ಈ ದಿನ ಸಂಪಾದಕೀಯ | ಮೋದಿಯವರು ಗಳಿಸಿದ ಡಿಗ್ರಿಗಳು ಮತ್ತು ಮಾಹಿತಿ ಹಕ್ಕು ಎಂಬ ತುಕ್ಕು ಹಿಡಿದ ಹತಾರು

Date:

Advertisements

2015ರಿಂದ ಮೋದಿ ಸರ್ಕಾರ ಕೇಂದ್ರೀಯ ಮಾಹಿತಿ ಹಕ್ಕು ಆಯೋಗಕ್ಕೆ ತಾನಾಗಿಯೇ ಒಬ್ಬರೇ ಒಬ್ಬ ಮಾಹಿತಿ ಆಯುಕ್ತರನ್ನೂ ನೇಮಕ ಮಾಡಿಲ್ಲ. ಸಾರ್ವಜನಿಕರು ನ್ಯಾಯಾಲಯದ ಮೆಟ್ಟಿಲು ಹತ್ತಿ ಆದೇಶ ಹೊರಬಿದ್ದ ನಂತರವೇ ಪ್ರತಿಯೊಬ್ಬ ಆಯುಕ್ತರ ನೇಮಕ ಮಾಡಿದೆ. ಕೇಂದ್ರೀಯ ಮಾಹಿತಿ ಹಕ್ಕು ಆಯೋಗದ 11 ಹುದ್ದೆಗಳ ಪೈಕಿ ಎಂಟು ಈಗಲೂ ಖಾಲಿ ಬಿದ್ದಿವೆ. ಸುಪ್ರೀಮ್ ಕೋರ್ಟು ಮತ್ತೆ ಮತ್ತೆ ನೀಡಿರುವ ನಿರ್ದೇಶನಗಳನ್ನೂ ಕೇಂದ್ರ ಸರ್ಕಾರ ಕಿವಿಗೆ ಹಾಕಿಕೊಂಡಿಲ್ಲ.


ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಶೈಕ್ಷಣಿಕ ಪದವಿಯ ಸಂಗತಿ ರಾಷ್ಟ್ರೀಯ ರಹಸ್ಯವೇನೂ ಅಲ್ಲ. 1923ರ ಅಧಿಕೃತ ಗೋಪನೀಯ ಕಾಯಿದೆಯ ವ್ಯಾಪ್ತಿಗೂ ಬರುವ ಗೋಪ್ಯವೂ ಅಲ್ಲ. ಈ ಸಂಗತಿ ಕುರಿತು ಬಿಜೆಪಿ ಮತ್ತು ಪ್ರತಿಪಕ್ಷಗಳ ನಡುವೆ ಭಾರೀ ವಾದವಿವಾದವೇ ನಡೆದು ಹೋಗಿದೆ. ಆದರೂ ಮೋದಿಯವರ ಡಿಗ್ರಿ ವಿವರಗಳನ್ನು ‘ಕಪಿಮುಷ್ಠಿ’ಯಲ್ಲಿಟ್ಟುಕೊಂಡು ಕಾಪಾಡುತ್ತ ಬರಲಾಗುತ್ತಿದೆ. ಡಿಗ್ರಿಯನ್ನು ಬಹಿರಂಗವಾಗಿ ತೋರಿಸಬೇಕೆಂಬ ದೆಹಲಿ ಮಾಜಿ ಮುಖ್ಯಮಂತ್ರಿ ಕೇಜ್ರೀವಾಲ್ ಗೆ ಗುಜರಾತ್ ಹೈಕೋರ್ಟು 25 ಸಾವಿರ ರುಪಾಯಿಗಳ ನ್ಯಾಯಾಲಯ ಜುಲ್ಮಾನೆ ವಿಧಿಸಿತ್ತು. ಈ ಸಂಬಂಧದ ಮೊಕದ್ದಮೆಯ ಮುಂದುವರೆದ ವಿಚಾರಣೆ ಮೊನ್ನೆ ದೆಹಲಿ ಹೈಕೋರ್ಟಿನ ಮುಂದೆ ನಡೆಯಿತು. ದೇಶದ ಅತ್ಯುನ್ನತ ಕಾನೂನು ಅಧಿಕಾರಿಯಾದ ಸಾಲಿಸಿಟರ್ ಜನರಲ್ ಅಫ್ ಇಂಡಿಯಾ ತುಷಾರ್ ಮೆಹ್ತಾ ಖುದ್ದು ಮೋದಿಯವರ ಡಿಗ್ರಿ ರಕ್ಷಣೆಗೆ ನಿಂತಿದ್ದರು.

