ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳೊಂದಿಗೆ ದುರ್ವರ್ತನೆ ತೋರಿದ ಹಿನ್ನೆಲೆಯಲ್ಲಿ ಗಂಗಾವತಿ ಪಟ್ಟಣದ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿಜಯ ಪ್ರಸಾದ್ ಅವರನ್ನು ಅಮಾನತಿನಲ್ಲಿಡಲು ಆದೇಶ ಮಾಡಿದ್ದಾರೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಲಿಂಗರಾಜ್ ಟಿಯವರ ಅಧ್ಯಕ್ಷತೆಯಲ್ಲಿ ಜನವರಿ 08ರಂದು ಜರುಗಿದ ಜಿಲ್ಲಾ ಮಟ್ಟದ ರಾಷ್ಟ್ರೀಯ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಗಳ ಸಭೆಯ ಎಲ್ಲ ಅಧಿಕಾರಿಗಳ ಎದುರಿಗೆ ವಾಗ್ವಾದಕ್ಕೆ ಇಳಿದಿದ್ದು, ರಾಷ್ಟ್ರೀಯ ಕಾರ್ಯಕ್ರಮಗಳ ಪ್ರಗತಿ ಸಭೆಯಲ್ಲಿ ಕಾರ್ಯಕ್ರಮಗಳ ಅಂಕಿ-ಅಂಶಗಳನ್ನು ತಾಳೆ ಹೊಂದಿಸಿ ಜಿಲ್ಲಾ ಮಟ್ಟಕ್ಕೆ ಸರಿಯಾಗಿ ನೀಡದೆ ಪ್ರತಿಯೊಂದು ಮಾಹಿತಿಗಾಗಿ ತಾಲೂಕು ಆರೋಗ್ಯಾಧಿಕಾರಿಗಳನ್ನೇ ಕೇಳಬೇಕೆಂದು ಬೇಜಾಬ್ದಾರಿತನದಿಂದ ನಡೆದುಕೊಂಡಿದ್ದರು.
ಈ ವಿಷಯದ ಬಗ್ಗೆ ಜಿಲ್ಲಾ ಆರೋಗ್ಯ ಮೇಲಧಿಕಾರಿಗಳಿಗೆ ಏರು ಧ್ವನಿಯಿಂದ ಮತ್ತು ಏಕವಚನದಲ್ಲಿ ಎಲ್ಲರ ಸಮ್ಮುಖದಲ್ಲಿ ಬೆದರಿಕೆ ಹಾಕಿ ಸಭೆಗೆ ಅಗೌರವನ್ನುಂಟು ಮಾಡಿದ್ದು, ಕರ್ತವ್ಯದಲ್ಲಿ ದುರ್ನಡತೆ ಮತ್ತು ಕರ್ತವ್ಯಲೋಪ ಎಸಗಿದ್ದಾರೆ. ಈ ಹಿನ್ನೆಲೆಯಲ್ಲಿ ಮೇಲಧಿಕಾರಿಗಳಿಗೆ ಆಗೌರವ ತೋರಿರುವುದರಿಂದ ವಿಜಯ ಪ್ರಸಾದ್ ಅವರ ಮೇಲೆ ಶಿಸ್ತು ಕ್ರಮ ಜರುಗಿಸಲು ಆದೇಶಿಸಲಾಗಿದೆ ಎಂದು ತಿಳದುಬಂದಿದೆ.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ರಾಷ್ಟ್ರೀಯ ಯುವ ದಿನಾಚರಣೆ; ಜಾಗೃತಿ ಜಾಥಾ
“ಇಲಾಖಾ ವಿಚಾರಣೆ ಕಾಯ್ದಿರಿಸಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತಿನಲ್ಲಿಡಲಾಗಿದೆ. ಮೇಲಧಿಕಾರಿಗಳ ಅನುಮತಿ ಇಲ್ಲದೆ ಕೇಂದ್ರಸ್ಥಾನ ಬಿಡತಕ್ಕದ್ದಲ್ಲ. ಕರ್ನಾಟಕ ನಾಗರಿಕ ಸೇವಾ ನಿಯಮ 98ರನ್ವಯ ಜೀವನಾಂಶ ಭತ್ಯೆಗೆ ಅರ್ಹರಿರುತ್ತಾರೆ” ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಆದೇಶ ಹೊರಡಿಸಿರುತ್ತಾರೆ.