“2025ರಲ್ಲಿ ರಾಷ್ಟ್ರೀಯ ಜನಗಣತಿ ನಡೆಸುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ಜನಗಣತಿ ಜೊತೆಗೆ ಜಾತಿಗಣತಿಯನ್ನು ಕೂಡ ನಡೆಸಬೇಕು. ಎಲ್ಲ ಜಾತಿ, ಉಪಜಾತಿಗಳ ಸಮಗ್ರ ಸಮೀಕ್ಷೆ ನಡೆಸಬೇಕು” ಎಂದು ಡಾ. ರಾಮ ಮನೋಹರ ಲೋಹಿಯಾ ವಿಚಾರ ವೇದಿಕೆ ಒತ್ತಾಯಿಸಿದೆ.
ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡಾ.ರಾಮ ಮನೋಹರ ಲೋಹಿಯಾ ವಿಚಾರ ವೇದಿಕೆಯ ಅಧ್ಯಕ್ಷ ಬಿ.ಎಸ್.ಶಿವಣ್ಣ, “ಪ್ರತಿ ಹತ್ತು ವರ್ಷಕ್ಕೊಮ್ಮೆ ನಡೆಯಬೇಕಾದ ರಾಷ್ಟ್ರೀಯ ಜನಗಣತಿ 2021ರಲ್ಲಿ ನಡೆಯಬೇಕಿತ್ತು. ಆದರೆ, ಕೊರೊನಾ ಕಾಲಘಟ್ಟದಲ್ಲಿ ಜಾತಿಗಣತಿ ಮಾಡುವುದನ್ನ ಮುಂದೂಡಿದರು. ಈ ದೇಶದಲ್ಲಿ ಬಡವರು, ಹಿಂದುಳಿದವರು ಹಲವು ಜನ ಇದ್ದಾರೆ. ಜಾತಿ ಗಣತಿ ನಡೆಸುವುದು ಈ ದೇಶದಲ್ಲಿ ಅತ್ಯಂತ ಮುಖ್ಯವಾಗಿದೆ. ಜಾತಿಗಣತಿ ಮಾಡಲು ಹೆಚ್ಚಿನ ಕಾಲ ಅಥವಾ ಸಂಪನ್ಮೂಲದ ಅವಶ್ಯಕತೆ ಇರುವುದಿಲ್ಲ. ಜಾತಿಗಣತಿ ನಡೆಸುವುದರಿಂದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಆಶಯಗಳನ್ನು ಯಥಾವತ್ತಾಗಿ ಜಾರಿಗೆ ತರಲು ಸಹಕಾರವಾಗುತ್ತದೆ. ಗುರುವಾರ ನಡೆಯುವ ಸಂಪುಟ ಸಭೆಯಲ್ಲಿ ರಾಜ್ಯ ಸರ್ಕಾರ ಕೂಡ ಜಾತಿಗಣತಿ ಕುರಿತು ನಿರ್ಣಯ ಅಂಗೀಕರಿಸಿ ಕೇಂದ್ರಕ್ಕೆ ಕಳುಹಿಸಬೇಕು. ಅಷ್ಟೇ ಅಲ್ಲದೇ, ವಿಧಾನಸಭೆ ಹಾಗೂ ವಿಧಾನಪರಿಷತ್ತಿನಲ್ಲೂ ಸಹ ನಿರ್ಣಯ ಅಂಗೀಕರಿಸಿ ಒತ್ತಡ ಹೇರಬೇಕು. ಇದನ್ನು ಸಾಧಿಸಲು ನಾವು ಪ್ರತಿ ಜಿಲ್ಲೆಯಲ್ಲಿ ರಾಜ್ಯ ಮಟ್ಟದ ಜಾಥಾ ಹಾಗೂ ವಿಚಾರಣ ಸಂಕಿರಣ ಆಯೋಜನೆ ಮಾಡಲು ನಿರ್ಧಾರ ಮಾಡಿದ್ದೇವೆ” ಎಂದು ಹೇಳಿದರು.