1978ರಲ್ಲಿ ದೆಹಲಿ ವಿಶ್ವವಿದ್ಯಾಲಯದ ಮುಕ್ತ ಶಾಲೆಯಿಂದ Entire Political Science ನಲ್ಲಿ ಪದವಿ ಪಡೆದದ್ದಾಗಿ ಸರ್ಟಿಫಿಕೇಟನ್ನು ಗೃಹಮಂತ್ರಿ ಅಮಿತ್ ಶಾ ಅವರು ಕೆಲ ವರ್ಷಗಳ ಹಿಂದೆ ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಪ್ರಕಟಿಸಿದ್ದರು. ನೀರಜ್ ಕುಮಾರ್ ಎಂಬ ಆರ್.ಟಿ.ಐ.ಕಾರ್ಯಕರ್ತರೊಬ್ಬರು 2016ರಲ್ಲಿ ಮಾಹಿತಿ ಅರ್ಜಿ ಸಲ್ಲಿಸಿ 1978ರಲ್ಲಿ ಮೋದಿಯವರ ಜೊತೆ ಓದಿ ಪರೀಕ್ಷೆ ಪಾಸಾಗಿ ಡಿಗ್ರಿ ಪಡೆದ ಎಲ್ಲ ಸಹಪಾಠಿಗಳ ದಾಖಲೆಗಳನ್ನು ನೋಡಲು ಅವಕಾಶ ಕೋರಿದ್ದರು. ಕೇಂದ್ರೀಯ ಮಾಹಿತಿ ಹಕ್ಕು ಆಯೋಗವು ನೀರಜ್ ಕೋರಿಕೆಯನ್ನು ಈಡೇರಿಸುವಂತೆ ಆದೇಶ ನೀಡಿತ್ತು. ಆದರೆ ಈ ಆದೇಶಕ್ಕೆ ಕೋರ್ಟುಗಳು ತಡೆಯಾಜ್ಞೆ ನೀಡುತ್ತ ಬಂದಿವೆ.

ದೆಹಲಿ ಹೈಕೋರ್ಟಿನ ಮುಂದೆ ದೆಹಲಿ ವಿಶ್ವವಿದ್ಯಾಲಯದ ಪರವಾಗಿ ವಾದ ಮಂಡಿಸಿದ ತುಷಾರ್ ಮೆಹ್ತಾ ಅವರು ಕೇಂದ್ರೀಯ ಮಾಹಿತಿ ಆಯೋಗದ ಆದೇಶವನ್ನು ತಳ್ಳಿ ಹಾಕಬೇಕೆಂದರು. ಆರ್.ಟಿ.ಐ. ಉದ್ದೇಶ ಯಾರದ್ದೋ ಕುತೂಹಲವನ್ನು ತಣಿಸುವುದಲ್ಲ. ಮೋದಿಯವರೊಂದಿಗೆ ಓದಿದ ವಿದ್ಯಾರ್ಥಿಗಳ ವಿವರಗಳನ್ನು ‘ಯಾರೋ ಅಪರಿಚಿತ’ರಿಗೆ ತಿಳಿಯಪಡಿಸುವ ಅಗತ್ಯವಿಲ್ಲ. ಸಾರ್ವಜನಿಕ ಸ್ಥಾನಮಾನಗಳಲ್ಲಿರುವವರ ಜವಾಬುದೇಹಿ ಹೊಣೆ ಮತ್ತು ಕಾರ್ಯವೈಖರಿಯ ಪಾರದರ್ಶಕತೆಗೆ ಸಂಬಂಧವೇ ಇಲ್ಲದ ಸಂಗತಿಯಿದು. ಆರ್ ಟಿ ಐ ಕಾಯಿದೆಯ ದುರುಪಯೋಗ ಎಂಬುದು ಮೆಹ್ತಾ ವಾದವಾಗಿತ್ತು.

