ಮಾದಕ ವಸ್ತು ಕಳ್ಳಸಾಗಣೆ ಮಾಡುತ್ತಿದ್ದ ಓರ್ವನನ್ನು ಬಂಧಿಸಲು ಪ್ರಯತ್ನಿಸಿದ ಪೊಲೀಸ್ ಕಾನ್ಸ್‌ಟೇಬಲ್ ಮೇಲೆ ಹಲ್ಲೆ ನಡೆಸಿರುವ ಘಟನೆ ಕಲಬುರಗಿಯಲ್ಲಿ ಶನಿವಾರ ನಡೆದಿದೆ.
ಪೊಲೀಸರು ಡ್ರಗ್ಸ್ ಕಳ್ಳಸಾಗಣೆ ಮಾಡುತ್ತಿರುವ ಆರೋಪಿಯ ಕಾಲಿಗೆ ಗುಂಡು ಹಾರಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಶರಣಪ್ಪ ತಿಳಿಸಿದ್ದಾರೆ.
ʼಅನುಮಾನಾಸ್ಪದ ವ್ಯಕ್ತಿಯ ಬಗ್ಗೆ ಮಾಹಿತಿ ಪಡೆದ ಇನ್ಸ್‌ಪೆಕ್ಟರ್ ಚೌಕ್ ರಾಜೇಂದ್ರ ಅವರು ಅಪರಾಧ ಪತ್ತೆ ತಂಡದೊಂದಿಗೆ ತನಿಖೆಗೆ ತೆರಳಿದರು. ಈ ವೇಳೆ ಕಾರಿನಲ್ಲಿದ್ದ ಶಂಕಿತನನ್ನು ನೋಡಿದ ಇನ್ಸ್‌ಪೆಕ್ಟರ್ ಕಾರು ನಿಲ್ಲಿಸಲು ಚಾಲಕನಿಗೆ ಹೇಳಿದ್ದಾರೆ. ತಕ್ಷಣ ಶಂಕಿತನು ಕಾರಿನಿಂದ ಹೊರಬಂದು ಹೆಡ್ ಕಾನ್ಸ್‌ಟೇಬಲ್ ಗುರುಮೂರ್ತಿ ಮೇಲೆ ದಾಳಿ ಮಾಡಿದ್ದು, ಅವರು ಗಂಭೀರವಾಗಿ ಗಾಯಗೊಂಡಿದ್ದಾರೆʼ ಎಂದು ಕಮಿಷನರ್ ಹೇಳಿದರು.
ಆರೋಪಿ ಸುಪ್ರೀತ್ ನವಲೆ ಕಲಬುರಗಿ ನಗರದ ಮುತ್ತಂಪುರ ನಿವಾಸಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಆತನ ಕಾರನ್ನು ತಪಾಸಣೆ ನಡೆಸಿದಾಗ ನೈಟ್ರೊವೆಟ್ ಮಾತ್ರೆಗಳು ಸೇರಿದಂತೆ ಡ್ರಗ್ಸ್ ಕಳ್ಳಸಾಗಣೆ ಮಾಡುತ್ತಿರುವುದು ಕಂಡುಬಂದಿದೆ.
ಈ ಸುದ್ದಿ ಓದಿದ್ದೀರಾ? ರಾಜಸ್ಥಾನ| ದಲಿತ ವ್ಯಕ್ತಿಯನ್ನು ತಲೆಕೆಳಗಾಗಿ ನೇತಾಡಿಸಿ ಹಲ್ಲೆ
ಘಟನೆಯಲ್ಲಿ ಪೊಲೀಸ್ ಕಾನ್‌ಸ್ಟೆಬಲ್ ಗುರುಮೂರ್ತಿ ಅವರ ಎಡಗೈಗೆ ಗಾಯವಾಗಿದೆ. ಗಾಯಗೊಂಡ ಗುರುಮೂರ್ತಿ ಮತ್ತು ಆರೋಪಿಗಳನ್ನು ಕಲಬುರಗಿಯ ಜಿಮ್ಸ್ ಟ್ರಾಮಾ ಕೇರ್ ಸೆಂಟರ್‌ಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ. ಆಸ್ಪತ್ರೆಗೆ ಭೇಟಿ ಘಟನೆ ಮಾಹಿತಿ ಪಡೆದಿದ್ದಾರೆ.