ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ತಿ.ನರಸೀಪುರ ಪಟ್ಟಣದ ಖಾಸಗಿ ಬಸ್ ನಿಲ್ದಾಣ ವೃತ್ತದ ಬಳಿಯ ಲಿಂಕ್ ರಸ್ತೆಯಲ್ಲಿ ರೈತರು ಮಂಗಳವಾರ ರಾಸುಗಳನ್ನು ಕಿಚ್ಚಾಯಿಸಿ ಸಂಭ್ರಮಪಟ್ಟರು.
ಎತ್ತುಗಳಿಗೆ, ಹಸುಗಳಿಗೆ, ಕರುಗಳಿಗೆ ಹಾಗೂ ಮೇಕೆ- ಕುರಿಗಳಿಗೆ ಅರಿಸಿನ ಬಣ್ಣ ಹಚ್ಚಿ, ಕೊಂಬುಗಳಿಗೆ ವಿವಿಧ ಬಣ್ಣ ಹಾಕಿ ಹೂಗಳಿಂದ ಸಿಂಗರಿಸಿ ಸಂಕ್ರಾಂತಿ ಸಂಭ್ರಮಕ್ಕೆ ರೈತರು, ಯುವಕರು ಕಳೆ ತಂದರು.
ಲಿಂಕ್ ರಸ್ತೆಯಲ್ಲಿ ಹುಲ್ಲನ್ನು ಅಡ್ಡಲಾಗಿ ಹಾಸಿದ ಬಳಿದ ಗ್ರಾಮಸ್ಥರು ಪೂಜೆ ಸಲ್ಲಿಸಿ ನಂತರ ಬೆಂಕಿ ಹಚ್ಚಿದರು. ಆ ಹೊತ್ತಿಗೆ ಕಿಚ್ಚು ಹಾಯಲು ಸಿದ್ಧವಾಗಿರುವ ಅಲಂಕೃತ ಜಾನುವಾರುಗಳು ಬೆಂಕಿಯ ಕೆನ್ನಾಲಿಗೆಯಲ್ಲಿ ಜಿಗಿದು ಹೋದವು.
ರಸ್ತೆಯ ಇಕ್ಕೆಲಗಳಲ್ಲಿ ನಿಂತ ಜನರು ರಾಸುಗಳು ಬೆಂಕಿಯಲ್ಲಿ ಓಡುವುದನ್ನು ನೋಡಿ ಸಂಭ್ರಮಿಸಿದರು. ನಂತರ ಹುಲ್ಲಿನ ಬೂದಿಯನ್ನು ಹಣೆಗೆ ಹಚ್ಚಿಕೊಂಡರು.