ಸಾಲಿಸಿಟರ್ ಜನರಲ್ ಅವರ ವಾದದಲ್ಲಿ ಹುರುಳಿಲ್ಲ. ದೇಶದ ಪ್ರಧಾನಿಯ ಶೈಕ್ಷಣಿಕ ಡಿಗ್ರಿ ಕೇವಲ ‘ಯಾರದೋ ಕುತೂಹಲ’ದ ಸಂಗತಿ ಅಲ್ಲ. ಮಾಹಿತಿಯನ್ನು ಕೇಳಿದ ಅರ್ಜಿದಾರರು ಅದಕ್ಕೆ ಕಾರಣಗಳನ್ನು ತಿಳಿಸುವ ಅಗತ್ಯವಿಲ್ಲ. ಆರ್.ಟಿ.ಐ. ಕಾಯಿದೆಯಲ್ಲಿ ಅಂತಹ ಯಾವ ನಿರ್ಬಂಧವೂ ಇಲ್ಲ. ವಿಶ್ವವಿದ್ಯಾಲಯವೆಂಬುದು ಸಾರ್ವಜನಿಕ ಸಂಸ್ಥೆ. ಪದವಿಗಳ ನೀಡಿಕೆಗೆ ಸಂಬಂಧಿಸಿದ ಎಲ್ಲ ಮಾಹಿತಿಯೂ ಅದರ ರಿಜಿಸ್ಟರಿನಲ್ಲಿ ಇರುತ್ತದೆ. ಈ ರಿಜಿಸ್ಟರು ಒಂದು ಸಾರ್ವಜನಿಕ ದಸ್ತಾವೇಜು ಎಂದೂ ಕೇಂದ್ರೀಯ ಮಾಹಿತಿ ಆಯೋಗ 2016ರ ತನ್ನ ಆದೇಶದಲ್ಲಿ ಹೇಳಿತ್ತು.

ದೆಹಲಿ ವಿಶ್ವವಿದ್ಯಾಲಯದಲ್ಲಿ ಎಂಟೈರ್ ಪೊಲಿಟಕಲ್ ಸೈನ್ಸ್ ಎಂಬ ವಿಷಯವೇ ಇರಲಿಲ್ಲ. ಪ್ರಧಾನಿಯವರ ಸರ್ಟಿಫಿಕೇಟಿನ ಮುದ್ರಿತ ಅಕ್ಷರಗಳು (ಫಾಂಟ್ಸ್) ದೆಹಲಿ ವಿಶ್ವವಿದ್ಯಾಲಯದ 1978ರ ಇತರೆ ಡಿಗ್ರಿ ಸರ್ಟಿಫಿಕೇಟುಗಳಲ್ಲಿ ಇದ್ದಂತಿಲ್ಲ ಎಂಬ ತಕರಾರುಗಳನ್ನು ಪ್ರತಿಪಕ್ಷಗಳು ಎತ್ತಿದ್ದವು. ದೆಹಲಿ ವಿಶ್ವವಿದ್ಯಾಲಯದ ಬಿ.ಎ.ಪದವಿಯ ನಂತರ ಮೋದಿಯವರು ಗುಜರಾತ್ ವಿವಿಯಿಂದ ಸ್ನಾತಕೋತ್ತರ ಪದವಿಯನ್ನು ಪಡೆದಿರುವುದಾಗಿ ಬಿಜೆಪಿ ಹೇಳಿತ್ತು. ಮೋದಿಯವರ ಡಿಗ್ರಿಗಳ ವಿವರಗಳನ್ನು ಅರ್ಜಿದಾರ ಕೇಜ್ರೀವಾಲ್ ಅವರಿಗೆ ನೀಡುವಂತೆ ಕೇಂದ್ರೀಯ ಮಾಹಿತಿ ಆಯೋಗ 2016ರಲ್ಲಿ ನೀಡಿದ್ದ ಮತ್ತೊಂದು ಆದೇಶವನ್ನು ಗುಜರಾತ್ ಹೈಕೋರ್ಟು 2023ರಲ್ಲಿ ರದ್ದು ಮಾಡಿತ್ತು. ಮೋದಿಯವರ ಡಿಗ್ರಿಗಳ ಕುರಿತು ಕೇಜ್ರೀವಾಲ್ ಮಾನಹಾನಿಕರ ಹೇಳಿಕೆ ನೀಡಿದ್ದಾರೆಂದು ಗುಜರಾತ್ ವಿಶ್ವವಿದ್ಯಾಲಯ ಮಾನಹಾನಿ ಮೊಕದ್ದಮೆ ದಾಖಲಿಸಿತ್ತು. ಈ ಕೇಸನ್ನು ವಜಾಗೊಳಿಸಬೇಕೆಂಬ ಕೇಜ್ರೀವಾಲ್ ಮನವಿಯನ್ನು ಸುಪ್ರೀಮ್ ಕೋರ್ಟು ತಿರಸ್ಕರಿಸಿತ್ತು.

