2025ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭಕ್ಕೆ ಬಿಸಿಸಿಐ ದಿನಾಂಕ ನಿಗದಿ ಮಾಡಿದೆ. ಐಪಿಎಲ್ನ ಉದ್ಘಾಟನಾ ಪಂದ್ಯವು ಮಾರ್ಚ್ 21ರಂದು ಕೋಲ್ಕತ್ತದಲ್ಲಿ ನಡೆಯಲಿದೆ ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ತಿಳಿಸಿದ್ದಾರೆ.
ಮುಂಬೈನಲ್ಲಿ ಬಿಸಿಸಿಐ ವಿಶೇಷ ಸಭೆ ನಡೆಸಿದೆ. ಸಭೆಯ ಬಳಿಕ ಮಾಹಿತಿ ನೀಡಿರುವ ಶುಕ್ಲಾ, “ಮಾರ್ಚ್ 21ರಂದು ಐಪಿಎಲ್ ಉದ್ಘಾಟನಾ ಪಂದ್ಯ ನಡೆಯಲಿದ್ದು, ಮೇ 25ರಂದು ಫೈನಲ್ ಪಂದ್ಯ ನಡೆಯಲಿದೆ” ಎಂದು ತಿಳಿಸಿದ್ದಾರೆ.
ಉದ್ಘಾಟನಾ ಪಂದ್ಯವು ವಾಡಿಕೆಯಂತೆ ಹಿಂದಿನ ಟೂರ್ನಿಯಲ್ಲಿ ಚಾಂಪಿಯನ್ ಆದ ತಂಡದ ತವರಿನಲ್ಲೇ ನಡೆಯುತ್ತಿದೆ. ಹೀಗಾಗಿ, 2024ರಲ್ಲಿ ಐಪಿಎಲ್ ಟ್ರೋಫಿ ಗೆದ್ದಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡದ ತವರು ಕೋಲ್ಕತ್ತಾದಲ್ಲಿ ಪಂದ್ಯ ನಡೆಯಲಿದೆ. ಮಾರ್ಚ್ 21ರಂದು ಕೋಲ್ಕತ್ತಾದ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಕೆಕೆಆರ್ ಕಣಕ್ಕಿಳಿಯಲಿದೆ. ಕೆಕೆಆರ್ ವಿರುದ್ಧ ಯಾವ ತಂಡ ಹಣಾಹಣಿ ನಡೆಸಲಿದೆ ಎಂಬುದು ಇನ್ನೂ ಘೋಷಣೆಯಾಗಿಲ್ಲ.
ಐಪಿಎಲ್ಗೂ ಮುನ್ನ ಮಹಿಳಾ ಪ್ರೀಮಿಯರ್ ಲೀಗ್ ನಡೆಯಬೇಕಿತ್ತು. ಆದರೆ, ಇನ್ನೂ ಮಹಿಳಾ ಪ್ರೀಮಿಯರ್ ಲೀಗ್ ಬಗ್ಗೆ ಬಿಸಿಸಿಐ ಮಾಹಿತಿ ನೀಡಿಲ್ಲ. ಯಾವಾಗ ನಡೆಯಲಿದೆ ಎಂಬುದರ ಬಗ್ಗೆ ಖಾತ್ರಿಪಡಿಸಿಲ್ಲ.