ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನಲ್ಲಿ ಮಕ್ಕಳ ರಕ್ಷಣೆ ಕಾರ್ಯಾಚರಣೆ ಬಿರುಸುಗೊಂಡಿದ್ದು, ಜಿಲ್ಲಾ ಬಾಲ ಕಾರ್ಮಿಕ ಯೋಜನೆಯ ಅಧಿಕಾರಿಗಳ ತಂಡವು ಇಂದು 22 ಮಂದಿ ಮಕ್ಕಳನ್ನು ರಕ್ಷಿಸಿದೆ.
ಮಕ್ಕಳನ್ನು ಶಾಲೆ ಬಿಡಿಸಿ ಕೃಷಿ ಚಟುವಟಿಕೆಗಳಿಗಾಗಿ ಸರಕು ಸಾಗಣೆ ವಾಹನಗಳಲ್ಲಿ ಹೊಲಕ್ಕೆ ಕರೆದೊಯ್ಯುತ್ತಿರುವ ವಾಹನಗಳನ್ನು ಕಾರ್ಯಾಚರಣೆ ಮಾಡಿ ಅಧಿಕಾರಿಗಳು ಮತ್ತು ಸಿಬ್ಬಂದಿಯು 07 ಸರಕು ಸಾಗಣೆ ವಾಹನಗಳನ್ನು ಜಪ್ತಿ ಮಾಡಿ ಮಕ್ಕಳನ್ನು ರಕ್ಷಿಸಿದರು.
ಪ್ರಕರಣ ದಾಖಲು: ಜನವರಿ 10ರಂದು ನಡೆದ ಕಾರ್ಯಾಚರಣೆಯಲ್ಲಿ ದೇವದುರ್ಗ ತಾಲೂಕಿನ ಗಬ್ಬೂರು ಹೋಬಳಿ ವ್ಯಾಪ್ತಿಯಲ್ಲಿ ಹತ್ತಿ, ಮೆಣಸಿನಕಾಯಿ ಹಾಗೂ ಇತರ ಹೊಲಗಳಲ್ಲಿ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ತಪಾಸಣೆ ನಡೆಸಿದಾಗ ಹತ್ತಿ ಹೊಲದಲ್ಲಿ ಐವರು ಬಾಲಕಾರ್ಮಿಕರು ಕೆಲಸ ಮಾಡುತ್ತಿರುವುದು ಕಂಡುಬಂದಿದ್ದು, ಈ ಮಕ್ಕಳನ್ನು ಕೆಲಸದಿಂದ ಬಿಡುಗಡೆಗೊಳಿಸಿ, ಶಾಲೆಗೆ ಹೋಗುವಂತೆ ಮನವೊಲಿಸಿ ಮಕ್ಕಳನ್ನು ಪಾಲಕರ ವಶಕ್ಕೆ ಒಪ್ಪಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಮಂಗಳೂರು | ಬೀದಿಬದಿ ವ್ಯಾಪಾರಿಗಳ ಹೋರಾಟ ಹತ್ತಿಕ್ಕಲು ಶಾಸಕ ಕಾಮತ್ ಕುಮ್ಮಕ್ಕು: ಸಿಐಟಿಯು ಸುನಿಲ್ ಕುಮಾರ್ ಬಜಾಲ್ ಆಕ್ರೋಶ
ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದ ಹೊಲದ ಮಾಲೀಕರ ವಿರುದ್ಧ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ(ನಿಷೇಧ ಮತ್ತು ನಿಯಂತ್ರಣ) ಕಾಯ್ದೆಯಡಿ ಗಬ್ಬೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮಕ್ಕಳನ್ನು ಶಾಲೆ ಬಿಡಿಸಿ ಕೃಷಿ ಚಟುವಟಿಕೆಗಳಿಗಾಗಿ ಸರಕು ಸಾಗಣೆ ವಾಹನಗಳಲ್ಲಿ ಕರೆದುಕೊಂಡು ಹೋಗಿ ಬಾಲಕಾರ್ಮಿಕತೆಯಲ್ಲಿ ತೊಡಗಿಸುತ್ತಿದ್ದ 03 ವಾಹನಗಳನ್ನು ಜಪ್ತಿ ಮಾಡಿ ವಾಹನ ಮಾಲೀಕರ, ಚಾಲಕರ ವಿರುದ್ಧ ಪೋಲಿಸ್ ಹಾಗೂ ಸಾರಿಗೆ ಇಲಾಖೆಯ ಅಧಿಕಾರಿಗಳು ಕ್ರಮವಹಿಸಿದ್ದಾರೆ.