ಆರ್.ಟಿ.ಐ. ಅಡಿಯಲ್ಲಿ ಅತ್ಯಂತ ಗಹನ ಗಂಭೀರ ಸಂಗತಿಗಳು ಹೊರಬಿದ್ದಿವೆ. ಪ್ರಜಾತಂತ್ರದಲ್ಲಿ ಪಾರದರ್ಶಕತೆಯ ಮಹತ್ವವನ್ನು ಸಾರಿರುವ ಪ್ರಗತಿಪರ ಕಾಯಿದೆಯಿದು. ದೇಶದ ಸಂಸತ್ತು 2005ರಲ್ಲಿ ಮಾಹಿತಿ ಹಕ್ಕು ಕಾಯಿದೆಯ ರೂಪದಲ್ಲಿ ಈ ಹತಾರನ್ನು ಜನರ ಕೈಗಿರಿಸಿತ್ತು. ಆದರೆ, ಕಾಲಕ್ರಮೇಣ ಈ ಕಾಯಿದೆಗೆ ಹಲವು ತಿದ್ದುಪಡಿಗಳನ್ನು ತಂದು ಅದನ್ನು ದುರ್ಬಲಗೊಳಿಸಲಾಗಿದೆ.

1923ರ ಅಧಿಕೃತ ಗೋಪ್ಯತಾ ಕಾಯಿದೆಯ ವ್ಯಾಪ್ತಿಗೆ ಬರುವ ಸಂಗತಿಗಳನ್ನು ಆರ್.ಟಿ.ಐ.ಅಡಿ ಬಹಿರಂಗಪಡಿಸುವ ಅಗತ್ಯವಿಲ್ಲ. ಸಾರ್ವಜನಿಕ ಚಟುವಟಿಕೆ ಅಥವಾ ಸಾರ್ವಜನಿಕ ಆಸಕ್ತಿಗೆ ಸಂಬಂಧಿಸಿಲ್ಲದ ಅಥವಾ ವ್ಯಕ್ತಿಗತ ಖಾಸಗಿತನವನ್ನು ಅತಿಕ್ರಮಿಸುವ ವ್ಯಕ್ತಿಗತ ಮಾಹಿತಿಯನ್ನು ಬಹಿರಂಗಪಡಿಸುವ ಅಗತ್ಯ ಇಲ್ಲ ಎಂದು ಆರ್.ಟಿ.ಐ. ಕಾಯಿದೆಯ 8 ಮತ್ತು 9ನೆಯ ಸೆಕ್ಷನ್‌ಗಳು ಹೇಳುತ್ತವೆ.

ಸೆಕ್ಷನ್ 8(1)(J)ಯನ್ನು ಸಾರಾಸಗಟು ತಪ್ಪಾಗಿ ವ್ಯಾಖ್ಯಾನಿಸಲಾಗಿದೆ. ದೊಡ್ಡ ಮಾಹಿತಿ ಹಕ್ಕು ಕಾಯಿದೆಯ ಪಾರದರ್ಶಕ ತತ್ವದ ತಿರುಳಿನ ಮೇಲೆಯೇ ಕೊಡಲಿ ಬೀಸಲಾಗಿದೆ. ಈ ಸೆಕ್ಷನ್ ಅಡಿಯಲ್ಲಿ ವ್ಯಕ್ತಿಯ ಖಾಸಗಿ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವ ಮಾಹಿತಿ ಬಹಿರಂಗ ಮಾತ್ರ ನಿಷಿದ್ಧವಿತ್ತು. ಆದರೆ ಈ ಸೆಕ್ಷನ್ ಅಡಿಯಲ್ಲಿ ವ್ಯಕ್ತಿಗೆ ಸಂಬಂಧಿಸಿದ ಎಲ್ಲ ಮಾಹಿತಿ ಬಹಿರಂಗವನ್ನೂ ನಿಷೇಧಿಸಲಾಗಿದೆ. ಸಂಸತ್ತು ಅಥವಾ ವಿಧಾನಮಂಡಲಗಳಿಗೂ ಬಹಿರಂಗಪಡಿಸಲಾಗದ ವ್ಯಕ್ತಿಗತ ಮಾಹಿತಿಯನ್ನು ಮಾತ್ರವೇ ಆರ್.ಟಿ.ಐ ಅಡಿಯಲ್ಲಿ ಬಹಿರಂಗಪಡಿಸುವಂತೆ ಇರಲಿಲ್ಲ. ಮೂಲ ಕಾಯಿದೆಯಲ್ಲಿ ಇಂತಹ ಸಲೀಸಾದ ಮಾನದಂಡವನ್ನು ಒದಗಿಸಲಾಗಿತ್ತು. ಸರ್ಕಾರವು ಆಯೋಗಗಳ ಕಾರ್ಯವ್ಯಾಪ್ತಿಯನ್ನು ಕುಗ್ಗಿಸಿರುವುದೇ ಅಲ್ಲದೆ, ಈ ಕಾಯಿದೆಯ ಉದ್ದೇಶವನ್ನೇ ವಿಫಲಗೊಳಿಸಲು ಇತರೆ ಶಾಸನಗಳನ್ನು ಅದರ ವಿರುದ್ಧ ಹೂಡಿದೆ.

