ಸರ್ಕಾರಿ ಹುದ್ದೆಗಳಿಂದ 2,896 ಶಿಕ್ಷಕರ ವಜಾ: ಮರು ನೇಮಕಾತಿಗೆ ಆಗ್ರಹಿಸಿ ‘ದೀರ್ಘದಂಡ’ ಪ್ರತಿಭಟನೆ

Date:

Advertisements

ಛತ್ತೀಸ್‌ಗಢದಲ್ಲಿ ಹಲವಾರು ಇಲಾಖೆಗಳಲ್ಲಿ ಸರ್ಕಾರಿ ಹುದ್ದೆಗಳು ಖಾಲಿ ಉಳಿದಿವೆ. ಆದರೆ, ಸರ್ಕಾರವು ಆ ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗಿಲ್ಲ. ಪರಿಣಾಮ, ಅಲ್ಲಿನ ಯುವಜನರು ನಿರುದ್ಯೋಗದ ಭೀಕರತೆಯನ್ನು ಎದುರಿಸುತ್ತಿದ್ದಾರೆ. ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ನಡೆಸುವಂತೆ ಒತ್ತಾಯಿಸಿ ಪ್ರತಿಭಟನೆಗಳನ್ನು ನಡೆಸುತ್ತಲೇ ಇದ್ದಾರೆ. ಆದರೆ, ಬಿಜೆಪಿ ಸರ್ಕಾರ ಯುವಜನರನ್ನು ನಿರ್ಲಕ್ಷಿಸಿದೆ. ಹೀಗಾಗಿ, ರಾಜ್ಯದ ಯುವತಿಯರು ಸೋಮವಾರ ವಿನೂತನ ಪ್ರತಿಭಟನೆ ನಡೆಸಿದ್ದಾರೆ. ರಸ್ತೆಯ ಉದ್ದಕ್ಕೂ ದೀರ್ಘದಂಡ ನಮಸ್ಕಾರ ಹಾಕಿ ಹೋರಾಟ ನಡೆಸಿದ್ದಾರೆ.

ಛತ್ತೀಸ್‌ಗಢದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಛತ್ತೀಸ್‌ಗಢ ಶಿಕ್ಷಣ ಇಲಾಖೆಯಲ್ಲಿ ಸಾವಿರಾರು ಹುದ್ದೆಗಳು ಖಾಲಿ ಇವೆ. ಆದರೆ, ನೇಮಕಾತಿ ನಡೆದಿಲ್ಲ. ಮಾತ್ರವಲ್ಲದೆ, ಬಿಇಡಿಯಂತಹ ಪದವಿಗಳನ್ನು ಪಡೆದು ಶಿಕ್ಷಕ ಹುದ್ದೆಗೆ ನೇಮಕವಾಗಿದ್ದ ಸುಮಾರು 2,896 ಶಿಕ್ಷಕರನ್ನು ವಜಾಗೊಳಿಸಲಾಗಿದೆ. ಸರ್ಕಾರವು ಎಸಗಿದ ನ್ಯಾಯಾಂಗ ನಿಂದನೆಯಿಂದಾಗಿ ಸಾವಿರಾರು ಶಿಕ್ಷಕರನ್ನು ವಜಾಗೊಳಿಸಲಾಗಿದೆ. ವಜಾಗೊಂಡ ಹಲವಾರು ಶಿಕ್ಷಕರು ಬಸ್ತಾರ್ ಮತ್ತು ಸುರ್ಗುಜಾದಂತಹ ಬುಡಕಟ್ಟು ಜಿಲ್ಲೆಗಳಿಗೆ ಸೇರಿದವರಾಗಿದ್ದಾರೆ. ಹೀಗಾಗಿ, ಕೆಲಸ ಕಳೆದುಕೊಂಡ ಶಿಕ್ಷಕರ ಕುಟುಂಬಗಳು ಈಗ ನಿರ್ಗತಿಕ ಪರಿಸ್ಥಿತಿ ಎದುರಿಸುತ್ತಿವೆ.

