ದೇಶದಲ್ಲಿ ಸಂವಿಧಾನ ರಕ್ಷಣೆಯ ಕಾಂತಿಯಾಗಲಿ. ಕಾಂಗ್ರೆಸ್‌ನವರು ಅಂಬೇಡ್ಕರ್ ಅವರಿಗೆ ಅನ್ಯಾಯ ಮಾಡಿದ್ದರಿಂದ ಪಶ್ಚಾತಾಪಕ್ಕಾಗಿ ಸಂವಿಧಾನ ಪ್ರತಿಯನ್ನು ಕೈಯಲ್ಲಿ ಹಿಡಿದುಕೊಂಡು ತಿರುಗಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಬಾಗಲಕೋಟೆಯಲ್ಲಿ ಶನಿವಾರ ಸಿಟಿಜನ್ ಫಾರ್ ಸೋಸಿಯಲ್ ಜಸ್ಟೀಸ್ ಸಂಸ್ಥೆ ಏರ್ಪಡಿಸಿದ್ದ ಸಂವಿಧಾನ ಸನ್ಮಾನ ಮತ್ತು ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, “ಸಂವಿಧಾನ ವಿರೋಧಿ ಕಾಂಗ್ರೆಸನ್ನು ಎಲ್ಲರೂ ತಿರಸ್ಕರಿಸಬೇಕು. ಸಂವಿಧಾನಕ್ಕೆ ನಮ್ಮ ಬೆಂಬಲ ಎಂದು ಸಂಕಲ್ಪ ಮಾಡಬೇಕು” ಎಂದರು.
“ಅಧಿಕಾರದಲ್ಲಿ ಇದ್ದ ಕಾಂಗ್ರೆಸ್‌ನವರು ಅಂಬೇಡ್ಕರ್ ಅವರನ್ನು ಸಂವಿಧಾನ ರಚನಾ ಸಮಿತಿಯಲ್ಲಿಯೇ ಬರದಂತೆ ನೋಡಿದರು. ಅಂಬೇಡ್ಕರ್ ಅವರನ್ನು ಸೋಲಿಸಿದರು. ಅಂಬೇಡ್ಕರ್ ಅವರು ದಲಿತ ಸಮುದಾಯದ ಸರ್ವ ಸಮ್ಮತ ನಾಯಕರಾಗಿದ್ದರು. ಅದೇ ಕಾರಣಕ್ಕೆ ಅವರನ್ನು ಸಂವಿಧಾನ ರಚನಾ ಸಮಿತಿಯಿಂದ ಹೊರಗಿಡುವ ಪ್ರಯತ್ನ ಮಾಡಿದ್ದರು” ಎಂದು ದೂರಿದರು.
“ಅಂಬೇಡ್ಕರ್ ಅವರಿಗೆ ಅನ್ಯಾಯವಾದರೆ ಸಂವಿಧಾನಕ್ಕೆ ಅನ್ಯಾಯವಾದಂತೆ. ಅವರ ಓಟ್ ಬ್ಯಾಂಕ್ ಆಗಿ ಎಸ್ಸಿ ಎಸ್ಟಿ ಸಮುದಾಯ ಉಳಿದಿಲ್ಲ ಅನ್ನುವ ಆತಂಕ ಶುರುವಾಗಿದೆ. ಅದಕ್ಕೆ ಅವರು ಈಗ ಸಂವಿಧಾನ ಹಿಡಿದುಕೊಂಡು ಓಡಾಡುತ್ತಿದ್ದಾರೆ. ನಮ್ಮ ಪಧಾನಿ ನರೇಂದ್ರ ಮೋದಿಯವರು ಸಂವಿಧಾನಕ್ಕೆ ನಮಿಸಿ ಅಧಿಕಾರ ಸ್ವೀಕರಿಸಿದರು. ನಮ್ಮ ಆಚಾರ, ವಿಚಾರ, ನಡೆಯಲ್ಲಿ ಸಂವಿಧಾನ ಇದೆ. ಕಾಂಗ್ರೆಸ್‌ನವರ ಆಚಾರದಲ್ಲಿ ಸಂವಿಧಾನ ಪಾಲನೆ ಇಲ್ಲ” ಎಂದರು.
“ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ಗಟ್ಟಿಯಾಗಿ ಉಳಿದಿದ್ದರೆ, ಅದಕ್ಕೆ ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನ ಕಾರಣ. ತುರ್ತು ಪರಿಸ್ಥಿತಿ ಹೇರಿ ಸಂವಿಧಾನವನ್ನು ಅಮಾನತ್ತಿನಲ್ಲಿಟ್ಟಿದ್ದ ಇಂದಿರಾ ಗಾಂಧಿಯನ್ನು ದೇಶದ ಜನರು ಹೀನಾಯವಾಗಿ ಸೋಲಿಸಿದರು. ಸಂವಿಧಾನದ ಮೂಲ ಆಶಯ ಬದಲು ಮಾಡಲು ಮುಂದಾದಾಗ ಸುಪ್ರೀಂ ಕೋರ್ಟ್ ಕೇಶವಾನಂದ ಭಾರ್ತಿ ಪ್ರಕರಣದಲ್ಲಿ ಯಾವುದೇ ಕಾರಣಕ್ಕೂ ಸಂವಿಧಾನದ ಮೂಲ ಆಶಯ ಬದಲಾಯಿಸಲು ಸಾಧ್ಯವಿಲ್ಲ ಎಂದು ಹೇಳಿತು. ಒಂದು ದಿನ ತಡವಾಗಿದ್ದರೆ, ಇಂದಿರಾ ಗಾಂಧಿ ರಾಜೀನಾಮೆ ಕೊಡಬೇಕಿತ್ತು. ಅವರ ವಿರುದ್ಧ ಆದೇಶ ಬಂದಾಗ ರಾತ್ರೋ ರಾತ್ರಿ ತುರ್ತು ಪರಿಸ್ಥಿತಿ ಹೇರಿದರು” ಎಂದು ಹೇಳಿದರು.