2023ರ ಡಿಜಿಟಲ್ ಪರ್ಸನಲ್ ಡೇಟಾ ಪ್ರೊಟೆಕ್ಷನ್ ಕಾಯಿದೆ ಜಾರಿಯ ಪರಿಣಾಮವಾಗಿ ಸಾರ್ವಜನಿಕ ಮಹತ್ವದ ಹುದ್ದೆಯಲ್ಲಿರುವ ವ್ಯಕ್ತಿಯ ವ್ಯಕ್ತಿಗತ ಮಾಹಿತಿಯನ್ನು ಕೋರುವುದೂ ಅಸಾಧ್ಯವಾಗಿ ಪರಿಣಮಿಸಿದ. ಈ ಕಾಯಿದೆಯ ವಿರುದ್ಧ ಸರ್ಕಾರ ಹೆಚ್ಚು ಹೆಚ್ಚು ನೇತ್ಯಾತ್ಮಕ ಧೋರಣೆ ತಳೆದು, ಹೆಜ್ಜೆ ಹೆಜ್ಜೆಗೆ ನಿರ್ಬಂಧಗಳನ್ನು ಹೇರುತ್ತಿದೆ. ಮಾಹಿತಿ ನೀಡದಿರುವ ಮತ್ತು ತಪ್ಪು ಮಾಹಿತಿ ಒದಗಿಸಿರುವ ಅಧಿಕಾರಿಗಳಿಗೆ ದಂಡಶುಲ್ಕ ವಿಧಿಸದೆ ಇರುವುದು ನಿರ್ಲಕ್ಷ್ಯದ ಪ್ರವೃತ್ತಿಗೆ ಇನ್ನಷ್ಟು ಪ್ರೋತ್ಸಾಹ ನೀಡಿದಂತಾಗಿದೆ.

Advertisements

ಸತರ್ಕ ನಾಗರಿಕ ಸಂಘಟನೆಯ 2023-24ರ ವರದಿಯ ಪ್ರಕಾರ ರಾಜ್ಯ ಮಟ್ಟದ 29 ಮಾಹಿತಿ ಹಕ್ಕು ಆಯೋಗಗಳ ಪೈಕಿ ಏಳು ಆಯೋಗಗಳು ನಡುನಡುವೆ ನಿಷ್ಕ್ರಿಯಗೊಂಡಿದ್ದವು. ಒಂದು ಲಕ್ಷಕ್ಕೂ ಹೆಚ್ಚು ಬಾಕಿ ಅಪೀಲುಗಳು ಮತ್ತು ದೂರುಗಳನ್ನು ಹೊಂದಿರುವ ಮಹಾರಾಷ್ಟ್ರ ಮಾಹಿತಿ ಹಕ್ಕು ಆಯೋಗಕ್ಕೆ ಈಗಲೂ ಅಧ್ಯಕ್ಷರಿಲ್ಲ.