2023ರಲ್ಲಿ ಕಠಿಣ ಪರೀಕ್ಷೆಗಳನ್ನು ಬರೆದು, ಶಿಕ್ಷಕ ವೃತ್ತಿಗೆ ಹಲವರು ಆಯ್ಕೆಯಾಗಿದ್ದರು. ಆದರೆ, ಅವರ ನೇಮಕವಾದ 14 ತಿಂಗಳ ನಂತರ, ಡಿಇಎಲ್‌ಇಡಿ ಅಭ್ಯರ್ಥಿಗಳು ಪ್ರಾಥಮಿಕ ಶಾಲೆಗಳಲ್ಲಿ ಪಾಠಮಾಡಲು ಬಿಎಡ್‌ ಪದವೀಧರರ ಅರ್ಹತೆಯನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಸರ್ಕಾರವು ನ್ಯಾಯಾಂಗ ನಿಂದನೆ ಮಾಡಿದೆ ಎಂದು ಆರೋಪಿಸಿತ್ತು. ವಿಚಾರಣೆ ನಡೆಸಿದ ಹೈಕೋರ್ಟ್‌ ತೀರ್ಪಿನ ಆಧಾರದ ಮೇಲೆ 2,896 ಶಿಕ್ಷಕರನ್ನು ವಜಾಗೊಳಿಸಲಾಗಿದೆ.

Advertisements

ಸೇವೆಯಿಂದ ವಜಾಗೊಂಡಿರುವ ಶಿಕ್ಷಕರನ್ನು ತಮ್ಮನ್ನು ಸೇವೆಗೆ ಮರುನೇಮಕ ಮಾಡಿಕೊಳ್ಳಬೇಕು. ಜೊತೆಗೆ, ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ನಮಗೆ ಸರ್ಕಾರ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದ್ದಾರೆ. ಆದರೆ, ಸರ್ಕಾರ ನ್ಯಾಯ ಕೊಡುವ ಬದಲು ನಮಗೆ ಪೊಲೀಸರ ಮೂಲಕ ಬೆದರಿಕೆ ಹಾಕುತ್ತಿದೆ ಎಂದು ಆರೋಪಿಸಿದ್ದಾರೆ.

ಪ್ರತಿಭಟನೆಗಳನ್ನು ದಮನಿಸುವ ಸರ್ಕಾರದ ಧೋರಣೆಯಿಂದಾಗಿ ನಮ್ಮ ಕುಟುಂಬಗಳು ಹತಾಶೆ ಮತ್ತು ಭಯಕ್ಕೆ ಒಳಗಾಗಿವೆ ಎಂದಿರುವ ಪ್ರತಿಭಟನಾಕಾರರು, ಅದರಲ್ಲೂ ಶಿಕ್ಷಕಿಯರು ತಮ್ಮ ದುಸ್ಥಿತಿಯ ಬಗ್ಗೆ ಗಮನ ಸೆಳೆಯಲು ರಾಯ್‌ಪುರದ ರಸ್ತೆಗಳಲ್ಲಿ ‘ದೀರ್ಘದಂಡ ನಮಸ್ಕಾರ’ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಮನೆ-ಮನೆಗೆ ತೆರಳಿ ಹೊಸದಾಗಿ ಕೊಯ್ಲು ಮಾಡಿದ ಅಕ್ಕಿಯನ್ನು ಭಿಕ್ಷೆಯಾಗಿ ನೀಡುವಂತೆ ಬೇಡಿದ್ದಾರೆ. ಸರ್ಕಾರದ ಧೋರಣೆಯಿಂದಾಗಿ ತಾವು ನಿರ್ಲಕ್ಷ್ಯಕ್ಕೊಳಗಾಗಿದ್ದೇವೆ. ನಮಗೆ ಸಹಾಯ ಮಾಡಿ ಎಂದು ಕೇಳುವ ಮೂಲಕ ಸರ್ಕಾರದ ವಿಫಲತೆಯನ್ನು ಎತ್ತಿ ತೋರಿಸಿದ್ದಾರೆ.

