸಂಕಲನದ ಅಷ್ಟಷಟ್ಪದಿಗಳನ್ನು ಕುರಿತ ಧ್ಯಾನವು ಮಡುಗಟ್ಟಿರುವ ಹೊತ್ತಿಗೆ. ಆ ಮಡುವಿನ ನಡುವಿಂದ ಹೊರಟು, ಕಾವ್ಯಮೀಮಾಂಸೆ, ಲೋಕತತ್ತ್ವ ಜಿಜ್ಞಾಸೆ, ರಾಜಕೀಯ-ಸಾಮಾಜಿಕ ಚಿಂತನೆ, ವಿಜ್ಞಾನಶೋಧದ ಕೆಲವು ಆಯಾಮ… ಇಂಥವುಗಳನ್ನು ಕುರಿತ ಧ್ಯಾನವೂ ಆಗಿ ಉಂಗುರ-ಉಂಗುರ ಹಬ್ಬಿಕೊಳ್ಳುತ್ತ, ಹಾಗೆ ಹಬ್ಬಿಕೊಳ್ಳುವಾಗಲೂ ಆ ನಡುವಿನ ಸೆಳೆತದಲ್ಲಿಯೇ ಇರುತ್ತ, ಕಡೆಗೆ ಅಲ್ಲಿಗೇ, ಮಡುವಿನ ನಡುವಿಗೇ,ಮರಳುತ್ತದೆ. (ಪ್ರ: ಥಿಯೇಟರ್ ತತ್ಕಾಲ್ ಬುಕ್ಸ್, ಬೆಂಗಳೂರು)