2015ರಿಂದ ಮೋದಿ ಸರ್ಕಾರ ಕೇಂದ್ರೀಯ ಮಾಹಿತಿ ಹಕ್ಕು ಆಯೋಗಕ್ಕೆ ತಾನಾಗಿಯೇ ಒಬ್ಬರೇ ಒಬ್ಬ ಮಾಹಿತಿ ಆಯುಕ್ತರನ್ನೂ ನೇಮಕ ಮಾಡಿಲ್ಲ. ಸಾರ್ವಜನಿಕರು ನ್ಯಾಯಾಲಯದ ಮೆಟ್ಟಿಲು ಹತ್ತಿ ಆದೇಶ ಹೊರಬಿದ್ದ ನಂತರವೇ ಪ್ರತಿಯೊಬ್ಬ ಆಯುಕ್ತರ ನೇಮಕ ಮಾಡಿದೆ. ಕೇಂದ್ರೀಯ ಮಾಹಿತಿ ಹಕ್ಕು ಆಯೋಗದ 11 ಹುದ್ದೆಗಳ ಪೈಕಿ ಎಂಟು ಈಗಲೂ ಖಾಲಿ ಬಿದ್ದಿವೆ. ಸುಪ್ರೀಮ್ ಕೋರ್ಟು ಮತ್ತೆ ಮತ್ತೆ ನೀಡಿರುವ ನಿರ್ದೇಶನಗಳನ್ನೂ ಕೇಂದ್ರ ಸರ್ಕಾರ ಕಿವಿಗೆ ಹಾಕಿಕೊಂಡಿಲ್ಲ.

ಮಾಹಿತಿ ಆಯುಕ್ತರ ಹುದ್ದೆಗಳನ್ನು ಖಾಲಿ ಉಳಿಸಿರುವ ಕಾರಣವೇ ದೇಶಾದ್ಯಂತ ಮಾಹಿತಿ ಆಯೋಗಗಳ ಮುಂದೆ ನಾಲ್ಕು ಲಕ್ಷಕ್ಕೂ ಹೆಚ್ಚಿನ ಮೇಲ್ಮನವಿಗಳು ಮತ್ತು ದೂರುಗಳು ಬಾಕಿ ಉಳಿದಿವೆ. ಒಂದು ಮೇಲ್ಮನವಿ ಅಥವಾ ದೂರಿನ ವಿಲೇವಾರಿಗೆ ಒಂದು ವರ್ಷಕ್ಕೂ ಹೆಚ್ಚಿನ ಅವಧಿ ಹಿಡಿಯುತ್ತಿದೆ. ಆಯುಕ್ತರ ಅಧಿಕಾಂಶ ಹುದ್ದೆಗಳನ್ನು ಬಹುತೇಕ ನಿವೃತ್ತ ಸರ್ಕಾರಿ ಅಧಿಕಾರಿಗಳು ಇಲ್ಲವೇ ರಾಜಕೀಯ ಕೃಪಾಕಟಾಕ್ಷ ಇರುವವ ವ್ಯಕ್ತಿಗಳಿಂದ ತುಂಬಲಾಗುತ್ತಿದೆ. ಇಂತಹ ವ್ಯಕ್ತಿಗಳು ಸ್ವಾಭಾವಿಕವಾಗಿಯೇ ಮಾಹಿತಿ ಹಕ್ಕಿನ ಉಲ್ಲಂಘನೆಯ ವಿರುದ್ಧ ಚಕಾರ ಎತ್ತುವುದಿಲ್ಲ.

‘ಮಾಹಿತಿ ಹಕ್ಕು ಕಾಯಿದೆಯು ಶರವೇಗದಲ್ಲಿ ಸಾವಿನತ್ತ ಧಾವಿಸಿದೆ’ ಎಂದು ಸುಪ್ರೀಮ್ ಕೋರ್ಟ್ 2023ರ ನವೆಂಬರಿನಲ್ಲಿ ತೀವ್ರ ಕಳವಳ ವ್ಯಕ್ತಪಡಿಸಿತ್ತು. ದೇಶದ ಎಲ್ಲ ಮಾಹಿತಿ ಹಕ್ಕು ಆಯೋಗಗಳ ಖಾಲಿ ಸ್ಥಾನಗಳನ್ನು 2024ರ ಮಾರ್ಚ್ 31ರ ಒಳಗಾಗಿ ಭರ್ತಿ ಮಾಡುವಂತೆ ಗಡುವು ನೀಡಿತ್ತು. ಸುಪ್ರೀಮ್ ಕೋರ್ಟಿನ ಕಳವಳದಲ್ಲಿ ಎಳ್ಳಷ್ಟೂ ಉತ್ಪ್ರೇಕ್ಷೆ ಇಲ್ಲ. ಪಾರದರ್ಶಕತೆ ಮತ್ತು ಉತ್ತರದಾಯಿತ್ವ ಎಂಬುವು ಪ್ರಭುತ್ವಗಳ ಪಾಲಿಗೆ ಬಗಲ ಮುಳ್ಳುಗಳು. ಕಿತ್ತು ಹಾಕಲು ಕಾತರಿಸುತ್ತಿರುತ್ತವೆ. ಅವುಗಳ ಇಷ್ಟಾನಿಷ್ಟಕ್ಕೇ ಬಿಟ್ಟು ಬಿಟ್ಟರೆ ಹಾಸಿಗೆ ಹಿಡಿದು ತೀವ್ರ ಶುಶ್ರೂಷಕ ಘಟಕ (ಐ.ಸಿ.ಯು) ಸೇರಿರುವ ಮಾಹಿತಿ ಹಕ್ಕನ್ನು ನಾಳೆಯೇ ದಫನು ಮಾಡಿ ಹಿಡಿ ಮಣ್ಣು ಹಾಕಲು ಹೇಸುವುದಿಲ್ಲ.