ಪ್ರತಿಭಟನೆ ನಡೆಸುತ್ತಿದ್ದ ಯುವತಿಯರಿಗೆ ಪೊಲೀಸರು ಬೆದರಿಕೆ ಹಾಕಿದ್ದಾರೆ. “ನಾವು ನಮ್ಮ ನಿಜವಾದ ಪೊಲೀಸ್ ಕೆಲಸಕ್ಕೆ ಬಂದರೆ ನೀವು ಭಾರೀ ತೊಂದರೆ ಎದುರಿಸಬೇಕಾಗುತ್ತದೆ” ಎಂದು ಪೊಲೀಸರು ದರ್ಪದಿಂದ ಮಾತನಾಡಿದ್ದಾರೆ.

ನಮ್ಮ ಸಮಸ್ಯೆಯನ್ನು ಪರಿಹರಿಸಲು ಸರ್ಕಾರಕ್ಕೆ ರಾಜಕೀಯ ಇಚ್ಛಾಶಕ್ತಿಯ ಕೊರತೆ ಇದೆ. ನ್ಯಾಯಾಲಯದಲ್ಲಿ ನಮ್ಮ ಪ್ರಕರಣವನ್ನು ಪರಿಣಾಮಕಾರಿಯಾಗಿ ವಾದಿಸುವ ಮೂಲಕ ನಮ್ಮನ್ನು ವಜಾಗೊಳಿಸುವುದನ್ನು ಸರ್ಕಾರ ತಡೆಯಬಹುದಿತ್ತು. ಆದರೆ, ಸರ್ಕಾರಕ್ಕೆ ಯಾವುದೇ ಇಚ್ಛಾಶಕ್ತಿ ಇಲ್ಲವೆಂದು ಆರೋಪಿಸಿದ್ದಾರೆ.

ಛತ್ತೀಸ್‌ಗಢದಲ್ಲಿ 4,000 ಕ್ಕೂ ಹೆಚ್ಚು ಲ್ಯಾಬ್ ಸಹಾಯಕ ಹುದ್ದೆಗಳು ಮತ್ತು 24,000 ಕ್ಕೂ ಹೆಚ್ಚು ಸಹಾಯಕ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳಿಗೆ ನೇಮಕಾತಿ ನಡೆಸಬೇಕು. ನಮ್ಮನ್ನು ಮರು ನೇಮಕ ಮಾಡಿಕೊಳ್ಳಬೇಕೆಂದು ಪ್ರತಿಭಟನಾನಿರತ ಶಿಕ್ಷಕಿಯರು ಆಗ್ರಹಿಸಿದ್ದಾರೆ.

ಸರ್ಕಾರದ ನಿರ್ಲಕ್ಷ್ಯದಿಂದ ವಜಾಗೊಂಡಿರುವ ನಮ್ಮಲ್ಲಿ 71% ಶಿಕ್ಷಕರು ಬುಡಕಟ್ಟು ಸಮುದಾಯಕ್ಕೆ ಸೇರಿದವರು. ಹೆಚ್ಚಿನವರು ಮಹಿಳೆಯರು. ಬುಡಕಟ್ಟು ಪ್ರದೇಶಗಳಲ್ಲಿ ಮಹಿಳೆಯರು ಎದುರಿಸುತ್ತಿರುವ ಸಾಮಾಜಿಕ ಮತ್ತು ಆರ್ಥಿಕ ಅಡೆತಡೆಗಳಿಂದಾಗಿ, ಪರ್ಯಾಯ ಉದ್ಯೋಗವನ್ನು ಹುಡುಕುವುದು ಸವಾಲಿನ ಸಂಗತಿ, ನಮಗೆ ಅನ್ಯಾಯವಾಗಿದೆ. ಸರ್ಕಾರವು ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದ್ದಾರೆ.