“1931ರ ನಂತರ ದೇಶದಲ್ಲಿ ಜಾತಿಗಣತಿ ನಡೆದಿಲ್ಲ. ರಾಜಕೀಯ ಪ್ರಾತಿನಿಧ್ಯ ಇಲ್ಲ. ಮಹಿಳೆಯರಿಗೆ ರಾಜಕೀಯ ಮೀಸಲಾತಿ ನೀಡಬೇಕು. ಆ ಮೂಲಕ ಸಮಗ್ರ ಪ್ರಜಾಪ್ರಭುತ್ವದ ಆಶಯಗಳನ್ನ ಎತ್ತಿ ಹಿಡಿಯಬೇಕು. ಇದುವರೆಗೂ ಹಿಂದುಳಿದ ವರ್ಗದವರಿಗೆ, ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ಇಲ್ಲ. ಕೆಲವೊಂದು ಕ್ಷೇತ್ರಗಳಲ್ಲಿ ಮಹಿಳೆಯರು, ಹಿಂದುಳಿದ ವರ್ಗದವರು ಗೆದ್ದು ಬರಬಹುದು. ಅವರಿಗೆ ಸಂವಿಧಾನಬದ್ಧ ರಾಜಕೀಯ ಮೀಸಲಾತಿಯನ್ನ ಕೊಡಬೇಕು. ರಾಜ್ಯಕೀಯ ಇಚ್ಚಾಶಕ್ತಿಯಿಂದ ಪ್ರಭುತ್ವದ ಬಲವರ್ಧನೆಗೆ ಜಾತಿಗಣತಿ ಆಗಬೇಕು” ಎಂದರು.
“ನಾವು 54% ಜನ ಕೇವಲ 27% ಮೀಸಲಾತಿಯಲ್ಲಿ ಬದುಕುತ್ತಿದ್ದೇವೆ. ಅದೇ, 2% ಇರುವ ಜನರಿಗೆ 10% ಮೀಸಲಾತಿ ಕೊಟ್ಟಿದ್ದಾರೆ. ಹಿಂದುಳಿದ ಸಮುದಾಯಗಳ ಪರಿಸ್ಥಿತಿ ತುಂಬಾ ಶೋಚನೀಯವಾಗಿದೆ. ಹವು ಜನರು ಫ್ರೌಢಶಿಕ್ಷಣವನ್ನು ಪಡೆದುಕೊಳ್ಳುವುದಕ್ಕೆ ಆಗಿಲ್ಲ. ಉದಾಹರಣೆಗೆ, ಕರ್ನಾಟಕದಲ್ಲಿ 102 ಜಾತಿಗಳನ್ನು ಹಿಂದುಳಿದ ಸಮುದಾಯಗಳ ಪಟ್ಟಿಯ ಪ್ರವರ್ಗ -1ರಲ್ಲಿ ಸೇರಿಸಲಾಗಿದೆ. ಇನ್ನುಳಿದ 95 ಜಾತಿಗಳು ಪ್ರವರ್ಗ- 2(ಎ)ರಲ್ಲಿ ಒಳಗೊಂಡಿವೆ. ಅಧ್ಯಯನವೊಂದರ ಪ್ರಕಾರ, ಇವುಗಳಲ್ಲಿ 97 ಜಾತಿಗಳಿಗೆ ಸೇರಿದ ಒಬ್ಬನೇ ಒಬ್ಬ ವ್ಯಕ್ತಿಯೂ ಸರ್ಕಾರದಲ್ಲಿ ಅಟೆಂಡರ್ ಹುದ್ದೆಯನ್ನೂ ಕೂಡಾ ಪಡೆದುಕೊಳ್ಳಲು ಆಗಿಲ್ಲ” ಎಂದು ಹೇಳಿದರು.