ಅಂದಾಜು ಅಂಕಿ ಅಂಶಗಳ ಪ್ರಕಾರ ಈವರೆಗೆ ಆರ್.ಟಿ.ಐ. ಕಾಯಿದೆಯಡಿ ಮಾಹಿತಿಗಾಗಿ ಅರ್ಜಿ ಹಾಕುತ್ತಿರುವ ಭಾರತೀಯರ ಪ್ರಮಾಣ ಶೇ.3 ಮಾತ್ರ. ಇಷ್ಟು ಮಾತ್ರಕ್ಕೇ ವರ್ಷಕ್ಕೆ 40ರಿಂದ 50 ಲಕ್ಷ ಅರ್ಜಿಗಳು ಬರುತ್ತಿವೆ. ಇನ್ನು ಅರ್ಜಿ ಹಾಕುವವರ ಪ್ರಮಾಣ ಹೆಚ್ಚುತ್ತ ಹೋದಂತೆ ಯಾರ ಕಷ್ಟನಷ್ಟಗಳು ಹೆಚ್ಚುತ್ತ ಹೋಗಲಿವೆ. ಯಾರ್ಯಾರ ಕಳ್ಳ ಆದಾಯಗಳ ಬೆಟ್ಟಗಳು ಕರಗಲಿವೆ ಎಂಬುದನ್ನು ಒಮ್ಮೆ ಊಹಿಸಿ. ಆರ್.ಟಿ.ಐ. ಕತ್ತನ್ನು ಯಾರು ಹಿಸುಕುತ್ತಿದ್ದಾರೆ ಮತ್ತು ಯಾಕೆ ಎಂಬುದು ಅಂಗೈ ಗೆರೆಗಳಷ್ಟೇ ಸ್ಪಷ್ಟವಾಗುತ್ತದೆ.

ಮಜ್ದೂರ್ ಕಿಸಾನ್ ಶಕ್ತಿ ಸಂಘಟನೆಯ ನಿಖಿಲ್ ಡೇ ಅವರ ಪ್ರಕಾರ ಆರ್.ಟಿ.ಐ. ಜಾರಿಗೆ ಬಂದ 17 ವರ್ಷಗಳಲ್ಲಿ ಈ ಕಾಯಿದೆಯನ್ನು ಬಳಸಿಕೊಂಡು ಮಾಹಿತಿ ಕೋರಿದ 100ಕ್ಕೂ ಹೆಚ್ಚು ಮಂದಿಯನ್ನು ಕೊಂದು ಹಾಕಲಾಗಿದೆ. ಮಾಹಿತಿ ಕೋರುವವರು ಜೀವಬೆದರಿಕೆಗಳು, ಕಿರುಕುಳಗಳು, ಬ್ಲ್ಯಾಕ್ ಮೇಲರ್ ಗಳು ಎಂಬ ಕಳಂಕ ಎದುರಿಸಬೇಕಾಗಿ ಬಂದಿದೆ. ಕ್ರೂರ ಮಾರಕ ದಾಳಿಗಳನ್ನು ಎದುರಿಸಿದ್ದಾರೆ.

