ಈ ದಿನ ಸಂಪಾದಕೀಯ | ದೆಹಲಿ ಚುನಾವಣೆಯಲ್ಲಿ ಕಾಂಗ್ರೆಸ್‌ ಬಗ್ಗೆ ಕೇಜ್ರಿವಾಲ್‌ಗೆ ಇರಲಿ ಎಚ್ಚರ

Date:

Advertisements

ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭೆಗೆ ಫೆಬ್ರವರಿ 5ರಂದು ಚುನಾವಣೆ ನಡೆಯಲಿದೆ. ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ‘ಕಾಂಗ್ರೆಸ್‌ ನಾಮ್ ಕಾ ವಾಸ್ತೆಗಷ್ಟೇ ಸ್ಪರ್ಧೆಯಲ್ಲಿದೆ. ಈ ಚುನಾವಣೆಯ ಬಿಜೆಪಿ ಮತ್ತು ಎಎಪಿ ನಡುವಿನ ಹೋರಾಟ’ ಎಂದು ಎಎಪಿ ಬಣ್ಣಿಸುತ್ತಿದೆ. ಈ ಬಣ್ಣನೆಯಿಂದಲೇ ಎಎಪಿ ಎಡವಿಬಿಡುವ ಅಪಾಯವೂ ಇದೆ.

ಅರವಿಂದ್ ಕೇಜ್ರಿವಾಲ್ ಅವರು ಮತ್ತೊಮ್ಮೆ ದೆಹಲಿಯಲ್ಲಿ ಮುಖ್ಯಮಂತ್ರಿ ಆಗಬೇಕೆಂದು ಬಯಸಿದ್ದಾರೆ. ತಮ್ಮ ಜನ ಕಲ್ಯಾಣ ಯೋಜನೆಗಳ ಕುರಿತು ಪ್ರಚಾರ ಮಾಡುತ್ತಿದ್ದಾರೆ. ಎಎಪಿಯ 10 ವರ್ಷಗಳ ಆಡಳಿತವನ್ನು ಕೊನೆಗೊಳಿಸಿ, 27 ವರ್ಷಗಳ ಬಳಿಕ ಅಧಿಕಾರಕ್ಕೇರಲು ಕಾಂಗ್ರೆಸ್‌ ಹವಣಿಸುತ್ತಿದೆ. ತನ್ನ ನೆಲೆಯನ್ನು ಮರಳಿ ಪಡೆಯುವ ಯತ್ನದಲ್ಲಿದೆ. ಕಾಂಗ್ರೆಸ್‌ನ ಈ ಪ್ರಯತ್ನವು ಬಿಜೆಪಿಗೆ ಲಾಭವೂ, ಎಎಪಿಗೆ ಮುಳುವೂ ಆಗಬಹುದು ಎಂಬುದು ಮೇಲ್ನೋಟಕ್ಕೇ ಕಾಣಿಸುತ್ತಿದೆ.

ಎಎಪಿ ಮತ್ತು ಕಾಂಗ್ರೆಸ್‌ 2024ರ ಲೋಕಸಭಾ ಚುನಾವಣೆಯಲ್ಲಿ ಒಟ್ಟಿಗೆ ಸ್ಪರ್ಧಿಸಿದ್ದವು. ದೆಹಲಿಯಲ್ಲಿಯೂ ಸೀಟು ಹಂಚಿಕೆ ಮಾಡಿಕೊಂಡಿದ್ದವು. ಆದರೆ, ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿ ಮುರಿದುಕೊಂಡಿವೆ. ಪ್ರತ್ಯೇಕವಾಗಿ ಸ್ಪರ್ಧೆಗಿಳಿದಿವೆ. ಮಿತ್ರರು ಎದುರಾಳಿಗಳಾಗಿದ್ದಾರೆ. ಮಾತ್ರವಲ್ಲ, ಬಹಿರಂಗವಾಗಿ ಕೊಳಕು ಜಿದ್ದಾಜಿದ್ದಿಗೆ ಬಿದ್ದಿವೆ. ಆರೋಪ-ಪ್ರತ್ಯಾರೋಪಗಳೊಂದಿಗೆ ಜಗಳಕ್ಕಿಳಿದಿವೆ. ಎಎಪಿ-ಕಾಂಗ್ರೆಸ್‌ ನಡುವಿನ ಜಗಳವು ಬಿಜೆಪಿಗೆ ಸಂತೋಷ ಉಂಟುಮಾಡಿದೆ.