ಶಿಕ್ಷಣ ಇಲಾಖೆಯ ಮುಖ್ಯಸ್ಥರೂ ಆಗಿರುವ ಮುಖ್ಯಮಂತ್ರಿ ವಿಷ್ಣು ದೇವ ಸಾಯಿ ಅವರನ್ನು ಭೇಟಿ ಮಾಡಲು ಪ್ರತಿಭಟನಾನಿರತರು ಪದೇ ಪದೇ ಪ್ರಯತ್ನಿಸಿದ್ದಾರೆ. ಆದರೆ, ಅವರ ಭೇಟಿಗೆ ಮುಖ್ಯಮಂತ್ರಿಗಳು ಅವಕಾಶ ನೀಡುತ್ತಿಲ್ಲ. ಮುಖ್ಯಮಂತ್ರಿಗಳು ಕೇವಲ ಭರವಸೆ ನೀಡುತ್ತಲೇ, ಯಾಮಾರಿಸುತ್ತಿದ್ದಾರೆ ಎಂದು ಶಿಕ್ಷಕಿಯರು ಆರೋಪಿಸಿದ್ದಾರೆ.

ಶಿಕ್ಷಕಿಯರ ಹೋರಾಟದ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ, “ಬಿಎಡ್ ಶಿಕ್ಷಕರು ‘ದೀರ್ಘದಂಡ ನಮಸ್ಕಾರ’ ಹಾಕುತ್ತಿರುವ ಈ ದೃಶ್ಯಗಳು ಈ ದೇಶದಲ್ಲಿ ಯುವಜನರನ್ನು ಹೇಗೆ ನಡೆಸಿಕೊಳ್ಳಲಾಗುತ್ತಿದೆ ಎಂಬುದನ್ನು ತೋರಿಸುತ್ತದೆ. ಬಿಜೆಪಿ ಸರ್ಕಾರ ಛತ್ತೀಸ್‌ಗಢದಲ್ಲಿ 1 ಲಕ್ಷ ಉದ್ಯೋಗಗಳನ್ನು ನೀಡುವುದಾಗಿ ಭರವಸೆ ನೀಡಿತ್ತು. ರಾಜ್ಯದಲ್ಲಿ 33,000 ಬೋಧನಾ ಹುದ್ದೆಗಳು ಖಾಲಿಯಾಗಿವೆ. ಆದರೆ, ಇದೇ ಸರ್ಕಾರ 3,000 ಶಿಕ್ಷಕರನ್ನು ವಜಾಗೊಳಿಸಿದೆ. ಈ ಯುವತಿಯರು ತಮ್ಮನ್ನು ಮರುನೇಮಕ ಮಾಡಿಕೊಳ್ಳುವಂತೆ ಒತ್ತಾಯಿಸಿ ಚಳಿ-ಗಾಳಿಯ ನಡುವೆ ರಸ್ತೆಯಲ್ಲಿ ಮಲಗಿದ್ದಾರೆ. ಪ್ರಸ್ತುತ, ಉತ್ತರ ಪ್ರದೇಶ, ಮಧ್ಯಪ್ರದೇಶ, ಬಿಹಾರ, ಛತ್ತೀಸ್‌ಗಢ ಮತ್ತು ಇತರ ರಾಜ್ಯಗಳ ಯುವಜನರು ಭ್ರಷ್ಟಾಚಾರ ಮತ್ತು ನಿರುದ್ಯೋಗದ ವಿರುದ್ಧ ಪ್ರತಿಭಟನೆ ನಡೆಸಿ ಬೀದಿಗಿಳಿಯುತ್ತಿದ್ದಾರೆ. ಬಿಜೆಪಿ ಯುವಜನರ ಭವಿಷ್ಯವನ್ನು ಕತ್ತಲೆಗೆ ತಳ್ಳಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದಷ್ಟೇ ಅಲ್ಲ, ಇಡೀ ದೇಶದಲ್ಲಿಯೇ ನಿರುದ್ಯೋಗ ಸಮಸ್ಯೆ ರಾರಾಜಿಸುತ್ತಿದೆ. ವಿಶೇಷವಾಗಿ ಉತ್ತರ ಪ್ರದೇಶ ಮತ್ತು ಬಿಹಾರ ಎರಡೂ ರಾಜ್ಯಗಳ ಯುವಜನರು ನಿರುದ್ಯೋಗ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಮೋದಿ ಅಧಿಕಾರಕ್ಕೆ ಬರುವ ಹಿಂದಿನ ವರ್ಷ- 2012ರಲ್ಲಿ ನಿರುದ್ಯೋಗ ದರವು 2.1% ಇತ್ತು. 2024ರಲ್ಲಿ 9.1%ಗೆ ಏರಿಕೆಯಾಗಿದೆ. ಪದವೀಧರರಲ್ಲಿ ನಿರುದ್ಯೋಗ ದರವು 19.2% ರಿಂದ 35.8%ಕ್ಕೆ ಏರಿದ್ದರೆ, ಸ್ನಾತಕೋತ್ತರ ಪದವಿ ಪಡೆದವರಲ್ಲಿ ನಿರುದ್ಯೋಗ ದರವು 36.2%ಗೆ ದಾಖಲಾಗಿದೆ. 20ರಿಂದ 24 ವಯಸ್ಸಿನ ಯುವಜನರ ನಿರುದ್ಯೋಗ ಪ್ರಮಾಣವು ಬರೋಬ್ಬರಿ 44.49%ಗೆ ಏರಿಕೆಯಾಗಿದೆ. ಅಂತೆಯೇ, 25 ಮತ್ತು 29ರ ನಡುವಿನ ಯುವಜನರಲ್ಲಿ ನಿರುದ್ಯೋಗವು 14.33% ಇದೆ. ದೇಶದಲ್ಲಿ ಬಹಳ ದೊಡ್ಡ ಸಂಖ್ಯೆಯಲ್ಲಿರುವ ನಿರುದ್ಯೋಗಿಗಳಿಗೆ ಕೆಲಸ ಕೊಡುವವರೂ ಇಲ್ಲ; ಅವರ ಶಕ್ತಿ ಮತ್ತು ಸಾಮರ್ಥ್ಯವನ್ನು ಸರಿದಾರಿಯಲ್ಲಿ ಸದುಪಯೋಗಪಡಿಸಿಕೊಳ್ಳುವ ನಾಯಕರೂ ಕೂಡ ಇಲ್ಲ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಬಿಐ ಅಧಿಕಾರಿಗಳಂತೆ ನಟಿಸಿ 2.3 ಕೋಟಿ ರೂ. ದೋಚಿದ್ದ ಗ್ಯಾಂಗ್: ಇಬ್ಬರ ಬಂಧನ

