ಟೀಮ್ ಇಂಡಿಯಾದ ಸ್ಫೋಟಕ ಆಟಗಾರ ಯುವರಾಜ್ ಸಿಂಗ್ ಅವರ ತಂದೆ ಹಾಗೂ ಭಾರತದ ಮಾಜಿ ವೇಗಿ ಯೋಗರಾಜ್ ಸಿಂಗ್ ಅವರು ಖ್ಯಾತ ಕ್ರಿಕೆಟ್ ಆಟಗಾರ ಕಪಿಲ್ ದೇವ್ ಕುರಿತು ಆಘಾತಕಾರಿ ಸ್ಫೋಟಕ ಹೇಳಿಕೆಯನ್ನು ನೀಡಿದ್ದಾರೆ.
“ನನ್ನನ್ನು ತಂಡದಿಂದ ಕೈಬಿಟ್ಟಿದ್ದಕ್ಕೆ ನನ್ನ ಪತ್ನಿ (ಯುವಿಯ ತಾಯಿ) ಕಪಿಲ್ ದೇವ್ ಬಳಿ ಕೆಲ ಪ್ರಶ್ನೆಗಳನ್ನು ಕೇಳಲು ಬಯಸಿದ್ದರು. ಆದರೆ, ಆ ವ್ಯಕ್ತಿಗೆ ನಾನೇ ಪಾಠ ಕಲಿಸುತ್ತೇನೆಂದು ಹೇಳಿ, ನನ್ನ ಪಿಸ್ತೂಲನ್ನು ತೆಗೆದುಕೊಂಡು ಸೆಕ್ಟರ್ 9ರಲ್ಲಿರುವ ಕಪಿಲ್ ಮನೆಗೆ ಹೋದೆ. ಇದೇ ಸಂದರ್ಭದಲ್ಲಿ ಕಪಿಲ್ ದೇವ್ ಅವರು ತಮ್ಮ ತಾಯಿಯೊಂದಿಗೆ ಹೊರಗೆಬಂದರು. ಈ ವೇಳೆ ನಾನು ಕಪಿಲ್ ಅವರನ್ನು ಹತ್ತಾರು ಬಾರಿ ನಿಂದಿಸಿದೆ. ನಿನ್ನಿಂದಾಗಿ ನಾನೊಬ್ಬ ಸ್ನೇಹಿತನನ್ನು ಕಳೆದುಕೊಂಡೆ ಮತ್ತು ನೀನು ಏನು ಮಾಡಿದೆಯೋ ಅದಕ್ಕೆ ಬೆಲೆ ತೆರಬೇಕಾಗುತ್ತದೆ ಎಂದು ಆಕ್ರೋಶ ಹೊರಹಾಕಿದೆ” ಎಂದಿದ್ದಾರೆ.
ಯೋಗರಾಜ್ ಅವರು 1980ರ ಡಿಸೆಂಬರ್ 21ರಂದು ಬ್ರಿಸ್ಬೇನ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಈ ವೇಳೆ ಸುನಿಲ್ ಗವಾಸ್ಕರ್ ಅವರು ತಂಡದ ನಾಯಕರಾಗಿದ್ದರು. ಮೂರು ತಿಂಗಳಿಗಿಂತ ಕಡಿಮೆ ಅವಧಿಯ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ ಯೋಗರಾಜ್ ಅವರು ಭಾರತಕ್ಕಾಗಿ ಒಂದು ಟೆಸ್ಟ್ ಮತ್ತು ಆರು ಏಕದಿನ ಪಂದ್ಯಗಳನ್ನು ಆಡಿದರು. ಕಪಿಲ್ ದೇವ್ ಅವರು ನಾಯಕರಾಗಿ ಆಯ್ಕೆಯಾದ ಬಳಿಕ ಯೋಗರಾಜ್ ಅವರು ಅವಕಾಶ ನೀಡಲಿಲ್ಲ ಎಂಬ ಅಪವಾದ ಇದೆ. ಈ ಕಾರಣಕ್ಕೆ ಯೋಗರಾಜ್ ಅವರು ಕಪಿಲ್ ಕುರಿತು ಆಘಾತಕಾರಿ ಹೇಳಿಕೆಯನ್ನು ನೀಡಿದ್ದಾರೆ.
“ನಿನ್ನ ತಲೆಗೆ ಗುಂಡು ಹಾರಿಸಬೇಕಂತಲೇ ನಾನಿಲ್ಲಿಗೆ ಬಂದೆ. ಆದರೆ, ಧರ್ಮನಿಷ್ಠೆ ಇರುವ ನಿಮ್ಮ ತಾಯಿ ಇಲ್ಲಿದ್ದಾರೆ. ಹಾಗಾಗಿ ನಾನು ಅಂದುಕೊಂಡಿದನ್ನು ಮಾಡುತ್ತಿಲ್ಲ ಎಂದು ಕಪಿಲ್‌ಗೆ ಹೇಳಿದೆ. ನಾನು ಆ ಕ್ಷಣವೇ ಕ್ರಿಕೆಟ್ ಆಡುವುದಿಲ್ಲ ಎಂಬ ನಿರ್ಧಾರಕ್ಕೂ ಬಂದೆ. ಇನ್ಮುಂದೆ ನನ್ನ ಬದಲಾಗಿ ಯುವಿ ಆಡುತ್ತಾನೆಂದು ಅಂದೇ ನಿರ್ಧರಿಸಿದೆ ಎಂದು ಯೋಗರಾಜ್ ಹೇಳಿದ್ದಾರೆ.
ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಸಮದೀಶ್ ಭಾಟಿಯಾ ಅವರು ನಡೆಸಿಕೊಡುವ “ಅನ್‌ಫಿಲ್ಟರ್ಡ್ ಬೈ ಸಮದೀಶ್” ಹೆಸರಿನ ಸಂದರ್ಶನದಲ್ಲಿ ಭಾಗವಹಿಸಿದ ಯೋಗರಾಜ್, 1983ರ ವಿಶ್ವಕಪ್ ವಿಜೇತ ತಂಡದ ನಾಯಕ ಕಪಿಲ್ ದೇವ್ ಕುರಿತು ಈ ಮಾತು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕ್ರಿಕೆಟ್ | ಟೀಂ ಇಂಡಿಯಾ ನಿದ್ದೆಗೆಡಿಸಿದ ಕ್ಯಾಪ್ಟನ್ ಪ್ಯಾಟ್ ಕಮಿನ್ಸ್!
ಯೋಗರಾಜ್ ಅವರು ಇದೇ ಮೊದಲ ಬಾರಿಗೆ ಕಪಿಲ್ ಬಗ್ಗೆ ಅದು ಬಹಿರಂಗವಾಗಿಯೇ ಈ ಹೇಳಿಕೆ ನಿಡಿದ್ದಾರೆ. 2011ರಲ್ಲಿ ಭಾರತ ವಿಶ್ವಕಪ್ ಗೆದ್ದಾಗ ತುಂಬಾ ಅಳುತ್ತಿದ್ದ ಒಬ್ಬ ವ್ಯಕ್ತಿ ಮಾತ್ರ ಇದ್ದ. ಅದು ಕಪಿಲ್ ದೇವ್. ಈ ವೇಳೆ ನಾನು ಅವನಿಗೆ ಪೇಪರ್ ಕಟಿಂಗ್ ಅನ್ನು ಕಳುಹಿಸಿದ್ದೆ. ಅದರಲ್ಲಿ , ನನ್ನ ಮಗ ಯುವಿ ವಿಶ್ವಕಪ್‌ನಲ್ಲಿ ನಿಮಗಿಂತ ಉತ್ತಮವಾಗಿ ಆಡಿದ್ದಾನೆ ಎಂದು ಬರೆದಿದ್ದೆ” ಎಂದು ಇದೇ ಸಂದರ್ಭದಲ್ಲಿ ಯೋಗರಾಜ್ ಹೇಳಿದರು.
ಟೀಮ್ ಇಂಡಿಯಾದ ಮಾಜಿ ನಾಯಕ ಮತ್ತು ಸ್ಪಿನ್ನರ್ ಬಿಷನ್ ಸಿಂಗ್ ಬೇಡಿ ವಿರುದ್ಧವೂ ಯೋಗರಾಜ್ ಆಘಾತಕಾರಿ ಆರೋಪಗಳನ್ನು ಮಾಡಿದ್ದಾರೆ. ಬಿಷನ್ ಸಿಂಗ್ ನನ್ನ ವಿರುದ್ಧ ಪಿತೂರಿ ನಡೆಸಿದ್ದರು. ನನ್ನನ್ನು ತಂಡದಿಂದ ಕೈಬಿಟ್ಟಾಗ ನಾನು ಆಯ್ಕೆದಾರರಲ್ಲಿ ಒಬ್ಬರಾದ ರವೀಂದ್ರ ಛಡ್ಡಾ ಅವರೊಂದಿಗೆ ಮಾತನಾಡಿದೆ. ಬಿಷನ್ ಸಿಂಗ್ (ಮುಖ್ಯ ಆಯ್ಕೆದಾರ) ನನ್ನನ್ನು ಆಯ್ಕೆ ಮಾಡಲು ಉದ್ದೇಶಪೂರ್ವಕವಾಗಿಯೇ ಬಯಸಲಿಲ್ಲ. ಏಕೆಂದರ ನಾನು ಸುನಿಲ್ ಗವಾಸ್ಕರ್ ಆಪ್ತನೆಂಬ ಕಾರಣಕ್ಕೆ ತಂಡದಿಂದ ಕೈಬಿಟ್ಟರು ಎಂದು ಗಂಭೀರ ಆರೋಪ ಮಾಡಿದ್ದಾರೆ. ನಾನು ಮುಂಬೈನಲ್ಲಿ ಕ್ರಿಕೆಟ್ ಆಡುತ್ತಿದ್ದಾಗ ಗವಾಸ್ಕರ್ ಅವರಿಗೆ ತುಂಬಾ ಹತ್ತಿರವಾಗಿದ್ದೆ ಎಂದು ಯೋಗರಾಜ್ ತಿಳಿಸಿದರು.
ಯೋಗರಾಜ್ ಅವರ ವಿವಾದಾತ್ಮಕ ಹೇಳಿಕೆಗಳು ಇದೇ ಮೊದಲಲ್ಲ, ಈ ಹಿಂದೆ ಧೋನಿ ಬಗ್ಗೆ ಗಂಭೀರ ಆರೋಪ ಮಾಡಿದ್ದರು. ನನ್ನ ಮಗ ಯುವಿಯನ್ನು ತಂಡದಿಂದ ಕೈಬಿಡಲು ಧೋನಿ ಕಾರಣ ಎಂದು ಆರೋಪಿಸಿದ್ದರು.