ಸಮಾಜವಾದಿ ಚಿಂತಕ ಬಂಜಗೆರೆ ಜಯಪ್ರಕಾಶ್ ಮಾತನಾಡಿ, “ಭಾರತದಲ್ಲಿ 1931ರಲ್ಲಿ ಬ್ರಿಟಿಷರು ಇದ್ದಾಗ ಜಾತಿಗಣತಿ ನಡೆದಿತ್ತು. ಸದ್ಯ ನಮ್ಮ ಬಳಿ ಇರುವ ಜಾತಿಗಣತಿ ಪ್ರಮಾಣ ಈ ಹಿಂದೆ ಇದ್ದಿದ್ದೆ ಇದೆ. ಇಲ್ಲಿಯವರೆಗೂ ಕೇಂದ್ರ ಸರ್ಕಾರ ಜಾತಿಗಣತಿ ಯಾಕೆ ನಡೆಸಿಲ್ಲ ಎಂಬುದು ತಿಳಿದಿಲ್ಲ. ಸಂವಿಧಾನದ ಆಶಯದ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿಲ್ಲ. ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ಪ್ರತ್ಯೇಕವಾಗಿ ಜಾತಿಗಣತಿ ನಡೆಸಿದ್ದರು. ಜಾತಿಗಣತಿ ಮಾಡಲು ಬೇರೆ ವ್ಯವಸ್ಥೆ ಮಾಡಿದ್ದರು. ಬಹಳ ಮುಖ್ಯವಾಗಿ ಯಾವ ಯಾವ ಯೋಜನೆಗಳು, ಯಾರಿಗೆ ತಲುಪಿವೆ ಎಂಬ ಬಗ್ಗೆ ಗಮನಿಸಿದರು” ಎಂದರು.
“ಭಾರತ ಜಾತಿ ಆಧಾರಿತ ದೇಶವಾಗಿದೆ. ಜಾತಿ ಆಧಾರದಲ್ಲೇ ಸಂವಿಧಾನದತ್ತ ಸವಲತ್ತುಗಳನ್ನ ನೀಡಲಾಗುತ್ತಿದೆ. ಹಾಗಾಗಿ, ಜನಗಣತಿ ಜತೆಜತೆಗೆ ಜಾತಿಗಣತಿಯೂ ನಡೆಯಬೇಕು. ಸದ್ಯ, 1931ರಲ್ಲಿ ಬ್ರಿಟಿಷ್ ಆಡಳಿತ ನಡೆಸಿ ಜಾತಿಗಣತಿಯ ದತ್ತಾಂಶದ ಆಧಾರದ ಮೇಲೆಯೇ ಇಂದಿಗೂ ಕೂಡ ಸವಲತ್ತು ನೀಡಲಾಗುತ್ತಿದೆ. ಅಲ್ಲದೇ, ಸುಪ್ರೀಂ ಕೋರ್ಟ್ ಯಾವ ಆಧಾರದಲ್ಲಿ ಸವಲತ್ತುಗಳನ್ನು ನೀಡುತ್ತಿದ್ದೀರಿ ಎಂದು ಕೇಳಿದೆ. ಜಾತಿ ದತ್ತಾಂಶಗಳನ್ನೂ ಕೂಡ ಕೇಳಿದೆ. ಆದರೂ, ಕೂಡ ಈ ಬಗ್ಗೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ” ಎಂದು ತಿಳಿಸಿದರು.
