ಭಾಲ್ಕಿ ತಾಲ್ಲೂಕಿನ ಖಟಕ ಚಿಂಚೋಳಿ ಪೊಲೀಸ್ ಠಾಣೆ ವ್ಯಾಪ್ತಿಯ ದಾಡಗಿ ಕ್ರಾಸ್ ಹತ್ತಿರದ ವಿಶ್ವಗುರು ಬಸವಣ್ಣನವರ ಪ್ರತಿಮೆಗೆ ಅಪಮಾನ ನಡೆದಿರುವ ವಿಚಾರವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ಸ್ಪಷ್ಟನೆ ನೀಡಿದ್ದಾರೆ.
ಬಸವಣ್ಣನವರ ಪುತ್ಥಳಿ ಹಾನಿಯಾಗಿದ್ದ ಬಗ್ಗೆ ಭಾಲ್ಕಿ ತಹಶೀಲ್ದಾರ್ ಮಲ್ಲಿಕಾರ್ಜುನ್ ವಡ್ಡನಕೇರಿ ಮತ್ತು ಭಾಲ್ಕಿ ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ ಅವರು ಘಟನಾ ಸ್ಥಳಕ್ಕೆ ಖುದ್ದು ಭೇಟಿ ನೀಡಿ, ಸ್ಥಳದಲ್ಲಿದ್ದ ಜನರ ಸಮಕ್ಷಮ ಪರಿಶೀಲಿಸಿದ್ದಾರೆ ಎಂದು ಹೇಳಿದ್ದಾರೆ.
ʼಬಸವಣ್ಣನವರ ಪುತ್ಥಳಿಗೆ ಕಬ್ಬು ತುಂಬಿದ ಲಾರಿ ತಗುಲಿ ಈ ಹಾನಿಯಾದ ಬಗ್ಗೆ, ಅಲ್ಲಿಯ ಕಬ್ಬು ಸವರಿದ ಗುರುತು, ಕಬ್ಬಿನ ರಸದ ಕಲೆ ಮತ್ತು ಮುರಿದಿರುವ ಬಲಿಷ್ಠ ರಾಡ್ ನೋಡಿದಾಗ ಮೇಲ್ನೋಟಕ್ಕೆ ಕಾಣುತ್ತಿದ್ದು, ಆದರೂ ಸಹ ಕೂಲಂಕುಷವಾಗಿ ತನಿಖೆ ನಡೆಸಿ ಯಾರಾದರೂ ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಕೃತ್ಯ ಎಸಗಿರುವ ಸಂಭವವಿದ್ದರೆ ಅವರ ಮೇಲೆ ತನಿಖೆ ನಡೆಸಿ, ಅಂತಿಮ ವರದಿ ಸಲ್ಲಿಸಲಾಗುವುದು ಎಂದು ಮಾಧ್ಯಮ ಪ್ರಕಟಣೆಯಲ್ಲಿ ಬುಧವಾರ ಮಧ್ಯಾಹ್ನ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಹೃದಯಾಘಾತದಿಂದ 17 ವರ್ಷದ ವಿದ್ಯಾರ್ಥಿ ಸಾವು
ಬಸವಣ್ಣನವರಿಗೆ ಅಪಮಾನ ಮಾಡಿದ ಘಟನೆ ಖಂಡಿಸಿ ಬುಧವಾರ ಬೆಳಿಗ್ಗೆ ಸುಮಾರು ಎರಡು ಘಟನೆಗಳ ಕಾಲ ಗ್ರಾಮಸ್ಥರು ದಾಡಗಿ ಕ್ರಾಸ್ ಬಳಿ ರಸ್ತೆ ತಡೆದು ಪ್ರತಿಭಟನೆ ನಡೆಸಿ ತಪ್ಪಿಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು. ಬಳಿಕ ಪೊಲೀಸರು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಘಟನೆ ಕುರಿತು ಸೂಕ್ತ ತನಿಖೆ ನಡೆಸಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆದಿದ್ದರು.