ಚಿಕ್ಕಮಗಳೂರು ಜಿಲ್ಲೆಯನ್ನು ಮಂಗನ ಕಾಯಿಲೆ ಕಳೆದ 7-8 ವರ್ಷಗಳಿಂದ ಕಾಡುತ್ತಲೇ ಇದೆ. ಮಳೆ ಮತ್ತು ಚಳಿಗಾಲದಲ್ಲಿ ಕಾಯಿಲೆ ಆತಂಕ ಹೆಚ್ಚುತ್ತಲೇ ಇರುತ್ತದೆ. ಇದೀಗ, ಜಿಲ್ಲೆಯಲ್ಲಿ ಮತ್ತೆ ಮಂಗನ ಕಾಯಿಲೆ ಕಾಣಿಸಿಕೊಂಡಿದ್ದು, ಆರೋಗ್ಯ ಇಲಾಖೆ ಹೈ-ಅಲರ್ಟ್ ಘೋಷಿಸಿದೆ. ಆರೋಗ್ಯ ತಪಾಸಣೆಗಳನ್ನು ಹೆಚ್ಚಿಸಿದೆ.
ಚಿಕ್ಕಮಗಳೂರು ಬಳಿಯ ಮತ್ತಿಖಂಡ ಗ್ರಾಮದ ಯುವಕನೊಬ್ಬ ಮಂಗನ ಕಾಯಿಲೆಗೆ ತುತ್ತಾಗಿದ್ದಾರೆ. ಕೆಲ ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಯುವಕನಿಗೆ ರಕ್ತ ಪರೀಕ್ಷೆ ಮಾಡಿಸಲಾಗಿತ್ತು. ರಕ್ತ ಪರೀಕ್ಷೆ ವರದಿಯಲ್ಲಿ ಆತ ಮಂಗನ ಕಾಯಿಲೆಗೆ ತುತ್ತಾಗಿದ್ದಾನೆ ಎಂದು ದೃಢಪಟ್ಟಿದೆ. ಯುವಕನ ಆರೋಗ್ಯದ ಮೇಲೆ ನಿಗಾ ಇರಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಮತ್ತಿಖಂಡ ಗ್ರಾಮದಲ್ಲಿ ಹೆಚ್ಚಿನ ನಿಗಾ ಇಡುವಂತೆ ಆರೋಗ್ಯ ಇಲಾಖೆ ಘೋಷಿಸಿದೆ. ಗ್ರಾಮದಲ್ಲಿ ಉಣ್ಣೆಗಳನ್ನು ಸಂಗ್ರಹಿಸಲಾಗಿದೆ. ಅರಣ್ಯ ಪ್ರದೇಶದಲ್ಲಿ ಕೋತಿಗಳು ಸಾವನ್ನಪ್ಪಿದ್ದರೆ, ಅದರ ನಗ್ಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.
2024ರಲ್ಲಿಯೂ ಜಿಲ್ಲೆಯಲ್ಲಿ ಸುಮಾರು 132 ಮಂದಿ ಮಂಗನ ಕಾಯಿಲೆಗೆ ತುತ್ತಾಗಿದ್ದರು. ಅವರಲ್ಲಿ, ನಾಲ್ವರು ಸಾವನ್ನಪ್ಪಿದ್ದರು.