ದಕ್ಷಿಣ ಭಾರತದ ಕುಂಭಮೇಳ ಎಂದು ಬಣ್ಣಿಸಲಾಗಿರುವ ಕೊಪ್ಪಳದ ಗವಿಮಠ ರಥೋತ್ಸವ ಬುಧವಾರ ನಡೆಯಲಿದೆ. ಅಲ್ಲದೆ, 15 ದಿನಗಳ ಕಾಲ ಗವಿಸಿದ್ದೇಶ್ವರ ಜಾತ್ರೆಯೂ ನಡೆಯಲಿದೆ.
ಜಾತ್ರೆಯಲ್ಲಿ ಅನ್ನ ದಾಸೋಹ, ಹಲವಾರು ವಿಚಾರಗಳ ಕುರಿತ ಚರ್ಚೆಗಳು, ಭಕ್ತಿ ಜ್ಞಾನದ ವಿಚಾರ ಸಂಕಿರಣಗಳು ನಡೆಯಲಿವೆ ಎಂದು ಮಠದ ಪೀಠಾಧಿಪತಿ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ತಿಳಿಸಿದ್ದಾರೆ.
ಬುಧವಾರ (ಜ.15) ಸಂಜೆ 5:30ಕ್ಕೆ ಗವಿಮಠ ರಥೋತ್ಸವ ನಡೆಯಲಿದೆ. ರಥೋತ್ಸವಕ್ಕೆ ಧಾರವಾಡದ ಹಿಂದುಸ್ಥಾನಿ ಗಾಯಕ, ಪದ್ಮಶ್ರೀ ಪುರಸ್ಕೃತ ಪಂಡಿತ ಎಮ್ ವೆಂಕಟೇಶ್ ಕುಮಾರ್ ಚಾಲನೆ ನೀಡಲಿದ್ದಾರೆ. ತುಮಕೂರು ಸಿದ್ದಗಂಗಾ ಮಠದ ಸಿದ್ದಲಿಂಗ ಮಹಾಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ರಥೋತ್ಸವ ಅಂಗವಾಗಿ ಬುಧವಾರ ಸಂಜೆ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ.
ಅಲ್ಲದೆ, ಗುರುವಾರ ಮತ್ತು ಶುಕ್ರವಾರ ಭಕ್ತಿ ಹಿತಚಿಂತನಾ ಸಮಾವೇಶ, ಧಾರ್ಮಿಕ ಕಾರ್ಯಕ್ರಮಗಳು, ಕ್ರೀಡಾ ಸ್ಪರ್ಧೆಗಳು, ಪಲಫುಷ್ಟ ಪ್ರದರ್ಶನ, ಕೃಷಿ ವಸ್ತುಗಳ ಪ್ರದರ್ಶನ ಸೇರಿದಂತೆ ಅನೇಕ ಕಾರ್ಯಕ್ರಮಗಳು ನಡೆಯಲಿವೆ.