ಒಡಿಶಾದ ಬಾಲಾಸೋರ್‌ನ ಬಹನಾಗಾ ನಿಲ್ದಾಣದ ಸಮೀಪ ಸರಣಿ ಅಪಘಾತದ ದುರಂತ ಸ್ಥಳಕ್ಕೆ ಹಾಗೂ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿರುವ ಸ್ಥಳೀಯ ಆಸ್ಪತ್ರೆಗಳಿಗೆ ಇಂದು ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದಾರೆ.
ಘಟನೆಯ ಬಗ್ಗೆ ಸಂತಾಪ ಸೂಚಿಸಿರುವ ಪ್ರಧಾನಿ ಮೋದಿ ದುರಂತ ಉಂಟಾದ ಬಗ್ಗೆ ಪರಿಸ್ಥಿತಿಯ ಅವಲೋಕನದ ಬಗ್ಗೆ ರೈಲ್ವೆ ಇಲಾಖೆ ಸೇರಿದಂತೆ ಇತರ ಇಲಾಖೆಯೊಂದಿಗೆ ಉನ್ನತ ಮಟ್ಟದ ಪರಿಶೀಲನಾ ಸಭೆ ನಡೆಸಿದ್ದಾರೆ.
ಸದ್ಯ ಮಾಹಿತಿಯ ಪ್ರಕಾರ 288 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಈ ನಡುವೆ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರವನ್ನು ನೀಡುವುದಾಗಿ ರೈಲ್ವೆ ಇಲಾಖೆ ಘೋಷಿಸಿದೆ.
ಘಟನಾ ಸ್ಥಳಕ್ಕೆ ನೆರವು ನೀಡಲು ಹಾಗೂ ಗಾಯಾಳುಗಳಿಗೆ ಸಹಾಯ ಮಾಡಲು ಭಾರತೀಯ ಸೇನೆಯನ್ನು ನಿಯೋಜಿಸಲಾಗಿದೆ. ಸೇನೆಯ ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ತಂಡಗಳು ಆಂಬುಲೆನ್ಸ್ ಹಾಗೂ ಹಲವು ಸೇವಾ ತಂಡಗಳೊಂದಿಗೆ ಘಟನಾ ಸ್ಥಳಕ್ಕೆ ಶೀಘ್ರದಲ್ಲೇ ಆಗಮಿಸಿ ನೆರವು ಕಾರ್ಯ ಆರಂಭಿಸಲಿವೆ.
ಈ ಸುದ್ದಿ ಓದಿದ್ದೀರಾ? 300ಕ್ಕೂ ಹೆಚ್ಚು ಸಾವು, ತ್ರಿವಳಿ ರೈಲು ದುರಂತ ಸಂಭವಿಸಿದ್ದು ಹೇಗೆ? ರಾಜ್ಯದ 110 ಪ್ರಯಾಣಿಕರು ಸುರಕ್ಷಿತ
ಶುಕ್ರವಾರ ಸಂಜೆ 7 ಗಂಟೆ ಸುಮಾರಿಗೆ ಒಡಿಶಾದ ಬಾಲಾಸೋರ್‌ನ ಬಹನಾಗಾ ನಿಲ್ದಾಣದ ಸಮೀಪ ಕೋಲ್ಕತಾದಿಂದ ಬರುತ್ತಿದ್ದ ಶಾಲಿಮಾರ್ – ಚೆನ್ನೈ ಸೆಂಟ್ರಲ್ ಕೋರಮಂಡಲ್ ಎಕ್ಸ್‌ಪ್ರೆಸ್ ಹಳಿ ತಪ್ಪುತ್ತದೆ. ಹಳಿ ತಪ್ಪಿದ ನಂತರ ಒಂದೇ ಹಳಿಯ ಮೇಲೆ ಹೋಗುತ್ತಿದ್ದ ಗೂಡ್ಸ್ ರೈಲಿಗೆ ಕೋರಮಂಡಲ್ ರೈಲು ಢಿಕ್ಕಿ ಹೊಡೆಯುತ್ತದೆ. ಢಿಕ್ಕಿ ಹೊಡೆದ ನಂತರ ಪಕ್ಕದ ಹಳಿ ಮೇಲೆ ಕೋರಮಂಡಲ್ ರೈಲಿನ ಬೋಗಿಗಳು ಬೀಳುತ್ತವೆ. ಆಗ ಇದೇ ಸಂದರ್ಭದಲ್ಲಿ ಬೋಗಿಗಳು ಬಿದ್ದ ಹಳಿಯ ಮೇಲೆ ಬಂದ ಯಶವಂತಪುರ – ಹೌರಾ ಎಕ್ಸ್‌ಪ್ರೆಸ್ ರೈಲು ಢಿಕ್ಕಿ ಹೊಡೆದು ಸರಣಿ ಅಪಘಾತವಾಗಿದೆ. ಇತ್ತೀಚಿನ ವರ್ಷಗಳಲ್ಲಿ ನಡೆದ ಅತಿದೊಡ್ಡ ರೈಲು ದುರಂತ ಇದಾಗಿದೆ ಎಂದು ಹೇಳಲಾಗಿದೆ.
49 ರೈಲುಗಳ ಸಂಚಾರ ರದ್ದು
ಒಡಿಶಾದ ಬಾಲಾಸೋರ್‌ನಲ್ಲಿ ಸಂಭವಿಸಿದ ಭೀಕರ ರೈಲು ದುರಂತದ ಪರಿಣಾಮ ಸುಮಾರು 49 ರೈಲುಗಳ ಸಂಚಾರ ರದ್ದಾಗಿದೆ. 38 ರೈಲುಗಳ ಸಂಚಾರ ಮಾರ್ಗ ಬದಲಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡು, ಅಪಘಾತಕ್ಕೀಡಾದ ರೈಲುಗಳ ಬೋಗಿಗಳನ್ನು ತೆರವುಗೊಳಿಸಿ, ಹಳಿಗಳನ್ನು ಸರಿಪಡಿಸುವ ಕಾರ್ಯ ನಡೆಯಬೇಕಿದೆ. ಅಲ್ಲಿಯವರೆಗೂ ಈ ಮಾರ್ಗದಲ್ಲಿ ರೈಲುಗಳ ಓಡಾಟ ಸಾಧ್ಯವಿಲ್ಲ. ಈ ಹಿನ್ನೆಲೆ ಹಲವಾರು ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ. ಅಲ್ಲದೇ 10 ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.
ತಿರುವನಂತಪುರಂ- ಕೋಲ್ಕತ್ತಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ (22641), ಬೆಂಗಳೂರು-ಗುವಾಹಟಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ (12509) ಮತ್ತು ಹೌರಾ-ತಿರುಪತಿ ಹಮ್ಸಾಫರ್ ಎಕ್ಸ್‌ಪ್ರೆಸ್ (20889) ರೈಲುಗಳು ರದ್ದಾಗಿವೆ.