“ಮನಮೋಹನ್ ಸಿಂಗ್ ಅವಧಿಯಲ್ಲಿ ಪ್ರತ್ಯೇಕವಾಗಿ ಜಾತಿಗಣತಿ ನಡೆಸಿದ್ದರು. ಅದನ್ನು ನರೇಗಾ ಮತ್ತು ಬಿಪಿಎಲ್ ಯೋಜನೆ ಜಾರಿಗೆ ಬಳಸಿದ್ದರು. ಆದರೆ, ಆ ಮಾಹಿತಿಯನ್ನು ಈಗ ಬಹಿರಂಗಪಡಿಸಿಲ್ಲ. 2015 ರಲ್ಲಿ ಸಿದ್ದರಾಮಯ್ಯ ಸರ್ಕಾರ ಕಾಂತರಾಜು ಆಯೋಗದ ಮೂಲಕ ವರದಿ ಮಾಡಿಸಿತ್ತು. ಈಗ ಆ ವರದಿಗೂ ಕೂಡ 10 ವರ್ಷ ಕಳೆದು ಹೋಗಿದೆ. ಆ ವರದಿಯನ್ನು ಈಗ ಅಧಿಕೃತ ಎಂದು ಬಳಸಲು ಸಾಧ್ಯವಿಲ್ಲ. ಹಾಗಾಗಿ, ಕೇಂದ್ರ ಸರ್ಕಾರ ಉಪಜಾತಿಗಳ ಸಹಿತ ಜಾತಿಗಣತಿ ನಡೆಸಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಹುಟ್ಟುಹಬ್ಬ ಆಚರಣೆ ನೆಪದಲ್ಲಿ ಬಾಲಕಿ ಮೇಲೆ ಅತ್ಯಾಚಾರ
“ಒಳಮೀಸಲಾತಿ ನೀಡಲೂ ಕೂಡ ಜಾತಿಗಣತಿ ಅವಶ್ಯವಾಗಿದೆ. ಆದರೂ, ಕೂಡ ಸರ್ಕಾರ ಜಾತಿಗಣತಿ ನಡೆಸಲೂ ಕ್ರಮಕೈಗೊಳ್ಳುತ್ತಿಲ್ಲ. ಜಾತಿಗಣತಿಯನ್ನ ಮಾಡಿ ಸಮಗ್ರ ಮಾಹಿತಿ ನೀಡಲು ಸರ್ಕಾರ ಯಾಕೆ ಹಿಂಜರಿಯಬೇಕು. ಈಗ ಬಿಹಾರದಲ್ಲಿ ನಿತೀಶ್ ಕುಮಾರ್ ಅವರು ಜಾತಿಗಣತಿ ಮಾಡಿದ್ದಾರೆ. ಇದರಿಂದ ಅವರಿಗೆ ತುಂಬಾನೇ ಅನುಕೂಲವಾಗಿದೆ. ಯಾರಿಗೆ ಏನು ಸಮಸ್ಯೆ ಇದೆ ಎನ್ನುವುದು ಗೊತ್ತಾಗಿದೆ. ಅದರಂತೆಯೇ ದೇಶದಲ್ಲಿ ಜಾತಿಗಣತಿ ನಡೆಯಬೇಕು. ಜನಗಣತಿ ಜತೆಗೆ ಜಾತಿ ಮತ್ತು ಉಪಜಾತಿ ಕಲಂ ಸೇರಿಸಬೇಕು. ಅಭಿವೃದ್ಧಿ, ಪ್ರಾತಿನಿಧ್ಯ ಯಾವ ಪ್ರಮಾಣದಲ್ಲಿ ಇದೆ ಎಂಬ ಬಗ್ಗೆ ಸಂಪೂರ್ಣವಾದ ಮಾಹಿತಿ ಬೇಕು. ಈ ಸಲ ನಡೆಯುವ ಸಂಪುಟ ಸಭೆಯಲ್ಲಿ ಶಾಸಕರು ಒತ್ತಾಯ ಮಾಡಬೇಕು” ಎಂದು ವಿನಂತಿಸಿದರು.
“ಜಾತಿಯಾಧಾರಿತ ರಾಷ್ಟ್ರದಲ್ಲಿ ಜಾತಿಗಣತಿ ಯಾಕೆ ಮಾಡುತ್ತಿಲ್ಲ, ಇದರ ಹಿಂದೆ ಇರುವ ಹುನ್ನಾರ ಏನು? ಎಲ್ಲ ಸಮಯದಲ್ಲಿಯೂ ಜಾತಿ ವಿಚಾರ ಬರುತ್ತದೆ. ಆದರೆ, ಜಾತಿಗಣತಿ ಯಾಕೆ ಮಾಡುತ್ತಿಲ್ಲ. ಜಾತಿ ಮತ್ತು ಉಪಜಾತಿ ಕಾಲಂ ಸೇರಿಸಿ ಮಾಡಬೇಕು. ಕೇಂದ್ರ ಸರ್ಕಾರ ಜಾತಿಗಣತಿ ಮಾಡದೇ ಇದ್ದರೇ, ರಾಜ್ಯ ಸರ್ಕಾರವೇ ಮಾಡಲಿ” ಎಂದು ಆಗ್ರಹಿಸಿದರು.
