ಆಂಧ್ರ ಮತ್ತು ತೆಲಂಗಾಣದ ರಾಜಕಾರಣದಲ್ಲಿ ಹಿಂದುತ್ವ ಮತ್ತು ಸಿನೆಮಾ; ಭಕ್ತಿ ಮತ್ತು ಅಭಿಮಾನ ನಾಜೂಕಾಗಿ ಒಂದರೊಳಗೊಂಡು ಮಿಳಿತಗೊಂಡು, ಅಪಾತ್ರರನ್ನು ಅಟ್ಟಕ್ಕೇರಿಸುವ ನಾಟಕ ನಡೆಯುತ್ತಿದೆ. ಇವುಗಳ ನಡುವೆ ಅಮಾಯಕರ ಕಾಲ್ತುಳಿತದ ಕೊಲೆಗಳೇ ಕಾಣುತ್ತಿಲ್ಲ...
ಜನವರಿ 8ರಂದು ತಿರುಪತಿಯಲ್ಲಿ ಸಾವಿರಾರು ಜನ ವೈಕುಂಠ ದ್ವಾರ ದರ್ಶನಕ್ಕಾಗಿ ಟಿಕೆಟ್ ಪಡೆಯಲು ನಿಂತಿದ್ದಾಗ ನೂಕು ನುಗ್ಗಲು ಉಂಟಾಯಿತು. ಈ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಏಳು ಮಂದಿ ಮೃತಪಟ್ಟರು, ನಲವತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡರು.
ಡಿಸೆಂಬರ್ 4ರಂದು ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ನಲ್ಲಿ ‘ಪುಷ್ಪಾ-2’ ಚಿತ್ರ ಪ್ರದರ್ಶನದ ವೇಳೆ, ನಾಯಕನಟ ಅಲ್ಲು ಅರ್ಜುನ್ ಆಗಮಿಸಿದಾಗ ಅಭಿಮಾನಿಗಳ ನೂಕು ನುಗ್ಗಲಿನಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 35 ವರ್ಷದ ರೇವತಿ ಎಂಬ ಮಹಿಳೆ ಮೃತಪಟ್ಟರು.
ಒಂದು ದೇವರನ್ನು ಕಾಣಲು, ಮತ್ತೊಂದು ದೇವರೆಂದು ಭ್ರಮಿಸುವ ನಟನನ್ನು ನೋಡಲು. ಧರ್ಮ-ಸಿನೆಮಾ ಸನ್ನಿಗೆ ಸಿಕ್ಕ ಎಂಟು ಮಂದಿ ಸಾವನಪ್ಪಿದ್ದಾರೆ. ಎರಡೂ ಘಟನೆಗಳು ಒಂದು ತಿಂಗಳ ಅಂತರದಲ್ಲಿ, ನೆರೆಯ ಆಂಧ್ರ ಮತ್ತು ತೆಲಂಗಾಲದಲ್ಲಿ ಜರುಗಿವೆ.