“ಅಂಬೇಡ್ಕರ್ ಅವರು ಮುಸ್ಲಿಂಮರಿಗೆ ಹೇಗೆ ಪತ್ಯೇಕ ಕಾನೂನಿದೆಯೋ ಅದೇ ರೀತಿ ಹಿಂದೂಗಳಿಗೂ ಪ್ರತ್ಯೇಕ ಕಾನೂನು ಇರಬೇಕು ಎಂದು ಹೇಳಿದರು. ಅದಕ್ಕಾಗಿ ರಾಜೀನಾಮೆ ನೀಡಿದರು. ರಾಹುಲ್ ಗಾಂಧಿಯವರು ಈಗ ಜಾತಿ ಗಣತಿ ಮಾಡಬೇಕು ಎಂದು ಹೇಳುತ್ತಿದ್ದಾರೆ. ಎಂ.ಎನ್ ರಾಯ್ ಅವರು ನಮ್ಮ ತಂದೆಯ ಗುರುಗಳು, ಅವರು 1934 ಸಂವಿಧಾನ ರಚನಾ ಸಮಿತಿ ಆಗಬೇಕು ಅಂತ ಹೇಳಿದ್ದರು” ಎಂದು ತಿಳಿಸಿದರು.
ಸಂವಿಧಾನದಲ್ಲಿ ಬಸವ ತತ್ವ
“ನಮ್ಮದು ಬಸವಣ್ಣನವರ ನಾಡು, ಜಗತ್ತಿನ ಮೊದಲ ಸಂಸತ್ತು ಅನುಭವ ಮಂಟಪ, ಸಂವಿಧಾನದಲ್ಲಿಯೂ ಬಸವಣ್ಣನವರ ತತ್ವಗಳಿವೆ. ಸಮಾನತೆ, ಕಾಯಕವೇ ಕೈಲಾಸ, ದಯವೇ ಧರ್ಮದ ಮೂಲ ಇವೆಲ್ಲ ಸಂವಿಧಾನದಲ್ಲಿವೆ. ಕೇಂದ್ರದ ಅಧಿಕಾರ ದುರುಪಯೋಗ ಪಡೆಸಿಕೊಂಡು ರಾಜ್ಯಗಳ ಅಧಿಕಾರ ಮೊಟಕುಗೊಳಿಸುವ ಕೆಲಸ ಮಾಡಿದ್ದು ಕಾಂಗ್ರೆಸ್, ಚುನಾಯಿತ ಸರ್ಕಾರ ಇಲ್ಲದಿರುವಾಗಲೇ ಕಾಂಗ್ರೆಸ್ ರಾಜ್ಯಗಳ ಅಧಿಕಾರ ಮೊಟಕುಗೊಳಿಸಿತ್ತು. ನಮ್ಮ ತಂದೆಯವರ ಸರ್ಕಾರವನ್ನು ಕಾಂಗ್ರೆಸ್ ತೆಗೆದು ಹಾಕಿತ್ತು” ಎಂದು ಹೇಳಿದರು.
ಗುಳೇದಗುಡ್ಡ ಮರಡಿಮಠದ ಅಭಿನವ ಕಾಡಸಿದ್ದೇಶ್ವರ ಸ್ವಾಮೀಜಿ, ಮಾಜಿ ಡಿಸಿಎಂ ಹಾಗೂ ಸಂಸದ ಗೋವಿಂದ ಕಾರಜೋಳ, ಸಂಸದ ಪಿ.ಸಿ. ಗದ್ದಿಗೌಡರ, ಮಾಜಿ ಶಾಸಕ ಎನ್. ಮಹೇಶ್, ಪುಸ್ತಕ ಲೇಖಕ ವಿಕಾಸ್ ಕುಮಾರ್ ಪಿ. ಶಾಸಕರಾದ ಸಿದ್ದು ಸವದಿ, ಪರಿಷತ್ ಸದಸ್ಯರಾದ ಹನುಮಂತ ನಿರಾಣಿ, ಮಾಜಿ ಶಾಸಕ ವೀರಣ್ಣ ಚರಂತಿಮಠ ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.
ಸದನದಲ್ಲಿ ಗೃಹಮಂತ್ರಿ ಅಂಬೇಡ್ಕರ್ ಬಗ್ಗೆ ಹಗುರವಾಗಿ ಮಾತಾಡಿದಾಗ ತುಟಿ ಬಿಚ್ಚಲಿಲ್ಲ,,,ನಾವು ಬಂದಿರುವುದೇ ಸಂವಿಧಾನ ಬದಲಿಸಲು ಎಂದು ರಾಜಾರೋಷವಾಗಿ ಹೇಳಿದವರನ್ನು ಪಕ್ಷದಿಂದ ಹೊರದಬ್ಬಲಿಲ್ಲ,, ಜನರನ್ನು ಮೂರ್ಖರನ್ನಾಗಿ ಎಷ್ಟೂಂತ ಮಾಡುವುದು