Advertisements

ದೆಹಲಿಯ ಕಾಂಗ್ರೆಸ್ ನಾಯಕರು ಎಎಪಿ ಮತ್ತು ಅದರ ನಾಯಕ ಕೇಜ್ರಿವಾಲ್ ವಿರುದ್ಧ ಭಾರೀ ದಾಳಿ ನಡೆಸುತ್ತಿದ್ದಾರೆ. ಕೇಜ್ರಿವಾಲ್ ಬಿಜೆಪಿ ಜೊತೆಗೆ ರಹಸ್ಯ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಇತ್ತ, ಕಾಂಗ್ರೆಸ್‌ನ ಅಭ್ಯರ್ಥಿಗಳ ಪಟ್ಟಿ ಬಿಜೆಪಿ ಕಚೇರಿಯಲ್ಲಿ ಅಂತಿಮಗೊಂಡಿದೆ ಎಂದು ಎಎಪಿ ಆರೋಪಿಸುತ್ತಿದೆ. ಕಾಂಗ್ರೆಸ್ಸನ್ನು ಕೇಜ್ರಿವಾಲ್ ನಗಣ್ಯವೆಂದು ಹೇಳುತ್ತಿದ್ದಾರೆ. ದೆಹಲಿ ಚುನಾವಣೆಯು ಬಿಜೆಪಿ-ಎಎಪಿ ನಡುವಿನ ಸ್ಪರ್ಧೆಯೆಂದು ಪ್ರತಿಪಾದಿಸುತ್ತಿದ್ದಾರೆ.

ದೆಹಲಿಯ ಕಳೆದ ಎರಡು ವಿಧಾನಸಭಾ ಚುನಾವಣೆಯಲ್ಲಿ ತನ್ನ ಖಾತೆಯನ್ನೂ ತೆರೆಯದ ಮತ್ತು ಮತಪಾಲನ್ನು 5%ಗಿಂತ ಕಡಿಮೆ ಮಾಡಿಕೊಂಡಿರುವ ಕಾಂಗ್ರೆಸ್‌ ನಗಣ್ಯವಾಗಿಯೇ ಕಾಣುತ್ತಿದೆ. ಕಳೆದ ಮೂರು ಚುನಾವಣೆಗಳ ದತ್ತಾಂಶಗಳು ಕಾಂಗ್ರೆಸ್‌ನ ಅವನತಿಯೊಂದಿಗೆ ಎಎಪಿ ಬೆಳೆದಿದೆ ಎಂಬುದನ್ನು ತೋರಿಸುತ್ತಿದೆ. 2013ರವರೆಗೆ ದೆಹಲಿಯಲ್ಲಿ ಕಾಂಗ್ರೆಸ್‌ ನಿರಂತರವಾಗಿ ಮೂರು ಬಾರಿ ಸರ್ಕಾರ ರಚನೆ ಮಾಡಿತ್ತು. 2008ರ ಚುನಾವಣೆಯಲ್ಲಿ 43 ಸ್ಥಾನಗಳೊಂದಿಗೆ 40.31% ಮತಗಳನ್ನು ಪಡೆದಿದ್ದ ಕಾಂಗ್ರೆಸ್‌, 2013ರ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಂಡು 8 ಸ್ಥಾನಗಳೊಂದಿಗೆ 24.55% ಮತ ಗಳಿಕೆಗೆ ಕುಸಿದಿತ್ತು. ಅದೇ ಸಮಯದಲ್ಲಿ ಬಿಜೆಪಿ ಮತಗಳೂ 3% ಕುಸಿದವು. ಈ ಎಲ್ಲ ಮತಗಳನ್ನು ಎಎಪಿ ಪಡೆದುಕೊಳ್ಳುವ ಮೂಲಕ 28 ಸ್ಥಾನಗಳೊಂದಿಗೆ 29.49% ಮತಗಳನ್ನು ಪಡೆದು ರಾಜಕೀಯ ರಂಗದಲ್ಲಿ ಪ್ರಬಲವಾಗಿ ಹೊರಹೊಮ್ಮಿತು.