ತೆಲಂಗಾಣದ ಪ್ರಕರಣದಲ್ಲಿ ‘ಪುಷ್ಪಾ-2’ ಚಿತ್ರದ ನಾಯಕನಟ ಅಲ್ಲು ಅರ್ಜುನ್ ಅವರನ್ನು ಪ್ರಮುಖ ಆರೋಪಿಯನ್ನಾಗಿಸಲಾಗಿದೆ. ಅವರ ವಿರುದ್ಧ ಸೆಕ್ಷನ್ 105 ಬಿಎನ್‌ಎಸ್ ಅಡಿಯಲ್ಲಿ ಪ್ರಕರಣ ದಾಖಲಿಸಿ, ಬಂಧಿಸಿ, ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
ತಿರುಪತಿ ಪ್ರಕರಣದಲ್ಲಿ ಯಾರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸುವುದು? ಇದೇ ದೊಡ್ಡ ಸಮಸ್ಯೆಯಾಗಿದೆ. ತಿರುಪತಿ ತಿಮ್ಮಪ್ಪನನ್ನೇ, ಟಿಟಿಡಿ ಮಂಡಳಿಯನ್ನೇ ಅಥವಾ ಸರ್ಕಾರವನ್ನೇ? ಇದು ಈಗ ಸೋಷಿಯಲ್ ಮೀಡಿಯಾದ ಚರ್ಚಿತ ವಿಷಯವಾಗಿದೆ. ಕೆಲವರು ಘಟನೆಯ ಗಂಭೀರತೆಯನ್ನು ಅರಿತು, ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರೆ; ಹಲವರು ಪವನ್ ಕಲ್ಯಾಣ್‌ರನ್ನು ವ್ಯಂಗ್ಯಕ್ಕೆ, ತಮಾಷೆಗೆ ಬಳಸಿಕೊಂಡು ಲೇವಡಿ ಮಾಡುತ್ತಿದ್ದಾರೆ.
ಸೋಜಿಗದ ಸಂಗತಿ ಎಂದರೆ, ಒಂದರಲ್ಲಿ ನಟ, ಮತ್ತೊಂದರಲ್ಲಿ ಸರ್ಕಾರ- ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ಮೊತ್ತ ಘೋಷಿಸಿ, ಕಣ್ಣೊರೆಸುವ ತಂತ್ರದ ಮೊರೆ ಹೋಗಿದ್ದಾರೆ.
ಏತನ್ಮಧ್ಯೆ ಈ ಎರಡೂ ಪ್ರಕರಣಗಳಲ್ಲಿ ರಾಜಕಾರಣ ಮುನ್ನೆಲೆಗೆ ಬಂದಿದೆ. ತೆಲಂಗಾಣದಲ್ಲಿ ಮುಖ್ಯಮಂತ್ರಿ ರೇವಂತ್ ರೆಡ್ಡಿಯೇ ಮುಂದಾಗಿ ಅಲ್ಲು ಅರ್ಜುನ್‌ರನ್ನು ದಂಡಿಸಲು, ಹಣಿಯಲು ಆಸ್ಥೆ ತೋರಿಸಿದ್ದಾರೆ. ಇತ್ತ ಆಂಧ್ರದಲ್ಲಿ ವೈಎಸ್‌ಆರ್ ಕಾಂಗ್ರೆಸ್, ದುರ್ಘಟನೆಗೆ ಟಿಡಿಪಿಯ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರೇ ಜವಾಬ್ದಾರರು ಎನ್ನುತ್ತಿದೆ.
ಇದನ್ನು ಓದಿದ್ದೀರಾ?: ಒಂದು ಆತ್ಮಹತ್ಯೆ ಪ್ರಕರಣ: ಮೂರು ಮಾನವೀಯ ಬರೆಹಗಳು
ಇವುಗಳ ನಡುವೆಯೇ ಮತ್ತೊಂದು ಮುಖ್ಯ ವಿಚಾರ ಈಗ ಮುನ್ನೆಲೆಗೆ ಬಂದಿದೆ. ಅದೇನೆಂದರೆ, ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಮತ್ತವರ ಹಿಂದುತ್ವ.
