- ಕಂಪನಿಯೇ ಪ್ರತಿ ತಿಂಗಳು ಇಎಂಐ ಪಾವತಿಸಿ ಸಾಲ ತೀರಿಸಲಿದೆ ಎಂದಿದ್ದ ಆರೋಪಿ
- ‘ಗೀಕ್‌ಲರ್ನ್ ಎಜುಟೆಕ್ ಸವೀರ್‍ಸಸ್ ಪ್ರೈವೇಟ್ ಲಿಮಿಟೆಡ್’ ಎಂಬ ಕಂಪನಿಯಿಂದ ಮೋಸ
ರಾಜಧಾನಿ ಬೆಂಗಳೂರಿನಲ್ಲಿ 1,800 ಜನರಿಗೆ ‘ಡಾಟಾ ಸೈನ್ಸ್ ಆಕ್ಟಿಟೆಕ್ಟ್ ಪ್ರೋಗ್ರಾಂ’ ಕೋರ್ಸ್‌ನ ಆನ್‌ಲೈನ್ ಉಚಿತ ತರಬೇತಿ ನೀಡುವುದರ ಜತೆಗೆ ಕೆಲಸ ಕೊಡಿಸುವುದಾಗಿ ನಂಬಿಸಿ ವಿದ್ಯಾರ್ಥಿಗಳ ಮೇಲೆ ಬರೋಬ್ಬರಿ ₹19 ಕೋಟಿ ಸಾಲ ಪಡೆದು ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕಂಪನಿಯ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಕಮಲಾಪುರಂ ಶ್ರೀನಿವಾಸ್ ಕಲ್ಯಾಣ್ ಬಂಧಿತ ವ್ಯಕ್ತಿ. ಮೋಸ ಹೋದ ವಿದ್ಯಾರ್ಥಿಗಳಲ್ಲಿ ಒಬ್ಬರಾದ ಸತ್ಯೇಂದ್ರ ಮಧುಕರ್ (33) ಸೇರಿದಂತೆ ಇನ್ನೂ ಮೂವರು ಜಯನಗರ ಪೊಲೀಸ್‌ರಿಗೆ ದೂರು ನೀಡಿದ್ದರು. ಇವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದರು. ಪ್ರಕರಣದಲ್ಲಿ ಕೆಲ ಸಿಬ್ಬಂದಿ ಕೂಡ ಆರೋಪಿಗಳಾಗಿದ್ದಾರೆ.
ಪ್ರಕರಣದ ಹಿನ್ನೆಲೆ?
ತಲಘಟ್ಟಪುರ ನಿವಾಸಿ ಕಮಲಾಪುರಂ ಶ್ರೀನಿವಾಸ್ ಕಲ್ಯಾಣ್ ಎಂಬುವವರು ಮೂಲತಃ ಆಂಧ್ರಪ್ರದೇಶದವರು. ಜಯನಗರದ ವಿಜಯರಂಗಂ ಲೇಔಟ್‌ನಲ್ಲಿ ಇಂಡಿಕ್ಯೂಬ್ ಸೌತ್ ಸಮಿತ್ ಕಟ್ಟಡದಲ್ಲಿ ‘ಗೀಕ್‌ಲರ್ನ್ ಎಜುಟೆಕ್ ಸವೀರ್‍ಸಸ್ ಪ್ರೈವೇಟ್ ಲಿಮಿಟೆಡ್’ ಎಂಬ ಕಂಪನಿ ತೆರೆದಿದ್ದನು.
ಕಂಪನಿಯ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಇತನೇ ಆಗಿದ್ದನು. ಇತನು ‘ಡಾಟಾ ಸೈನ್ಸ್ ಆಕ್ಟಿಟೆಕ್ಟ್ ಪ್ರೋಗ್ರಾಂ’ ಕೋರ್ಸಿಗೆ ಉಚಿತ ಆನ್‌ಲೈನ್ ತರಬೇತಿ ನೀಡುವುದರ ಜತೆಗೆ ಕೆಲಸವನ್ನೂ ಕೊಡಿಸುವುದಾಗಿ ಜಾಹೀರಾತು ನೀಡಿದ್ದನು.
ಈ ಸುದ್ದಿ ಓದಿದ್ದೀರಾ? ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆ ಸಾಧ್ಯತೆ: ಹವಾಮಾನ ಇಲಾಖೆ
ಈ ಜಾಹೀರಾತಿಗೆ ಸುಮಾರು 1800ಕ್ಕೂ ಅಧಿಕ ವಿಧ್ಯಾರ್ಥಿಗಳು ಮಾರು ಹೋಗಿ ಈ ಕೋರ್ಸಿಗೆ ಸೇರ್ಪಡೆಯಾಗಿದ್ದರು. ಬಳಿಕ ಇತ ಕೋರ್ಸಿಗೆ ಸೇರ್ಪಡೆಯಾದ ಸುಮಾರು 1,800ಕ್ಕೂ ಅಧಿಕ ವಿದ್ಯಾರ್ಥಿಗಳ ಹೆಸರಿನಲ್ಲಿ ಖಾಸಗಿ ಫೈನಾನ್ಸ್ ಕಂಪನಿಗಳಿಂದ ಕೋಟ್ಯಂತರ ರೂ. ಶೈಕ್ಷಣಿಕ ಸಾಲ ಪಡೆದು ಕೋರ್ಸ್ ಮುಗಿಯುವುದರೊಳಗೆ ಕಂಪನಿಯೇ ಪ್ರತಿ ತಿಂಗಳು ಇಎಂಐ ಪಾವತಿಸಿ ಸಾಲ ತೀರಿಸಲಿದೆ ಎಂದು ಹೇಳಿ ಇತ್ತೀಚೆಗೆ ಕಂಪನಿ ಮುಚ್ಚಿಕೊಂಡು ಪರಾರಿಯಾಗಿದ್ದನು.
ಆರೋಪಿಯು ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ವೈಯಕ್ತಿಕ ದಾಖಲೆಗಳನ್ನು ಬಳಸಿಕೊಂಡು ನಾನಾ ಖಾಸಗಿ ಫೈನಾನ್ಸ್ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡು ಸುಮಾರು ₹19 ಕೋಟಿ ಸಾಲ ಪಡೆದಿದ್ದಾನೆ ಎಂದು ತಿಳಿದುಬಂದಿದೆ.