ಆರ್ಥಿಕ ತಜ್ಞ ಕೃಷ್ಣರಾಜ್ ಮಾತನಾಡಿ, “ಭಾರತ ದೇಶ ಈಗ ಸದೃಢವಾಗುತ್ತಿದೆ. ದೇಶದ ಜಿಡಿಪಿ ಕೂಡ ಬೆಳೆಯುತ್ತಿದೆ. ಯಾವುದೇ ದೇಶ ಆರ್ಥಿಕ ನೀತಿ ಮಾಡುವಾಗ ದತ್ತಾಂಶ ಮುಖ್ಯವಾಗಿರುತ್ತದೆ. ಜತೆಗೆ ಎಲ್ಲರನ್ನೂ ಒಳಗೊಳ್ಳುವ ಬೆಳವಣಿಗೆ ಆಗುತ್ತಿದೆಯಾ ಎಂಬುದನ್ನ ನೋಡಬೇಕು” ಎಂದರು.
“ಎಲ್ಲರನ್ನೂ ಒಳಗೊಳ್ಳುವ ನೀತಿಯನ್ನ ಮನಮೋಹನ್ ಸಿಂಗ್ ಅವರು ಇಟ್ಟುಕೊಂಡಿದ್ದರು. ಅಂತಾರಾಷ್ಟ್ರೀಯ ಆರ್ಥಿಕ ಸಂಸ್ಥೆಗಳು ಭಾರತದಲ್ಲಿ ಸಂಪೂನ್ಮೂಲ ಹಂಚಿಕೆಯಲ್ಲಿ ಅಸಮಾನತೆ ಇದೆ ಎಂದು ಹೇಳಿವೆ. ದೇಶದ ಕೆಲವೇ ವ್ಯಕ್ತಿಗಳ ಬಳಿ ಹೆಚ್ಚಿನ ಸಂಪತ್ತಿದೆ. ಭಾರತದಲ್ಲಿರುವ 1% ಶ್ರೀಮಂತರು 23% ರಿಸೋರ್ಸ್ ಹೊಂದಿದ್ದಾರೆ. ಅದೇರೀತಿ 10% ಇರುವ ಶ್ರೀಮಂತರು 60% ರಿಸೋರ್ಸ್ ಅನ್ನು ಭಾರತ ಹೊಂದಿದೆ. ಎಲ್ಲರನ್ನೂ ಒಳಗೊಂಡು ದೇಶ ಅಭಿವೃದ್ಧಿ ಮಾಡುವ ಅವಶ್ಯಕತೆ ಇದೆ. ವಿಕಸಿತ ಭಾರತ ಮಾಡಬೇಕು. ಆದರೆ, ವಿಕಸಿತ ಭಾರತ ಮಾಡಬೇಕು ಅನ್ನುವುದು ಯಾರಿಗೆ ಎಂಬ ಪ್ರಶ್ನೆ ಮೂಡುತ್ತದೆ. ಟೆಕ್ನಾಲಜಿ ಬಳಸಿಕೊಂಡು ಶ್ರೀಮಂತರು ಮತ್ತಷ್ಟು ಶ್ರೀಮಂತರಾಗುತ್ತಿದ್ದಾರೆ. ಬಡವರು ಬಡವರಾಗಿಯೇ ಉಳಿಯುತ್ತಿದ್ದಾರೆ. ಹಾಗಾಗಿ, ಎಲ್ಲರನ್ನೂ ಒಳಗೊಳ್ಳಬೇಕಾದರೆ ಜಾತಿಗಣತಿ ಅನಿವಾರ್ಯವಾಗಿದೆ.” ಎಂದು ಹೇಳಿದರು.