ಬೀದಿಬದಿ ವ್ಯಾಪಾರಿಗಳ ನಡುವಿನ ಐಕ್ಯತೆ ಮುರಿದು ಅವರನ್ನು ಅತಂತ್ರಗೊಳಿಸಿ, ಅವರ ಹೋರಾಟವನ್ನು ಹತ್ತಿಕ್ಕಲು ಶಾಸಕ ವೇದವ್ಯಾಸ ಕಾಮತ್ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್(ಸಿಐಟಿಯು)ನ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಆಕ್ರೋಶ ಹೊರಹಾಕಿದರು.
ಜಿಲ್ಲೆಯ ಮಂಗಳೂರು ನಗರದ ಬೀದಿ ವ್ಯಾಪಾರ ವಲಯದ ಎದುರು ಸಿಐಟಿಯು ನೇತೃತ್ವದ ದಕ್ಷಿಣ ಕನ್ನಡ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘದಿಂದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.
“ಅಸುರಕ್ಷಿತ, ಅವೈಜ್ಞಾನಿಕ ಹಾಗೂ ಅಸಮರ್ಪಕ ಬೀದಿ ವ್ಯಾಪಾರ ವಲಯದಲ್ಲಿ ವ್ಯಾಪಾರ ಮಾಡಲು ಬಲವಂತ ಮಾಡುತ್ತಿರುವ ಅಧಿಕಾರಿಗಳು ಮತ್ತು ಕೆಲವು ಸ್ಥಾಪಿತ ಹಿತಾಸಕ್ತಿಗಳ ಜತೆಗೆ ಶಾಸಕ ವೇದವ್ಯಾಸ ಕಾಮತ್, ಬೀದಿ ವ್ಯಾಪಾರಿಗಳ ಮುಂಗೈಗೆ ಬೆಲ್ಲ ಹಚ್ಚಿ ಬಡ ಬೀದಿ ವ್ಯಾಪಾರಿಗಳಿಗೆ ಸಂಕಷ್ಟ ತಂದೊಡ್ಡಿದ್ದಾರೆ. ಬೀದಿ ವ್ಯಾಪಾರ ವಲಯ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ” ಎಂದು ಬಜಾಲ್ ಆರೋಪಿಸಿದರು.

“ಬೀದಿ ವ್ಯಾಪಾರಿಗಳ ಹಕ್ಕುಗಳನ್ನು ರಕ್ಷಣೆ ಮಾಡಲು ಹೋರಾಟವನ್ನು ಮತ್ತಷ್ಟು ತೀವ್ರಗೋಳಿಸುತ್ತೇವೆ” ಎಂದು ಸುನಿಲ್ ಕುಮಾರ್ ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ?: ಮಂಗಳೂರು | ತಣ್ಣೀರುಬಾವಿ ಕಡಲ ಕಿನಾರೆಯಲ್ಲಿ ಬೀಚ್ ಉತ್ಸವ ಸಮಾರೋಪ
ಸಂಘದ ಗೌರವಧ್ಯಕ್ಷ ಬಿ ಕೆ ಇಮ್ತಿಯಾಜ್ ಮಾತನಾಡಿ, “ನಗರದ ಹೃದಯ ಭಾಗದಲ್ಲಿರುವ ಬೀದಿ ವ್ಯಾಪಾರ ನಾಲ್ಕು ವಾರ್ಡ್‌ಗಳಲ್ಲಿ ಹರಡಿಕೊಂಡಿದೆ. ಕೇವಲ ಒಂದು ವಾರ್ಡಿನ ಬೀದಿ ವ್ಯಾಪಾರಿಗಳನ್ನು ವಲಯದ ಒಳಗೆ ಕಳುಹಿಸಿ ಅವರನ್ನು ನಷ್ಟಕ್ಕೆ ತಳ್ಳುವ ಬೀದಿ ವ್ಯಾಪಾರ ವಲಯ ನಿರ್ಮಾಣವನ್ನೇ ಬಿಜೆಪಿ ಸಾಧನೆಯೆಂದು ಬಿಂಬಿಸಲು ಹೊರಟಿದೆ. ರಾಜ್ಯದ ವಿವಿಧ ನಗರಗಳಲ್ಲಿ ನಿರ್ಮಾಣಗೊಂಡಿರುವ ವ್ಯಾಪಾರ ವಲಯ ಒಂದೇ ಸೂರಿನಡಿಯಲ್ಲಿ ಹಣ್ಣು, ತರಕಾರಿ ಮತ್ತು ಆಹಾರ ಮತ್ತಿತರ ವ್ಯಾಪಾರಿಗಳಿಗೆ ಪ್ರತ್ಯೇಕ ವಿಭಾಗಗಳನ್ನು ಮಾಡಿ ನಿರ್ಮಿಸಲಾಗಿದೆ. ಮಂಗಳೂರಿನ ವ್ಯಾಪಾರ ವಲಯದಲ್ಲೇ ಆಹಾರ ತಯಾರಿಸಿ ಮಾರಾಟ ಮಾಡಲು ಅವಕಾಶ ನೀಡಿರುವುದರಿಂದ ಗ್ಯಾಸ್ ಅವಘಡ ಸಂಭವಿಸಿದರೆ ಅನಾಹುತಕ್ಕೆ ಯಾರು ಹೊಣೆ” ಎಂದು ಪ್ರಶ್ನಿಸಿದರು.

ಪ್ರತಿಭಟನೆ ವೇಳೆ ಸಂಘದ ಮುಖಂಡ ವಿಜಯ ಜೈನ್, ಸಿಕಂದರ್ ಬೇಗ್, ಹಂಝ, ಶಿವಪ್ಪ, ಹಸನ್ ಕುದ್ರೋಳಿ, ರಫೀಕ್, ಮೇಬಲ್ ಡಿ ಸೋಜ, ಫೀಲೋಮಿನ, ಅಬ್ದುಲ್ ಖಾದರ್, ಹನೀಫ್ ಬೆಂಗ್ರೆ, ಗುಡ್ಡಪ್ಪ, ಮುತ್ತುರಾಜ್, ಗಂಗಮ್ಮ ಮುಂತಾದವರು ಇದ್ದರು.