ಕಳೆದ ಸೆಪ್ಟೆಂಬರ್‍ನಲ್ಲಿ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್, ತಿರುಮಲ ದೇವಸ್ಥಾನದ ಲಡ್ಡು ಪ್ರಸಾದ ಕಲಬೆರಕೆ ವಿವಾದದ ಹಿನ್ನೆಲೆಯಲ್ಲಿ, ಸನಾತನ ಧರ್ಮದ ರಕ್ಷಣೆಗಾಗಿ ಉಗ್ರ ಉಪವಾಸ ವ್ರತ ಕೈಗೊಂಡಿದ್ದರು. ಬೆಟ್ಟದ ಕಲ್ಲಿಗೆ ಕುಂಕುಮ ಬಳಿದು ಸಾಮೂಹಿಕ ಹೋರಾಟಕ್ಕೆ ಕರೆ ಕೊಟ್ಟಿದ್ದರು. ಸನಾತನ ಧರ್ಮ ಅಪವಿತ್ರವಾಗದಂತೆ ರಕ್ಷಿಸಲು ರಾಷ್ಟ್ರ ಮಟ್ಟದಲ್ಲಿ ಧರ್ಮ ರಕ್ಷಣಾ ಮಂಡಳಿ ರಚಿಸುವ ಚಿಂತನೆ ತೇಲಿಬಿಟ್ಟಿದ್ದರು. ಹಿಂದೂ ದೇವಾಲಯದ ಆಸ್ತಿಗಳ ರಕ್ಷಣೆಗೆ ಟೊಂಕಕಟ್ಟಿ ನಿಂತಿದ್ದರು.
ಅಷ್ಟೆ ಅಲ್ಲ, ತಿರುಪತಿ ವಿವಾದದ ಬೆನ್ನಲ್ಲೇ ಪವನ್, ಧೋತಿ-ಕುರ್ತಾ ತೊಡುವ ಮೂಲಕ ಸನಾತನ ಧರ್ಮದ ವಕ್ತಾರರಾಗಿ ಮಾರ್ಪಟ್ಟಿದ್ದರು. ಅವರ ಮಾತು, ಕಾಲ್ನಡಿಗೆ, ವ್ರತ, ತಪಸ್ಸು, ಪ್ರಾಯಶ್ಚಿತ್ತಗಳೆಲ್ಲ ರಾಜಕೀಯ ಮತ್ತು ನಾಟಕೀಯ ರೂಪ ಪಡೆಯತೊಡಗಿದ್ದವು. ಹಿಂದುತ್ವದ ರಾಯಭಾರಿಯಾಗಲು ಹವಣಿಸಿದ್ದರು. ಸನಾತನ ಧರ್ಮದ ವಿರುದ್ಧ ಸೊಲ್ಲೆತ್ತುವವರಿಗೆ ಸಂದೇಶ ರವಾನಿಸಿದ್ದರು. ಅಷ್ಟೇ ಅಲ್ಲ, ಒಬ್ಬನೇ ಒಬ್ಬ ಹಿಂದುಗೆ ಏನಾದರೂ ಆದರೆ, ಈ ಪವನ್… ಪವನ್ ಆಗಿರುವುದಿಲ್ಲ ಎಂದು ತೆಲುಗು ಸಿನೆಮಾ ಡೈಲಾಗ್ ಮೂಲಕ ಎಚ್ಚರಿಕೆ ಕೂಡ ಕೊಟ್ಟಿದ್ದರು.
ಈಗ ಅವರೇ ಉಪಮುಖ್ಯಮಂತ್ರಿಯಾಗಿರುವ ಆಂಧ್ರದ ಆಳುವ ಸರ್ಕಾರದಡಿಯಲ್ಲಿ, ತಿರುಪತಿಯಲ್ಲಿ ಏಳು ಮಂದಿ ಹಿಂದೂಗಳು ಉಸಿರು ಚೆಲ್ಲಿದ್ದಾರೆ. ಅದು ಕೂಡ ದೇವರು, ಧರ್ಮದ ಕಾರಣಕ್ಕಾಗಿಯೇ ನಡೆದಿದೆ.
ಎಲ್ಲಿ ಹೋಗಿದ್ದಾರೆ ಹಿಂದೂ ಹುಲಿ ಪವನ್ ಕಲ್ಯಾಣ್? ಲಡ್ಡುವಿನಲ್ಲಿ ಗೋವಿನ ಕೊಬ್ಬಿತ್ತು, ಕೂಗಾಡಿದ್ದರು. ಈಗ ಕಾಲ್ತುಳಿತದಲ್ಲಿ ತಿರುಪತಿ ತಿಮ್ಮಪ್ಪನೇ ಇದ್ದಾನೆ, ತಣ್ಣಗಿದ್ದಾರೆ. ಅಂದು ಕೊಬ್ಬಿಗೆ ಕೂಗಾಟ, ಇಂದು ಪ್ರಾಣ ಹೋದರೂ ಇಲ್ಲ ಗೋಳಾಟ.