2015ರಲ್ಲಿ, ಕಾಂಗ್ರೆಸ್ ಮತ್ತೆ 15% ಮತಗಳನ್ನು ಕಳೆದುಕೊಂಡು, 9% ಮತಗಳೊಂದಿಗೆ ಶೂನ್ಯ ಸಾಧನೆ ಮಾಡಿದರೆ, ಬಿಜೆಪಿ 1% ಮತ ಕಳೆದುಕೊಂಡು 3 ಕ್ಷೇತ್ರಗಳಲ್ಲಿ ಮಾತ್ರವೇ ಗೆದ್ದಿತ್ತು. ಮತ್ತೆ, ಕಾಂಗ್ರೆಸ್‌ ಆ 15% ಮತಗಳನ್ನು ಎಎಪಿ ಕಬಳಿಸಿತು. 2020ರಲ್ಲಿ, ಕಾಂಗ್ರೆಸ್‌ ಮತ್ತೊಮ್ಮೆ ಅರ್ಧದಷ್ಟು ಮತಗಳನ್ನು ಕಳೆದುಕೊಂಡು 4.26% ಮತಗಳೊಂದಿಗೆ ಮತ್ತೆ ಶೂನ್ಯದಲ್ಲೇ ಉಳಿಯಿತು. ಬಿಜೆಪಿ 6% ಮತಗಳನ್ನು ಹೆಚ್ಚಿಸಿಕೊಂಡು 8 ಸ್ಥಾನಗಳನ್ನು ಗಳಿಸಿತು. ಆ ಎರಡೂ ಚುನಾವಣೆಗಳಲ್ಲಿ ಒಟ್ಟು 70 ಸ್ಥಾನಗಳ ಪೈಕಿ ಕ್ರಮವಾಗಿ 67 ಮತ್ತು 62 ಸ್ಥಾನಗಳನ್ನು ಗಳಿಸಿದ್ದ ಎಎಪಿ, ಮತದಾರರನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಂಡಿತ್ತು.

ಈಗ, ರಾಜಕೀಯ ವಿದ್ಯಮಾನ ಬದಲಾಗಿದೆ. ಕಾಂಗ್ರೆಸ್‌ ಪುಟಿದೇಳಲು ಯತ್ನಿಸುತ್ತಿದೆ. ಇತ್ತೀಚೆಗಷ್ಟೇ ನಡೆದ ಹರಿಯಾಣ, ಮಹಾರಾಷ್ಟ್ರ ಚುನಾವಣೆಯನ್ನು ಎದುರಿಸಿ ಆಘಾತಕಾರಿ ಸೋಲಿನಿಂದ ಬಸವಳಿದಿರುವ ಕಾಂಗ್ರೆಸ್‌, ಇಂಡಿಯಾ ಬಣದಲ್ಲೇ ಸವಾಲನ್ನು ಎದುರಿಸುತ್ತಿದೆ. ಇಂಡಿಯಾ ಮೈತ್ರಿಕೂಟದ ನಾಯಕತ್ವವನ್ನು ಕಾಂಗ್ರೆಸ್‌ ತೊರೆಯಬೇಕು. ಶಕ್ತರಿಗೆ ನಾಯಕತ್ವ ಬಿಟ್ಟುಕೊಡಬೇಕೆಂದು ಮಿತ್ರಪಕ್ಷಗಳು ಗೊಣಗುತ್ತಿವೆ. ಇಂತಹ ಸಮಯದಲ್ಲಿ, ಕಾಂಗ್ರೆಸ್‌ಗೆ ದೆಹಲಿಯಲ್ಲಿ ತನ್ನ ಅಸ್ತಿತ್ವವನ್ನು ಸಾಬೀತುಪಡಿಸಲು ಅನಿವಾರ್ಯತೆ ಇದೆ. ಅದಕ್ಕಾಗಿ, ಎಲ್ಲ ರೀತಿಯ ಪ್ರಯತ್ನಗಳನ್ನೂ ನಡೆಸುತ್ತಿದೆ.