ದುರಹಂಕಾರ ಭ್ರಷ್ಟಾಚಾರ, ಅದಕ್ಷತೆ, ಹಾಗೂ ಸಾರ್ವಜನಿಕಪರ ಮನೋಭಾವದ ಕೊರತೆಗಳು ಆಡಳಿತ ಮತ್ತು ಅಧಿಕಾರದ ಕೈ ಹಿಡಿದು ಜೊತೆ ಜೊತೆಗೆ ಹೆಜ್ಜೆ ಹಾಕುತ್ತಿವೆ. ಜನಸಾಮಾನ್ಯರನ್ನು ತುಳಿಯುತ್ತಲಿವೆ. ಪಾರದರ್ಶಕತೆಯೊಂದೇ ಈ ವ್ಯಾಧಿಗಳಿಗೆ ಪರಿಣಾಮಕಾರಿ ಮದ್ದು. ಜಾರಿಯಾದ ಹೊಸತರಲ್ಲಿ ಈ ಕಾಯಿದೆಯು ಜನಸಾಮಾನ್ಯರ ಕೈಯಲ್ಲಿ ಭ್ರಷ್ಚಾಚಾರದ ವಿರುದ್ಧದ ಪರಿಣಾಮಕಾರಿ ಹತಾರು ಆಗಿತ್ತು. ಅವರನ್ನು ಸಬಲರನ್ನಾಗಿಸಿತ್ತು. ಇತ್ತೀಚಿನ ವರ್ಷಗಳಲ್ಲಿ ಸರ್ಕಾರವೇ ಮುಂದಾಗಿ ಈ ಶಕ್ತಿಯನ್ನು ಗಣನೀಯವಾಗಿ ಕುಂದಿಸಿದೆ.
ಕರ್ನಾಟಕದ ಮಾಹಿತಿ ಆಯೋಗ ಕೇವಲ ಇಬ್ಬರು ಆಯುಕ್ತರೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಎಂಟು ಆಯುಕ್ತ ಹುದ್ದೆಗಳು ಖಾಲಿ ಬಿದ್ದಿವೆ. 40 ಸಾವಿರಕ್ಕೂ ಹೆಚ್ಚು ದೂರುಗಳು- ಅಪೀಲುಗಳು ಇತ್ಯರ್ಥವಾಗದೆ ಬಾಕಿ ಉಳಿದಿವೆ. ಇವುಗಳ ವಿಲೇವಾರಿಗೆ 23 ತಿಂಗಳುಗಳೇ ಹಿಡಿಯಲಿವೆಯಂತೆ.

ಸಾರ್ವಜನಿಕ ಪ್ರಾಧಿಕಾರಗಳ ಕಾರ್ಯವೈಖರಿಯಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ತರಲೆಂದು 2005ರ ಜೂನ್ 15ರಂದು ಈ ಕಾಯಿದೆಯನ್ನು ಜಾರಿಗೊಳಿಸಲಾಗಿತ್ತು ಕೇಂದ್ರ ಸರ್ಕಾರದಲ್ಲಿ ಮಾತ್ರವಲ್ಲದೆ, ಪ್ರತಿಯೊಂದು ರಾಜ್ಯದಲ್ಲಿಯೂ ಮಾಹಿತಿ ಹಕ್ಕು ಆಯೋಗಗಳನ್ನು ರಚಿಸಲಾಯಿತು. ಈ ಕಾಯಿದೆಯ ಪ್ರಕಾರ ಸಾರ್ವಜನಿಕ ಪ್ರಾಧಿಕಾರಗಳು ನಾಗರಿಕರು ಬಯಸಿದ ಮಾಹಿತಿಗಳನ್ನು ನಿಗದಿತ ಅವಧಿಯೊಳಗಾಗಿ ಒದಗಿಸಬೇಕಿದೆ. ಸರ್ಕಾರದ ಈ ದಮನವನ್ನು ಹಿಮ್ಮೆಟ್ಟಿಸಲು ನ್ಯಾಯಾಲಯದ ಹಸ್ತಕ್ಷೇಪವೊಂದೇ ಅಂತಿಮ ಆಶಾಕಿರಣ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಅವಾಂತರಕಾರಿ ಆಸಿಮ್ ಮುನೀರ್ ಮತ್ತು ಮೌನಿ ಮೋದಿ

ವಿಶ್ವಗುರು ಭಾರತದ ಪ್ರಧಾನಿ ಮೋದಿಯವರು ಅಮೆರಿಕ ಮತ್ತು ಚೀನಾ ದೇಶಗಳಿಗೆ ಸೆಡ್ಡು...

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

Download Eedina App Android / iOS

X