ಕೇಂದ್ರ ತನಿಖಾ ದಳ (ಸಿಬಿಐ) ಅಧಿಕಾರಿಗಳಂತೆ ನಟಿಸಿ ಉದ್ಯಮಿಯೊಬ್ಬರ ಕಚೇರಿಯಿಂದ ಗ್ಯಾಂಗ್...

ಬೀದಿ ನಾಯಿಗಳಿಗೆ ಲಸಿಕೆ ಹಾಕಿದ ನಂತರ ಅದೇ ಸ್ಥಳಕ್ಕೆ ತಂದು ಬಿಡಬೇಕು: ಸುಪ್ರೀಂ ಕೋರ್ಟ್‌

ಬೀದಿ ನಾಯಿಗಳಿಗೆ ಸಂಬಂಧಿಸಿದ್ದಂತೆ ಆಗಸ್ಟ್ 11ರ ಆದೇಶವನ್ನು ಮಾರ್ಪಡಿಸಿದ ಸುಪ್ರೀಂ...

ವಿವಾದಾತ್ಮಕ ಯೂಟ್ಯೂಬರ್ ಎಲ್ವಿಶ್ ಮನೆ ಮೇಲೆ ಗುಂಡಿನ ದಾಳಿ: ಎನ್‌ಕೌಂಟರ್ ಮಾಡಿ ಆರೋಪಿ ಬಂಧನ

ಬಲಪಂಥೀಯ, ವಿವಾದಾತ್ಮಕ ಯೂಟ್ಯೂಬರ್ ಮತ್ತು ಬಿಗ್ ಬಾಸ್ ವಿಜೇತ ಎಲ್ವಿಶ್ ಯಾದವ್‌...

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

Download Eedina App Android / iOS

X