ಈ ವರದಿ ಓದಿದ್ದೀರಾ?: ಕಾನೂನು ದುರುಪಯೋಗ ಕುರಿತ ಸುಪ್ರೀಂ ಕೋರ್ಟ್‌ ಹೇಳಿಕೆ ಅಪಾಯಕಾರಿ

ತನ್ನ ಗ್ಯಾರಂಟಿಗಳಿಂದ ಗಮನ ಸೆಳೆಯುತ್ತಿರುವ ಕಾಂಗ್ರೆಸ್, ದೆಹಲಿಯಲ್ಲೂ ‘ಪ್ಯಾರಿ ದೀದಿ’ ಮತ್ತು ‘ಜೀವನ್ ರಕ್ಷಾ’ದಂತಹ ಜನಪರ ಗ್ಯಾರಂಟಿಗಳನ್ನು ಘೋಷಿಸಿದೆ. ಕೇಜ್ರಿವಾಲ್ ವಿರುದ್ಧ ದೆಹಲಿಯಲ್ಲಿ ಮೂರು ಬಾರಿ ಮುಖ್ಯಮಂತ್ರಿಯಾಗಿದ್ದ ಶೀಲಾ ದೀಕ್ಷಿತ್ ಅವರ ಪುತ್ರ ಸಂದೀಪ್ ದೀಕ್ಷಿತ್ ಅವರನ್ನು ಕಣಕ್ಕಿಳಿಸಿದೆ. ಭಾರೀ ಚುನಾವಣಾ ಪ್ರಚಾರಗಳನ್ನು ನಡೆಸುತ್ತಿದೆ. ರಾಹುಲ್‌ ಗಾಂಧಿ ಕೂಡ ಮುಂದಿನ ವಾರದಿಂದ ದೆಹಲಿ ಚುನಾವಣಾ ಪ್ರಚಾರದಲ್ಲಿ ನಿರತರಾಗಲಿದ್ದಾರೆ.

ಪ್ರಸ್ತುತ, ಎಎಪಿಯ ಪರಿಸ್ಥಿತಿಯು ಬದಲಾಗಿದೆ. ಭ್ರಷ್ಟಾಚಾರದ ಆರೋಪದಲ್ಲಿ ಕೇಜ್ರಿವಾಲ್ ಸೇರಿದಂತೆ ಎಎಪಿಯ ಪ್ರಮುಖ ನಾಯಕರು ಜೈಲಿಗೆ ಹೋಗಿಬಂದಿದ್ದಾರೆ. ಆಡಳಿತ ವಿರೋಧಿ ಅಲೆಯನ್ನು ಬಿಜೆಪಿ ಸೃಷ್ಟಿಸಲು ಯತ್ನಿಸುತ್ತಿದೆ. ಇಂತಹ ಸಮಯದಲ್ಲಿ ಕಾಂಗ್ರೆಸ್‌ನ ಸುಧಾರಿತ ಪ್ರದರ್ಶನದ ಬಗ್ಗೆ ಎಎಪಿ ಎಚ್ಚರಿಕೆಯಿಂದಿರಬೇಕಿದೆ.

