- ಲಗೇಜ್ ತೂಕ 22 ಕೆಜಿ ಇದ್ದ ಕಾರಣ ಹೆಚ್ಚುವರಿ ಹಣ ಪಾವತಿ ಮಾಡಿ ಎಂದ ಸಿಬ್ಬಂದಿ
- ಪರಿಶೀಲನೆ ವೇಳೆ ಬ್ಯಾಗ್‌ನಲ್ಲಿ ಯಾವುದೇ ಅನುಮಾನಾಸ್ಪದ ವಸ್ತುಗಳು ಕಂಡುಬಂದಿಲ್ಲ
ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೆಚ್ಚುವರಿ ಲಗೇಜ್‍ಗೆ ಹಣ ಪಾವತಿಸುವಂತೆ ಹೇಳಿದಕ್ಕೆ ಬ್ಯಾಗ್‍ನಲ್ಲಿ ಬಾಂಬ್ ಇದೆ ಎಂದು ಮಹಿಳೆಯೊಬ್ಬರು ಹೈಡ್ರಾಮಾ ಮಾಡಿದ ಘಟನೆ ನಡೆದಿದೆ.
40 ವರ್ಷದ ಗೃಹಿಣಿಯೊಬ್ಬರು ಕಳೆದ ಸೋಮವಾರ ದಕ್ಷಿಣ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದರು.
ಮುಂಬೈ-ಕೋಲ್ಕತ್ತಾ ವಿಮಾನದ ಚೆಕ್-ಇನ್ ಕೌಂಟರ್ ತಲುಪಿದ ಬಳಿಕ ಏರ್‌ಪೋರ್ಟ್ ಸಿಬ್ಬಂದಿಗೆ ಮಹಿಳೆಯೂ ತಮ್ಮ ಬೋರ್ಡಿಂಗ್ ಪಾಸ್ ಜತೆಗೆ ಎರಡು ಬ್ಯಾಗಗಳನ್ನು ನೀಡಿದ್ದಾರೆ. ಈ ವೇಳೆ, ಅವರ ಲಗೇಜ್ ತೂಕ 22 ಕೆಜಿ ಇದ್ದ ಕಾರಣ ಸಿಬ್ಬಂದಿ ಹೆಚ್ಚುವರಿ ಹಣ ಪಾವತಿ ಮಾಡಿ ಎಂದು ಕೇಳಿದ್ದಾರೆ.
ಏರ್‌ಲೈನ್ಸ್‌ನ ನಿಯಮಗಳ ಪ್ರಕಾರ, ಗರಿಷ್ಠ 15 ಕೆಜಿ ತೂಕದ ಒಂದು ಬ್ಯಾಗ್ ಅನ್ನು ಮಾತ್ರ ಪ್ರಯಾಣಿಕರು ತಮ್ಮ ಜತೆಗೆ ಉಚಿತವಾಗಿ ತೆಗೆದುಕೊಂಡು ಹೋಗಬಹುದು. ಆದರೆ, ಮಹಿಳೆಯ ಬ್ಯಾಗ್‌ನ ತೂಕ 22 ಕೆಜಿ ಇದ್ದ ಹಿನ್ನೆಲೆ, ಸಿಬ್ಬಂದಿ ಹೆಚ್ಚುವರಿ ಹಣ ಪಾವತಿಸುವಂತೆ ಕೇಳಿದ್ದಾರೆ.
ಮಹಿಳೆಯೂ ಹೆಚ್ಚುವರಿ ಹಣ ಪಾವತಿ ಮಾಡಲು ನಿರಾಕರಿಸಿದ್ದು, ಪ್ರತಿಯಾಗಿ ಸಿಬ್ಬಂದಿ ಜತೆಗೆ ಕೆಲ ಸಮಯ ವಾಗ್ವಾದಕ್ಕೆ ಇಳಿದಿದ್ದಾರೆ. ಈ ವೇಳೆ, ತಮ್ಮ ಬ್ಯಾಗ್‌ನಲ್ಲಿ ಬಾಂಬ್ ಇರುವುದಾಗಿ ಹೇಳಿದ್ದಾರೆ.
ಮಹಿಳೆಯ ಈ ಹೇಳಿಕೆಯೂ ಕೆಲ ಸಮಯ ಸಿಬ್ಬಂದಿ ಸೇರಿದಂತೆ ಪ್ರಯಾಣಿಕರಲ್ಲಿಯೂ ಆತಂಕದ ವಾತಾವರಣ ಸೃಷ್ಠಿ ಮಾಡಿತ್ತು. ಈ ಮಾತನ್ನು ಆಲಿಸಿದ ಕರ್ತವ್ಯ ನಿರತ ಭದ್ರತಾ ಪಡೆ ಸಿಬ್ಬಂದಿ ಮಹಿಳೆಯ ಬ್ಯಾಗ್ ಅನ್ನು ಪರಿಶೀಲಿಸಿದರು. ಆದರೆ ಬ್ಯಾಗ್‌ನಲ್ಲಿ ಯಾವುದೇ ಅನುಮಾನಾಸ್ಪದ ವಸ್ತುಗಳು ಕಂಡುಬಂದಿಲ್ಲ.
ಈ ಸುದ್ದಿ ಓದಿದ್ದೀರಾ? ಲೋಕಸಭೆ ಚುನಾವಣೆಗೆ ಬಿಬಿಎಂಪಿ ಸಿದ್ಧತೆ | ಜು. 21ರಿಂದ ಮತದಾರರ ಪಟ್ಟಿ ಪರಿಷ್ಕರಣೆ
ನಂತರ ಮಹಿಳೆಯನ್ನು ಏರ್‌ಪೋರ್ಟ್ ಸಿಬ್ಬಂದಿ ಸಹರಾ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಮಹಿಳೆಯ ವಿರುದ್ಧ ಜೀವ ಮತ್ತು ಇತರರ ಸುರಕ್ಷತೆಗೆ ಧಕ್ಕೆ ಆರೋಪದ ಮೇಲೆ ಎಫ್‍ಐಆರ್ ದಾಖಲಿಸಿದ್ದು, ಕೋರ್ಟ್ ಮುಂದೆ ಹಾಜರುಪಡಿಸಿ ಮಹಿಳೆಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಸಹರಾ ಪೊಲೀಸರು ತಿಳಿಸಿದ್ದಾರೆ.
ಮಹಿಳೆಯ ಗುರುತನ್ನು ಗೌಪ್ಯತೆಯ ಕಾರಣದಿಂದಾಗಿ ಪೊಲೀಸರು ಬಿಡುಗಡೆ ಮಾಡಿಲ್ಲ ಎನ್ನಲಾಗಿದೆ.