ರಾಜ್ಯದಲ್ಲಾಗಿರುವ ಬಾಣಂತಿಯರ ಸಾವಿನ ಪ್ರಕರಣ ತಡೆಯುವಲ್ಲಿ, ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿರುವ ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ರಾಜೀನಾಮೆ ನೀಡಬೇಕೆಂದು ಕರ್ನಾಟಕ ರಾಷ್ಟ್ರ ಸಮಿತಿ(ಕೆಆರ್‌ಎಸ್) ಪಕ್ಷದ ಮುಖಂಡ ನಿರುಪಾದಿ ಗೋಮರ್ಸಿ ಆಗ್ರಹಿಸಿದರು.
ರಾಯಚೂರು ನಗರದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿ, “ಜಿಲ್ಲೆಯಲ್ಲಿ 12 ಮಂದಿ ಬಾಣಂತಿಯರ ಸಾವು ಸಂಭವಿಸಿದೆ. ಆದರೂ ರಾಜ್ಯ ಸರ್ಕಾರ ಈವರೆಗೆ ಮೃತಪಟ್ಟ ಕುಟುಂಬಗಳಿಗೆ ಪರಿಹಾರ ನೀಡುವುದಾಗಲಿ, ಸಾಂತ್ವನ ಹೇಳುವುದನ್ನಾಗಲಿ ಮಾಡಿಲ್ಲ. ಬಳ್ಳಾರಿ, ಕೊಪ್ಪಳ, ರಾಯಚೂರು, ಬೆಳಗಾವಿ ಸೇರಿದಂತೆ ರಾಜ್ಯಾದ್ಯಂತ ನಡೆದಿರುವ ಬಾಣಂತಿಯರ ಸಾವಿನ ಘಟನೆಗಳಿಗೆ ಕಳಪೆ ಔಷಧಿ ಕಾರಣವೆಂದು ಐಎಎಸ್ ಅಧಿಕಾರಿ ಕನಗವಲ್ಲಿ ನೇತೃತ್ವದ ಸಮಿತಿ ಸರ್ಕಾರಕ್ಕೆ ವರದಿ ನೀಡಿದ್ದರೂ ಕೂಡ ಯಾವುದೇ ಕ್ರಮವಾಗಿಲ್ಲ” ಎಂದು ಆರೋಪಿಸಿದರು.
“ಮುಖ್ಯಮಂತ್ರಿಗಳು ಪ್ರಾದೇಶಿಕ ಆಯುಕ್ತರ ನೇತೃತ್ವದಲ್ಲಿ ಪ್ರಾದೇಶಿಕವಾರು ಬಾಣಂತಿಯರ ಸಾವಿಗೆ ಕಾರಣ ತಿಳಿದು ವರದಿ ನೀಡುವಂತೆ ಸೂಚಿಸಿರುವುದಾಗಿ ಹೇಳಿದ್ದರೂ ಕೂಡಾ ಈವರೆಗೆ ವರದಿ ಏನಾಗಿದೆ ಎಂಬುದು ಜನರಿಗೆ ಗೊತ್ತಾಗಿಯೇ ಇಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿಯೇ ಬಾಣಂತಿಯರು ಸಾವಿಗೀಡಾಗಿದ್ದು, ಬಡವರು, ಪರಿಶಿಷ್ಟರು, ಹಿಂದುಳಿದ ಸಮುದಾಯದವರೇ ಹೆಚ್ಚುಮಂದಿ ಬಾಣಂತಿಯರು ಬಲಿಯಾಗಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ದಲಿತ, ಹಿಂದುಳಿದವರ ಪರವೆಂದು ಹೇಳುವ ರಾಜ್ಯ ಸರ್ಕಾರ ಮೃತ ಕುಟುಂಬಗಳ ನೆರವಿಗೆ ಬರುವುದು ಯಾವಾಗ?. ಆರೋಗ್ಯ ಸಚಿವರು, ಬಾಣಂತಿಯರ ಸಾವಿಗೆ ಔಷಧಿಗಳೇ ಕಾರಣವೆಂದು ಹೇಳಿ ತಡೆಯುವ ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲ. ಕೇಂದ್ರ ಸರ್ಕಾರವೇ ತಡೆಯಬೇಕೆಂದು ಹೇಳುವ ಮೂಲಕ ಜಾರಿಕೊಳ್ಳಲು ಯತ್ನಿಸಿದ್ದಾರೆ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ತಲಾ ಇಬ್ಬರು ಡಿವೈಎಸ್‌ಪಿ, ಪೊಲೀಸ್ ಇನ್‌ಸ್ಪೆಕ್ಟರ್ ವರ್ಗಾವಣೆ; ಒಬ್ಬರಿಗೆ ಪಿಐ ಬಡ್ತಿ
“ಸರ್ಕಾರಿ ಆಸ್ಪತ್ರೆಗಳು, ವೈದ್ಯಕೀಯ ಶಿಕ್ಷಣ ಆಸ್ಪತ್ರೆಗಳಲ್ಲಿ ಖಾಲಿ ಹುದ್ದೆ, ವೈದ್ಯರ ನಿರ್ಲಕ್ಷ್ಯ ಔಷಧಿ ಖರೀದಿಯಲ್ಲಿ ಅಕ್ರಮಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ನೈತಿಕ ಹೊಣೆಹೊತ್ತು ಇಬ್ಬರು ಸಚಿವರೂ ರಾಜೀನಾಮೆ ನೀಡಬೇಕು. ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳಿಂದ ಬಾಣಂತಿಯರ ಸಾವಿನ ಪ್ರಕರಣದ ಸಮಗ್ರ ತನಿಖೆ ನಡೆಸಬೇಕು. ಮೃತ ಬಾಣಂತಿಯರ ಕುಟುಂಬಗಳಿಗೆ ಪರಿಹಾರ ನೀಡಬೇಕು” ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಬಸವಪ್ರಭು ಮೇಥಾ, ವಿಜಯಕುಮಾರ ಪೋಳ್, ಗಂಗಾನಾಯಕ, ಶಂಕರಗೌಡ, ಶಿವರಾಜ ಕಪಗಲ್, ಕುಮಾರ ನಾಯಕ, ಆಂಜಿನೇಯ್ಯ ಇದ್ದರು.