ಏಕೆಂದರೆ, ಕಾಂಗ್ರೆಸ್‌ ತನ್ನ ಮತಗಳನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಾದರೆ, ಆ ಮತಗಳು ಕೊಳೆಗೇರಿ ನಿವಾಸಿಗಳು, ಮಹಿಳೆಯರು, ಬಡವರು, ಮುಸ್ಲಿಮರು ಹಾಗೂ ಅನಧಿಕೃತ ವಸಾಹತುಗಳಲ್ಲಿ ವಾಸಿಸುತ್ತಿರುವವರ ಮತಗಳೇ ಆಗಿರುತ್ತವೆ. ಸದ್ಯ, ಈ ಮತಗಳು ಕಳೆದ 10 ವರ್ಷಗಳಲ್ಲಿ ಎಎಪಿ ಮತ-ಬ್ಯಾಂಕ್‌ ಆಗಿದೆ. ಈ ಮತ-ಬ್ಯಾಂಕ್‌ಅನ್ನು ಕಾಂಗ್ರೆಸ್‌ ಹೊಡೆದುರುಳಿಸಬಹುದು. ಆ ಮತಗಳು ಕಾಂಗ್ರೆಸ್‌-ಎಎಪಿ ನಡುವೆ ಹಂಚಿಕೆಯಾಗಬಹುದು. ಜೊತೆಗೆ, ಈ ಚುನಾವಣೆಯಲ್ಲಿ ಕಾಂಗ್ರೆಸ್‌ನ ಯಶಸ್ಸು ಹಾಲಿ ವಿಧಾನಸಭೆಯಲ್ಲಿ 8 ಸ್ಥಾನಗಳನ್ನು ಹೊಂದಿರುವ ಬಿಜೆಪಿಗಿಂತ, 62 ಸ್ಥಾನಗಳನ್ನು ಹೊಂದಿರುವ ಎಎಪಿಗೆ ಹೆಚ್ಚು ಹೊಡೆತ ನೀಡಲಿದೆ. ಮತಗಳು ಮೂರು ಭಾಗಗಳಾಗಿ ಹಂಚಿಕೆಯಾಗುವುದರ ಲಾಭವನ್ನು ಬಿಜೆಪಿ ಪಡೆದುಕೊಳ್ಳಬಹುದು.

ಕಳೆದ ಎರಡು ವಿಧಾನಸಭಾ ಚುನಾವಣೆಯಲ್ಲಿ ಯಶಸ್ವಿ ಪ್ರದರ್ಶನ ನೀಡಿ, ಉತ್ತಮ ಸಾಧನೆ ಮಾಡಿರುವ ಕೇಜ್ರಿವಾಲ್ ಹ್ಯಾಟ್ರಿಕ್ ಗೆಲುವು ಸಾಧಿಸುವ ಪ್ರಯತ್ನದಲ್ಲಿದ್ದಾರೆ. ಇಂತಹ ಸಮಯದಲ್ಲಿ, ಅವರು ಮತ ವಿಭಜನೆಯ ಅಪಾಯವನ್ನು ಅರಿತುಕೊಳ್ಳಬೇಕು. ಕಾಂಗ್ರೆಸ್‌ ನೀಡಬಹುದಾದ ಸವಾಲನ್ನು ನಿಭಾಯಿಸಲು ಕಾರ್ಯತಂತ್ರಗಳನ್ನು ರೂಪಿಸಬೇಕು. ಎಚ್ಚರಿಕೆಯಿಂದ ಮುನ್ನಡೆಯಬೇಕು. ಇಲ್ಲವಾದಲ್ಲಿ, ಎಎಪಿ-ಕಾಂಗ್ರೆಸ್‌ ಜಗಳದಲ್ಲಿ ಬಿಜೆಪಿ ಲಾಭ ಪಡೆದು ಅಧಿಕಾರಕ್ಕೇರುವ ಅಪಾಯ ಹೆಚ್ಚಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಅವಾಂತರಕಾರಿ ಆಸಿಮ್ ಮುನೀರ್ ಮತ್ತು ಮೌನಿ ಮೋದಿ

ವಿಶ್ವಗುರು ಭಾರತದ ಪ್ರಧಾನಿ ಮೋದಿಯವರು ಅಮೆರಿಕ ಮತ್ತು ಚೀನಾ ದೇಶಗಳಿಗೆ ಸೆಡ್ಡು...

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

Download Eedina App Android / iOS

X