ಇದನ್ನು ಓದಿದ್ದೀರಾ?: 70 ಗಂಟೆ, 90 ಗಂಟೆ ಕೆಲಸ: ಉದ್ಯೋಗಿಗಳ ರಕ್ತ ಹೀರುವುದು ಲಾಭಕೋರ ಬಂಡವಾಳಿಗರ ಸಂಚು
ವಿಚಿತ್ರವೆಂದರೆ, ತೆಲುಗುದೇಶಂನ ಚಂದ್ರಬಾಬು ನಾಯ್ಡುರನ್ನು ಮುಖ್ಯಮಂತ್ರಿ ಕುರ್ಚಿಯಿಂದ ಕೆಳಗಿಳಿಸಿ, ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿರುವ ಪವನ್ ಕಲ್ಯಾಣ್, ಅದಕ್ಕಾಗಿ ಹಿಂದುತ್ವ ಮತ್ತು ಮೋದಿಯನ್ನು ಬೆನ್ನಿಗಿಟ್ಟುಕೊಂಡಿದ್ದಾರೆ. ಆಂಧ್ರದಲ್ಲಿ ಬಿಜೆಪಿ ನೆಲೆಯೂರಿಸುವ ಮೋದಿಯ ದೂರಾಲೋಚನೆಗೂ ನೀರೆರೆದಿದ್ದಾರೆ.
ಅದೇ ರೀತಿ ತೆಲಂಗಾಣದಲ್ಲಿ ಜನಪ್ರಿಯ ನಟ ಅಲ್ಲು ಅರ್ಜುನ್ ಅವರನ್ನು ಬಂಧಿಸುವ ʼಧೈರ್ಯʼ ತೋರಿದ ರೇವಂತ್ ರೆಡ್ಡಿಗೆ ʼಬುದ್ಧಿʼ ಕಲಿಸಬೇಕೆಂದು, ಅವರ ವಿರುದ್ಧ ಇಡೀ ಚಿತ್ರರಂಗ ಒಂದಾಗಿದೆ. ಅಲ್ಲು ಅರ್ಜುನ್ ಬೆನ್ನಿಗೆ ತೆಲುಗು ಚಿತ್ರರಂಗ ನಿಂತಿದೆ. ಮುಂದಿನ ಚುನಾವಣೆಯಲ್ಲಿ ಪಾಠ ಕಲಿಸುವ ಮಾತುಗಳನ್ನಾಡುತ್ತಿದ್ದಾರೆ.
ಒಟ್ಟಿನಲ್ಲಿ ಆಂಧ್ರ ಮತ್ತು ತೆಲಂಗಾಣದ ರಾಜಕಾರಣದಲ್ಲಿ ಹಿಂದುತ್ವ ಮತ್ತು ಸಿನೆಮಾ; ಭಕ್ತಿ ಮತ್ತು ಅಭಿಮಾನ ನಾಜೂಕಾಗಿ ಒಂದರೊಳಗೊಂಡು ಮಿಳಿತಗೊಂಡು, ಅಪಾತ್ರರನ್ನು ಅಟ್ಟಕ್ಕೇರಿಸುವ ನಾಟಕ ನಡೆಯುತ್ತಿದೆ. ಇವುಗಳ ನಡುವೆ ಅಮಾಯಕರ ಕಾಲ್ತುಳಿತದ ಕೊಲೆಗಳೇ ಕಾಣುತ್ತಿಲ್ಲ…

ಲೇಖಕ, ಪತ್ರಕರ್ತ